ತುಂಗಭದ್ರಾ ಮಾತ್ರವಲ್ಲ; ರಾಜ್ಯದಲ್ಲಿ ಹೆಚ್ಚಿದೆ ಸರಣಿ ಅಣೆಕಟ್ಟು ಆತಂಕ
x

ತುಂಗಭದ್ರಾ ಮಾತ್ರವಲ್ಲ; ರಾಜ್ಯದಲ್ಲಿ ಹೆಚ್ಚಿದೆ ಸರಣಿ ಅಣೆಕಟ್ಟು ಆತಂಕ


ರಾಜ್ಯದ ಅತ್ಯಂತ ಹಳೆಯ ಮತ್ತು ಬೃಹತ್‌ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್‌ ಮುರಿದು ಭಾರೀ ಪ್ರಮಾಣದ ನೀರು ನದಿಗೆ ಸೇರುತ್ತಿದೆ.

ಜಲಾಶಯದ 33 ಗೇಟುಗಳ ಪೈಕಿ, 19ನೇ ಗೇಟಿನ ಚೈನ್‌ ತುಂಡಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 99 ಟಿಎಂಸಿ ನೀರು ಇದ್ದು, ಆ ಪೈಕಿ ಅರ್ಧದಷ್ಟು ನೀರನ್ನು ಖಾಲಿ ಮಾಡಿದ ಬಳಿಕವೇ ಕಿತ್ತು ಹೋಗಿರುವ ಗೇಟ್‌ ಬದಲಿಗೆ ಹೊಸ ಗೇಟ್‌ ಅಳವಡಿಸಲು ಸಾಧ್ಯ ಎಂದು ಕರ್ನಾಟಕ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ಜಲಾಶಯವನ್ನು ಸಾಧ್ಯವಾಷ್ಟು ವೇಗವಾಗಿ ಅರ್ಧದಷ್ಟು ಖಾಲಿ ಮಾಡಿ ಗೇಟ್‌ ಅಳವಡಿಸುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಈಗಾಗಲೇ ಕಳೆದ ಎರಡು ದಿನದಿಂದ ನದಿಗೆ ಒಂದು ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಹರಿಬಿಡಲಾಗುತ್ತಿದೆ. ಕನಿಷ್ಟ ಐವತ್ತು ಟಿಎಂಸಿಯಷ್ಟು ನೀರಿನ ಮಟ್ಟಕ್ಕೆ ತಲುಪುವವರೆಗೆ ಯಾವುದೇ ನಿರ್ವಹಣಾ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಸುಮಾರು 50 ಟಿಎಂಸಿ ನೀರನ್ನು ಖಾಲಿ ಮಾಡಬೇಕಿದೆ. ಇದೇ ವೇಗದಲ್ಲಿ ಅಂದರೆ ಗಂಟೆಗೆ ಒಂದು ಲಕ್ಷ ಕ್ಯೂಸೆಕ್‌ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದರೂ ಅಷ್ಟು ಪ್ರಮಾಣದ ನೀರು ಖಾಲಿ ಮಾಡಲು ಕನಿಷ್ಟ ನಾಲ್ಕೈದು ದಿನಗಳು ಬೇಕಾಗಲಿವೆ ಎಂದು ಜಲಾಶಯದ ತಾಂತ್ರಿಕ ತಂಡ ಹೇಳಿದೆ.

ಜಲಾಶಯದ ನಿರ್ಮಾಣವಾದಾಗ ಅಳವಡಿಸಿದ್ದ ಗೇಟ್‌

1955ರಲ್ಲಿ ಈ ಜಲಾಶಯದ ನಿರ್ಮಾಣವಾಗಿತ್ತು. ಆಗ ಜಲಾಶಯಕ್ಕೆ ಈಗ ಹಾಳಾಗಿರುವ 19ನೇ ಕ್ರೆಸ್ಟ್‌ ಗೇಟ್‌ ಸೇರಿದಂತೆ ಒಟ್ಟು 33 ಕ್ರೆಸ್ಟ್‌ ಗೇಟುಗಳನ್ನು ಅಳವಡಿಸಲಾಗಿತ್ತು. 33 ಗೇಟುಗಳ ಪೈಕಿ 1ರಿಂದ 16ರವರೆಗಿನ ಗೇಟುಗಳನ್ನು ಆಂಧ್ರಪ್ರದೇಶ(ಸಿಡಬ್ಲ್ಯೂಸಿ) ನಿರ್ವಹಣೆ ಮಾಡುತ್ತದೆ. ಇನ್ನುಳಿದ 17ರಿಂದ 33ರವರೆಗಿನ ಗೇಟುಗಳನ್ನು ಕರ್ನಾಟಕ ಸರ್ಕಾರ ನಿರ್ವಹಿಸುತ್ತದೆ. ಇದೀಗ ಕರ್ನಾಟಕ ಸರ್ಕಾರ ನಿರ್ವಹಿಸುವ 19ನೇ ಗೇಟು ಕಿತ್ತುಹೋಗಿದೆ.

ಬರೋಬ್ಬರಿ 70 ವರ್ಷಗಳ ಕಾಲ ಬಾಳಿಕೆ ಬಂದಿದ್ದ ಗೇಟ್‌ ಇದೀಗ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದೆ ಎಂದು ಜಲಾಶಯದ ತಾಂತ್ರಿಕ ತಂಡ ಹೇಳಿದೆ. ನೀರಿನ ರಭಸಕ್ಕೆ ಕ್ರೆಸ್ಟ್‌ ಗೇಟಿನ ಚೈನ್‌ಲಿಂಕ್‌ಬೆಸುಗೆ ಕಿತ್ತುಹೋಗಿ ಈ ಅವಘಡ ಸಂಭವಿಸಿದೆ. ಜಲಾಶಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥ ಅವಘಢ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

60 ಅಡಿ ಎತ್ತರ ಮತ್ತು 20 ಅಡಿ ಅಗಲದ ಗೇಟ್‌ ಇದಾಗಿದ್ದು, 12 ಅಡಿ ಅಗಲದ ಐದು ಕಬ್ಬಿಣದ ಹಲಗೆಗಳನ್ನು ಜೋಡಿಸಿ ಗೇಟು ಸಿದ್ದಪಡಿಸಲಾಗಿತ್ತು. ಜಲಾಶಯದ ನಿರ್ಮಾಣವಾದಾಗ ಈ ಗೇಟ್‌ ಮತ್ತು ಅದರ ಚೈನ್‌ ಅಳವಡಿಸಲಾಗಿತ್ತು. ಈಗಲೂ ಇದೇ ಮಾದರಿಯ ಗೇಟನ್ನೇ ಅಳವಡಿಸಲಿದ್ದು, ಸ್ಥಳೀಯವಾಗಿಯೇ ನಿರ್ಮಿಸಲಾಗುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ನೀರು ಹಂಚಿಕೆ ಬಿಕ್ಕಟ್ಟು; ಆತಂಕ

ಜಲಾಶಯದ ನೀರನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಹಂಚಿಕೊಳ್ಳುತ್ತಿದ್ದು, ವಾರ್ಷಿಕ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ 115 ಟಿಎಂಸಿ ನೀರು ಬಿಡಬೇಕಾಗಿದೆ. ಆ ಪೈಕಿ ಈಗಾಗಲೇ 25 ಟಿಎಂಸಿ ನೀರು ನೀಡಲಾಗಿದ್ದು, ಇನ್ನೂ 90 ಟಿಎಂಸಿ ನೀರು ನೀಡುವುದು ಈ ಸಾಲಿಗೆ ಬಾಕಿ ಇದೆ. ಆದರೆ, ಇದೀಗ ಅರ್ಧ ಜಲಾಶಯವನ್ನೇ ಏಕಾಏಕಿ ಖಾಲಿ ಮಾಡಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ.

ನೆರೆ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ರಾಜ್ಯದ ರೈತರು ಗಾಬರಿಯಾಗುವ ಅಗತ್ಯವಿಲ್ಲ. ತತಕ್ಷಣಕ್ಕೆ ನಮ್ಮ ಆದ್ಯತೆ ರಾಜ್ಯದ ಸಂಪತ್ತಾದ ಜಲಾಶಯವನ್ನು ಉಳಿಸಿಕೊಳ್ಳುವುದು. ಅದಕ್ಕಾಗಿ ತುರ್ತಾಗಿ ಗೇಟ್‌ ಅವಳಡಿಸಬೇಕಿದೆ. ಆ ಬಳಿಕ ಉಳಿದ ವಿಷಯಗಳನ್ನು ಮಾತನಾಡೋಣ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ವರ್ಷದಲ್ಲಿ ಸರಣಿ ಅಣೆಕಟ್ಟು ಆತಂಕ

ಹಾಗೆ ನೋಡಿದರೆ, ಇದೀಗ ಉಂಟಾಗಿರುವ ತುಂಗಭದ್ರಾ ಜಲಾಶಯದ ಗೇಟ್‌ ಕೊಚ್ಚಿಕೊಂಡು ಹೋಗಿರುವ ಅವಘಡವೇ ಮೊದಲನೆಯದಲ್ಲ. ಕಳೆದ ಜುಲೈನಲ್ಲಿ ಇದೇ ನದಿಯ ಭದ್ರಾ ಜಲಾಶಯದಲ್ಲಿ ಕೂಡ ಇಂತಹದ್ದೇ ಸಮಸ್ಯೆ ಎದುರಾಗಿತ್ತು. ಹಾಗೇ ತುಂಗಾ ಜಲಾಶಯದಲ್ಲಿಯೂ ಗೇಟ್‌ ತಾಂತ್ರಿಕ ತೊಡಕು ಎದುರಾಗಿದೆ.

ಅಂದರೆ, ಕಳೆದ ಒಂದು ತಿಂಗಳ ಅವಧಿಯಲ್ಲೇ ಭದ್ರಾ ಜಲಾಶಯ, ತುಂಗಾ ಜಲಾಶಯ ಮತ್ತು ಇದೀಗ ತುಂಗಭದ್ರಾ ಜಲಾಶಯಗಳಲ್ಲಿ ಗೇಟ್‌ ಅವಘಡಗಳು ಸಂಭವಿಸಿವೆ.

ಭದ್ರಾದಲ್ಲಿ ಸ್ಲೂಯಿಸ್ ಗೇಟ್‌ ತೊಂದರೆ

ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಸೇರಿದಂತೆ ಮಧ್ಯಕರ್ನಾಟಕದ ಕುಡಿಯುವ ನೀರು ಮತ್ತು ನೀರಾವರಿಯ ಜೀವನಾಡಿಯಾದ ಭದ್ರಾವತಿ ತಾಲೂಕಿನ ಬಿಆರ್‌ಪಿಯ ಭದ್ರಾ ಜಲಾಶಯದ ರಿವರ್‌ ಗೇಟ್(ಸ್ಲೂಯಿಸ್‌ ಗೇಟ್) ತಾಂತ್ರಿಕ ತೊಂದರೆಯಿಂದ ಬಂದ್‌ ಆಗದೇ ಸ್ಥಗಿತಗೊಂಡಿತ್ತು. ಜುಲೈ ಮೊದಲ ವಾರದಲ್ಲಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡು ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಿರುವಾಗಲೇ ಈ ಸಮಸ್ಯೆಯಿಂದಾಗಿ ನಿತ್ಯ ಎರಡು ಸಾವಿರ ಕ್ಯೂಸೆಕ್‌ ನೀರು ಹೊಳೆಯ ಪಾಲಾಗುತ್ತಿತ್ತು.‌ ಒಟ್ಟು 0.34 ಟಿಎಂಸಿ ನೀರು ನದಿಗೆ ಹರಿದಿತ್ತು. ಆ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಭಾಗದ ರೈತರು, ಜನಪ್ರತಿನಿಧಿಗಳು ಜಲಾಶಯದ ನಿರ್ವಹಣೆಯ ಲೋಪಗಳ ಬಗ್ಗೆ ದನಿ ಎತ್ತಿದ್ದರು. ಬಳಿಕ ಕರ್ನಾಟಕ ನೀರಾವರಿ ನಿಗಮದ ತಂಡ ತುಂಬಿದ ಜಲಾಶಯದ ನೀರಲ್ಲಿ ಮುಳುಗಿ ತಾಂತ್ರಿಕ ದೋಷ ಸರಿಪಡಿಸಿ ಗೇಟ್‌ ಸರಿಯಾಗಿ ಕೆಲಸ ಮಾಡುವಂತೆ ಮಾಡಿದ್ದರು. ಗೇಟ್‌ ಮುಚ್ಚಿದ ಬಳಿಕ ಜಲಾಶಯದ ನೀರು ಪೋಲಾಗುವುದಕ್ಕೆ ಬ್ರೇಕ್‌ ಬಿದ್ದಿತ್ತು.

ತುಂಗಾ ಜಲಾಶಯದಲ್ಲೂ ಗೇಟ್‌ ಗ್ರಹಚಾರ

ತುಂಗಾಭದ್ರಾ ನದಿಯ ಮತ್ತೊಂದು ಉಪನದಿಯಾಗಿ ತುಂಗಾ ನದಿಗೆ ಅಡ್ಡಲಾಗಿ ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿ ನಿರ್ಮಿಸಿರುವ ತುಂಗಾ ಅಣೆಕಟ್ಟೆಯಲ್ಲಿಯೂ ಗೇಟ್‌ ಸಮಸ್ಯೆ ತಲೆದೋರಿದೆ. ಜಲಾಶಯದ 22 ಗೇಟುಗಳ ಪೈಕಿ 8ನೇ ಗೇಟಿನ ವೈ ರೋಪ್‌ ಹರಿದಿದ್ದು, ಗೇಟ್‌ ಎತ್ತುವ ಮತ್ತು ಇಳಿಸುವುದು ಅಪಾಯಕಾರಿಯಾಗಿದೆ. ಹಾಗಾಗಿ ಈ ಬಾರಿ ಕಳೆದ ಒಂದು ತಿಂಗಳಿನಿಂದ ಜಲಾಶಯ ತುಂಬಿ ತುಳುಕುತ್ತಿದ್ದರೂ ಇತರೆ 21 ಗೇಟುಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ವಿನಃ ದೋಷ ಕಾಣಿಸಿಕೊಂಡಿರುವ ಗೇಟನ್ನು ಏನು ಮಾಡದೇ ಯಥಾ ಸ್ಥಿತಿಯಲ್ಲಿ ಇಡಲಾಗಿದೆ.

ಒಟ್ಟಾರೆ ಈ ಬಾರಿ ತುಂಗಭದ್ರಾ ನದಿ ಕಣಿವೆಯ ಎಲ್ಲಾ ಮೂರು ಜಲಾಶಯಗಳಲ್ಲೂ ಗೇಟ್‌ ಸಮಸ್ಯೆ ಆರಂಭದಿಂದಲೂ ತಲೆದೋರಿತ್ತು. ಈ ಸರಣಿ ಅವಘಡಗಳು ಮತ್ತು ಲೋಪಗಳು ರಾಜ್ಯದ ಜಲಾಶಯಗಳ ನಿರ್ವಹಣೆ ಮತ್ತು ಕಾಲಾನುಕಾಲದ ದುರಸ್ತಿ ವ್ಯವಸ್ಥೆಯ ಬಗ್ಗೆಯೇ ಅನುಮಾನಗಳನ್ನು ಎತ್ತಿದೆ.

Read More
Next Story