ಭ್ರಷ್ಟಾಚಾರರಹಿತ ಆಡಳಿತ ನೀಡಬೇಕು: ಚುನಾವಣಾ ವೈಫಲ್ಯಕ್ಕೆ ಮೊಯ್ಲಿ ಪ್ರತಿಕ್ರಿಯೆ
x

ಭ್ರಷ್ಟಾಚಾರರಹಿತ ಆಡಳಿತ ನೀಡಬೇಕು: ಚುನಾವಣಾ ವೈಫಲ್ಯಕ್ಕೆ ಮೊಯ್ಲಿ ಪ್ರತಿಕ್ರಿಯೆ


ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಪ್ರತಿಕ್ರಿಯಿಸಿರು ಕಾಂಗ್ರೆಸ್‌ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ, ಭ್ರಷ್ಟಾಚಾರರಹಿತ ಆಡಳಿತ ಮತ್ತು ತಳಮಟ್ಟದಲ್ಲಿ ಪಕ್ಷ ಸಂಘಟನೆಯ ಕಡೆ ನಾವು ಹೆಚ್ಚು ಗಮನ ಕೊಡಬೇಕಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ(ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ 20 ಕಡೆ ನಾವು ಗೆಲ್ಲುವ ಸಾಧ್ಯತೆ ಇತ್ತು. ಆದರೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಆದ ಲೋಪದಿಂದಾಗಿ ಇಷ್ಟು ಕಡಿಮೆ ಸಂಖ್ಯೆಯ ಸಂಸದರು ಆಯ್ಕೆಯಾದರು. ನಾವು ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿಲ್ಲ. ಉತ್ತಮ ತಂತ್ರಗಾರಿಕೆನ್ನೂ ಅಳವಡಿಸಿಕೊಂಡಿಲ್ಲ. ಹಾಗಾಗಿ ಈ ಹಿನ್ನಡೆಯಾಗಿದೆ" ಎಂದು ಕರ್ನಾಟಕ ಕಾಂಗ್ರೆಸ್‌ ವೈಫಲ್ಯವನ್ನು ಹೇಳಿದ್ದಾರೆ.

"ತಪ್ಪು ಅಭ್ಯರ್ಥಿಗಳ ಆಯ್ಕೆ ಮತ್ತು ಕಳಪೆ ತಂತ್ರಗಾರಿಕೆಯ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ ಕಳಪೆ ಪ್ರದರ್ಶನ ನೀಡಿದೆ" ಎಂದು ಪ್ರದೇಶ ಕಾಂಗ್ರೆಸ್‌ ಮತ್ತು ರಾಜ್ಯದ ಮುಖಂಡರನ್ನು ಪರೋಕ್ಷವಾಗಿ ಹೊಣೆ ಮಾಡಿರುವ ಮೊಯ್ಲಿ ಅವರು, "ಭ್ರಷ್ಟಾಚಾರರಹಿತ ಆಡಳಿತ ಮತ್ತು ಪಕ್ಷ ಸಂಘಟನೆಯ ಕಡೆ ಹೆಚ್ಚಿನ ಗಮನ ಕೊಡಬೇಕಿದೆ" ಎಂದೂ ಕಿವಿಮಾತು ಹೇಳಿದ್ದಾರೆ.

ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂಬ ಚರ್ಚೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೊಯ್ಲಿ, "ಗ್ಯಾರಂಟಿ ಯೋಜನೆಗಳು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತವು. ಲೋಕಸಭಾ ಚುನಾವಣೆಯಲ್ಲಿ ಸೋಲಾಯಿತು ಎಂದು ಈಗ ಅವುಗಳನ್ನು ನಿಲ್ಲಿಸಲಾಗದು. ಹಾಗೆ ಮಾಡಿದರೆ ಜನರಿಗೆ ದ್ರೋಹ ಮಾಡಿದಂತಾಗುತ್ತದೆ" ಎಂದೂ ಎಚ್ಚರಿಕೆ ನೀಡಿದ್ದಾರೆ.

Read More
Next Story