
Internal Reservation | ಒಳ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ; ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಅಲೆಮಾರಿ ಸಮುದಾಯ ಸಜ್ಜು
ಸರ್ಕಾರ ತನ್ನ ತಪ್ಪನ್ನು ಅರ್ಥ ಮಾಡಿಕೊಂಡು ಸರಿಪಡಿಸದರೆ ಅಲೆಮಾರಿಗಳಿಗೆ ಆಗುವಂತಹ ಅನ್ಯಾಯ ತಪ್ಪಿಸಿದಂತಾಗುತ್ತದೆ. ಇಲ್ಲವಾದಲ್ಲಿ ಸರ್ಕಾರ ಒಂದು ಚಾರಿತ್ರಿಕ ಪ್ರಮಾದ ಎಸಗಿದ ಕಳಂಕ ಹೊರಲಿದೆ.
ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹೆಚ್ಚು ಹಿಂದುಳಿದ ಅಲೆಮಾರಿ ಹಾಗೂ ಸಣ್ಣ ಜಾತಿಗಳನ್ನು ಮುಂದುವರಿದ ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿರುವ ರಾಜ್ಯ ಸರ್ಕಾರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಸರ್ಕಾರದ ನಿರ್ಧಾರ ಖಂಡಿಸಿ ಅಲೆಮಾರಿ ಸಮುದಾಯಗಳು ಪ್ರತಿಭಟನೆ ನಡೆಸಿದರೂ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಪರಿಷ್ಕರಿಸಲ್ಲ ಎಂದು ಹೇಳಿರುವುದು ಕಾನೂನು ಸಮರ ಎಡೆ ಮಾಡಿಕೊಡುವ ಆತಂಕ ಎದುರಾಗಿದೆ.
ಶನಿವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ಅಲೆಮಾರಿ ಸಮುದಾಯದ ಮುಖಂಡರು ಹಾಗೂ ಚಿಂತಕರ ಜೊತೆ ಸಭೆ ನಡೆಸಿದ್ದು, ಸಚಿವ ಸಂಪುಟ ಅಂಗೀಕರಿಸಿರುವ ಮೀಸಲಾತಿಯನ್ನು ಸದ್ಯ ಪರಿಷ್ಕರಣೆ ಮಾಡಲು ಆಗುವುದಿಲ್ಲ. ಕೇಂದ್ರ ಜಾತಿವಾರು ಜನಗಣತಿ ಸಂದರ್ಭದಲ್ಲಿ ಮಾರ್ಪಾಡು ಮಾಡುವುದಾಗಿ ಭರವಸೆ ನೀಡಿದರು ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ಒಪ್ಪದ ಅಲೆಮಾರಿ ಸಮುದಾಯದ ಮುಖಂಡರು, ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾನೂನು ಸಮರಕ್ಕೆ ಚಿಂತನೆ
ಅಲೆಮಾರಿ ಸಮುದಾಯಕ್ಕೆ ಸೇರಿದ ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ ಅವರ 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, ಒಳ ಮೀಸಲಾತಿ ನಿರ್ಧಾರ ಪರಿಷ್ಕರಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಲಾಗುವುದು. ಆದರೂ ಸರ್ಕಾರ ಪರಿಗಣಿಸದೇ ಹೋದರೆ, ಸುಪ್ರೀಂಕೋರ್ಟ್ ಮೊರೆ ಹೋಗುವುದಷ್ಟೇ ನಮಗಿರುವ ದಾರಿ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ದೇವಿಂದರ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಪರಿಶಿಷ್ಟರಲ್ಲಿನ ಒಳ ಜಾತಿಗಳಿಗೆ ಮೀಸಲಾತಿ ಕಲ್ಪಿಸುವಾಗ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಹೇಳಿದೆ. ಆದರೆ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನ ಯಾವುದೇ ಮಾನದಂಡ ಪರಿಗಣಿಸಿಲ್ಲ ಎಂದು ದೂರಿದರು.
ಪರಿಶಿಷ್ಟ ಜಾತಿಗಳು ಒಟ್ಟಾಗಿ ಮೀಸಲಾತಿ ಪಡೆಯುವಾಗ ಹಿಂದುಳಿದಿರುವಿಕೆ ಸಾಬೀತುಪಡಿಸಬೇಕಾಗಿಲ್ಲ ಎಂಬುದನ್ನು ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಪರಿಶಿಷ್ಟ ಜಾತಿಯಲ್ಲಿ ಕೆಲ ಜಾತಿಗಳು ಹಿಂದುಳಿವೆ ಎಂದಾದರೆ ಪ್ರತ್ಯೇಕ ಗುಂಪು ಮಾಡಿ ಮೀಸಲಾತಿ ಹಂಚಬೇಕಾಗುತ್ತದೆ. ಒಳ ಜಾತಿಗಳಲ್ಲಿ ಅಂತರ್ ಹಿಂದುಳಿದಿರುವಿಕೆ ಮಾನದಂಡದ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಅಂತರ್ ಹಿಂದುಳಿದಿರುವಿಕೆ ಸಾಬೀತು ಮಾಡಲು ಎಂಫರಿಕಲ್ ಡೇಟಾ ಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸಮೀಕ್ಷೆಯಿಂದ ಬಂದ ಅಂಕಿ ಅಂಶಗಳ ಆಧಾರದ ಮೇಲೆ ಯಾವ ಜಾತಿಗಳಿಗೆ ಪ್ರಾತಿನಿದ್ಯ ಕಲ್ಪಿಸಬೇಕು ಎಂದು ನಿರ್ಧರಿಸುವಂತೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಇದರಡಿಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗ ಹೊಸ ಸಮೀಕ್ಷೆಗೆ ಶಿಫಾರಸು ಮಾಡಿತ್ತು. ಅದರಂತೆ ಆಯೋಗವೇ ಮನೆ ಮನೆ ಸಮೀಕ್ಷೆ ನಡೆಸಿತು. 101 ಜಾತಿಗಳ ಅಂಕಿ-ಅಂಶಗಳನ್ನು ಅದ್ಯಯನ ಮಾಡಿ ಹಿಂದುಳಿದಿರುವಿಕೆಗೆ ಐದು ಕಾರಣಗಳನ್ನು ಪತ್ತೆ ಹಚ್ಚಿತು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ರಾಜಕೀಯ ಹಿಂದುಳೊದಿರುವಿಕೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿದ್ಯದ ಕೊರತೆಯನ್ನು ಪತ್ತೆ ಮಾಡಿ, ಮೀಸಲಾತಿ ಹಂಚಿಕೆ ಮಾಡಿತ್ತು ಎಂದು ವಿವರಿಸಿದರು.
ಹಿಂದುಳಿದಿರುವಿಕೆಯೇ ಮಾನದಂಡ
ಹಿಂದುಳಿದಿರುವಿಕೆ ಆಧಾರದ ಮೇಲೆ ಆಯೋಗ ಐದು ಗುಂಪುಗಳನ್ನು ರಚನೆ ಮಾಡಿತ್ತು. ಅತ್ಯಂತ ಹೆಚ್ಚು ಹಿಂದುಳಿದ ಪ್ರವರ್ಗ ಒಂದರಲ್ಲಿ 41 ಅಲೆಮಾರಿ ಸಮುದಾಯಗಳು ಹಾಗೂ 18 ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಗಳು ಸೇರಿ 59 ಜಾತಿಗಳನ್ನು ಸೇರಿಸಲಾಯಿತು.
ಈಗ ಸರ್ಕಾರ ಆಯೋಗದ ವರದಿಯನ್ನು ಮಾರ್ಪಾಡು ಮಾಡಿದೆ. ಅಲೆಮಾರಿಗಳು ಕಡಿಮೆ ಜನಸಂಖ್ಯೆ ಹೊಂದಿದ್ದು, ಯಾವುದೇ ರಾಜಕೀಯ ಪ್ರಾತಿನಿದ್ಯ ಹೊಂದಿಲ್ಲ. ಶೇ 60 ರಷ್ಟು ಅನಕ್ಷರಸ್ಥರು, 70 ರಷ್ಟು ನಿರುದ್ಯೋಗ ಇದೆ. ಬಡತನ ಇದೆ, ಇಂದಿಗೂ ಹಲವು ಅಲೆಮಾರಿ ಸಮುದಾಯಗಳು ಟೆಂಟ್ , ಡೇರೆ, ಗುಡಿಸಲುಗಳಲ್ಲಿ ವಾಸ ಮಾಡುವ ಸ್ಥಿತಿ ಇದೆ. ಹೀಗಿರುವಾಗ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಅತಾರ್ತಿಕವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಆಯೋಗವು ಐದು ವರ್ಗಗಳನ್ನು ಮಾಡುವಾಗ ಹಿಂದುಳಿದಿರುವಿಕೆಯನ್ನು ಪರಿಗಣಿಸಿತ್ತು. ಆದರೆ, ಸರ್ಕಾರ ಮೂರು ಗುಂಪುಗಳನ್ನಾಗಿ ಮಾರ್ಪಡಿಸಿದಾಗ ಹಿಂದುಳಿದಿರುವಿಕೆ ಪರಿಗಣಿಸಲೇ ಇಲ್ಲ. ಆ ಮೂಲಕ ಹಿಂದುಳಿದಿರುವಿಕೆಗೆ ತಿಲಾಂಜಲಿ ಇಟ್ಟು, ಕೇವಲ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಮರುಹಂಚಿಕೆ ಮಾಡಿದೆ. ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಹಾಗೂ ಆ ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸುವ ಒಳ ಮೀಸಲಾತಿ ಆಶಯಕ್ಕೆ ಸರ್ಕಾರ ನಿರ್ಧಾರ ತದ್ವಿರುದ್ಧವಾಗಿದೆ ಎಂದು ಹೇಳಿದರು.
ಅತ್ಯಂತ ಹಿಂದುಳಿದ ಅಲೆಮಾರಿಗಳನ್ನು ಮುಂದುವರಿದ ಜಾತಿಗಳೊಂದಿಗೆ ಸೆರಿಸಿದರೆ ಸ್ಪರ್ಧಿಸಲು ಸಾದ್ಯವಿಲ್ಲ. ಅಲೆಮಾರಿಗಳಿಗೆ ಮೀಸಲಾತಿ ಪಾಲು ದಕ್ಕುವುದು ಕಡಿಮೆ. ಯಾರಿಗೆ ನಿಜವಾದ ಮೀಸಲಾತಿ ಬೇಕೋ ಅಂತವರಿಗೆ ತಲುಪಿಸುವಲ್ಲಿ ಸರ್ಕಾರ ಸೋತಿದೆ. ಪ್ರಬಲ ಜಾತಿಗಳಿಗೆ ಮಣಿದಿದೆ. ಸುಪ್ರಿಂಕೋರ್ಟ್ ಮಾನದಂಡ ಅನುಸರಿಸಿಲ್ಲ. ಇದು ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಜನಸಂಖ್ಯೆ ಆಧಾರದ ಮೇಲೆ ಮನಸೋ ಇಚ್ಚೆ ಮೀಸಲಾತಿ ಹಂಚಿಕೆ ಮಾಡಲಾಗಿದೆ. ವೈಜ್ಞಾನಿಕವಾಗಿ ಮಾನದಂಡ ಅನುಸರಿಸಿಲ್ಲ ಎಂದು ಹೇಳಿದರು.
ಸದನದಲ್ಲಿ ದನಿ ಯೆತ್ತಲು ಅಲೆಮಾರಿ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲ. ಪ್ರತಿನಿಧಿಗಳೂ ಇಲ್ಲ. ಸಣ್ಣ ಜಾತಿಗಳಾಗಿರುವ ಕಾರಣ ದೊಡ್ಡ ಮಟ್ಟದ ಹೋರಾಟ ರೂಪಿಸಲು ಕಷ್ಟ. ಎಡಗೈ ಹಾಗೂ ಬಲಗೈ ಸಮುದಾಯಗಳು ನಮ್ಮ ಹೋರಾಟಕ್ಕೆ ದನಿಗೂಡಿಸುತ್ತಿರುವುದು ಸಮಾದಾನಕರ ಸಂಗತಿ ಎಂದು ಮಂಜುನಾಥ್ ತಿಳಿಸಿದರು.
ಸರ್ಕಾರದ ವಿರುದ್ಧ ಪ್ರತಿಭಟನೆ ಹಾಗೂ ಕಾನೂನು ಹೊರಾಟವಷ್ಟೇ ನಮ್ಮ ಮುಂದಿರುವ ದಾರಿ. ಸರ್ಕಾರ ತನ್ನ ತಪ್ಪನ್ನು ಅರ್ಥ ಮಾಡಿಕೊಂಡು ಸರಿಪಡಿಸದರೆ ಅಲೆಮಾರಿಗಳಿಗೆ ಆಗುವಂತಹ ಅನ್ಯಾಯ ತಪ್ಪಿಸಿದಂತಾಗುತ್ತದೆ. ಇಲ್ಲವಾದಲ್ಲಿ ಸರ್ಕಾರ ಒಂದು ಚಾರಿತ್ರಿಕ ಪ್ರಮಾದ ಎಸಗಿದ ಕಳಂಕ ಹೊರಲಿದೆ. ಇತಿಹಾಸದಲ್ಲಿ ಅದು ಶಾಶ್ವತವಾಗಿ ಉಳಿಯಲಿದೆ. ಸಾಮಾಜಿಕ ನ್ಯಾಯದ ರಥ ಎಳೆಯುವವರು ಸಿದ್ದರಾಮಯ್ಯ ಎಂದು ನಂಬಿದ್ದೆವು. ಈಗ ಅವರಿಂದಲೇ ಇಂತಹ ಪ್ರಮಾದಾಗಿರುವುದು ನಂಬಲು ಅಸಾಧ್ಯವಾಗಿದೆ ಎಂದರು.
ಮಂಡಲ್ ಆಯೋಗದ ವರದಿ ಜಾರಿಗಾಗಿ ಹೋರಾಟ, ಸಮಾಜವಾದಿಯೂ ಆಗಿರುವ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕಾಗಿ ಅಧಿಕೃತವಾಗಿ ಮಾತನಾಡುವ ವ್ಯಕ್ತಿ. ಈ ವಿಚಾರದಲ್ಲಿ ತಮ್ಮ ಬದ್ಧತೆ ತೋರಿಸಲು ಇದೊಂದು ಸುವರ್ಣಾವಕಾಶವಾಗಿತ್ತು ಎಂದು ಹೇಳಿದರು.