
ನೋಯ್ಡಾ ವರದಕ್ಷಿಣೆ ಹತ್ಯೆ: ಪತ್ನಿಯನ್ನು ಸುಟ್ಟು ಕೊಂದವನಿಗೆ ಪೊಲೀಸರಿಂದ ಗುಂಡೇಟು
ಕೇವಲ 35 ಲಕ್ಷ ರೂಪಾಯಿ ವರದಕ್ಷಿಣೆಗಾಗಿ, ವಿಪಿನ್ ಮತ್ತು ಆತನ ಕುಟುಂಬದ ಸದಸ್ಯರು ನಿಕ್ಕಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದ.
ವರದಕ್ಷಿಣೆಗಾಗಿ ಪೀಡಿಸಿ ತನ್ನ ಪತ್ನಿಯನ್ನೇ ಅಮಾನುಷವಾಗಿ ಥಳಿಸಿ, ಜೀವಂತವಾಗಿ ಸುಟ್ಟು ಕೊಂದಿದ್ದ ಪ್ರಮುಖ ಆರೋಪಿ ವಿಪಿನ್‌ಗೆ ನೋಯ್ಡಾ ಪೊಲೀಸರು ಗುಂಡು ಹಾರಿಸಿದ್ದಾರೆ. ಸಾಕ್ಷ್ಯ ಸಂಗ್ರಹಕ್ಕಾಗಿ ಕರೆದೊಯ್ಯುತ್ತಿದ್ದಾಗ, ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಈ ಪಾಪಿಗೆ ಎನ್‌ಕೌಂಟರ್‌ನಲ್ಲಿ ಕಾಲಿಗೆ ಗಾಯವಾಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ಈ ಕ್ರಮವನ್ನು ವ್ಯಾಪಕವಾಗಿ ಸಮರ್ಥಿಸಿಕೊಳ್ಳಲಾಗುತ್ತಿದೆ.
ಪತ್ನಿ ನಿಕ್ಕಿ (30) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಿಪಿನ್‌ನನ್ನು ಪೊಲೀಸರು ಸಾಕ್ಷ್ಯ ಸಂಗ್ರಹಕ್ಕಾಗಿ ಘಟನಾ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ, ಚೌರಾಹಾ ಬಳಿ ವಿಪಿನ್, ಪೊಲೀಸರ ಕಣ್ತಪ್ಪಿಸಿ, ಅಧಿಕಾರಿಯೊಬ್ಬರಿಂದ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಪದೇ ಪದೇ ಎಚ್ಚರಿಕೆ ನೀಡಿದರೂ, ಆತ ಅವುಗಳನ್ನು ಕಡೆಗಣಿಸಿದ್ದಾನೆ. ಕೊನೆಗೆ, ಬೇರೆ ದಾರಿಯಿಲ್ಲದೆ, ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ವಿಪಿನ್‌ನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. "ಪೊಲೀಸರು ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥರಿಗೆ ಇದೇ ರೀತಿ ಪಾಠ ಕಲಿಸಬೇಕು" ಎಂದು ಮೃತೆ ನಿಕ್ಕಿಯ ತಂದೆ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ಘೋರ ಕೃತ್ಯ?
ಕೇವಲ 35 ಲಕ್ಷ ರೂಪಾಯಿ ವರದಕ್ಷಿಣೆಗಾಗಿ, ವಿಪಿನ್ ಮತ್ತು ಆತನ ಕುಟುಂಬದ ಸದಸ್ಯರು ನಿಕ್ಕಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಗುರುವಾರ ರಾತ್ರಿ ನಡೆದ ಈ ದುರಂತದಲ್ಲಿ, ನಿಕ್ಕಿಗೆ ಪ್ರಜ್ಞೆ ತಪ್ಪುವವರೆಗೂ ಅಮಾನುಷವಾಗಿ ಥಳಿಸಿ ನಂತರ ಆಕೆಗೆ ಬೆಂಕಿ ಹಚ್ಚಿದ್ದರು. ಗಂಭೀರ ಸುಟ್ಟ ಗಾಯಗಳಾಗಿದ್ದ ಆಕೆಯನ್ನು ನೆರೆಹೊರೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟರು. ಈ ಘಟನೆಯ ಅತ್ಯಂತ ನೋವಿನ ಭಾಗವೆಂದರೆ, ಈ ಎಲ್ಲ ಅಮಾನವೀಯ ಕೃತ್ಯಗಳು ಕೇವಲ ಆರು ವರ್ಷದ ಪುಟ್ಟ ಮಗುವಿನ ಮತ್ತು ನಿಕ್ಕಿಯ ಸಹೋದರಿ ಕಾಂಚನ್ ಅವರ ಕಣ್ಣೆದುರೇ ನಡೆದಿವೆ.