ವಿದ್ಯುತ್ ಬಿಲ್ ಪಾವತಿ | ಯುಪಿಐ ವ್ಯವಸ್ಥೆ ಏಕೆ ಇಲ್ಲ? ಬೆಸ್ಕಾಂ ವಿರುದ್ಧ ಹೈಕೋರ್ಟ್ ಗರಂ
ವಿದ್ಯುತ್ ಬಿಲ್ ಸೇರಿದಂತೆ ವಿವಿಧ ಶುಲ್ಕಗಳ ಪಾವತಿಗೆ ಯುಪಿಐ ವ್ಯವಸ್ಥೆ ಜಾರಿ ಮಾಡದೇ ಇರಲು ಕಾರಣವೇನು ಎಂಬ ಕುರಿತು ಆ.23ರ ವೇಳೆಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರು ಖುದ್ದು ಹಾಜರಾಗಬೇಕಾಗುತ್ತದೆ ಎಂದು ರಾಜ್ಯ ಹೈಕೋರ್ಟ್ ಬೆಸ್ಕಾಂಗೆ ಖಡಕ್ ಎಚ್ಚರಿಕೆ ನೀಡಿದೆ.
ವಿದ್ಯುತ್ ಸಂಪರ್ಕ ಪ್ರೀಪೇಯ್ಡ್ ಮೀಟರ್ ಅಳವಡಿಕೆಗೆ ಕೋರಿ ಹೊಸಕೋಟೆ ನಿವಾಸಿ ಸೀತಾಲಕ್ಷ್ಮೀ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿ, ಪ್ರೀಪೇಯ್ಡ್ ಮೀಟರ್ ನೀಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ 2024ರ ಮೇ 8ರಂದು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರೆ ಸೀತಾಲಕ್ಷ್ಮೀ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯ ಗೌಡ ಅವರಿದ್ಧ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಬೆಸ್ಕಾಂ ಪರ ವಕೀಲರು, ಯುಪಿಐ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದು ಕೊನೇಯ ಅವಕಾಶ. ಆಗಸ್ಟ್ 23ರ ವೇಳೆಗೆ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ವ್ಯವಸ್ಥಾಪಕರು ಕೋರ್ಟ್‌ನಲ್ಲಿ ಹಾಜರಿದ್ದು ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ವಿಚಾರಣೆ ಮುಂದೂಡಿತು.
ಕಳೆದ ಬಾರಿ ವಿಚಾರಣೆಯಲ್ಲಿ, ಇಡೀ ಜಗತ್ತು ಡಿಜಿಟಲೀಕರಣ ಆಗಿರುವಾಗ ನೀವು ಮಾತ್ರ ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿತ್ತು.