
Reality Check | ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಇಲ್ಲ ತರಬೇತಿ!
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ನಂತರ ದ ಫೆಡರಲ್ ಕರ್ನಾಟಕ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ, ಬೌರಿಂಗ್ ಹಾಗೂ ಎಚ್.ಎಸ್.ಐಎಸ್. ಘೋಷಾ ಆಸ್ಪತ್ರೆಯಲ್ಲಿ ರಿಯಾಲಿಟಿ ಚೆಕ್ ನಡೆಸಿತು.
ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಬಳಿಕ ಇತರೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ಅಗ್ನಿ ಸುರಕ್ಷತೆ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದು, ಆಸ್ಪತ್ರೆಯ ಸಿಬ್ಬಂದಿಗೆ ಅಗ್ನಿ ಸುರಕ್ಷತೆಯ ಸಾಧನಗಳ ಬಳಕೆಯ ಕೊರತೆ ಎದ್ದು ಕಾಣುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಮುಂಜಾಗ್ರತಾ ಕ್ರಮವಾಗಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಅವುಗಳ ಬಳಕೆಯಲ್ಲಿ ಸಿಬ್ಬಂದಿಗೆ ಸಮರ್ಪಕವಾದ ತರಬೇತಿ ಇಲ್ಲದಿರುವುದು ಗೊತ್ತಾಗಿದೆ. ಇದು ಅಗ್ನಿ ಅವಘಡಗಳು ಸಂಭವಿಸಿದರೆ ತುರ್ತು ಕಾರ್ಯಾಚರಣೆಗೆ ಕಷ್ಟಕರವಾಗಲಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ನಂತರ ದ ಫೆಡರಲ್ ಕರ್ನಾಟಕವು ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಾಗೂ ಎಚ್.ಎಸ್.ಐಎಸ್. ಘೋಷಾ ಆಸ್ಪತ್ರೆಯಲ್ಲಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ.
ಆಸ್ಪತ್ರೆಗಳ ಇತಿಹಾಸ
ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರಿನಲ್ಲಿರುವ ಒಂದು ಪ್ರಮುಖ ಆಸ್ಪತ್ರೆಯಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಸಂಯೋಜಿತವಾಗಿದೆ. ಇದು ಭಾರತದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ. 1900 ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭವಾದ ಈ ಆಸ್ಪತ್ರೆ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಯಿತು. ೧೯೪೯ರಲ್ಲಿ ಆಸ್ಪತ್ರೆಯ ಹೆಸರನ್ನು ವಿಕ್ಟೋರಿಯಾ ಆಸ್ಪತ್ರೆ ಎಂದು ಬದಲಾಯಿಸಲಾಯಿತು. ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರಿನ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ.
ಮಿಂಟೋ ನೇತ್ರ ಆಸ್ಪತ್ರೆಯು ಬೆಂಗಳೂರಿನಲ್ಲಿ ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಸ್ವಾಮ್ಯದ ವಿಶೇಷ ಆಸ್ಪತ್ರೆಯಾಗಿದೆ . ಮಿಂಟೋ ನೇತ್ರ ಆಸ್ಪತ್ರೆ 1896 ರಲ್ಲಿ ಸ್ಥಾಪಿಸಲಾಯಿತು. ಇದು ಅತ್ಯಂತ ಹಳೆಯ ವಿಶೇಷ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯನ್ನು 1896 ರಲ್ಲಿ ಚಿಕ್ಕಪೇಟೆ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು. 1897 ರಲ್ಲಿ ಲಾಲ್‌ಬಾಗ್ ಲಾಡ್ಜ್‌ಗೆ ಸ್ಥಳಾಂತರಿಸಲಾಯಿತು. ನಂತರ 1913 ರಲ್ಲಿ ಪ್ರಸ್ತುತ ಇರುವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದನ್ನು ಮೈಸೂರು ರಾಜ್ಯದ ನಾಲ್ಕನೇ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸಂಯೋಜಿತವಾಗಿದ್ದು, ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿದೆ.
ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯು ಬ್ರಿಟಿಷರ ಕಾಲದಲ್ಲಿಸ್ಥಾಪಿತವಾದ ಆಸ್ಪತ್ರೆಯಾಗಿದೆ. 1866-67ರಲ್ಲಿ ಬೌರಿಂಗ್ ಸಿವಿಲ್ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. 1893 ರಲ್ಲಿ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. 1862 ರೆಂದ 1870 ರವರೆಗೆ ಮೈಸೂರು ಮತ್ತು ಕೂರ್ಗ್‌ನ ಮುಖ್ಯ ಆಯುಕ್ತರಾಗಿದ್ದ ಲೂಯಿಸ್ ಬೆಂಥಮ್ ಬೌರಿಂಗ್ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ.
ಎಚ್‌ಎಸ್‌ಐಎಸ್ ಘೋಷಾ ಆಸ್ಪತ್ರೆಯಲ್ಲಿ 1925 ರಲ್ಲಿ ಸ್ಥಾಪಿಸಲಾಯಿತು. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವನ್ನುಪ್ರತ್ಯೇಕಿಸಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಲಾಯಿತು. ಇದು ಗರ್ಭಿಣಿ ಮಹಿಳೆಯರ ಆರೈಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತದೆ. ಘೋಷಾ ಆಸ್ಪತ್ರೆಯಲ್ಲಿ 120 ಹಾಸಿಗೆಗಳಿವೆ. 10 ಹಾಸಿಗೆಗಳ ಎನ್‌ಐಸಿಯು ಸಹ ಸೇರಿಸಲಾಗಿದೆ.
ಅಗ್ನಿಶಾಮಕ ಕ್ರಮ: ಅನುಭವದ ಕೊರತೆ
ಈ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಬಳಕೆ ಮಾಡುವ ಅನುಭವದ ಕೊರತೆ ಇದೆ. ಅಗ್ನಿ ಶಾಮಕ ದಳದಿಂದ ತರಬೇತಿ ನೀಡಿದೆ. ಆದರೆ, ತುರ್ತು ಸಮಯದಲ್ಲಿ ಅದೇ ಸಿಬ್ಬಂದಿ ಇರುತ್ತಾರೆ ಎಂಬ ಖಾತರಿ ಇಲ್ಲ. ಅಲ್ಲದೇ, ಸುರಕ್ಷತಾ ಕ್ರಮಗಳ ಸಾಧನಗಳ ಬಳಕೆ ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಬರುವುದಿಲ್ಲ. ಅದರಲ್ಲಿಯೂ ರಾತ್ರಿ, ನಸುಕಿನ ವೇಳೆಯಲ್ಲಿ ದುರಂತ ನಡೆದಾಗ ಸಮಯ ಪ್ರಜ್ಞೆ ಬಳಕೆ ಮಾಡಿದಿದ್ದರೆ ಭಾರೀ ಅನಾಹುತ ಸಂಭವಿಸುವುದು ಖಚಿತ ಎಂಬುದು ಗೊತ್ತಾಗಿದೆ.
ಮಿಂಟೋ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಇಕ್ಕಟ್ಟಿನ ವಾತಾವರಣ
ಮಿಂಟೋ ಮತ್ತು ವಿಕ್ಟೋರಿಯಾ ಆಸ್ಪತ್ರೆಯನ್ನು ಸಾಕಷ್ಟು ಆಧುನಿಕರಣ ಮಾಡಲಾಗಿದೆ. ಆದರೆ, ಕೆಲವು ವಿಭಾಗಗಳು ಹಳೆಯ ಕಾಲದಾಗಿದ್ದು, ಇಕ್ಕಟ್ಟಿನ ವಾತಾವರಣ ಇದೆ. ದುರಂತ ನಡೆದರೆ ತಕ್ಷಣ ರೋಗಿಗಳನ್ನು, ಅವರ ಸಂಬಂಧಿಕರು, ವೈದ್ಯರು, ಸಿಬ್ಬಂದಿ ಸ್ಥಳಾಂತರಗೊಳ್ಳಲು ಕಷ್ಟದ ಪರಿಸ್ಥಿತಿ ಇದೆ. ಮೆಟ್ಟಿಲುಗಳಿಂದ ತಕ್ಷಣವೇ ಇಳಿದು ಬರುವುದು ಕಷ್ಟಕರವಾಗಿವೆ. ಹಳೆಯ ಕಟ್ಟಡಗಳಲ್ಲಿ ಈಗಿನ ಜನಸಂದಣಿಗೆ ತಕ್ಕಂತೆ ಸ್ಥಳಾವಕಾಶದ ಕೊರತೆ ಇದೆ. ಕಿರಿದಾದ ಸ್ಥಳಗಳಲ್ಲಿ ಒಮ್ಮೆಲೆ ಜನ ನುಗ್ಗಿದರೆ ಸಾವು-ನೋವುಗಳು ಸಂಭವಿಸಲಿವೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯು ಭಾರತದ ಎರಡನೇ ಅತಿದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಇದೆ. ಪ್ರತಿನಿತ್ಯ ಸಾವಿರಾರು ಜನರು ಹೊರ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಸಾವಿರಾರು ಜನ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆಗೊಳಗಾಗಿದ್ದಾರೆ. ಮೆಡಿಸಿನ್, ಸರ್ಜರಿ, ಆರ್ಥೋಪೆಡಿಕ್ಸ್, ಡರ್ಮಟಾಲಜಿ, ಸೈಕಿಯಾಟ್ರಿ, ರೇಡಿಯಾಲಜಿ ಮತ್ತು ರೇಡಿಯೊಥೆರಪಿ, ಫಿಸಿಯೋಥೆರಪಿ, ಫೋರೆನ್ಸಿಕ್ ಮೆಡಿಸಿನ್ ಸೂಪರ್ ವಿಶೇಷತೆಗಳು ಪ್ಲಾಸ್ಟಿಕ್ ಸರ್ಜರಿ, ಸರ್ಜಿಕಲ್ ಮತ್ತು ಮೆಡಿಕಲ್ ಗ್ಯಾಸ್ಟ್ರೊ ಎಂಟ್ರಾಲಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಕಾರ್ಡಿಯಾಲಜಿ ಮತ್ತು ಮೂತ್ರಶಾಸ್ತ್ರ ವಿಭಾಗಗಳನ್ನು ಒಳಗೊಂಡಿವೆ. ಈ ಎಲ್ಲಾ ವಿಭಾಗಗಳ ಪೈಕಿ ಕೆಲವು ವಿಶಾಲವಾದ ಕೊಠಡಿಗಳನ್ನು ಹೊಂದಿವೆ. ಇನ್ನು ಕೆಲವು ಕಿರಿದಾಗಿ ಹೊಂದಿವೆ. ಅಂತಹ ವಿಭಾಗದಲ್ಲಿಅನಾಹುತಗಳು ನಡೆದರೆ ಕಷ್ಟಕರವಾಗಿರಲಿದೆ. ಮಿಂಟೋ ಆಸ್ಪತ್ರೆಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆಯಾದರೂ ಪರೀಕ್ಷಾ ಕೊಠಡಿಗಳು ಕಿರಿದಾಗಿವೆ.
ಬೌರಿಂಗ್ ಆಸ್ಪತ್ರೆ ಮತ್ತು ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆಯಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೊಂಡ ಬಳಿಕ ಪರಿಸ್ಥಿತಿ ಸುಧಾರಿಸಿದೆ. ಹಳೆ ಕಟ್ಟಡಗಳನ್ನು ಸುಧಾರಣೆ ಮಾಡಬೇಕಾದ ಅಗತ್ಯತೆ ಇದೆ. ಸುಸಜ್ಜಿತವಾಗಿರುವ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ತರಬೇತಿಯ ಕೊರತೆ ಎದ್ದು ಕಾಣುತ್ತದೆ:
ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿಶಾಮಕ ದಳದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಅವುಗಳ ಬಳಕೆಗೆ ಸಿಬ್ಬಂದಿಯಲ್ಲಿ ತರಬೇತಿ ಕೊರತೆ ಎದ್ದು ಕಾಣುತ್ತದೆ. ಬೌರಿಂಗ್ ಆಸ್ಪತ್ರೆಯ ಹೆಸರಳಲು ಇಚ್ಛಿಸದ ವೈದ್ಯರೊಬ್ಬರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, ಸರ್ಕಾರವು ನಿಯಮಗಳ ಪ್ರಕಾರ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಆದರೆ, ಸುರಕ್ಷತಾ ಸಾಧನಗಳ ಬಳಕೆಯು ಸಿಬ್ಬಂದಿಗೆ ಅತ್ಯಗತ್ಯವಾಗಿದೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸುರಕ್ಷತಾ ಸಾಧನಗಳ ಬಳಕೆಯ ತರಬೇತಿ ಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಅಗ್ನಿ ಅವಘಡದಂತಹ ತುರ್ತು ಸನ್ನಿವೇಶವನ್ನು ನಿಭಾಯಿಸಲು ಸಾಧ್ಯ ಎಂದು ಹೇಳಿದರು.
ಘೋಷಾ ಆಸ್ಪತ್ರೆಯ ಸಿಬ್ಬಂದಿ ಯೊಬ್ಬರು ಮಾತನಾಡಿ, ಡಿ ಗ್ರೂಪ್ ನೌಕರರಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು. ಬೆಂಕಿ ಅನಾಹುತ ಸೇರಿದಂತೆ ಯಾವುದೇ ಅನಾಹುತಗಳು ನಡೆದರೂ ಮೊದಲು ಧಾವಿಸುವುದು ಡಿ ಗ್ರೂಪ್ ನೌಕರರು. ಹೀಗಾಗಿ ಕಡ್ಡಾಯವಾಗಿ ಅವರಿಗೆ ತರಬೇತಿ ನೀಡಬೇಕಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ತರಬೇತಿ ಇಲ್ಲವಾಗಿದೆ. ಕೆಲವರಿಗೆ ತರಬೇತಿ ಇರಬಹುದು. ಆದರೆ, ಬಹಳಷ್ಟು ಮಂದಿಗೆ ಯಾವ ರೀತಿಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅವುಗಳ ಸಾಧನಗಳನ್ನು ಬಳಕೆ ಮಾಡುವುದು ಗೊತ್ತಿಲ್ಲ. ಬಳಕೆ ಜ್ಞಾನ ಇಲ್ಲದಿದ್ದರೆ ಅವುಗಳು ಇದ್ದು ಯಾವುದೇ ಪ್ರಯೋಜನವಾನ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಬೆಂಕಿಯನ್ನು ತಡೆಗಟ್ಟುವ ತಂತ್ರಗಳು
ಆಸ್ಪತ್ರೆಯಲ್ಲಿ ವಿವಿಧ ಸಮಸ್ಯೆಗಳಿಂದ ಬಳಲುವ ರೋಗಿಗಳು ಚಿಕಿತ್ಸೆಗೊಳಗಾಗಿರುತ್ತಾರೆ. ಅಲ್ಲಿ ಧೂಮಪಾನಕ್ಕೆ ನಿಯಂತ್ರಣ ಹೇರಬೇಕಾಗಿದೆ. ಧೂಮಪಾನವು ಬೆಂಕಿಗೆ ಪ್ರಮುಖ ಕಾರಣವಾಗಿರುವುದರಿಂದ ಆರೋಗ್ಯ ಸೌಲಭ್ಯಗಳಿಗೆ ಗಮನಾರ್ಹ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಆಸ್ಪತ್ರೆಯ ಆವರಣದಲ್ಲಿ ಧೂಮಪಾನಿಗಳ ಕಟ್ಟುನಿಟ್ಟಿನ ನಿರ್ವಹಣೆ ಮಾಡಬೇಕಾಗುತ್ತದೆ.
ಜೀವ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿರುವ ಕಾರಣ ಜನರ ವೈಯಕ್ತಿಕ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು. ಇತರರನ್ನು ಎಚ್ಚರಿಸಲು ಅಲಾರಾಂ ವ್ಯವಸ್ಥೆಯನ್ನು ಬಳಕೆ ಅತ್ಯಗತೆವಾಗಿರುತ್ತದೆ. ಅಗ್ನಿಶಾಮಕ ಸ್ಥಳಾಂತರ ಮಾರ್ಗಗಳ ನಕ್ಷೆಗಳನ್ನು ಗುರುತಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.
ಆಸ್ಪತ್ರೆಗಳು ಅಗ್ನಿ ಸುರಕ್ಷತೆಯ ಮೌಲ್ಯಕ್ಕೆ ಹೆಚ್ಚಿನ ಗಮನಹರಿಸಬೇಕು. ಅಗ್ನಿ ಸುರಕ್ಷತಾ ತರಬೇತಿಯು ಸಿಬ್ಬಂದಿಗೆ ಪ್ರಮುಖ ಆದ್ಯತೆಯಾಗಿರಬೇಕು. ಆಗಾಗ್ಗೆ ತರಬೇತಿಗಳನ್ನು ನಡೆಸಬೇಕಾಗಿದೆ. ತರಬೇತಿಯ ವೇಳೆ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಾಮರ್ಥ್ಯ ಮತ್ತು ಮಾಹಿತಿಯನ್ನು ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಬೇಕು.
ಆಸ್ಪತ್ರೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು?
ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ವಿದ್ಯುತ್ ಸಾಧನಗಳು ಅಸಮರ್ಪಕ ಕಾರ್ಯ ನಿರ್ವಹಣೆ ಅಥವಾ ಓವರ್‌ಲೋಡ್ ಆಗಿರುತ್ತದೆ. ವಿದ್ಯುತ್ ತಂತಿಗಳು ಮತ್ತು ಪ್ಲಗ್‌ಗಳು ಉತ್ತಮ ಕೆಲಸದ ಸ್ಥಿತಿಯಲ್ಲಿವೆಯೇ ಎಂಬುದನ್ನು ಗಮನಿಸದಿರುವುದು. ಮುರಿದ ಪ್ಲಗ್‌ಗಳು ಮತ್ತು ಸವೆದ ತಂತಿಗಳನ್ನು ಸೂಕ್ತವಾಗಿ ಬದಲಾಯಿಸದಿರುವುದು. ಹೊಗೆ, ವಾಸನೆ ಅಥವಾ ಕಿಡಿಗಳನ್ನು ಉತ್ಪಾದಿಸುವ ವಸ್ತುಗಳು ಇರುವುದು ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಾಗಿರುತ್ತವೆ ಎಂದು ಹೇಳಲಾಗಿದೆ.