
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್
Operation Sindoor | ಕಾಶ್ಮೀರ ವಿಚಾರದಲ್ಲಿ 3ನೇ ರಾಷ್ಟ್ರ ಮೂಗು ತೂರಿಸುವಂತಿಲ್ಲ: ಬಿ.ಕೆ. ಹರಿಪ್ರಸಾದ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಿದ್ದಾರೆ. ಈಗ ಕಾಶ್ಮೀರ ವಿಷಯದಲ್ಲಿ ಅಮೆರಿಕಾ ತಲೆದೂರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ -ಪಾಕಿಸ್ತಾನದ ಮಧ್ಯೆ ದಶಕಗಳಿಂದ ಕಗ್ಗಂಟಾಗಿ ಉಳಿದಿರುವ ಕಾಶ್ಮೀರ ವಿವಾದದಲ್ಲಿ ಮೂರನೇ ರಾಷ್ಟ್ರ ಮಧ್ಯಸ್ಥಿಕೆ ವಹಿಸುವುದರಿಂದ ರಾಜತಾಂತ್ರಿಕವಾಗಿ ನಾವು ದುರ್ಬಲರಾಗುತ್ತೇವೆ. ಹಾಗಾಗಿ, ಈ ವಿವಾದದಲ್ಲಿ ಯಾರೂ ಮೂಗು ತೂರಿಸುವಂತಿಲ್ಲ. ಆಗೊಮ್ಮೆ ಮಧ್ಯಸ್ಥಿಕೆ ವಹಿಸಿದರೆ ಅದು ಶಿಮ್ಲಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ತಿಳಿಸಿದರು.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕದನ ವಿರಾಮ ಏರ್ಪಡುವಂತೆ ಮಾಡಿದ್ದಾರೆ. ಎರಡು ರಾಷ್ಟ್ರಗಳ ಹಿತಾಸಕ್ತಿ ವಿಷಯದಲ್ಲಿ ಅಮೆರಿಕಾ ತಲೆದೂರಿಸಲು ಅವಕಾಶ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಗುರುವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಪಾಕಿಸ್ತಾನ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಸ್ವಾಗತಿಸುವ ನಿಲುವು ಪ್ರಕಟಿಸಿದ್ದವು. ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಲು ಸಂಸತ್ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರೂ ಈವರೆಗೂ ಪ್ರಧಾನಿ ಉತ್ತರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ವಪಕ್ಷಗಳ ಸಭೆಗೆ ಪ್ರಧಾನಿ ಗೈರು
ಪಹಲ್ಗಾಮ್ ದಾಳಿ ನಂತರ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆ ಕರೆದು ಮಾಹಿತಿ ನೀಡಬೇಕಿತ್ತು. ಆದರೆ, ಸರ್ವಪಕ್ಷಗಳ ಸಭೆಗೆ ಖುದ್ದು ಪ್ರಧಾನಿ ಅವರೇ ಗೈರಾಗಿದ್ದರು. ಪ್ರಧಾನಿ ಮೋದಿ ಅವರಿಗೆ ದೇಶದ ಭದ್ರತೆಗಿಂತ ಬಿಹಾರದ ಚುನಾವಣಾ ಪ್ರಚಾರ ಹಾಗೂ ಕೇರಳದಲ್ಲಿ ನಡೆದ ಕಾರ್ಯಕ್ರಮ ಮುಖ್ಯವಾಗಿತ್ತು ಎಂದು ಟೀಕಿಸಿದರು.
ಶಿಮ್ಲಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ
ಕಾಶ್ಮೀರ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಮೂರನೇ ರಾಷ್ಟ್ರ ಮಧ್ಯಸ್ಥಿಕೆ ವಹಿಸುವಂತಿಲ್ಲ ಎಂದು 1972 ಜುಲೈ 2ರಂದು ಭಾರತದ ಪ್ರಧಾನಿ ಇಂದಿರಾಗಾಂಧಿ ಹಾಗೂ ಪಾಕಿಸ್ತಾನ ಅಧ್ಯಕ್ಷ ಜುಲ್ಫಿಕರ್ ಆಲಿ ಭುಟ್ಟೋ ಸಹಿ ಹಾಕಿದ್ದರು. ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗೂ ಪಾಕ್ ನಡುವೆ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದಾರೆ. ಆ ರೀತಿಯಾದರೆ ಅದು ಶಿಮ್ಲಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದರು.