ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿರುವ ನಿಗಮ, ಮಂಡಳಿ, ಆಯೋಗಗಳು ಎತ್ತಂಗಡಿ?
x

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿರುವ ನಿಗಮ, ಮಂಡಳಿ, ಆಯೋಗಗಳು ಎತ್ತಂಗಡಿ?

ಸಚಿವಾಲಯದ ಸಿಬ್ಬಂದಿಗಳು ಉಸಿರುಗಟ್ಟುವ ಸಂಕೀರ್ಣ ವಾತಾವರಣದಲ್ಲಿದ್ದು, ಅವ್ಯವಸ್ಥೆಗಳನ್ನು ಸಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ರಮೇಶ್ ಸಂಗಾ ಮತ್ತು ಪ್ರಧಾನ ಕಾರ್ಯದರ್ಶಿ ಅಭಿಜಿತ್‌ ಎಸ್‌. ಪತ್ರ ಬರೆದು ಗಮನಸೆಳೆದಿದ್ದರು


ವಿಧಾನ ಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯೇತರ ಕಚೇರಿಗಳನ್ನು ಅಲ್ಲಿಂದ ಕೂಡಲೇ ಸ್ಥಳಾಂತರಿಸಿ, ಸಚಿವಾಲಯದ ಕಚೇರಿಗಳು ಮಾತ್ರ ಅಗತ್ಯ ಮೂಲಭೂತ ಸೌಲಭ್ಯದೊಂದಿಗೆ ಕರ್ತವ್ಯ ನಿರ್ವಹಿಸಲು ಸೂಕ್ತ ವಾತಾವರಣ ರೂಪಿಸುವ ಬಗ್ಗೆ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ ಕಾರ್ಯದರ್ಶಿ ಸಕಾರಾತ್ಮಕವಾಗಿ ಸ್ಮಂದಿಸಿದ್ದಾರೆ.

ಮೊದಲ ಹಂತವಾಗಿ ಈ ಹಿನ್ನೆಲೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ಸಂಸ್ಥೆಯ ಕಚೇರಿಗೆ ಸ್ಥಳಾವಕಾಶವನ್ನು ಬಹುಮಹಡಿ ಕಟ್ಟಡ ಸೇರಿದಂತೆ ಸಚಿವಾಲಯದ ಯಾವುದೇ ಕಟ್ಟಡಗಳಲ್ಲಿ ನೀಡದಂತೆ ಮಾಡಿರುವ ಮನವಿಗೆ ಸ್ಪಂದಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಉಪ ಕಾರ್ಯದರ್ಶಿ ಕೆ. ರವೀಂದ್ರ ಆದೇಶ ಹೊರಡಿಸಿದ್ದಾರೆ.‌ ಇದರಿಂದಾಗಿ ಬಹುಮಹಡಿ ಕಟ್ಟಡದಲ್ಲಿರುವ ಯಾವುದೇ ಆಯೋಗಗಳು, ನಿಗಮ ಮಂಡಳಿಗಳು, ಪ್ರಾದಿಕಾರಗಳು, ಕಚೇರಿಗಳು ಸೇರಿದಂತೆ ಸಚಿವಾಲಾಯೇತರ ಕಚೇರಿಗಳನ್ನು ಸ್ಥಳಾಂತರಿಸಬೇಕಾಗಿದೆ.

ವಿಧಾನಸೌಧದ ವಿವಿಧ ಇಲಾಖಾ ಕಚೇರಿಗಳು, ಸಚಿವಾಲಯಗಳಿಗೆ ಸಂಬಂಧಿಸಿದ ಕಚೇರಿಗಳಿಗಾಗಿ ವಿಧಾನಸೌಧದ ಬಳಿಹೊರತುಪಡಿಸಿ ಬಹುಮಹಡಿ ಕಟ್ಟಡ ಮತ್ತು ವಿಕಾಸಸೌಧಗಳ ನಿರ್ಮಾಣವಾಗಿತ್ತು. ಸಚಿವಾಲಯ ಸಿಬ್ಬಂದಿಗೆ ಸೂಕ್ತ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಮಂಡಳಿ, ನಿಗಮ, ಆಯೋಗ ಸೇರಿದಂತೆ ಸಚಿವಾಲಯೇತರ ಕಚೇರಿಗಳಿಗೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಸಂಕೀರ್ಣಗಳಲ್ಲಿ ಸ್ಥಳಾವಕಾಶ ನೀಡಬಾರದೆಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್‌ ಸಂಗಾ ಅವರು ಸರ್ಕಾರದ ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಮತ್ತು ವಿಜ್ಞಾನ ತಂತ್ರಜ್ಞಾನ ಮತ್ರು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದ್ದರು.

ಸಚಿವಾಲಯಗಳ ವ್ಯಾಪ್ತಿಗಳ ಸರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಸಚಿವಾಲಯ ಸಿಬ್ಬಂದಿ (ಸರ್ಕಾರಿ ನೌಕರರು ಹಾಗೂ ಹೊರಗುತ್ತಿಗೆ ನೌಕರರು) ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಂಶವನ್ನೂ ಪ್ರಮುಖವಾಗಿ ಪ್ರಸ್ತಾಪಿಸಲಾಗಿತ್ತು.

ಈಗಾಗಲೇ, ಬಹುಮಹಡಿ ಕಟ್ಟಡದ ಐದೂ ಗೇಟ್‌ಗಳಲ್ಲಿ ಬಹುತೇಕ ಸ್ಥಳಾವಕಾಶವನ್ನು ಕ್ಷೇತ್ರ ಇಲಾಖೆ, ನಿರ್ದೇಶನಾಲಯ, ಆಯುಕ್ತಾಲಯ, ವಿವಿಧ ಆಯೋಗಗಳು, ಲೋಕಯುಕ್ತ ಕಚೇರಿಗಳು ಸೇರಿದಂತೆ ವಿವಿಧ ಸಚಿವಾಲಯೇತರ ಕಚೇರಿಗಳಿಗೆ ವಿನಿಯೋಗಿಸಲಾಗಿದೆ. ಹಾಗಾಗಿ ಸಚಿವಾಲಯದ ಸಿಬ್ಬಂದಿಗಳು ಉಸಿರುಗಟ್ಟುವ ಸಂಕೀರ್ಣ ವಾತಾವರಣದಲ್ಲಿ, ಈ ಅವ್ಯವಸ್ಥೆಗಳನ್ನು ಸಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ರಮೇಶ್ ಸಂಗಾ ಮತ್ತು ಪ್ರಧಾನ ಕಾರ್ಯದರ್ಶಿ ಪತ್ರ ಬರೆದು ಗಮನಸೆಳೆದಿದ್ದರು.





ಈ ಮಧ್ಯೆ, "ಬಹುಮಹಡಿ ಕಟ್ಟಡದ 5ನೇ ಗೇಟಿನ ಸಚಿವಾಲಯದ ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೇರಿದ 505, 506 ಮತ್ತು 507ನೇ ಸಂಖ್ಯೆಯ ಕೊಠಡಿಗಳನ್ನು ಸಂಯೋಜಿಸಿ ನವೀಕರಣಗೊಳಿಸಲಾಗುತ್ತಿದ್ದು, ಇಲಾಖೆಯ ಅಧೀನದ ಯಾವುದೋ ಸಂಸ್ಥೆಯ ಕಚೇರಿಯನ್ನಾಗಿ ರೂಪಿಸುತ್ತಿರುವ ಬಗ್ಗೆ ನಮ್ಮ ಸಂಘಕ್ಕೆ ಮಾಹಿತಿ ಸ್ವೀಕೃತವಾಗಿರುತ್ತದೆ. ಬಹುಮಹಡಿ ಕಟ್ಟಡದಲ್ಲಿ ಸದರಿ ಸಂಸ್ಥೆಗೆ ಸ್ಥಳಾವಕಾಶ ಕಲ್ಪಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅನುಮತಿ ಇರಲಿ, ಕನಿಷ್ಟ ಪಕ್ಷ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸಿ.ಆ.ಸು.ಇ.)ಗೆ ಮಾಹಿತಿಯನ್ನೂ ನೀಡದೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕೆಲ ಅಧಿಕಾರಿಗಳು ಈ ಉದ್ಧಟತನದಿಂದ ವರ್ತಿಸಿರುವುದು ಖಂಡನೀಯ ಎಂದು ಪತ್ರ ಬರೆಯಲಾಗಿತ್ತು.

ಬಹುಮಹಡಿ ಕಟ್ಟಡದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಂದು ಕ್ಷೇತ್ರ ಇಲಾಖೆಯಾದ K-STEPSನ ಕಚೇರಿಗೆ ಬಹುಮಹಡಿ ಕಟ್ಟಡದ 5ನೇ ಗೇಟಿನಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿರುವ ಬಗ್ಗೆ ಸಚಿವಾಲಯ ನೌಕರರ ಸಂಘಕ್ಕೆ ಮಾಹಿತಿ ಸಿಕ್ಕಿತ್ತು. ಬಳಿಕ ಇದನ್ನು ವಿರೋಧಿಸಿ, ತಕ್ಷಣದಿಂದ K-STEPS ಇಲಾಖೆಗೆ ಬಹುಮಹಡಿ ಕಟ್ಟಡದಲ್ಲಿ ಅವಕಾಶ ಕಲ್ಪಿಸಬಾರದೆಂದು ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯ ವ್ಯಾಪ್ತಿಯ ಕಟ್ಟಡಗಳಾದ ವಿಧಾನ ಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡ ವ್ಯಾಪ್ತಿಯಲ್ಲಿ ಸಚಿವಾಲಯದ ಕಚೇರಿಗಳನ್ನು ಹೊರತುಪಡಿಸಿ, ಇನ್ನಿತರ ಕ್ಷೇತ್ರ ಇಲಾಖೆ, ನಿಗಮ ಮಂಡಳಿಗಳ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಬಾರದೆಂದು ಆಡಳಿತ ಸುಧಾರಣಾ ಇಲಾಖೇಯ ಕಾರ್ಯದರ್ಶಿಯವರಾದ ಸತ್ಯವತಿ ಜಿ. ಅವರನ್ನು ಭೇಟಿಮಾಡಿ ಆಗ್ರಹಿಸಲಾಗಿತ್ತು.

ಆ ವೇಳೆ ಸಕಾರಾತ್ಮಕವಾಗಿ ಭರವಸೆ ನೀಡಿದ್ದ ಕಾರ್ಯದರ್ಶಿ, ಬಹುಮಹಡಿ ಕಟ್ಟಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಹಂಚಿಕೆಗೆಯಾಗಿರುವ ಸ್ಥಳಾವಕಾಶದಲ್ಲಿ ಸಚಿವಾಲಯವನ್ನು ಹೊರತುಪಡಿಸಿ, ಇತರ ಕ್ಷೇತ್ರ ಇಲಾಖೆಗಳಿಗೆ, ನಿಗಮ/ಮಂಡಳಿಗಳಿಗೆ ಹಂಚಿಕೆ ಮಾಡಬಾರದೆಂದು ತಿಳಿಸಿ ಸರ್ಕಾರದ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರಿಗೆ ಆದೇಶ ಹೊರಡಲಿಸಲಾಗಿದೆ.


"ನಮ್ಮ ಮನವಿಯಲ್ಲಿರುವಂತೆ ಸಚಿವಾಲಯವಿರುವುದು ಸಚಿವಾಲಯದ ನೌಕರರಿಗಾಗಿ, ಸಚಿವಾಲಯ ವ್ಯಾಪ್ತಿಯ ಕಟ್ಟಡಗಳಿರುವುದು ಸಚಿವಾಲಯದ ಕಚೇರಿಗಳಿಗಾಗಿ ಎಂಬುದನ್ನು ಅರಿತು ಕೂಡಲೇ ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ನಿರ್ದೇಶನ ನೀಡಿದ DPAR ಕಾರ್ಯಕಾರಿ ವಿಭಾಗದ ಅಧಿಕಾರಿ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಧನ್ಯವಾದಗಳು," ಎಂದು ರಮೇಶ್‌ ಸಂಗಾ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ. "ವಿಧಾನಸೌಧ, ವಿಕಾಸಸೌಧಗಳಲ್ಲೂ ಆಯೋಗ, ಪ್ರಾಧಿಕಾರ, ನಿಗಮ, ಮಂಡಳಿ ಸೇರಿದಂತೆ ಯಾವುದೇ ಸಚಿವಾಲಯೇತರ ಸಂಸ್ಥೆಗಳಿಗೆ, ಕಚೇರಿಗಳಿಗೆ ಅವಕಾಶ ಕಲ್ಪಿಸಬಾರದು. ಕಾರ್ಯ ನಿರ್ವಹಿಸುತ್ತಿರುವ ಅಂತಹ ಕಚೇರಿಗಳನ್ನು ತೆರವುಗೊಳಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.

Read More
Next Story