Naxals Surrender | ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾಗೆ ಜ್ಞಾಪಕಶಕ್ತಿಯಿಲ್ಲ! ಬಿಡುಗಡೆಯೂ ಇಲ್ಲ
ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡ ಮೇಲೆ ಕಾನೂನು ಕುಣಿಕೆಯಿಂದ ಬಿಡುಗಡೆ ಸುಲಭವಲ್ಲ.ನಕ್ಸಲ್ ಮುಕ್ತ ಮಾಡುವ ಉಮೇದಿನಲ್ಲಿರುವ ಸರ್ಕಾರ ಶರಣಾದವರಿಗೆ ಯಾವ ರೀತಿಯ ಕಾನೂನು ರಕ್ಷಣೆ ನೀಡುತ್ತದೆ ಎಂಬ ಚರ್ಚೆ ಆರಂಭವಾಗಿದೆ
ಅದು ಆದಿವಾಸಿಗಳ ಎತ್ತಂಗಡಿ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ತೀವ್ರಗೊಂಡಿದ್ದ ಕಾಲ. ಶೃಂಗೇರಿಯಲ್ಲಿ ಕರ್ನಾಟಕ ವಿಮೋಚನಾ ರಂಗ, ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ ಹಾಗೂ ಆದಿವಾಸಿ ಸಂಘಟನೆಗಳು ಸಂಘಟಿಸಿದ್ದ ಬೃಹತ್ ಹೋರಾಟಕ್ಕೆ ಮೇದಾ ಪಾಟ್ಕರ್ ಆಗಮಿಸಿದ್ದರು. ಈ ಹೋರಾಟ ಹತ್ತಿಕ್ಕುವ ಹಲವು ಪ್ರಯತ್ನಗಳೂ ನಡೆಯುತಿದ್ದವು.
ವಿಶೇಷವೆಂದರೆ ಆ ಹೋರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಆದಿವಾಸಿ ಮಹಿಳೆಯರು ಪಾಲ್ಗೊಂಡಿದ್ದರು. ಹೋರಾಟ ತೀವ್ರವಾಗಿ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಾರೆ. ದಿಟ್ಟ ಹುಡುಗಿಯೊಬ್ಬಳು ಗರ್ಭಿಣಿಯರೆಂದೂ ನೋಡದೆ ಮಹಿಳೆಯರ ಮೇಲೆ ಲಾಠಿ ಪ್ರಹಾರ ನಡೆಸುತ್ತೀರಲ್ಲ.. ನೀವು ಮನುಷ್ಯರಾ ಎಂದು ಪ್ರತಿರೋಧ ತೋರುತ್ತಾಳೆ...
ಈ ಚಳವಳಿ ನಡೆದು ಹಲವರ ಮೇಲೆ ಕೇಸೂ ಬೀಳುತ್ತವೆ... ಆ ಬಳಿಕ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಳವಳಿ ಆರಂಭವಾಗುತ್ತದೆ. ಅಂದು ಹೋರಾಟ ಮಾಡಿದ್ದ ಹುಡುಗಿ ನಕ್ಸಲರೊಂದಿಗೆ ಸೇರಿ ಕಾಮ್ರೇಡ್ ಆಗುತ್ತಾಳೆ. ಮಲೆನಾಡಿನಲ್ಲಿದ್ದ ನಕ್ಸಲ್ ತಂಡದಲ್ಲಿ ಸಕ್ರಿಯವಾಗಿದ್ದ ಈಕೆ, ಕಾಫಿ ಎಸ್ಟೇಟ್‌ಗಳಲ್ಲಿ ಮಹಿಳೆಯರ ಮೇಲೆ ನಡೆಯುತಿದ್ದ ಅನಾಚಾರ, ಕೂಲಿ ಕಾರ್ಮಿಕರ ಮೇಲಿನ ಶೋಷಣೆಯನ್ನು ಖಂಡಿಸುತ್ತಾಳೆ. ಗಿರಿಜನ ಹುಡುಗರು ಅಕ್ಕ ಕಾರಣದಿಂದ ನಮಗೆ ಕೂಲಿ ಹೆಚ್ಚಾಯಿತು. ಕಾಡುತ್ಪನ್ನ ಸಂಗ್ರಹಿಸಲು ಸಾಧ್ಯವಾಯಿತು. ಭೂ ಮಾಲಿಕರ ಶೋಷಣೆ ಕಡಿಮೆಯಾಯಿತು ಎಂದು ಕೊಂಡಾಡುತ್ತಾರೆ. ವರ್ಷ ಕಳೆದಂತೆ ಮೇಲಿಂದ ಮೇಲೆ ನಡೆದ ಗುಂಡಿನ ಚಕಮಕಿಯಲ್ಲಿ ಕಮಾಂಡರ್ ಸಾಕೇತ್ ರಾಜನ್ ಸೇರಿದಂತೆ ಹಲವು ನಕ್ಸಲರು ಬಲಿಯಾಗುತ್ತಾರೆ.
ತುಂಗಭದ್ರಾ ದಳದಲ್ಲಿದ್ದ ಆ ಹುಡುಗಿಯ ಹೆಸರು ಹೊಸಗದ್ದೆ ಪ್ರಭಾ. ಕರ್ನಾಟಕ ನಕ್ಸಲ್ ಸಂಘಟನೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ಪ್ರಭಾಗೆ ಕಾಡಲ್ಲಿರುವಾಗಲೇ ಅಲರ್ಜಿ ಸೇರಿದಂತೆ ಮಲೇರಿಯಾ ತಗುಲುತ್ತದೆ. ಪೊಲೀಸರ ನಿರಂತರ ಕೂಂಬಿಂಗ್ ಇದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗುವುದಿಲ್ಲ. ಅಷ್ಟೊತ್ತಿಗೆ ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ದುರ್ಬಲವಾಗುತ್ತದೆ. ಅನಾರೋಗ್ಯಪೀಡಿತಳಾದ ಪ್ರಭಾ ಸೇರಿದಂತೆ ಎಲ್ಲರೂ ಕೇರಳಕ್ಕೆ ಸ್ಥಳಾಂತರಗೊಳ್ಳುತ್ತಾರೆ. ನಂಬಿದ ಸಿದ್ಧಾಂತಕ್ಕಾಗಿ ಅನಾರೋಗ್ಯದಲ್ಲಿಯೇ ಏರಿಯಾ ಕಮಾಂಡರ್ ಆಗಿದ್ದ ಪ್ರಭಾ ಮತ್ತು ಸಾಕೇತ್‌ರಾಜನ್ ಬಳಿಕ ಕರ್ನಾಟಕದಲ್ಲಿ ನಕ್ಸಲ್ ಸಂಘಟನೆಯ ನೇತೃತ್ವ ವಹಿಸಿದ್ದ ಬಿ.ಜಿ.ಕೃಷ್ಣಮೂರ್ತಿಯನ್ನು ವಿವಾಹವಾಗುವ ಪ್ರಭಾ ಸಂಘಟನೆಯಲ್ಲಿ ಉತ್ತಮ ಹೆಸರು ಹೊಂದಿದ್ದಳು.
ಅತ್ತ ಕೇರಳದಲ್ಲಿ ನಕ್ಸಲರ ವಿರುದ್ಧದ ಪೊಲೀಸರ ಕಾರ್ಯಾಚರಣೆ ಬಲಗೊಳ್ಳುತ್ತದೆ. ಅನಾರೋಗ್ಯ ಪೀಡಿತ ಪ್ರಭಾಗೆ ಸ್ಟೋಕ್ ಆಗುತ್ತದೆ. ಒಂದು ಕಣ್ಣು ಸಂಪೂರ್ಣ ನಿಷ್ಕ್ರಿಯವಾಗುತ್ತದೆ. ಜ್ಞಾಪಕ ಶಕ್ತಿ ಮರೆಯಾಗುತ್ತದೆ. ಮಾತೃಭಾಷೆಯಾದ ತುಳುವಿನಲ್ಲಿ ಮಾತನಾಡಿದರೆ ಅರ್ಥವಾಗದಷ್ಟು ಆಕೆಯೆ ಮಾನಸಿಕ ಸ್ಥಿತಿ ಹದಗೆಡುತ್ತದೆ. ಆ ನಡುವೆ ಸಂಗಾತಿ ಬಿ.ಜಿ.ಕೃಷ್ಣಮೂರ್ತಿಯ ಬಂಧನವಾಗುತ್ತದೆ. ಹಲವು ಪ್ರಕರಣಗಳಿರುವ ಬಿಜಿಕೆ ಈಗ ಕೇರಳ ರಾಜ್ಯದ ತಿರಟೂರು ಜೈಲಿನಲ್ಲಿದ್ದಾನೆ..
ಒಡನಾಡಿಯ ಬಂಧನವಾಗುತ್ತಿದ್ದಂತೆ ಆರೋಗ್ಯ ತೀರಾ ಹದಗೆಟ್ಟಿದ್ದ ಹೊಸಗದ್ದೆ ಪ್ರಭಾ ತಮಿಳುನಾಡಿನ ಪೊಲೀಸ್ ಠಾಣೆಯೊಂದಕ್ಕೆ ಬಂದು ಶರಣಾಗುತ್ತಾಳೆ. ಹೀಗೆ ಶರಣಾಗಿ ಮೂರುವರೆ ವರ್ಷ ಆಗಿದೆ. ಪ್ರಸ್ತುತ ಆಕೆಗೆ ಯಾವ ಚಳವಳಿ ನೆನಪಿಲ್ಲ. ದೇಹ ಸ್ವಾಧೀನದಲ್ಲಿಲ್ಲ. ಶರಣಾಗಿ ಮೂರುವರೆ ವರ್ಷಗಳಾದರೂ ಇನ್ನೂ ಆಕೆಗೆ ಬಿಡುಗಡೆಯ ಭಾಗ್ಯ ಇಲ್ಲ. ಮಾನಸಿಕ ಸ್ಥಿತಿ ಹದಗೆಟ್ಟ ಸ್ಥಿತಿಯಲ್ಲಿರುವ ಹೊಸಗದ್ದೆ ಪ್ರಭಾಗೆ ಈಗಲೂ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಕೇರಳದಲ್ಲಿ ಮಹಿಳೆಯರ ಸಾಂತ್ವನ ಕೇಂದ್ರದಲ್ಲಿರುವ ಆಕೆಯ ಮೇಲೆ ಇನ್ನೂ ರಾಶಿ ಕೇಸುಗಳಿವೆ.
ನಕ್ಸಲ್ ಚಳವಳಿಗೆ ಸೇರಿದ್ದ ಮಗಳು ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದ ಪ್ರಭಾ ಕುಟುಂಬಕ್ಕೆ ಆಕೆ ಶರಣಾದಾಗಲೇ ಮಗಳು ಇನ್ನೂ ಬದುಕಿದ್ದಾಳೆ ಎಂದು ಗೊತ್ತಾದದ್ದು. ಕರುಳ ಕುಡಿ ಬಿಡಬಾರದು ಎಂದು ಬಂಧುಗಳೆಲ್ಲ ಕೇರಳಕ್ಕೆ ಹೋಗುತ್ತಾರೆ. ಆದರೆ ಆಕೆಗೆ ತನ್ನ ಕುಟುಂಬದ ನೆನಪೇ ಇಲ್ಲ. ಮನೆ ಬಿಟ್ಟು ಮೂರು ದಶಕಗಳೇ ಕಳೆದಿವೆ.ಈಗಿರುವ ಮಾನಸಿಕ ಸ್ಥಿತಿಯಲ್ಲಿ ಒಂದಿಬ್ಬರನ್ನು ಮಾತ್ರ ಗುರುತುಹಿಡಿಯಲು ಆಕೆಗೆ ಸಾಧ್ಯವಾಗಿದೆ. ಕುಟುಂಬದವರು ಮನವಿ ಮಾಡಿದ್ದರೂ ಕಾನೂನು ಪ್ರಕಾರ ಆಕೆಯ ಬಿಡುಗಡೆ ಆಗಿಲ್ಲ. ಮೊದಲ ವರ್ಷ ಕುಟುಂಬ ವರ್ಗ ಭೇಟಿಗೆ ಅವಕಾಶ ಇತ್ತು. ಈಗ ಅದೂ ಇಲ್ಲವಾಗಿದೆ.
ಕಾನೂನು ಸಂಕೋಲೆ
ನಕ್ಸಲ್ ಸಂಘಟನೆಯಲ್ಲಿ ಒಮ್ಮೆ ಗುರುತಿಸಿಕೊಂಡ ಮೇಲೆ ಕಾನೂನು ಕುಣಿಕೆಯಿಂದ ಬಿಡುಗಡೆ ಸುಲಭವಲ್ಲ. ಆದರೆ ಈಗ ರಾಜ್ಯವನ್ನು ನಕ್ಸಲ್ ಮುಕ್ತ ಮಾಡುವ ಉಮೇದಿನಲ್ಲಿರುವ ರಾಜ್ಯ ಸರ್ಕಾರ ಶರಣಾದ ಆರು ಮಂದಿಗೆ ಯಾವ ರೀತಿಯ ಕಾನೂನು ರಕ್ಷಣೆ ನೀಡುತ್ತದೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಈಗ ಜಾರಿಯಲ್ಲಿರುವ ಬಿಎನ್ಎಸ್( ಭಾರತೀಯ ನ್ಯಾಯ ಸಂಹಿತೆ)ನಲ್ಲಿ ಇರುವ ಅವಕಾಶಗಳೇನು ಎಂಬ ನಿಷ್ಕರ್ಶೆ ನಡೆಯುತ್ತಿದೆ. ಈ ಹಿಂದೆ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಶರಣಾದ ಅನೇಕರು ಕಾನೂನು ಕುಣಿಕೆಯಿಂದ ಬಿಡಿಸಿಕೊಂಡಿಲ್ಲ. ಅಷ್ಟೊಂದು ಕುಖ್ಯಾತಿಯಾಗದ ಒಂದಿಬ್ಬರು ಮುಖ್ಯವಾಹಿನಿಯಲ್ಲಿ ನಿರಾಳವಾಗಿದ್ದಾರೆ.
ಒಂದು ಕಾಲು ಇಲ್ಲ
ನಿಲಗುಳಿ ಪದ್ಮನಾಭ ಇನ್ನೂ ನ್ಯಾಯಾಲಯಕ್ಕೆ ಅಡ್ಡಾಡುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿ ಹೋಗಿರುವ ಹೊಸಗದ್ದೆ ಪ್ರಭಾ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಹೀಗಿರುವಾಗ ನಮ್ಮ ಮಕ್ಕಳ ಬಿಡುಗಡೆ ಯಾವಾಗ ಎಂಬ ಆತಂಕವನ್ನು ಬುಧವಾರ ಶರಣಾದ ನಕ್ಸಲರ ಪೋಷಕರೊಬ್ಬರು ತೋಡಿಕೊಂಡರು.
ಹಿಡಿದ ಜಾಡು ಸರಿಯಲ್ಲ
ನಕ್ಸಲರು ಕೇಳುತ್ತಿರುವ ಬೇಡಿಕೆಗಳು ಸರಿಯಾಗಿವೆ. ಆದರೆ ಅವರು ಅನುಸರಿಸಿದ ಮಾರ್ಗ ಸಂವಿಧಾನ ವಿರೋಧಿಯಾಗಿದೆ. ಜಗತ್ತಿನಲ್ಲಿ ರಕ್ತರಹಿತ ಹೋರಾಟಗಳಿಗೆ ಸಿಕ್ಕ ಮನ್ನಣೆ ರಕ್ತಕ್ರಾಂತಿಗೆ ಸಿಗುವುದಿಲ್ಲ. ಕಾಗೋಡು ಚಳವಳಿಯಂತಹ ಹೋರಾಟ ಕಟ್ಟಿದ ಮಲೆನಾಡಿನಲ್ಲಿ ಪ್ರಜಾಸತ್ತಾತ್ಮಕ ಹೋರಾಟ ಸಂಘಟಿಸುವ ಎಲ್ಲಾ ದಾರಿಗಳಿವೆ. ಹೀಗಿರುವಾಗ ನಾಡು ಬಿಟ್ಟು ಕಾಡು ಸೇರಿದ ಹಲವು ಯುವ ಜೀವಗಳು ಮಣ್ಣಾಗಿವೆ. ಸಿದ್ಧಾಂತದ ಹೆಸರಲ್ಲಿ ವನವಾಸಿಗಳಾಗಿದ್ದ ಹಲವರು ರೋಗಗಳಿಗೆ ತುತ್ತಾಗಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಪ್ರಮುಖ ಪಾತ್ರವಹಿಸಿದೆ. ಇದೊಂದು ಐತಿಹಾಸಿಕ ನಡೆಯಾಗಿದೆ. ಈ ಸಂಘಟನೆಯ ಪ್ರಮುಖರು ಹೊಸಗದ್ದೆ ಪ್ರಭಾಗೆ ಕಾನೂನು ಹೋರಾಟಕ್ಕೆ ನೆರವಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.