ಧರ್ಮಸ್ಥಳ ಪ್ರಕರಣ| ʼಬುರುಡೆʼಧಾರಿ ಚಿನ್ನಯ್ಯ ಬಿಡುಗಡೆಗೆ ಕಾದಿಹನು...
x

ಚಿನ್ನಯ್ಯ 

ಧರ್ಮಸ್ಥಳ ಪ್ರಕರಣ| ʼಬುರುಡೆʼಧಾರಿ ಚಿನ್ನಯ್ಯ ಬಿಡುಗಡೆಗೆ ಕಾದಿಹನು...

ಜೈಲಿನಲ್ಲಿ ಹೆಚ್ಚಾಗಿ ಮಂಕಾದ ಸ್ಥಿತಿಯಲ್ಲಿರುವ ಚಿನ್ನಯ್ಯ ಇತರ ಕೈದಿಗಳೊಂದಿಗೆ ಹೆಚ್ಚಾಗಿ ಮಾತನಾಡದೆ ಮೌನವಹಿಸಿದ್ದಾನೆ! ಬಿಡುಗಡೆಯ ಖುಷಿಗೆ ಕಾಯುತ್ತಿದ್ದ ಚಿನ್ನಯ್ಯ, ಈಗ ಜೈಲಿನಲ್ಲೇ ಇಬ್ಬಂದಿಯಾಗಿದ್ದಾನೆ.


"ಧರ್ಮಸ್ಥಳ ಪ್ರಕರಣ"ದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ, "ಮುಸುಕುಧಾರಿ" ಎಂದೇ ಪ್ರಖ್ಯಾತನಾಗಿದ್ದ ಸಿ.ಎನ್. ಚಿನ್ನಯ್ಯನ ಸ್ಥಿತಿ ಇದೀಗ ಅತಂತ್ರವಾಗಿದೆ. ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ, ಬಿಡುಗಡೆಯ ಭಾಗ್ಯವಿಲ್ಲದೆ ಜೈಲಿನಲ್ಲಿಯೇ ಉಳಿಯುವಂತಾಗಿದೆ. ಹೊರಬರುವ ಖುಷಿಯಲ್ಲಿದ್ದ ಚಿನ್ನಯ್ಯನಿಗೆ ಈಗ ತಾಂತ್ರಿಕ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಿದ್ದು, ಜೈಲಿನಲ್ಲೇ ಇಬ್ಬಂದಿ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾನೆ.

ಜೈಲಿನಲ್ಲಿ ಮಂಕಾಗಿರುವ ಚಿನ್ನಯ್ಯ, ಸಹ ಕೈದಿಗಳೊಂದಿಗೆ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. 'ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾನೆ' ಎಂದು ನೊಂದಿರುವ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಅವರ ತಂಡವು, ಆತನಿಂದಾಗಿ ತಾವೂ ಆಪಾದನೆ ಎದುರಿಸಬೇಕಾಯಿತು ಎಂಬ ಕಾರಣಕ್ಕೆ ಆತನ ಬಿಡುಗಡೆಗೆ ಸಹಕರಿಸುತ್ತಿಲ್ಲ. ಇತ್ತ, ಜಾಮೀನಿಗೆ ಬೇಕಾದ ನಗದು ಮತ್ತು ದಾಖಲೆ ಒದಗಿಸಲು ಆತನ ಕುಟುಂಬದ ಪ್ರಯತ್ನವೂ ವಿಳಂಬವಾಗುತ್ತಿರುವುದರಿಂದ ಚಿನ್ನಯ್ಯ ಜೈಲಿನಲ್ಲಿಯೇ ಉಳಿಯುವಂತಾಗಿದೆ.

ಎಸ್‌ಐಟಿ ತನಿಖೆ ವೇಳೆ ತಿಮರೋಡಿ ತಂಡ ಸೂಚಿಸಿದ ವಕೀಲರ ಬದಲಿಗೆ ಸರ್ಕಾರಿ ವಕೀಲರೇ ಬೇಕೆಂದು ಚಿನ್ನಯ್ಯ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಆತನನ್ನೇ ಎಸ್‌ಐಟಿ ಪೊಲೀಸರು ಬಂಧಿಸಿದಾಗ ತಾಂತ್ರಿಕ ಕಾರಣಗಳಿಂದ ಸರ್ಕಾರಿ ವಕೀಲರೇ ಮುಂದುವರಿಯಬೇಕಾಯಿತು. ಪ್ರಸ್ತುತ ಆತನಿಗೆ ಜಾಮೀನು ನೀಡುವ ಸಂಬಂಧ ವಾದ ಮಾಡಲು ಅಥವಾ ನೆರವಾಗಲು ಖಾಸಗಿ ವಕೀಲರನ್ನು ನೇಮಿಸುವಂತಿಲ್ಲದ ಪರಿಸ್ಥಿತಿ ಇದೆ. ಸರ್ಕಾರಿ ವಕೀಲರ ಮೂಲಕ ಜಾಮೀನಿಗೆ ಬೇಕಾದ ಬಾಂಡ್‌ ಮತ್ತು ಇತರ ಪ್ರಕ್ರಿಯೆಗಳನ್ನು ನಡೆಸುವುದು ವಿಳಂಬವಾಗುತ್ತಿರುವುದು ಆತನ ಬಿಡುಗಡೆ ತಡವಾಗಲು ಕಾರಣವಾಗಿದೆ.

ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ ಜೈಲಿನಲ್ಲಿಯೇ ಉಳಿದಿರುವ, ಸಾಮಾಜಿಕ ಜಾಲತಾಣಗಳಲ್ಲಿ ʼಬುರುಡೆ ಮನುಷ್ಯʼ ಎಂದು ಟ್ರೋಲ್‌ಗೆ ಒಳಗಾದ ಚಿನ್ನಯ್ಯ, ಶಿವಮೊಗ್ಗ ಜೈಲಿನ ʼಕಾವೇರಿ" ಬ್ಯಾರಕ್‌ನಲ್ಲಿ ತನ್ನ ʼವನವಾಸʼ ಮುಂದುವರಿಸುವಂತಾಗಿದೆ. ಜಾಮೀನು ಸುದ್ದಿ ತಿಳಿದ ದಿನ ಸಂತೋಷದಿಂದಿದ್ದ ಆತ, ದಿನ ಕಳೆದಂತೆ ಮಂಕಾಗಿದ್ದಾನೆ. ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಿ ತನ್ನ ಸಹೋದರ-ಸಹೋದರಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾನೆ. ಜಾಮೀನು ಆದೇಶ ಹೊರಬಿದ್ದು ನಾಲ್ಕು ದಿನಗಳ ಬಳಿಕ ಸಹೋದರಿ ಜೈಲಿಗೆ ಭೇಟಿ ನೀಡಿದ್ದು, ಒಂದು ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್ ಮತ್ತು ಜಾಮೀನುದಾರರನ್ನು ಹೊಂದಿಸುವ ಬಗ್ಗೆ ಚರ್ಚಿಸಿದ್ದಾರೆ. ನಂತರದ ದಿನಗಳಲ್ಲಿ ಸಹೋದರ ಕೂಡ ಬಂದು ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಚಿನ್ನಯ್ಯನ ಸಹೋದರಿ ಮಂಡ್ಯದಲ್ಲಿರುವ ತಮ್ಮ ಜಮೀನಿನ ಮೇಲೆ ಸಾಲ ಮಾಡಿ ಅಥವಾ ಆಪ್ತರ ಮೂಲಕ ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಚಿನ್ನಯ್ಯನ ಜಮೀನು ವಿವಾದದಲ್ಲಿದ್ದು, ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಹೀಗಾಗಿ ಜಾಮೀನಿನ ಮೇಲೆ ಹೊರಬರಲು ಆತ ಪರದಾಡುವಂತಾಗಿದೆ. "ಜೈಲಿನಲ್ಲಿ ಹೆಚ್ಚಾಗಿ ಮಲಗಿ ನಿದ್ರಿಸುತ್ತಿರುವ ಚಿನ್ನಯ್ಯ ಇತರ ಕೈದಿಗಳೊಂದಿಗೆ ಹೆಚ್ಚಾಗಿ ಮಾತನಾಡದೆ ಮೌನವಹಿಸಿರುತ್ತಾನೆ. ಆತನ ಮೇಲೆ ಸದ್ಯ ಜೈಲಿನಲ್ಲಿ ಬೇರೆ ಯಾವುದೇ ದೂರುಗಳಿಲ್ಲ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್‌ಐಟಿ ತನಿಖೆ ಆರಂಭವಾದ ಬಳಿಕ ಕ್ರಮೇಣ ಹೇಳಿಕೆ ಬದಲಾಯಿಸಿದ ಚಿನ್ನಯ್ಯ, ತನಗೆ ಆಪ್ತರೆನಿಸಿಕೊಂಡಿದ್ದ ಮಹೇಶ್ ಶೆಟ್ಟ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್‌ ಟಿ. ಮತ್ತಿತರರ ವಿಶ್ವಾಸವನ್ನು ಕಳೆದುಕೊಂಡಿದ್ದ. ಆತನಿಗೆ ಆರಂಭದಲ್ಲಿ ಸಹಕರಿಸಿದ ವಕೀಲರು ಕೂಡಾ ದೂರವಾಗಿದ್ದರು. ಹೀಗಾಗಿ ಜಾಮೀನು ದೊರೆತರೂ ಜಾಮೀನುದಾರರು ಮತ್ತು ಶ್ಯೂರಿಟಿ ಬಾಂಡ್ ನೀಡುವ ಪ್ರಯತ್ನ ಸಫಲವಾಗಿಲ್ಲ. ನ್ಯಾಯಾಲಯದಲ್ಲಿ ಮೊದಲು ಒಂದು ಹೇಳಿಕೆ ನೀಡಿ ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ವಿವಾದಕ್ಕೆ ಕಾರಣನಾಗಿದ್ದ ಚಿನ್ನಯ್ಯ, ತಿಮರೋಡಿ ಅವರ ಆಶ್ರಯ ಪಡೆದು ವಿಡಿಯೋ ಹೇಳಿಕೆಗಳನ್ನೂ ನೀಡಿದ್ದ. ನ್ಯಾಯಾಲಯದಲ್ಲಿ ಆತ ನೀಡಿದ ಹೇಳಿಕೆ ಅಧಾರದಲ್ಲಿ ಸರ್ಕಾರವೂ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಆದರೆ, ತನಿಖೆ ವೇಳೆ ಆತ ವ್ಯತಿರಿಕ್ತ ಹೇಳಿಕೆ ನೀಡಿ, ಸಾಮೂಹಿಕ ಸಮಾಧಿ ಸಂಬಂಧ ಸುಳ್ಳು ಸಾಕ್ಷ್ಯ ನೀಡಿದ್ದಾಗಿ ಒಪ್ಪಿಕೊಂಡಿದ್ದ. ಹೇಳಿಕೆಗಳನ್ನು ಬದಲಿಸಿದ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ ಬಳಿಕ ತನಿಖೆ ಬೇರೆಯದೇ ಜಾಡು ಹಿಡಿದಿತ್ತು.

ತಿಮರೋಡಿ ತಂಡದಿಂದ ಸಿಗದ ಸಹಕಾರ

ತಮ್ಮ ವಿಶ್ವಾಸ ಕಳೆದುಕೊಂಡ ಕಾರಣಕ್ಕೆ ತಿಮರೋಡಿ ಅವರ ತಂಡ ಚಿನ್ನಯ್ಯನ ಬಿಡುಗಡೆಗೆ ಯಾವುದೇ ಸಹಕಾರ ನೀಡುತ್ತಿಲ್ಲ ಎನ್ನಲಾಗಿದೆ. ಜಾಮೀನಿನ ಮೂಲಕ ಬಿಡುಗಡೆಯಾಗಲು ಆತನ ಕುಟುಂಬಸ್ಥರಿಗೂ ಕಷ್ಟವಾಗುತ್ತಿದೆ. ಆತನ ಜಮೀನಿನ ಮೇಲೂ ವ್ಯಾಜ್ಯ ಇರುವುದರಿಂದ ಬಾಂಡ್‌ ಹಣಕ್ಕೆ ಹೊಂದಾಣಿಕೆ ಮಾಡುವುದು ಕಷ್ಟವಾಗುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಅರೋಪಿಯಾಗಿರುವ ಚಿನ್ನಯ್ಯನಿಗೆ ಸಹಾಯ ಮಾಡಲು ಮುಂದೆ ಬರಲು ಇತರರೂ ನಿರಾಕರಿಸುತ್ತಿದ್ದಾರೆ.

ಜೈಲು ಸೇರುವವರೆಗೂ ಸಾಕ್ಷಿದಾರನಾಗಿ ಗುರುತಿಸಿಕೊಂಡಿದ್ದ ಚಿನ್ನಯ್ಯ, ಧರ್ಮಸ್ಥಳ ಗ್ರಾಮದಲ್ಲಿ ಕೆಲವೊಂದು ಸ್ಥಳಗಳನ್ನು ತೋರಿಸಿ, ಅಲ್ಲಿ ತಾನು ಶವಗಳನ್ನು ಹೂತಿದ್ದಾಗಿ ಹೇಳಿದ್ದ. ಆದರೆ ಬಹುತೇಕ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಸಿಗದ ಕಾರಣ, ಎಸ್‌ಐಟಿ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಆತ ಸಾಕ್ಷಿದಾರನಲ್ಲ, ಆತನ ಹೇಳಿಕೆಗಳಿಗೆ ಪುರಾವೆ ಇಲ್ಲವೆಂದು ದೃಢಪಟ್ಟು ಆತನನ್ನೇ ಬಂಧಿಸಲಾಯಿತು. ಚಿನ್ನಯ್ಯ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಕಾರಣ ಆತನಿಗೆ ನ್ಯಾಯಾಲಯವೇ ವಕೀಲರನ್ನು ಒದಗಿಸಿತ್ತು.

ಈ ಮಧ್ಯೆ, ಚಿನ್ನಯ್ಯನ ಪರ ವಾದ ಮಂಡಿಸಿದ ವಕೀಲರು, ಆತನಿಗೆ ಜೀವಬೆದರಿಕೆ ಇದ್ದು ಸೂಕ್ತ ರಕ್ಷಣೆ ಬೇಕಿದೆ ಎಂದು ಕೋರಿದ್ದಾರೆ. ಅಲ್ಲದೆ, ಜಾಮೀನು ಆದೇಶದ 10ನೇ ಷರತ್ತಿನಂತೆ ಆತ ತಿಂಗಳಿಗೊಮ್ಮೆ ಬೆಳ್ತಂಗಡಿ ಠಾಣೆಗೆ ಬಂದು ಸಹಿ ಹಾಕಬೇಕಿದ್ದು, ಅದನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಬಿಡುಗಡೆಯ ಬಳಿಕ ಚಿನ್ನಯ್ಯ ಮಂಡ್ಯದಲ್ಲಿ ವಾಸವಿರಲಿದ್ದು, ಅಲ್ಲಿಂದ ಬೆಳ್ತಂಗಡಿ ಠಾಣೆಗೆ ಬರುವುದು ಕಷ್ಟವಾಗುತ್ತದೆ ಎಂದು ವಾದಿಸಿದ್ದಾರೆ. ನ್ಯಾಯಾಲಯ ಈ ವಿಚಾರಣೆಯನ್ನು ಮುಂದೂಡಿದೆ.

ಅಪೂರ್ಣ ಎಸ್‌ಐಟಿ ವರದಿ

ಎಸ್‌ಐಟಿ ನ್ಯಾಯಾಲಯಕ್ಕೆ ನೀಡಿರುವ ವರದಿಯ ಆಧಾರದಲ್ಲಿ ವಿಚಾರಣೆ ಆರಂಭಿಸಿದ ನ್ಯಾಯಾಲಯ, ವರದಿ ಅಪೂರ್ಣವಾಗಿದ್ದು, ಇದೇ ಆಧಾರದಲ್ಲಿ ತೀರ್ಪು ನೀಡುವುದು ಸುಲಭವಲ್ಲ ಎಂದು ಡಿ.26ಕ್ಕೆ ವಿಚಾರಣೆ ಮುಂದೂಡಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದ್ದು, ನ್ಯಾಯಾಲಯಕ್ಕೆ ನೀಡಿರುವ ವರದಿಯು ಚಿನ್ನಯ್ಯನ ಹೇಳಿಕೆ ಮತ್ತು ಸಾಕ್ಷಿಗಳ ತನಿಖೆಯ ಪ್ರಗತಿಯನ್ನಷ್ಟೇ ಒಳಗೊಂಡಿದೆ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

1994 ರಿಂದ 2014ರ ವರೆಗೂ ಧರ್ಮಸ್ಥಳ ಕ್ಷೇತ್ರದಲ್ಲಿ ತಾನೊಬ್ಬ ಸ್ವಚ್ಛತಾ ಕಾರ್ಮಿಕನಾಗಿದ್ದೆ ಎಂದು ಹೇಳಿಕೊಂಡಿದ್ದ ಸಿ.ಎನ್. ಚಿನ್ನಯ್ಯ, ಈ ವರ್ಷ ಜುಲೈ 3ರಂದು ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ತೆರಳಿದ್ದ. ಅಲ್ಲಿ ಮಾನವ ತಲೆಬುರುಡೆ ಪ್ರದರ್ಶಿಸಿ, "ಇಂತಹ ತಲೆಬುರುಡೆಗಳು ಧರ್ಮಸ್ಥಳದ ಸುತ್ತಮುತ್ತ ಸಾಕಷ್ಟು ದೊರೆಯುತ್ತವೆ. ನಾನೇ ಶವಗಳನ್ನು ಹೂತಿದ್ದೇನೆ," ಎಂದು ಹೇಳಿಕೊಂಡಿದ್ದ. ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಆಗಸ್ಟ್ ತಿಂಗಳಲ್ಲಿ SIT ಚಿನ್ನಯ್ಯ ಸೂಚಿಸಿದ್ದ ಸುಮಾರು 13 ಸ್ಥಳಗಳಲ್ಲಿ ಉತ್ಖನನ ನಡೆಸಿ 7 ತಲೆಬುರುಡೆ ಮತ್ತು ನೂರಾರು ತುಂಡು ಮೂಳೆಗಳನ್ನು ಸಂಗ್ರಹಿಸಿತ್ತು.

ಅದುವರೆಗೆ ಚಿನ್ನಯ್ಯನನ್ನು 'V' ಹೆಸರಿನಿಂದ ಗುರುತಿಸಲಾಗಿತ್ತು. ಬಳಿಕ SIT ಆತನನ್ನು ತೀವ್ರ ವಿಚಾರಣೆಗೊಳಪಡಿಸಿ, ಆತನ ಪೂರ್ವಾಪರ ಜಾಲಾಡಿತ್ತು. ವಿಚಾರಣೆ ವೇಳೆ ಚಿನ್ನಯ್ಯನ ಹೇಳಿಕೆಗಳು ಸುಳ್ಳು ಎಂಬುದು ದೃಢಪಟ್ಟಿದ್ದರಿಂದ, SIT ಬೆಳ್ತಂಗಡಿ ಠಾಣೆಗೆ ದೂರು ನೀಡಿ ಆತನನ್ನು ಬಂಧಿಸಿತ್ತು. ನಂತರ ನವೆಂಬರ್ 25ರಂದು ಬೆಳ್ತಂಗಡಿ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು. ಮುಸುಕುಧಾರಿ, ಬುರುಡೆ ಮನುಷ್ಯ ಎಂದೆಲ್ಲ ಕರೆಸಿಕೊಂಡಿದ್ದ ಚಿನ್ನಯ್ಯನಿಗೆ ನ್ಯಾಯಾಲಯವೇ ವಕೀಲರನ್ನು ಒದಗಿಸಿತ್ತು. ಆ ಪ್ರಕಾರ ದಿವ್ಯರಾಜ್ ಎಂಬ ವಕೀಲರು ಚಿನ್ನಯ್ಯ ಪರವಾಗಿ ವಾದಿಸಿದ್ದರು.

ನವೆಂಬರ್ 24ರಂದು ಬೆಳ್ತಂಗಡಿ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರು ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ವೈಯಕ್ತಿಕ ಬಾಂಡ್, ಶ್ಯೂರಿಟಿ ಬಾಂಡ್, ಇಬ್ಬರು ಜಾಮೀನುದಾರರು, ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾತಿ, ಧರ್ಮಸ್ಥಳ ಪ್ರದೇಶಕ್ಕೆ ಪ್ರವೇಶ ನಿಷೇಧ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕದಿರುವುದು ಸೇರಿದಂತೆ ಒಟ್ಟು 12 ನಿಬಂಧನೆಗಳನ್ನು ವಿಧಿಸಲಾಗಿತ್ತು. ಆದರೆ ಜಾಮೀನು ಆದೇಶ ಬಂದು 22 ದಿನಗಳೇ ಕಳೆದರೂ ಚಿನ್ನಯ್ಯನ ಪರ ವಕೀಲರು ಅಥವಾ ಕುಟುಂಬಸ್ಥರು ಯಾವುದೇ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಶಿವಮೊಗ್ಗ ಜೈಲು ಅಧಿಕಾರಿಗಳು ಬಿಡುಗಡೆ ಆದೇಶ ನೀಡಲು ಸಾಧ್ಯವಾಗುತ್ತಿಲ್ಲ.

Read More
Next Story