ಸಂಪುಟ ಪುನರ್‌ರಚನೆ ಯೋಚನೆ ಸದ್ಯಕ್ಕಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
x

ಸಂಪುಟ ಪುನರ್‌ರಚನೆ ಯೋಚನೆ ಸದ್ಯಕ್ಕಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ


ರಾಜ್ಯ ಸಚಿವ ಸಂಪುಟ ಪುನರ್ರಚನೆಗೆ ಸಂಬಂಧಿಸಿದ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟ ಪುನರ್ರಚನೆಯ ಯಾವ ಪ್ರಸ್ತಾಪವೂ ಸದ್ಯ ತಮ್ಮ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು ಎಂದು ಹಲವು ಮನವಿ ಮಾಡಿದ್ದರು. ಆ ಮನವಿಗಳಿಗೆ ಸ್ಪಂದಿಸುತ್ತಾ ಉಪ ಚುನಾವಣೆಯ ಬಳಿಕ ನೋಡೋಣ ಎಂದಿದ್ದೇನೆ. ಅದನ್ನೇ ಮಾಧ್ಯಮಗಳು ಸಂಪುಟ ಪುನರ್ ರಚನೆ ಎಂದು ಬಿಂಬಿಸುತ್ತಿವೆ. ಆದರೆ, ಸಂಪುಟ ಪುನರ್ ರಚನೆಯ ಯಾವುದೇ ಪ್ರಸ್ತಾಪ ಸದ್ಯ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಇಡಿಯಿಂದ ಬಂಧಿತರಾಗಿದ್ದ ಬಿ ನಾಗೇಂದ್ರ ಅವರು ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು. ಆ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ್ದರು.

ಅದರ ಬೆನ್ನಲ್ಲೇ ಮಾಧ್ಯಮಗಳಲ್ಲಿ ಸಚಿವ ಸಂಪುಟ ಪುನರ್ ರಚನೆಯ ಚರ್ಚೆಗಳು ಆರಂಭವಾಗಿದ್ದವು. ಆ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಸದ್ಯ ಸಚಿವ ಸಂಪುಟ ಪುನರ್ ರಚನೆಯ ಪ್ರಸ್ತಾಪವಿಲ್ಲ ಎಂದಿದ್ದಾರೆ.

ಆದರೆ, ಖಾಲಿ ಇರುವ ನಾಗೇಂದ್ರ ಅವರ ಸ್ಥಾನಕ್ಕೆ ಅವರನ್ನೇ ತರುವ ಜೊತೆಗೆ ಇನ್ನೂ ಮೂವರು ಹಿರಿಯ ನಾಯಕರಿಗೆ ಸಚಿವ ಸ್ಥಾನ ಕಲ್ಪಿಸಬೇಕು ಎಂಬ ಒತ್ತಡ ಪಕ್ಷದ ಕಡೆಯಿಂದ ಇದೆ. ಅದರಲ್ಲೂ ಮುಖ್ಯವಾಗಿ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, ಎ ಕೃಷ್ಣಪ್ಪ, ಲಕ್ಷ್ಮಣ ಸವದಿ, ಪಿಎಂ ನರೇಂದ್ರಸ್ವಾಮಿ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬ ಒತ್ತಡ ಇದೆ. ಆ ಹಿನ್ನೆಲೆಯಲ್ಲಿ ಹೊಣೆಗಾರಿಕೆ ನಿಭಾಯಿಸುವಲ್ಲಿ ಪದೇಪದೆ ಎಡವುತ್ತಿರುವ ಕೆಲವು ಸಚಿವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಪಕ್ಷದ ಹಿರಿಯರನ್ನು ಸೇರಿಸಿಕೊಳ್ಳುವ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.

Read More
Next Story