Naxals Surrender | ಯಾರೂ ಕೂಡ ನಕ್ಸಲ್‌ ಶರಣಾಗತಿಯ ಲಾಭ ಪಡೆಯಬಾರದು: ಡಾ ಬಂಜಗೆರೆ ಜಯಪ್ರಕಾಶ್
x
ಡಾ ಬಂಜಗೆರೆ ಜಯಪ್ರಕಾಶ್‌

Naxals Surrender | ಯಾರೂ ಕೂಡ ನಕ್ಸಲ್‌ ಶರಣಾಗತಿಯ ಲಾಭ ಪಡೆಯಬಾರದು: ಡಾ ಬಂಜಗೆರೆ ಜಯಪ್ರಕಾಶ್

ನಕ್ಸಲರ ಶರಣಾಗತಿ ವಿಷಯದಲ್ಲಿ ಕೆಲ ವ್ಯಕ್ತಿಗಳು ಹಾಗೂ ಗುಂಪುಗಳು ಹಸ್ತಕ್ಷೇಪ ಮಾಡಿರುವ ಬಗ್ಗೆ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಡಾ. ಬಂಜಗೆರೆ ಜಯಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದ್ದರು.


ನಕ್ಸಲರ ಶರಣಾಗತಿ ವಿಷಯವನ್ನು ಯಾರೂ ಕೂಡ ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ನಕ್ಸಲ್‌ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯ, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌ ಹೇಳಿದ್ದಾರೆ.

ಗುರುವಾರ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಕಾಡಿನ ಜೀವನ ಸಾಕಾಗಿದ್ದ ನಕ್ಸಲರು ಮುಖ್ಯವಾಹಿನಿಗೆ ಬರಲು ಹಂಬಲಿಸಿದ್ದರು. ರಾಜ್ಯ ಸರ್ಕಾರ ಶರಣಾಗತಿ ನೀತಿಯಡಿ ಶರಣಾಗಲು ಮುಕ್ತ ಅವಕಾಶ ನೀಡಿತ್ತು. ನಕ್ಸಲರನ್ನು ಶರಣಾಗತಿಗೆ ಮನವೊಲಿಸಲು ಸಮಿತಿಗೆ ಸೂಚಿಸಿತ್ತು. ಸ್ಥಳೀಯರ ಸಹಕಾರದಿಂದ ಮಧ್ಯಸ್ಥಿಕೆ ವಹಿಸಿ ಜವಾಬ್ದಾರಿ ನಿರ್ವಹಿಸಿದ್ದೇವೆ. ಇಲ್ಲಿ ನಾವೂ ಕೂಡ ನಿಮಿತ್ತ ಎಂದು ಹೇಳಿದರು.

ನಕ್ಸಲರ ಶರಣಾಗತಿ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಹಾಗೂ ಗುಂಪುಗಳ ಹಸ್ತಕ್ಷೇಪಕ್ಕೆ ಡಾ. ಬಂಜಗೆರೆ ಜಯಪ್ರಕಾಶ್‌ ಅವರು ಬೇಸರ ವ್ಯಕ್ತಪಡಿಸಿ ಬರೆದಿದ್ದ ಪತ್ರದ ಕುರಿತು ʼದ ಫೆಡರಲ್‌ ಕರ್ನಾಟಕʼ ಬುಧವಾರ ವರದಿ ಪ್ರಕಟಿಸಿತ್ತು.

ನಕ್ಸಲ್‌ ಶರಣಾಗತಿ, ಮುಂದಿನ ಪ್ರಕ್ರಿಯೆಗಳ ಕುರಿತು ಮಾತನಾಡಿದ ಅವರು, ನಮ್ಮದು ನಕ್ಸಲ್ ಶರಣಾಗತಿ ಸಮಿತಿ. ನಮಗೆ ವಹಿಸಿರುವ ಕಾರ್ಯವ್ಯಾಪ್ತಿಯಲ್ಲೇ ನಾವು ವರ್ತಿಸಬೇಕು. ಆದರೆ, ನಕ್ಸಲರ ಸಂಪರ್ಕವಿರುವ ಕೆಲ ಗುಂಪುಗಳು, ಮಾಜಿ ನಕ್ಸಲರಿಗೆ ಅವರದ್ದೇ ಆದ ಸಂಪರ್ಕವಿರುತ್ತದೆ. ನಾವು ಮನವೊಲಿಸಿ ಸಮಿತಿಗೆ ಒಪ್ಪಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ನಾವೂ ಕೂಡ ಸ್ಥಳೀಯರ ಜೊತೆ ಅರಣ್ಯಕ್ಕೆ ಹೋಗಿ ನಕ್ಸಲರಿಗೆ ಪ್ರಜಾಮಾರ್ಗದ ಹೋರಾಟಗಳ ಕುರಿತು ಮನವರಿಕೆ ಮಾಡಿಕೊಟ್ಟೆವು. ನಕ್ಸಲರು ಕೂಡ ಮುಖ್ಯವಾಹಿನಿಗೆ ಬರಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದರು. ಹಾಗಾಗಿ ಶರಣಾಗತಿ ಪ್ರಕ್ರಿಯೆ ಸುಲಭವಾಯಿತು ಎಂದು ವಿವರಿಸಿದರು.

ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಪೊಲೀಸರಿಗೆ ಬೇಕಾಗಿದ್ದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ, ಜಯಣ್ಣ, ವಸಂತ್‌ ಆರ್ಕಾಟ್‌ ಹಾಗೂ ಟಿ,ಎನ್‌. ಜೀಶಾ ಅವರನ್ನು ಸಿಎಂ ಎದುರು ಶರಣಾಗತಿ ಮಾಡಿಸುವ ಬಗ್ಗೆ ಸಮಿತಿಗೆ ಪೊಲೀಸರು ಮಾಹಿತಿ ನೀಡಿರಲಿಲ್ಲ. ಚಿಕ್ಕಮಗಳೂರಿನಲ್ಲೇ ಶರಣಾಗತಿ ಮಾಡಿಸುವ ಬಗ್ಗೆ ಚರ್ಚೆಯಾಗಿತ್ತು. ಹಾಗಾಗಿಯೇ ನಾವು ಅವರ ಸಂಬಂಧಿಕರು, ಹೋರಾಟಗಾರರು ಹಾಗೂ ಪತ್ರಕರ್ತರಿಗೂ ಶರಣಾಗತಿ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ, ಕೊನೇ ಕ್ಷಣದಲ್ಲಿ ಬದಲಾವಣೆಯಾಯಿತು.

ಈ ಬಗ್ಗೆ ಎಡಿಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರನ್ನು ವಿಚಾರಿಸಲಾಗಿ, ತಾಂತ್ರಿಕ ಕಾರಣಗಳಿಂದ ಬೆಂಗಳೂರಿಗೆ ಕರೆದೊಯ್ಯುವುದಾಗಿ ತಿಳಿಸಿದರು. ಚಿಕ್ಕಮಗಳೂರು ಸೂಕ್ಷ್ಮ ಪ್ರದೇಶವಾಗಿದ್ದು, ನಕ್ಸಲರ ಶರಣಾಗತಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ಸೇರಿದಂತೆ ಯಾವುದೇ ಅಚಾತುರ್ಯ ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬದಲಾವಣೆ ಮಾಡಲಾಗಿದೆ ಎಂದರು. ಪೊಲೀಸರಿಗೆ ಈ ಬಗ್ಗೆ ಗುಪ್ತಚರ ಮಾಹಿತಿ ಇರಬಹುದು ಎಂದು ಹೇಳಿ ಸುಮ್ಮನಾದೆವು ಎಂದು ಬಂಜಗೆರೆ ತಿಳಿಸಿದರು.

ಸಿಎಂ ಮುಂದೆ ಶರಣಾಗತಿ ತಪ್ಪಲ್ಲ

ನಕ್ಸಲರನ್ನು ಸಾಮಾನ್ಯವಾಗಿ ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿ ಎದುರು ಶರಣಾಗತಿ ಮಾಡಿಸಬಹುದು. ಆದರೆ, ಈ ಆರು ಜನ ನಕ್ಸಲರ ತಂಡ ಮೂರೂ ರಾಜ್ಯಗಳಿಗೆ ಬೇಕಾದವರಾದ್ದರಿಂದ ಕಾರ್ಯಾಂಗದ ಮುಖ್ಯಸ್ಥರಾದ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ. ಇದರಲ್ಲೇನು ತಪ್ಪಿಲ್ಲ. ಇನ್ನು ನಕ್ಸಲರ ವಿರುದ್ಧ ಚಿಕ್ಕಮಗಳೂರು ವ್ಯಾಪ್ತಿಯಲ್ಲೇ ಹೆಚ್ಚು ಪ್ರಕರಣಗಳಿರುವ ಕಾರಣ ವಾಪಸ್‌ ಕರೆದೋಯ್ದು, ಅಲ್ಲಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿದರು.

ಗುರುತರವಲ್ಲದ ಪ್ರಕರಣ ವಾಪಸ್‌

ಆರು ಮಂದಿ ನಕ್ಸಲರ ಮೇಲೆ ಕರ್ನಾಟಕದಲ್ಲಿ ದಾಖಲಾಗಿರುವ ಗುರುತರವಲ್ಲದ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ನಕ್ಸಲ್ ಶರಣಾಗತಿ ಸಮಿತಿಯು ಶರಣಾಗಿರುವ ನಕ್ಸಲರಿಗೆ ಅಗತ್ಯವಿರುವ ಕಾನೂನು ನೆರವು ನೀಡಲಿದೆ ಎಂದು ಬಂಜಗೆರೆ ಜಯಪ್ರಕಾಶ್‌ ತಿಳಿಸಿದರು.

ಯುಎಪಿಎ ಪ್ರಕರಣ, ಕೊಲೆ ಸುಲಿಗೆಯಂತಹ ಪ್ರಕರಣಗಳು ಕಾನೂನಿನಂತೆ ನ್ಯಾಯಾಲಯದಲ್ಲೇ ಇತ್ಯರ್ಥ್ಯವಾಗಬೇಕಿದೆ. ನಕ್ಸಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಪೊಲೀಸರ ಆಕ್ಷೇಪಣೆಗೆ ಅವಕಾಶ ಇರುತ್ತದೆ. ಆಗ ಸಹಾನುಭೂತಿ ತೋರುವಂತೆ ಕೋರಿದ್ದೇವೆ. ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದೆ ಎಂದರು.

ನಕ್ಸಲರು ಯಾವ ಜಿಲ್ಲೆಗೆ ಸೇರಿದ್ದಾರೋ, ಅಲ್ಲಿನ ನ್ಯಾಯಾಲಯಕ್ಕೆ ಅವರ ಮೇಲಿನ ಎಲ್ಲ ಪ್ರಕರಣಗಳನ್ನು ಹಸ್ತಾಂತರಿಸುವಂತೆಯೂ ಕೋರಲಾಗಿದೆ. ಇದಕ್ಕೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ನೆರೆ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಅಲ್ಲಿನ ಪೊಲೀಸ್ ಅಧಿಕಾರಿ ಹಾಗೂ ಸರ್ಕಾರದ ಮುಖ್ಯಸ್ಥರೊಂದಿಗೆ ಸಿಎಂ ಚರ್ಚೆ ಮಾಡಲಿದ್ದಾರೆ. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವಂತೆ ಕೋರಲಿದ್ದಾರೆ ಎಂದು ತಿಳಿಸಿದರು.

Read More
Next Story