ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೂ ಇನ್ನು ವಿದ್ಯುತ್, ನೀರು ಸಂಪರ್ಕಕ್ಕೆ ಇನ್ಮುಂದೆ  ಸ್ವಾಧೀನ ಪತ್ರ ಬೇಕಿಲ್ಲ!
x

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೂ ಇನ್ನು ವಿದ್ಯುತ್, ನೀರು ಸಂಪರ್ಕಕ್ಕೆ ಇನ್ಮುಂದೆ ಸ್ವಾಧೀನ ಪತ್ರ ಬೇಕಿಲ್ಲ!

ಸುಪ್ರೀಂ ಕೋರ್ಟ್‌ನ ಆದೇಶದನ್ವಯ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಪ್ರಮಾಣಪತ್ರ (CC) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (OC) ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ ಒದಗಿಸುವುದು ಕಾನೂನುಬಾಹಿರವಾಗಿತ್ತು. ಇದು ಸರ್ಕಾರಕ್ಕೆ ದೊಡ್ಡ ತಲೆನವಾಗಿ ಪರಿಣಮಿಸಿತ್ತು.


Click the Play button to hear this message in audio format

ರಾಜ್ಯದ ಗ್ರಾಮೀಣ ಭಾಗದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ನಗರ ಪ್ರದೇಶಗಳ ಮಾದರಿಯಲ್ಲಿಯೇ ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅನಧಿಕೃತ ವಸತಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಕಡ್ಡಾಯವಾಗಿದ್ದ 'ಸ್ವಾಧೀನಾನುಭವ ಪ್ರಮಾಣಪತ್ರ' (Occupancy Certificate - OC) ನಿಯಮದಿಂದ ವಿನಾಯಿತಿ ನೀಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ಗುರುವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಇದರಿಂದ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಅನುಕೂಲವಾಗಲಿದೆ.

ಯಾರಿಗೆ ಅನ್ವಯ? ಏನು ಲಾಭ?

ಈ ಹೊಸ ನಿರ್ಧಾರದ ಅನ್ವಯ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1200 ಚದರ ಅಡಿ (30x40 ಅಡಿ) ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಒಸಿ ಕಡ್ಡಾಯವಿರುವುದಿಲ್ಲ.

ಇಲ್ಲಿಯವರೆಗೆ ಒಸಿ ಇಲ್ಲದ ಕಾರಣಕ್ಕಾಗಿ ಅನೇಕ ಮನೆಗಳಿಗೆ ಅಧಿಕೃತವಾಗಿ ವಿದ್ಯುತ್ ಮೀಟರ್ ಅಳವಡಿಸಲು ಅಥವಾ ನಳದ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಈ ನಿರ್ಧಾರದಿಂದ ಈ ತಾಂತ್ರಿಕ ಅಡೆತಡೆ ನಿವಾರಣೆಯಾಗಲಿದ್ದು, ಸುಲಭವಾಗಿ ಮೂಲಸೌಕರ್ಯಗಳನ್ನು ಪಡೆಯಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಸ್ವಂತ ಮನೆ ನಿರ್ಮಿಸಿಕೊಂಡಿದ್ದರೂ, ದಾಖಲೆಗಳ ತೊಡಕಿನಿಂದಾಗಿ ಕರೆಂಟ್ ಮತ್ತು ನೀರು ಪಡೆಯಲು ಪರದಾಡುತ್ತಿದ್ದರು. ಈಗ ಸಂಪುಟದ ತೀರ್ಮಾನದಿಂದ ಈ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.

ಕಾನೂನು ತಿದ್ದುಪಡಿ ಏನು ಹೇಳುತ್ತದೆ?

ಸುಪ್ರೀಂ ಕೋರ್ಟ್‌ನ ಆದೇಶದನ್ವಯ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಪ್ರಮಾಣಪತ್ರ (CC) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (OC) ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ ಒದಗಿಸುವುದು ಕಾನೂನುಬಾಹಿರವಾಗಿತ್ತು. ಇದು ಸರ್ಕಾರಕ್ಕೆ ದೊಡ್ಡ ತಲೆನವಾಗಿ ಪರಿಣಮಿಸಿತ್ತು.

ಈ ಸಮಸ್ಯೆಯನ್ನು ಬಗೆಹರಿಸಲು, ರಾಜ್ಯ ಸರ್ಕಾರವು 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್' (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ನಿಯಂತ್ರಣ) ಕಾಯ್ದೆಯ ಮಾದರಿ ಉಪ ವಿಧಿಗಳಿಗೆ 2ನೇ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಮೂಲಕ ಒಸಿ ಮತ್ತು ಸಿಸಿ ಇಲ್ಲದಿದ್ದರೂ, ಮಾನವೀಯ ದೃಷ್ಟಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

ಹಂತ ಹಂತವಾಗಿ ವಿಸ್ತರಣೆ

ಈ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಈ ವಿನಾಯಿತಿಯನ್ನು ನೀಡಲಾಗಿತ್ತು. ನಂತರ ನಗರ ಸ್ಥಳೀಯ ಸಂಸ್ಥೆಗಳಿಗೂ (ಪುರಸಭೆ, ನಗರಸಭೆ) ಇದನ್ನು ವಿಸ್ತರಿಸಲಾಗಿತ್ತು. ಈಗ ಅಂತಿಮವಾಗಿ ಗ್ರಾಮೀಣ ಭಾಗದ ಜನರಿಗೂ ಈ ಸೌಲಭ್ಯ ಒದಗಿಸುವ ಮೂಲಕ, ರಾಜ್ಯಾದ್ಯಂತ ಏಕರೂಪದ ರಿಯಾಯಿತಿ ಕಲ್ಪಿಸಿದಂತಾಗಿದೆ.

Read More
Next Story