ಬಡವರಿಗಾಗಿ ಗ್ಯಾರಂಟಿ ಯೋಜನೆ; ಮುಂದುವರಿಯಲಿ ಎಂದ ಬಸವರಾಜ ಬೊಮ್ಮಾಯಿ
x

ಬಡವರಿಗಾಗಿ ಗ್ಯಾರಂಟಿ ಯೋಜನೆ; ಮುಂದುವರಿಯಲಿ ಎಂದ ಬಸವರಾಜ ಬೊಮ್ಮಾಯಿ

ಗ್ಯಾರಂಟಿಗಾಗಿ ವಿಶೇಷ ಸಂಪನ್ಮೂಲ ಕ್ರೋಢೀಕರಿಸಿ ಕೊಡಿ . ಆಗ ನಾವು ಸಿಎಂ ಸಿದ್ದರಾಮಯ್ಯಗೆ ಶಹಬ್ಬಾಶ್ ಹೇಳುತ್ತೇವೆ. ಅಭಿವೃದ್ಧಿ ಶೂನ್ಯ ಮಾಡಿ ಜನರ ಮೇಲೆ ತೆರಿಗೆ ಹಾಕಿದರೆ ಅದು ಸರಿಯಾದುದಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


ರಾಜ್ಯ ಸರ್ಕಾರ ಗ್ಯಾರಂಟಿ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಗ್ಯಾರೆಂಟಿ ಸ್ಥಗಿತಗೊಳಿಸಲು ನಾವು ಹೇಳುವುದಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ಇದ್ದು, ಅವುಗಳನ್ನು ಮುಂದುವರೆಸಬೇಕು. ಅದರ ಜೊತೆಗೆ ಸಂಪನ್ಮೂಲ ಕ್ರೋಢಿಕರಿಸಿ ರಾಜ್ಯದ ಅಭಿವೃದ್ಧಿಯನ್ನೂ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಾಗಿ ವಿಶೇಷ ಸಂಪನ್ಮೂಲ ಕ್ರೋಢೀಕರಿಸಿ ಕೊಡಿ . ಆಗ ನಾವು ಸಿಎಂ ಸಿದ್ದರಾಮಯ್ಯಗೆ ಶಹಬ್ಬಾಶ್ ಹೇಳುತ್ತೇವೆ. ಅಭಿವೃದ್ಧಿ ಶೂನ್ಯ ಮಾಡಿ ಜನರ ಮೇಲೆ ತೆರಿಗೆ ಹಾಕಿದರೆ ಅದು ಸರಿಯಾದುದಲ್ಲ ಎಂದು ಹೇಳಿದರು.

ಆರ್ಥಿಕ ವಾಗಿ ಕೇವಲ ಗ್ಯಾರೆಂಟಿ ಅಷ್ಟೇ ಅಲ್ಲ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದಾರೆ. ಈ ರಾಜ್ಯದಲ್ಲಿ ಜಿಎಸ್ ಟಿ ಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಅಡಿಕೆ ವ್ಯಾಪಾರ, ಪ್ಲಾಸ್ಟಿಕ್ ವ್ಯಾಪಾರದಲ್ಲಿ ಸೋರಿಕೆ ಆಗುತ್ತಿದೆ. ಸ್ಕ್ರ್ಯಾಪ್ ವ್ಯಾಪಾರದಲ್ಲಿ ಸೋರಿಕೆ ಆಗುತ್ತಿದೆ. ಸಿಎಂ ಸುಮ್ಮನೆ ಕೂತಿದ್ದಾರೆ ಯಾಕೆ ಎಂದು ಪ್ರಶ್ನಿಸಿದರು.

ಸರಿಯಾಗಿ ಆರ್ಥಿಕ ನಿರ್ವಹಣೆ ಮಾಡಿದರೆ ಅಲ್ಲೆ ಸಾಕಷ್ಟು ಆದಾಯ ಬರುತ್ತದೆ. ಪೆಟ್ರೋಲ್, ಡಿಸೆಲ್ ಬೆಲೆ ಹೆಚ್ಚಿಸಿ ಜನರ ಮೇಲೆ ತೆರಿಗೆ ಹಾಕುವುದಲ್ಲ. ನಿಮ್ಮ ಆಡಳಿತದ ಬಿಗಿ ಮಾಡಿ, ಆಡಳಿತ ಸುಧಾರಣೆ ಮಾಡಿ, ಸಂಪನ್ಮೂಲ ಕ್ರೋಢಿಕರಿಸಿ ಮತ್ತು ಯಾವ ಯೋಜನೆಗೆ ಯಾವ ಸಂದರ್ಭದಲ್ಲಿ ಯಾವ ರೀತಿಯ ಆದ್ಯತೆ ನೀಡಬೇಕು ಮತ್ತು ಸಮಯ ಮತ್ತು ಹಣ ಸರಿಯಾಗಿ ನಿರ್ವಹಣೆ ಮಾಡಿದರೆ ಪರಿಹಾರ ಇದೆ. ಅದನ್ನು ಬಿಟ್ಟು ಸರಳ ಮಾರ್ಗ ಅನುಸರಿಸಿ ಜನರಿಂದ ತೆರಿಗೆ ಸಂಗ್ರಹಿಸಿ ಹಂಚಿಕೆ ಮಾಡುತ್ತಿದ್ದಾರೆ. ಮತ್ತೊಂದು ಜನರ‌ ಮೇಲೆ ತೆರಿಗೆ ಹಾಕುವ ಸರಳ ಮಾರ್ಗ ಅನುಸರಿಸಿದ್ದಾರೆ. ದುಡಿಯುವ, ದುಡಿಸುವ, ಆದಾಯ ಹೆಚ್ಚಿಸುವ, ದಕ್ಷ ಆಡಳಿತದ ಕಡೆಗೆ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಜನರನ್ನು ಸಂಕಷ್ಟಕ್ಕೆ ನೂಕಿ ಯಾವ ಅಭಿವೃದ್ಧಿ ಮಾಡಲು ಸಾಧ್ಯ. ಜಿಎಸ್ ಟಿ ಯಲ್ಲಿ ದೊಡ್ಡ ಪ್ರಮಾಣದ ಸೋರಿಕೆಯಾಗುತ್ತಿದ್ದು, ಅದನ್ನು ತಡೆಗಟ್ಟಿದರೆ ಸಾಕಷ್ಟು ಆದಾಯ ಬರುತ್ತದೆ. ಬೆಲೆ ಏರಿಕೆಯಾದರೆ ಹಣದುಬ್ಬರ‌ ಜಾಸ್ತಿ ಆಗುತ್ತದೆ. ಜನ ಸಾಮಾನ್ಯರ ಮೇಲೆ ಹೊರೆ ಆಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಅದು ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ. ಇದೊಂದು ವಿಪರ್ಯಾಸ ಎಂದು ಹೇಳಿದರು.

Read More
Next Story