
ಎಚ್ಐವಿ ಇಂಜೆಕ್ಷನ್ ನೀಡುವವರಿಗೆ ನೋಟಿಸ್ ಕೊಟ್ಟಿಲ್ಲ: ಬಿಜೆಪಿ ಹೈಕಮಾಂಡ್ ವಿರುದ್ಧ ಸೋಮಶೇಖರ್ ಆಕ್ರೋಶ
ಕಾಂಗ್ರೆಸ್ ಪಕ್ಷದಿಂದ ಬಂದು ಸಚಿವನಾಗಿ ಜನಪರ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಹೀಗಿದ್ದರೂ ನನಗೆ ಪಕ್ಷ ವಿರೋಧಿ ಹಣೆಪಟ್ಟಿ ಕಟ್ಟಿ ನೋಟಿಸ್ ನೀಡಿರುವುದು ಬೇಸರ ತರಿಸಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೇಂದ್ರ ಬಿಜೆಪಿ ಶಿಸ್ತುಪಾಲನಾ ಸಮಿತಿ ನೀಡಿರುವ ಷೋಕಾಸ್ ನೋಟಿಸ್ ಕುರಿತಂತೆ ಶಾಸಕ ಎಸ್.ಟಿ.ಸೋಮಶೇಖರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಎಚ್ಐವಿ ಚುಚ್ಚುಮದ್ದು ನೀಡುವವರು, ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡುವವರಿಗೆ ಯಾವುದೇ ನೋಟಿಸ್ ನೀಡುವುದಿಲ್ಲ. ಪಕ್ಷದ ನಾಯಕರ ವಿರುದ್ಧ ಯಾವುದೇ ಹೇಳಿಕೆ ನೀಡದ ನನಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರಿಷ್ಠರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಮುಜುಗರ ಉಂಟು ಮಾಡುವವರೇ ಬೇರೆ ಇದ್ದಾರೆ. ನಾನು ಕಾಂಗ್ರೆಸ್ ಪಕ್ಷದಿಂದ ಬಂದು ಸಚಿವನಾಗಿ ಜನಪರ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಹೀಗಿದ್ದರೂ ನನಗೆ ಪಕ್ಷ ವಿರೋಧಿ ಹಣೆಪಟ್ಟಿ ಕಟ್ಟಿ ನೋಟಿಸ್ ನೀಡಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷರಿರಬಹುದು. ಆದರೆ ರಾಜ್ಯದ ಉಪ ಮುಖ್ಯಮಂತ್ರಿ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಅವರನ್ನು ಭೇಟಿಯಾಗಿದ್ದೇನೆ. ಮಾತುಕತೆ ನಡೆಸಿದ್ದೇನೆ. ಹಾಗಂತ ನಾನು ಕಾಂಗ್ರೆಸ್ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಪಕ್ಷದ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ
ನಾನು ಬಿಜೆಪಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿಲ್ಲ. ಆದರೂ ಪಕ್ಷದ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.
ಷೋಕಾಸ್ ನೋಟಿಸ್ ನೀಡಿರುವ ಕುರಿತು ಮಾಧ್ಯಮಗಳಿಂದ ತಿಳಿಯಿತು. ನೋಟಿಸ್ ತರಿಸಿಕೊಂಡಿದ್ದು, ಈ ಬಗ್ಗೆ ಚರ್ಚೆ ಮಾಡಿ ಉತ್ತರ ನೀಡುತ್ತೇನೆ. ನಾನು ಯಾವುದೇ ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಭಾಗವಹಿಸಿಲ್ಲ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಸರ್ಕಾರದ ಕಾರ್ಯಕ್ರಮವಾಗಿತ್ತು. ಕ್ಷೇತ್ರದ ವಿಚಾರ ಚರ್ಚಿಸಲು ಸರ್ಕಾರದ ಸಚಿವರನ್ನು ಭೇಟಿ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿದ್ದೆ. ಅದನ್ನು ಹೊರತುಪಡಿಸಿದರೆ ಸರ್ಕಾರಿ ಕಾರ್ಯಕ್ರಮಗಳಲ್ಲಷ್ಟೇ ಭಾಗವಹಿಸಿದ್ದೇನೆ ವಿನಃ ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿಲ್ಲ. ನಾನು ಬಜೆಟ್ ಸಭೆ, ಬೆಂಗಳೂರು ಅಭಿವೃದ್ಧಿ ಸಂಬಂಧದ ಸಭೆಗಳಲ್ಲೂ ಭಾಗವಹಿಸಿದ್ದೆ. ಇದ್ಯಾವುದೂ ಪಕ್ಷ ವಿರೋಧಿ ಚಟುವಟಿಕೆ ಅಲ್ಲ. ಬಿಜೆಪಿಗೆ ಮುಜುಗರ ತರುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಷೋಕಾಸ್ ನೋಟಿಸ್‌ಗೆ ಸಂಬಂಧಿಸಿ ನನ್ನ ವಕೀಲರ ಜತೆ ಚರ್ಚಿಸಿ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ದೊಡ್ಡ ನಾಯಕರೇ ಪಕ್ಷ ವಿರೋಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಸಣ್ಣ ಪುಟ್ಟ ನಾಯಕರನ್ನು ಗುರಿಯಾಗಿಸಿ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ. ಸಣ್ಣವರಿಗೆ ಒಂದು, ಬಲಾಢ್ಯರಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದ ಅವರು, ಅಪಪ್ರಚಾರನ್ನು ಎದುರಿಸುವ ಶಕ್ತಿ ನನಗೂ ಇದೆ ಎಂದು ತಿರುಗೇಟು ನೀಡಿದ್ದಾರೆ.