Govt Jobs| ಇನ್ನು ಕಾಯಂ ಸರ್ಕಾರಿ ಉದ್ಯೋಗ ಮರೀಚಿಕೆ? 96,844 ಹುದ್ದೆಗಳಿಗೆ ಒಳಗುತ್ತಿಗೆ!
x

Govt Jobs| ಇನ್ನು ಕಾಯಂ ಸರ್ಕಾರಿ ಉದ್ಯೋಗ ಮರೀಚಿಕೆ? 96,844 ಹುದ್ದೆಗಳಿಗೆ ಒಳ'ಗುತ್ತಿಗೆ!

ಕಾರ್ಮಿಕ ಸೇವೆಗಳ ವಿಧೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರಿಂದ ಖಾಸಗಿ ಏಜೆನ್ಸಿಗಳ ಶೋಷಣೆ ತಪ್ಪಿಸಬಹುದು. ಆದರೆ, ಭವಿಷ್ಯದಲ್ಲಿ ಕಾಯಂ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಲಿದೆ.


Click the Play button to hear this message in audio format

ಹೊರಗುತ್ತಿಗೆ ನಿಷೇಧಿಸುವ ಸಲುವಾಗಿ ಬೀದರ್‌ ಮಾದರಿಯ ʼಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘʼ ಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೊರಗುತ್ತಿಗೆ ಸಿಬ್ಬಂದಿಯನ್ನು ಸಹಕಾರ ಸಂಘಗಳ ಮೂಲಕ ಸಂಪೂರ್ಣ ಒಳಗುತ್ತಿಗೆ ವ್ಯವಸ್ಥೆಗೆ ತರಲು ಪ್ರಯತ್ನ ಆರಂಭಿಸಿದೆ.

ಆದರೆ, ಈ ಒಳಗುತ್ತಿಗೆ ವ್ಯವಸ್ಥೆ ಅಥವಾ ಸಹಕಾರ ಸಂಘಗಳ ಸ್ಥಾಪನೆಯ ಹಿಂದೆ ಕಾಯಂ ಹುದ್ದೆಗಳನ್ನು ಕಡಿತ ಮಾಡುವ ಹುನ್ನಾರ ಅಡಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಕರ್ನಾಟಕದಲ್ಲಿ ಈಗ 2,84,881 ಹುದ್ದೆಗಳು ಖಾಲಿ ಇವೆ. ಒಳ ಮೀಸಲಾತಿ, ನೇಮಕಾತಿ ಹಗರಣದಂತಹ ವಿವಾದಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗಿದೆ. ಇಆಡಳಿತದ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಪ್ರಸ್ತುತ, 96,844 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ. ಈಗ ಆ ಹುದ್ದೆಗಳನ್ನು ಒಳಗುತ್ತಿಗೆ ವ್ಯಾಪ್ತಿಗೆ ತರುತ್ತಿದೆ. ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘಗಳ ಮೂಲಕ ಸಿಬ್ಬಂದಿ ನೇಮಕಕ್ಕೆ ಚಿಂತನೆ ನಡೆಸಿದೆ.

ಕಾರ್ಮಿಕರಿಗೆ ವೇತನ ಹೇಗಿದೆ?

ರಾಜ್ಯದಲ್ಲಿ 7ನೇ ವೇತನ ಆಯೋಗ ಜಾರಿ ನಂತರ ಸರ್ಕಾರಿ ನೌಕರರ ಮೂಲ ವೇತನ, ಡಿಎ ಮತ್ತು ಭತ್ಯೆಗಳಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಇದರಿಂದ ವಾರ್ಷಿಕ 20 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬಿದ್ದಿದೆ. 2025-26ರಲ್ಲಿ ಒಟ್ಟು 4 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ನಲ್ಲಿ ಸುಮಾರು 1.4 ಲಕ್ಷ ಕೋಟಿ ರೂ. ವೇತನ ಮತ್ತು ಪಿಂಚಣಿಗಾಗಿ ವಿನಿಯೋಗಿಸಲಾಗುತ್ತಿದೆ.

ನೌಕರರ ಮೂಲ ವೇತನ ಶೇ 27.5ರಷ್ಟು ಹೆಚ್ಚಳವಾದರೆ, ನಿವೃತ್ತಿ ವೇತನವು 2024-25ರಲ್ಲಿ ಶೇ. 29ರಷ್ಟು ಹೆಚ್ಚಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಹೊರೆಯಾಗುತ್ತಿದೆ. ಇದರಿಂದಾಗಿ ಆರ್ಥಿಕ ಇಲಾಖೆ ನೇಮಕಾತಿ ಪ್ರಕ್ರಿಯೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಲು ಸಾಧ್ಯವಾಗುತ್ತಿಲ್ಲ.

ಇನ್ನು ಹೊರಗುತ್ತಿಗೆ ನಿಷೇಧಿಸಬೇಕೆಂಬ ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದರೂ ಇದರ ಹಿಂದೆ ಹಲವು ಯೋಜಿತ ಉದ್ದೇಶಗಳಿವೆ ಎನ್ನಲಾಗಿದೆ. ಜಿಲ್ಲಾವಾರು ಕಾರ್ಮಿಕ ಸೇವೆಗಳ ವಿಧೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರಿಂದ ಖಾಸಗಿ ಏಜೆನ್ಸಿಗಳ ಶೋಷಣೆ ತಪ್ಪಿಸಬಹುದು. ಆದರೆ, ಭವಿಷ್ಯದಲ್ಲಿ ಕಾಯಂ ಉದ್ಯೋಗಿಗಳ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಇದು ನೆರವಾಗಲಿದೆ ಎಂದು ಹೇಳಲಾಗಿದೆ.

ಅಭಿಪ್ರಾಯ ಕೋರಿದ ಕಾರ್ಮಿಕ ಇಲಾಖೆ

ಖಾಸಗಿ ಏಜೆನ್ಸಿಗಳ ಶೋಷಣೆ, ಕಿರುಕುಳ ತಪ್ಪಿಸಲು ಸಲುವಾಗಿ ಸಹಕಾರಿ ಸಂಘಗಳ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಜಿಲ್ಲಾವಾರು ಸಹಕಾರ ಸಂಘಗಳ ಸ್ಥಾಪನೆ ಪ್ರಸ್ತಾವನೆ ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದ್ದು, ಇದರನ್ವಯ ಕಾರ್ಮಿಕ ಇಲಾಖೆಯು ಎಲ್ಲ ಇಲಾಖೆಗಳ ಸಲಹೆ ಹಾಗೂ ಅಭಿಪ್ರಾಯ ಆಹ್ವಾನಿಸಿದೆ.

ಬೀದರ್ ಜಿಲ್ಲಾ ಸಹಕಾರ ಸಂಘದ ಮಾದರಿಯಲ್ಲಿ ಸಹಕಾರ ಸಂಘ ಸ್ಥಾಪಿಸುವ ಮೂಲಕ ಹೊರಗುತ್ತಿಗೆ ನೌಕರರ ಸೇವೆಯನ್ನು ಸರ್ಕಾರಿ ಸ್ವಾಮ್ಯದ ಕಚೇರಿ, ನಿಗಮ, ಮಂಡಳಿಗಳಿಗೆ ಒದಗಿಸಲು ಉದ್ದೇಶಿಸಲಾಗಿದೆ. ಈ ಕುರಿತು 15 ದಿನಗಳೊಳಗೆ ತಮ್ಮ ಅಭಿಪ್ರಾಯ ಅಥವಾ ಸಲಹೆ ನೀಡುವಂತೆ ಡಿ. 16 ರಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್‌ ಕೋರಿದ್ದಾರೆ.

ಕಡಿಮೆಯಾಗಲಿದೆ ಕಾಯಂ ಉದ್ಯೋಗ

ಹೊರಗುತ್ತಿಗೆ ವ್ಯವಸ್ಥೆ ನಿಷೇಧಿಸುವ ಮೂಲಕ ಒಳಗುತ್ತಿಗೆ ವ್ಯವಸ್ಥೆಯಡಿ ಸಿಬ್ಬಂದಿ ನೇಮಕದ ಹಿಂದೆ ಕಾಯಂ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುವ ಉದ್ದೇಶವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಯಂ ನೌಕರರಿಗೆ ರಾಜ್ಯ ಸರ್ಕಾರವು ವಿವಿಧ ಸವಲತ್ತು, ವೇತನ ಆಯೋಗದನ್ವಯ ಸಂಬಳ, ಸಾರಿಗೆ ಹೆಚ್ಚಳ, ನಿವೃತ್ತಿ ಭತ್ಯೆಗಳನ್ನು ನೀಡಲು ಕೋಟ್ಯಂತರ ರೂ. ಪಾವತಿಸಬೇಕು. ಪಿಂಚಣಿಗಾಗಿಯೂ ನೂರಾರು ಕೋಟಿ ವ್ಯಯಿಸಬೇಕು. ಒಳಗುತ್ತಿಗೆಯಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಂಡರೆ ಕಾಯಂ ನೌಕರರಿಗೆ ನೀಡುವಷ್ಟು ಸೌಲಭ್ಯಗಳನ್ನು ಕೊಡಬೇಕಾಗಿಲ್ಲ, ನಿವೃತ್ತಿ ನಂತರ ಸೌಲಭ್ಯಗಳು ಇರುವುದಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯವಾಗಲಿದೆ. ಹಾಗಾಗಿ ಹೊರಗುತ್ತಿಗೆ ಸಿಬ್ಬಂದಿಯನ್ನು ಒಳಗುತ್ತಿಗೆ ವ್ಯವಸ್ಥೆಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ.

96 ಸಾವಿರ ಹೊರಗುತ್ತಿಗೆ ಸಿಬ್ಬಂದಿ

ಸರ್ಕಾರದ ವಿವಿಧ ನಿಗಮ, ಮಂಡಳಿಗಳು, ಇಲಾಖೆಗಳಲ್ಲಿ ಅಂದಾಜು 3 ರಿಂದ 3.8 ಲಕ್ಷ ನೌಕರರು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಈ ಪೈಕಿ ವಿವಿಧ ಇಲಾಖೆಗಳ 96 ಸಾವಿರ ಹೊರಗುತ್ತಿಗೆ ಸಿಬ್ಬಂದಿಯನ್ನು ಮೊದಲ ಹಂತದಲ್ಲಿ ಒಳಗುತ್ತಿಗೆ ವ್ಯವಸ್ಥೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಸಚಿವ ಸಂಪುಟದ ಉಪ ಸಮಿತಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಂತೆ ಬೀದರ್‌ ಮಾದರಿ ಸಹಕಾರ ಸಂಘಗಳ ಮೂಲಕ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲು ಶಿಫಾರಸು ಮಾಡಿತ್ತು. ಉಪ ಸಮಿತಿಯ ಪ್ರಸ್ತಾವನೆ ಪರಿಶೀಲಿಸಿ, ಸಹಕಾರ ಸಂಘಗಳ ಮಾದರಿಯಡಿ ಸಿಬ್ಬಂದಿ ನೇಮಕದ ಕುರಿತು ಅಭಿಪ್ರಾಯ ತಿಳಿಸುವಂತೆ ಕಾರ್ಮಿಕ ಇಲಾಖೆ ವಿವಿಧ ಇಲಾಖೆಗಳಿಗೆ ಸೂಚಿಸಿದೆ.

ಕೃಷಿ ಇಲಾಖೆಯಲ್ಲಿ 15,824 ಪಶು ಸಂಗೋಪನೆ ಇಲಾಖೆಯಲ್ಲಿ 15,376 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 11,424 ಹೊರಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ 15,824, ಆರೋಗ್ಯ ಇಲಾಖೆಯಲ್ಲಿ 11,424 ಜನರು ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಕ್ರಮವಾಗಿ 305 ಹಾಗೂ 2286 ಹುದ್ದೆಗಳನ್ನು ಮಾತ್ರ ತೋರಿಸಲಾಗಿದೆ.

ಎನ್‌ಎಚ್‌ಎಂ ಸಿಬ್ಬಂದಿ ಲೆಕ್ಕಕ್ಕಿಲ್ಲ

ರಾಜ್ಯ ಸರ್ಕಾರ ಒಟ್ಟು 96 ಸಾವಿರ ಹೊರಗುತ್ತಿಗೆ ನೌಕರರನ್ನು ಗುರುತಿಸಿದೆ. ಆದರೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಎನ್‌ಎಚ್‌ಎಂ ಯೋಜನೆಯಲ್ಲೇ ರಾಜ್ಯಾದ್ಯಂತ 30 ಸಾವಿರ ಹೊರಗುತ್ತಿಗೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ, ಆರೋಗ್ಯ ಹಾಗೂ ಇಂಧನ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದ ಇಲಾಖೆಗಳ ಹೊರಗುತ್ತಿಗೆ ಸಿಬ್ಬಂದಿಯನ್ನು ಸಹಕಾರ ಸಂಘಗಳಡಿ ತರಲು ನಿರ್ಧರಿಸಿದೆ.

ಅಗತ್ಯ ಸೇವೆಗಳ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಇಂಧನ ಕ್ಷೇತ್ರದ ಸಿಬ್ಬಂದಿಯನ್ನು ನೇರವಾಗಿ ಸರ್ಕಾರವೇ ಗುತ್ತಿಗೆ ವ್ಯವಸ್ಥೆ ತರಲು ಚಿಂತನೆ ನಡೆಸಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯನ್ನೂ ಒಳಗುತ್ತಿಗೆ ವ್ಯಾಪ್ತಿಗೆ ಸೇರಿಸಬೇಕು ಎಂದು ಎನ್‌ಎಚ್‌ಎಂ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘಟನೆ ರಾಜ್ಯಾಧ್ಯಕ್ಷ ಶ್ರೀಕಾಂತಸ್ವಾಮಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಹೇಗಿದೆ ಸಹಕಾರ ಸಂಘದ ಮಾದರಿ?

ಹೊರಗುತ್ತಿಗೆ ನೌಕರರ ಹಿತಾಸಕ್ತಿ ಕಾಪಾಡುವ ಸಲುವಾಗಿ ಕರ್ನಾಟಕ ಸರ್ಕಾರವು “ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ”ಗಳನ್ನು ಜಿಲ್ಲಾವಾರು ಸ್ಥಾಪಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಕಾರ್ಮಿಕ ಇಲಾಖೆಯು ವಿವಿಧ ಇಲಾಖೆಗಳ ಅಭಿಪ್ರಾಯ ಕೇಳಿದೆ.

ಬೀದರ್‌ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘದ ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಬೀದರ್ ಜಿಲ್ಲೆಯಲ್ಲಿ 2008ರಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಹಕಾರ ಸಂಘವನ್ನು ಆರಂಭಿಸಲಾಯಿತು. ಈ ಸಂಘದ ಮೂಲಕವೇ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ಎರವಲು ನೀಡಲಾಗುತ್ತಿದೆ. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸಹಕಾರ ಸಂಘಗಳಲ್ಲಿ ಸರ್ಕಾರ ನೀಡುವ ವೇತನವು ನೇರವಾಗಿ ನೌಕರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಲಿದೆ.

ಈ ಮೊದಲು ಖಾಸಗಿ ಏಜೆನ್ಸಿಗಳು ಸರ್ಕಾರ ನೀಡುವ ಕಾರ್ಮಿಕ ವೇತನದಲ್ಲಿ ಇಂತಿಷ್ಟು ಸೇವಾ ಶುಲ್ಕವಾಗಿ ಕಡಿತ ಮಾಡಲಾಗುತ್ತಿತ್ತು. ಕಾಲ ಕಾಲಕ್ಕೆ ಪಿಎಫ್ ಹಾಗೂ ಇಎಸ್‌ಐ ಒದಗಿಸುತ್ತಿರಲಿಲ್ಲ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 5.88 ಲಕ್ಷ ನೌಕರರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರಲ್ಲಿ 96,844 ಜನರು ಅಂದರೆ ಶೇ16 ರಷ್ಟು ಜನರು ಹೊರಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ ಎಂಬುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2025-26ನೇ ಆರ್ಥಿಕ ವರ್ಷದಲ್ಲಿ ಹೊರಗುತ್ತಿಗೆ ನೌಕರರ ವೇತನಕ್ಕಾಗಿಯೇ ರಾಜ್ಯ ಸರ್ಕಾರ 2,273 ಕೋಟಿ ರೂ. ಮೀಸಲಿಟ್ಟಿದೆ. ಒಟ್ಟಾರೆ ಸರ್ಕಾರಿ ವೇತನವು 85,860 ಕೋಟಿಗೆ ಏರಿದೆ. ಇದು ಕಳೆದ ವರ್ಷಕ್ಕಿಂತ ಶೇ 19 ರಷ್ಟು ಹೆಚ್ಚಳವಾಗಿದೆ.

ಖಾಲಿ ಇರುವ ಹುದ್ದೆಗಳೆಷ್ಟು?

ರಾಜ್ಯದಲ್ಲಿ ಒಟ್ಟು 7,76,414 ಅನುಮೋದಿತ ಹುದ್ದೆಗಳಿವೆ. ಇದರಲ್ಲಿ 4,91,533 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 2,84,881 ಹುದ್ದೆಗಳು ಖಾಲಿ ಉಳಿದಿವೆ. ಖಾಲಿ ಉಳಿದಿರುವ ಹುದ್ದೆಗಳಲ್ಲಿ 96,844 ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.

ಸುಪ್ರೀಂಕೋರ್ಟ್‌ ಹೇಳಿದ್ದೇನು?

ಸುಪ್ರೀಂಕೋರ್ಟ್ ಕಳೆದ ಆಗಸ್ಟ್ 19ರಂದು ನೀಡಿದ್ದ ಆದೇಶದಲ್ಲಿ ಉದ್ಯೋಗ ನೀಡುವುದು ಸಂವಿಧಾನದ ವಿಧಿ 14, 16 ಮತ್ತು 21ರ ಅನ್ವಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಇಂಧನ, ಆರೋಗ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಅಪಾಯಕಾರಿ ಕೆಲಸಗಳು ಸೇರಿ ನಾನಾ ಹುದ್ದೆಗಳಿಗೆ ಕಾಯಂ ನೇಮಕ ಮಾಡಬೇಕು. ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ, ಆರೋಗ್ಯ ಇಲಾಖೆಯ ಶುಶ್ರೂಷಕರು ಸೇರಿ ನಾನಾ ಇಲಾಖೆಗಳಲ್ಲಿ ಅಪಾಯಕಾರಿ ಕೆಲಸ ಮಾಡುವವರು ಸದ್ಯ ಬಹುತೇಕ ಹೊರಗುತ್ತಿಗೆ ನೌಕರರೇ ಆಗಿದ್ದು, ಕಾನೂನುಬಾಹಿರವಾಗಿದೆ.

ಈ ಹೊರಗುತ್ತಿಗೆ ನೌಕರರನ್ನು ಸಕ್ರಮಗೊಳಿಸಿ ಅಥವಾ ನೇರ ನೇಮಕದ ಮೂಲಕ ಕಾಯಂ ನೌಕರರು ಇರಬೇಕು. ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಹೊರಗುತ್ತಿಗೆ ಅವಲಂಬನೆಯು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಸ್ಪಷ್ಟಪಡಿಸಿತ್ತು.

Read More
Next Story