
ಮನೆ ಬಾಡಿಗೆ ಜಗಳಕ್ಕೆ ಇನ್ಮುಂದೆ ಜೈಲುವಾಸ ಇಲ್ಲ, ದಂಡ ಮಾತ್ರ
ಬಾಡಿಗೆ ವಿವಾದಗಳು 'ನಿಯಂತ್ರಣಾಧಿಕಾರಿ' ಹಂತದಲ್ಲೇ ಮುಗಿಯುವುದರಿಂದ ಕೋರ್ಟ್‌ಗಳ ಹೊರೆ ಕಡಿಮೆಯಾಗುತ್ತದೆ. ಕೇಂದ್ರದ 'ಜನ ವಿಶ್ವಾಸ ಕಾಯ್ದೆ' ಮಾದರಿಯಲ್ಲಿ ರಾಜ್ಯ ಹಳೆಯ ಕಾನೂನುಗಳನ್ನು ಬದಲಾಯಿಸಿದೆ.
ರಾಜ್ಯ ಸರ್ಕಾರವು ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 1999ರ ಕರ್ನಾಟಕ ಬಾಡಿಗೆ ಕಾಯ್ದೆಗೆ ತಿದ್ದುಪಡಿಗಳನ್ನು ತಂದಿದ್ದು, "ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025" (THE KARNATAKA RENT (AMENDMENT) BILL, 2025) ಅನ್ನು ಉಭಯ ಸದನದಲ್ಲಿ ಅಂಗೀಕರಿಸಲಾಗಿದೆ.
ಈ ಕಾಯ್ದೆಯನ್ವಯ ಬಾಡಿಗೆದಾರರು ಉಪ-ಬಾಡಿಗೆಗೆ ನೀಡುವಂತಿಲ್ಲ. ಒಂದು ವೇಳೆ ಉಪ ಬಾಡಿಗೆಗೆ ನೀಡಿದರೆ 50ಸಾವಿರ ರೂ. ಅಥವಾ ಪಡೆಯಬಹುದಾದ ಬಾಡಿಗೆಯ ಎರಡರಷ್ಟು ಮೊತ್ತಕ್ಕೆ (ಯಾವುದು ಹೆಚ್ಚೋ ಅದು) ಹೆಚ್ಚಿಸಲಾಗುವುದು. ಅಲ್ಲದೇ, ಭೂಮಾಲೀಕರು ಸುಳ್ಳು ಅಫಿಡವಿಟ್ ನೀಡಿದರೆ ಹಿಂದೆ ಇದ್ದ ಜೈಲು ಶಿಕ್ಷೆಯ ಬದಲಾಗಿ 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
ಸಣ್ಣ ಪುಟ್ಟ ಅಪರಾಧಗಳನ್ನು ಕ್ರಿಮಿನಲ್ ವ್ಯಾಪ್ತಿಯಿಂದ ಹೊರಗಿಟ್ಟು ಕೇವಲ ಹಣಕಾಸಿನ ದಂಡ ವಿಧಿಸುವ ಮೂಲಕ ಬಗೆಹರಿಸುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ. ಮನೆ ಬಾಡಿಗೆ ಕೊಡುವುದು ಮತ್ತು ಪಡೆಯುವುದು ನಮ್ಮ ದೈನಂದಿನ ಜೀವನದ ಒಂದು ಭಾಗ.
ಆದರೆ, ಸಣ್ಣ ಪುಟ್ಟ ವಿಚಾರಗಳಿಗೂ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಮನಸ್ತಾಪ ಉಂಟಾಗಿ, ಅದು ಪೊಲೀಸ್ ಠಾಣೆ ಅಥವಾ ಕೋರ್ಟ್ ಮೆಟ್ಟಿಲೇರುವ ಸಂದರ್ಭಗಳನ್ನು ನಾವು ನೋಡಿದ್ದೇವೆ. ಹಳೆಯ ಕಾನೂನಿನ ಪ್ರಕಾರ, ಬಾಡಿಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದರೆ 'ಜೈಲು ಶಿಕ್ಷೆ' ವಿಧಿಸುವ ಅವಕಾಶವಿತ್ತು. ಆದರೆ, ಇದನ್ನು ಬದಲಾಯಿಸಲಾಗಿದೆ. ಇನ್ನು ಮುಂದೆ ಬಾಡಿಗೆಗೆ ಸಂಬಂಧಿಸಿದ ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಇರುವುದಿಲ್ಲ. ಬದಲಾಗಿ, ಹಣಕಾಸಿನ ದಂಡಗಳನ್ನು ಪರಿಷ್ಕರಿಸುವ ಮೂಲಕ ಕಾನೂನು ಪಾಲನೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಘರ್ಷಣೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಬಾಡಿಗೆ ತಿದ್ದುಪಡಿ ವಿಧೇಯಕವನ್ನು ತಂದಿದೆ.
ಈ ತಿದ್ದುಪಡಿಯಿಂದ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಹಾಗೂ ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯ ಆಗುತ್ತವೆ. ಹೊಸ ನಿಯಮದಂತೆ ಬಾಡಿಗೆದಾರರಿಗೆ ಮಾತ್ರವಲ್ಲ, ಮಾಲೀಕರಿಗೂ ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡ ಬೀಳಲಿದೆ. ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಜಗಳಗಳು ಕೂಡಾ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ವಿಧೇಯಕದಲ್ಲಿ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವಿವಾದಗಳನ್ನು ಬಗೆಹರಿಸಲು, ಪಾರದರ್ಶಕತೆ ತರಲು ಪ್ರಮುಖ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.
ಹಳೆಯ ಕಾನೂನಿಗೂ, ಹೊಸ ತಿದ್ದುಪಡಿಗೂ ಇರುವ ವ್ಯತ್ಯಾಸ
1999ರ ಹಳೆಯ ಕಾಯ್ದೆಯ ಪ್ರಕಾರ, ಬಾಡಿಗೆ ಕರಾರು ನೋಂದಣಿ ಮಾಡಿಸದಿದ್ದರೆ ಅಥವಾ ಹೆಚ್ಚು ಹಣ ಪಡೆದರೆ, ಅದನ್ನು ಒಂದು 'ಕ್ರಿಮಿನಲ್ ಅಪರಾಧ' ಎಂದು ಪರಿಗಣಿಸಲಾಗುತ್ತಿತ್ತು. ತಪ್ಪಿತಸ್ಥರಿಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಇದರಿಂದಾಗಿ ಅನೇಕರು ಭಯದಿಂದ ಅಥವಾ ಕೋರ್ಟ್ ಅಲೆದಾಟದ ಚಿಂತೆಯಿಂದ ಕಂಗಾಲಾಗುತ್ತಿದ್ದರು. ಹೊಸ ತಿದ್ದುಪಡಿಯ ಪ್ರಕಾರ, ಇಂತಹ ಸಣ್ಣ ಪುಟ್ಟ ತಪ್ಪುಗಳಿಗೆ ಜೈಲು ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಅದರ ಬದಲಿಗೆ, ಹಣಕಾಸಿನ ದಂಡವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಹಿಂದೆ ಬಾಡಿಗೆಗೆ ಸಂಬಂಧಿಸಿದ ದಂಡ ವಿಧಿಸಲು ಅಥವಾ ಸಣ್ಣ ಜಗಳಗಳಿಗೂ ನ್ಯಾಯಾಲಯಕ್ಕೆ ಹೋಗಬೇಕಿತ್ತು. ಅಲ್ಲಿ ಕೇಸ್ ಇತ್ಯರ್ಥವಾಗಲು ವರ್ಷಗಳೇ ಬೇಕಾಗುತ್ತಿತ್ತು. ಹೊಸ ಕಾಯ್ದೆಯ ಪ್ರಕಾರ, ಬಾಡಿಗೆಗೆ ಸಂಬಂಧಿಸಿದ ಈ ದಂಡಗಳನ್ನು ವಿಧಿಸುವ ಅಧಿಕಾರವನ್ನು ನೇರವಾಗಿ 'ಬಾಡಿಗೆ ನಿಯಂತ್ರಣಾಧಿಕಾರಿಗಳಿಗೆ' ನೀಡಲಾಗಿದೆ. ಇವರು ಕಂದಾಯ ಅಧಿಕಾರಿಗಳಾಗಿರುತ್ತಾರೆ. ಇನ್ಮುಂದೆ ವಕೀಲರನ್ನು ಹಿಡಿದು ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಈ ಅಧಿಕಾರಿಗಳೇ ವಿಚಾರಣೆ ನಡೆಸಿ, ಎಷ್ಟು ದಂಡ ಕಟ್ಟಬೇಕು ಎಂದು ತೀರ್ಮಾನಿಸುತ್ತಾರೆ. ಇದರಿಂದ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯುತ್ತವೆ.
ಬಾಡಿಗೆದಾರರಿಗೆ ನೀರು, ವಿದ್ಯುತ್‌ನಂತಹ ಅಗತ್ಯ ಸೇವೆಗಳನ್ನು ಕಡಿತಗೊಳಿಸಿದರೆ ಹಿಂದೆ ಇದ್ದ 3 ತಿಂಗಳ ಬಾಡಿಗೆಗೆ ಸಮಾನವಾದ ದಂಡ ಅಥವಾ ಜೈಲು ಶಿಕ್ಷೆಯನ್ನು ಬದಲಾಯಿಸಿ, ಕೇವಲ 1,000 ರೂ. ದಂಡ (ದೈನಂದಿನ) ಅಥವಾ 3 ತಿಂಗಳ ಬಾಡಿಗೆಗೆ ಸಮನಾದ ದಂಡವನ್ನು ವಿಧಿಸಲಾಗುತ್ತದೆ.
ದಂಡದ ಮೊತ್ತ ತಾನಾಗಿಯೇ ಏರಿಕೆಯಾಗುವ "ಸ್ಮಾರ್ಟ್ ರೂಲ್"
ಸಾಮಾನ್ಯವಾಗಿ ಹಳೆಯ ಕಾನೂನುಗಳಲ್ಲಿ 50 ರೂ. ಅಥವಾ 100 ರೂ. ದಂಡವಿರುತ್ತಿತ್ತು. ಇಂದಿನ ಕಾಲಕ್ಕೆ ಆ ಹಣಕ್ಕೆ ಬೆಲೆಯೇ ಇಲ್ಲ. ಇದನ್ನು ಮನಗಂಡು ಸರ್ಕಾರ ಒಂದು ಹೊಸ ನಿಯಮ ತಂದಿದೆ. ಈ ಕಾಯ್ದೆ ಜಾರಿಗೆ ಬಂದ ನಂತರ, ಪ್ರತಿ 3 ವರ್ಷಗಳಿಗೊಮ್ಮೆ ದಂಡದ ಕನಿಷ್ಠ ಮೊತ್ತವು ಶೇಕಡಾ 10 ರಷ್ಟು ಹೆಚ್ಚಾಗುತ್ತದೆ. ಉದಾಹರಣೆಗೆ ಇಂದು 2 ಸಾವಿರ ಇರುವ ದಂಡ, 3 ವರ್ಷಗಳ ನಂತರ ತಾನಾಗಿಯೇ 2,200 ರೂ. ಆಗುತ್ತದೆ. ಇದರಿಂದ ಕಾನೂನಿನಲ್ಲಿ ಪದೇ ಪದೇ ತಿದ್ದುಪಡಿ ತರುವ ಅಗತ್ಯವಿರುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ದಂಡದ ಮೊತ್ತವೂ ಏರುತ್ತಾ ಹೋಗುವುದರಿಂದ ಜನರು ಕಾನೂನಿಗೆ ಬೆಲೆ ಕೊಡುತ್ತಾರೆ.
ಬಾಡಿಗೆ ಒಪ್ಪಂದ ಅನ್‌ಲೈನ್‌ನಲ್ಲಿ ನೋಂದಣಿ
ಬಾಡಿಗೆ ಒಪ್ಪಂದಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ಸರ್ಕಾರವು ಪೋರ್ಟಲ್ ಪ್ರಾರಂಭಿಸಲಿದೆ. ಇದರಿಂದ ಬಾಡಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಕಡಿಮೆ ಮಾಡಬಹುದು. ಅಲ್ಲದೆ, ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಬಹುದು. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅನೌಪಚಾರಿಕ ಒಪ್ಪಂದಗಳು ನಡೆಯುತ್ತವೆ. ಇವುಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವ ಮೊದಲು, ಸೂಕ್ತ ನೋಟಿಸ್ ನೀಡಬೇಕು. ಇದರಿಂದ ಬಾಡಿಗೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಕಡಿಮೆ ಬಾಡಿಗೆಗೆ ಮನೆ ನೀಡುವವರಿಗೆ ಸರ್ಕಾರ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ನೀಡಲು ಚಿಂತಿಸುತ್ತಿದೆ. ಇದರಿಂದ ಕಡಿಮೆ ಬೆಲೆಯ ಮನೆಗಳು ಲಭ್ಯವಾಗುವಂತೆ ನೋಡಿಕೊಳ್ಳಬಹುದು.ಬಾಡಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬೇಗನೆ ಇತ್ಯರ್ಥಪಡಿಸಲು, ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಬೇಗನೆ ಮುಗಿಸಬಹುದು. ಮನೆ ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರಿಗೂ ಇದು ಅನುಕೂಲವಾಗುತ್ತದೆ.
ಕಂಪನಿಗಳಿಗೂ ಹೊಣೆಗಾರಿಕೆ
ಬಾಡಿಗೆದಾರ ಅಥವಾ ಮಾಲೀಕರು ಒಬ್ಬ ವ್ಯಕ್ತಿಯಾಗಿದ್ದಾಗ ಮಾತ್ರವಲ್ಲ, ಒಂದು 'ಕಂಪನಿ'ಯಾಗಿದ್ದಾಗಲೂ ಈ ನಿಯಮ ಅನ್ವಯಿಸುತ್ತದೆ. ಕಂಪನಿಯ ನಿರ್ದೇಶಕರು ಅಥವಾ ಮ್ಯಾನೇಜರ್‌ಗಳು ನಿಯಮ ಉಲ್ಲಂಘನೆಗೆ ಹೊಣೆಗಾರರಾಗಿರುತ್ತಾರೆ ಮತ್ತು ದಂಡ ಕಟ್ಟಬೇಕಾಗುತ್ತದೆ. ಇಲ್ಲಿ "ಅಪರಾಧ" ಎಂಬ ಪದದ ಬದಲು "ಉಲ್ಲಂಘನೆ" ಎಂದು ಬಳಸಲಾಗಿದೆ. ಅಂದರೆ ಕಂಪನಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ, ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಭಯಮುಕ್ತ ವಾತಾವರಣ
"ನನ್ನ ಮನೆಯವನು ಸಣ್ಣ ವಿಷಯಕ್ಕೆ ಕೇಸ್ ಹಾಕಿ ಜೈಲಿಗೆ ಕಳಿಸ್ತಾನೇನೋ" ಎಂಬ ಭಯ ಬಾಡಿಗೆದಾರರಿಗೆ ಇರುವುದಿಲ್ಲ. ಹಾಗೆಯೇ, "ನಾನು ಬಾಡಿಗೆಗೆ ಮನೆ ಕೊಟ್ಟರೆ ನಾನೇ ಜೈಲಿಗೆ ಹೋಗಬೇಕಾಗುತ್ತೇನೋ" ಎಂಬ ಭಯ ಮಾಲೀಕರಿಗೂ ಇರುವುದಿಲ್ಲ. ಸಿವಿಲ್ ವಿಷಯಗಳನ್ನು ಸಿವಿಲ್ ಆಗಿಯೇ ಬಗೆಹರಿಸುವುದು ವಿಧೇಯಕ ಉದ್ದೇಶವಾಗಿದೆ. ಜೈಲು ಶಿಕ್ಷೆ ತೆಗೆದ ತಕ್ಷಣ ಜನ ಕಾನೂನು ಮೀರುತ್ತಾರೆ ಎಂದುಕೊಳ್ಳುವಂತಿಲ್ಲ. ಏಕೆಂದರೆ, ದಂಡದ ಮೊತ್ತವನ್ನು 2,000 ದಿಂದ 50,000 ರೂಪಾಯಿಗಳವರೆಗೆ ಏರಿಸಿರುವುದರಿಂದ, ಆರ್ಥಿಕ ನಷ್ಟದ ಭಯ ಜನರಲ್ಲಿ ಶಿಸ್ತು ಮೂಡಿಸುತ್ತದೆ.
ಕೋರ್ಟ್‌ಗಳಲ್ಲಿ ಲಕ್ಷಾಂತರ ಕೇಸ್‌ಗಳು ಬಾಕಿ ಇವೆ. ಬಾಡಿಗೆಯಂತಹ ಸಣ್ಣ ವಿಷಯಗಳೂ ಕೋರ್ಟ್‌ಗೆ ಹೋದರೆ ಮುಖ್ಯವಾದ ಕೊಲೆ, ದರೋಡೆ ಕೇಸ್‌ಗಳ ವಿಚಾರಣೆಗೆ ಸಮಯ ಸಿಗುವುದಿಲ್ಲ. ಈಗ ಬಾಡಿಗೆ ವಿವಾದಗಳು 'ನಿಯಂತ್ರಣಾಧಿಕಾರಿ' ಹಂತದಲ್ಲೇ ಮುಗಿಯುವುದರಿಂದ ಕೋರ್ಟ್‌ಗಳ ಹೊರೆ ಕಡಿಮೆಯಾಗುತ್ತದೆ. ಕೇಂದ್ರ ಸರ್ಕಾರದ 'ಜನ ವಿಶ್ವಾಸ ಕಾಯ್ದೆ'ಯ ಮಾದರಿಯಲ್ಲಿ ರಾಜ್ಯ ಸರ್ಕಾರವು ಹಳೆಯ ಕಾನೂನುಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿದೆ.

