No matter how big the builder, clear the encroachment in Rajakaluve: CM Siddaramaiah
x

ರಾಜಕಾಲುವೆಗಳನ್ನು ಸಿಎಂ ಸಿದ್ದರಾಮಯ್ಯ ವೀಕ್ಷಿಸಿದರು.

Bangalore Rain| ಎಷ್ಟೇ ದೊಡ್ಡ ಬಿಲ್ಡ್‌ರ್‌ ಆದರೂ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಳೆಪೀಡಿತ ಪ್ರದೇಶಗಳಲ್ಲಿ ತಳಮಹಡಿಯ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಗರ ಯೋಜನೆಯಲ್ಲಿ ಬದಲಾವಣೆ ತರುವಂತೆ ಅಧಿಕಾರಿಗಳಿಗೆ ತಿಳಿಸಿದರು.


ರಾಜಕಾಲುವೆ ಒತ್ತುವರಿ ಆಗಿರುವುದನ್ನು ನೋಡಿಕೊಂಡು‌ ಕುಳಿತಿದ್ದೀರಾ? ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ದೊಡ್ಡ ಬಿಲ್ಡರ್ ಆಗಿದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರುನುಗ್ಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ಮಳೆಹಾನಿ ಪ್ರದೇಶಗಳಿಗೆ ಬುಧವಾರ(ಮೇ21) ರಂದು ಭೇಟಿ ನೀಡಿ ಸಿಎಂ ಪರಿಶೀಲನೆ ನಡೆಸಿದರು.

ಯಲಹಂಕದಲ್ಲಿನ ರಾಜಕಾಲುವೆ ಒತ್ತುವರಿಯಾದ ಸ್ಥಳಕ್ಕೆ ಭೇಟಿ ನೀಡಿದಾಗ ಮಾನ್ಯತಾ ಟೆಕ್, ಇಬ್ಸು, ಮ್ಯಾನ್ ಫೋ ಹಾಗೂ ಕಾರ್ಲೆ ಖಾಸಗಿ ಬಿಲ್ಡರ್‌ಗಳು ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ಅಧಿಕಾರಿಗಳು ವಿವರಿಸಿದರು. ಈ ವೇಳೆ ನೋಟಿಸ್ ಕೊಟ್ಟಿಲ್ಲವೇ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ ಅವರು ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸುವಂತೆ ತಿಳಿಸಿದರು.

ಹೆಚ್‌ಬಿಆರ್‌ ಲೇಔಟ್‌ನಲ್ಲಿ ತುಂಬಿ ಹರಿಯುತ್ತಿರುವ ರಾಜಕಾಲುವೆ ಪ್ರದೇಶ ವೀಕ್ಷಿಸಿದ ಅವರು, ನೀರು ಹರಿವಿನ ಹಾದಿಯಲ್ಲಿ ರೈಲ್ವೇ ಟ್ರಾಕ್ ಇರುವ ಕಡೆ ಬಾಟಲ್ ನೆಕ್ ಸರಿ ಪಡಿಸಲು ಹಾಗೂ ವಿಸ್ತರಿಸಲು ಸೂಚನೆ ನೀಡಿದರು. ಮಳೆಪೀಡಿತ ಪ್ರದೇಶಗಳಲ್ಲಿ ತಳಮಹಡಿಯ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಗರ ಯೋಜನೆಯಲ್ಲಿ ಬದಲಾವಣೆ ತರುವಂತೆ ಸೂಚನೆ ನೀಡಿದರು.

ವಡ್ಡರಪಾಳ್ಯ ಲೇಔಟ್, ಗೆದ್ದಲಹಳ್ಳಿಯ ರಾಜಕಾಲುವೆ ವಿಸ್ತೀರ್ಣ 29 ಮೀಟರ್. ಆದರೆ ಗೆದ್ದಲಹಳ್ಳಿಯ ಕಾಲುವೆ ಬಾಟಲ್ ನೆಕ್ ಕೇವಲ ಎಂಟು ಮೀಟರ್ ಇದೆ. ಆದ್ದರಿಂದ ಮೇಲಿನಿಂದ ರಾಜಕಾಲುವೆಯಲ್ಲಿ ಹರಿದು ಬರುವ ನೀರು ಈ ಬಾಟಲ್ ನೆಕ್‌ನಲ್ಲಿ ಹೆಚ್ಚಾಗಿ ಸಾಯಿ ಲೇಔಟ್‌ಗೆ ನುಗ್ಗುತ್ತಿದೆ ಎನ್ನುವುದು ಸಮಸ್ಯೆ. ಆದ್ದರಿಂದ ಎಂಟು ಮೀಟರ್ ಬಾಟಲ್‌ ನೆಕ್ ಇರುವ ರೈಲ್ವೆ ವೆಂಟ್‌ನ್ನು ವಿಸ್ತರಿಸಲು ಸೂಚನೆ ನೀಡಲಾಯಿತು.

ಮಂಗಳವಾರ(ಮೇ20)ರಂದು ದಿನ ರೈಲ್ವೆಇಲಾಖೆ ವೆಂಟ್ ವಿಸ್ತರಣೆ ಮಾಡಲು ಬಿಡಿಎಗೆ ಅನುಮತಿ ನೀಡಿದ್ದಾರೆ. ಜತೆಗೆ ಕಾಲುವೆ ನಿರ್ವಹಣೆ ಮಾಡದ ಗುತ್ತಿಗೆದಾರರಿಂದ ವಿವರಣೆ ಕೇಳುವಂತೆ ಸೂಚನೆ ನೀಡಿದರು. ಮಳೆ ಮತ್ತು ಪ್ರವಾಹ ಪೀಡಿತ ಸ್ಥಳ ವೀಕ್ಷಿಸಿದ ಮುಖ್ಯಮಂತ್ರಿಗಳು, ʼಸಾಯಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದʼ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಿ ತಕ್ಷಣಕ್ಕೆ ಸಾಧ್ಯವಿರುವ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಪಣತ್ತೂರ್ ರೈಲ್ವೇ ಬ್ರಿಡ್ಜ್ ನಲ್ಲಿ ಸಾರ್ವಜನಿಕರ ಮತ್ತು ಸ್ಥಳೀಯ ನಿವಾಸಿಗಳ ಜತೆ ಚರ್ಚೆ ನಡೆಸಿದರು. ಸಮಸ್ಯೆ ಬಗ್ಗೆ ಅಧಿಕಾರಿಗಳ ಜತೆ ಸಮಗ್ರ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, 350 ಮೀಟರ್ ಉದ್ದದ ಒಳಚರಂಡಿಯನ್ನು ನಿರ್ಮಿಸಿ ರಾಜಕಾಲುವೆಗೆ ಸಂಪರ್ಕ ಕೊಡಬೇಕು. ರೈಲ್ವೆ ಇಲಾಖೆ 3 ತಿಂಗಳ ಒಳಗೆ ಕಾಮಗಾರಿ ಮುಗಿಸುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಇಂಧನ ಸಚಿವ ಕೆ.ಜೆ. ಜಾರ್ಜ್‌, ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ, ಬಿಬಿಎಂಪಿ ಆಯಕ್ತ ಮಹೇಶ್ವರ್‌ ರಾವ್‌, ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್‌ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.

Read More
Next Story