ಕೋಳಿ ಅಂಕವಿಲ್ಲ, ಆನ್‌ಲೈನ್ ಬೆಟ್ಟಿಂಗ್ ಇಲ್ಲ; ಕರಾವಳಿಯಲ್ಲಿ ಈಗ ಮಟ್ಕಾ ಬಿಡ್ ಗ್ಯಾಂಬ್ಲಿಂಗ್!
x

ಕೋಳಿ ಅಂಕವಿಲ್ಲ, ಆನ್‌ಲೈನ್ ಬೆಟ್ಟಿಂಗ್ ಇಲ್ಲ; ಕರಾವಳಿಯಲ್ಲಿ ಈಗ ಮಟ್ಕಾ ಬಿಡ್ ಗ್ಯಾಂಬ್ಲಿಂಗ್!

ಬೆಳಗ್ಗೆಯಿಂದ ರಾತ್ರಿವರೆಗೂ ಈ ಮಟ್ಕಾದಲ್ಲಿ ಪಾಲುಗೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಕೇರಳಮೂಲದ ವ್ಯಕ್ತಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕ ಭಾರೀ ಜನಪ್ರಿಯ ಮತ್ತು ಕಂಬಳದ ಹಾಗೆಯೇ ಒಂದು ಜನಪ್ರಿಯ ಕ್ರೀಡೆ ಎಂಬ ಮಾತಿತ್ತು. ಆದರೆ ಕೋಳಿ ಅಂಕದಲ್ಲಿ (ಕೋಳಿ ಕಾಳಗ ) ಜೂಜಾಟ ನಡೆಯುತ್ತಿದೆ ಎಂಬ ಕಾರಣಕ್ಕೆ ಜಿಲ್ಲಾ ಎಸ್ಪಿ ಕೆ. ಅರುಣ್ ಅದಕ್ಕೆ ನಿರ್ಬಂಧ ಹೇರಿದರು. ಆದರೆ ಅದರ ಬದಲಾಗಿ ಈಗ ಮಟ್ಕಾ ಮಾದರಿಯಲ್ಲಿ ಮೊಬೈಲ್ ಫೋನ್ ಬಳಸಿ ನಂಬರ್ ಹಾಕುವ ದಂಧೆ ಬಲು ಜನಪ್ರಿಯವಾಗಿದೆ!

ಬೆಳಗ್ಗೆ ಹತ್ತು ಗಂಟೆಯ ಡ್ರಾ ದಿಂದ ಹಿಡಿದು ರಾತ್ರಿ ಎಂಟೂವರೆ ವರೆಗೂ ಈ ಮಟ್ಕಾದಲ್ಲಿ ಪಾಲುಗೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕೇರಳಮೂಲದ ವ್ಯಕ್ತಿಗಳು ನಡೆಸುತ್ತಿದ್ದಾರೆ ಎನ್ನಲಾಗುವ ಈ ಆಟಕ್ಕೆ ಜಿಲ್ಲೆಯ ಗಲ್ಲಿಗಳಲ್ಲಿ ಎಜಂಟರು ಇದ್ದಾರೆ. ಬೆಳಗ್ಗೆ ಬೇಗನೆ ಕೆಲಸಕ್ಕೆ ಹೊರಡುವ ಕೂಲಿಕಾರ್ಮಿಕರು, ದಿನಗಟ್ಟಲೆ ವೈನ್ ಶಾಪ್, ಬಾರ್ ಗಳಲ್ಲಿ ಕಾಲಕಳೆಯುವ ಮಂದಿ ಮಾತ್ರವಲ್ಲದೇ, ದಿನವಿಡೀ ಬ್ಯುಸಿ ಇರುವ ವರ್ತಕರು, ಸರಕಾರಿ/ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಕೂಡಾ ಈ ಬಿಡ್ಡಿಂಗ್ ದಂಧೆಯಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ ಇದರಲ್ಲಿ ತೊಡಗಿರುವವರು ಬಹುಪಾಲು ಮಂದಿ ಯುವಜನತೆ. ಏಕೆಂದರೆ ಆನ್ ಲೈನ್ ಬೆಟ್ಟಿಂಗ್ ಮತ್ತು ಕೋಳಿ ಅಂಕ ನಿಂತ ಮೇಲೆ ಈ ಮಂದಿಗೆ ಸುಲಭದಲ್ಲಿ ಹಣ ಮಾಡುವ ಹಾಗೆಯೇ ಕಳೆದುಕೊಳ್ಳುವ ಪ್ಲಾನ್ ಬೇರೊಂದಿಲ್ಲ, ಎಂಬಂತಾಗಿದೆ.

ಏನಿದು ಮಟ್ಕಾ ಬಿಡ್ಡಿಂಗ್?

ಬೆಳಿಗ್ಗೆ MS, KUMBLE,ಸೀತಂಗೋಳಿ ಯಿಂದ ಶುರುವಾಗಿ, ರಾತ್ರಿ ನಾಗಾಲ್ಯಾಂಡ್ ಲಾಟರಿ ಡ್ರಾ ವರೆಗೂ ಈ ಆಟ ನಡೆಯುತ್ತದೆ. ಪ್ರತೀ ಲಾಟರಿ ಟಿಕೆಟ್ ನ ಕೊನೆಯ ಎರಡು ನಂಬರ್ ಗಳು ಹಣ ತಂದುಕೊಡುತ್ತವೆ. ಕೊನೆಯ ಎರಡು ನಂಬರ್ ಗಳನ್ನು ಊಹಿಸಿ ಕನಿಷ್ಠ 10 ರೂ. ಹೂಡಿದರೆ 700 ರೂ. ಸಿಗುತ್ತದೆ. ಇದರಲ್ಲಿ ಬಾಕ್ಸ್, ಸ್ಟ್ರೈಟ್, ಕ್ಲೋಸಿಂಗ್, ಎಂಬ ರೀತಿಯ ಆಟಗಳಿದ್ದು, 10 ರೂ.ಗಳಿಂದ ಸಾವಿರ ಗಟ್ಟಲೆ ವರೆಗೂ ಹೂಡಿಕೆ ಮಾಡಬಹುದು. ಎಲ್ಲಾ ಹೂಡಿಕೆಗಳೂ ಅರ್ಧ ಅಥವಾ ಒಂದು ಗಂಟೆಯಲ್ಲಿ ವಿಜಯಿಯಾದವನನ್ನು ಮತ್ತು ಸೋತವನನ್ನು ನಿರ್ಧಾರ ಮಾಡುತ್ತವೆ.

ಮೊಬೈಲ್ ಫೋನ್ ನಲ್ಲಿ ಬರುವ ಸಂದೇಶದಂತೆ ಕೊನೆಯ ಒಂದಕಿ ಊಹಿಸಿ ಬಿಡ್ ಮಾಡಿದರೂ 10 ರೂಗಳಿಗೆ 70 ರೂ. ಸಿಗುತ್ತದೆ. ಬಹುಪಾಲು ಮಂದಿ ಒಂದೇ ದಿನದಲ್ಲಿ ಹಲವು ಆಟ ಆಡಿ ಸಾವಿರಾರು ಗಳಿಸಿಕೊಂಡಂತೆಯೇ, ಕಳೆದುಕೊಳ್ಳುತ್ತಾರೆ ಕೂಡಾ.

ಕೋಳಿ ಅಂಕದಲ್ಲಿ ನುರಿತರಾದ ಅಡ್ಕಸ್ಥಳ ನಿವಾಸಿ ಬಾಬು ಪೂಜಾರಿ ಹೇಳುವಂತೆ, ಇತ್ತೀಚಿನ ದಶಕಗಳಲ್ಲಿ ಯುವಜನರು ಹೆಚ್ಚಾಗಿ ಕೋಳಿ ಅಂಕದಲ್ಲಿ ಜೂಜು ಆಡಲು ಬರುತ್ತಿದ್ದರು. ಎಲ್ಲರೂ ಇದೊಂದು ಸುಲಭದಲ್ಲಿ ಹಣ ಮಾಡುವ ವಿಧಾನ ಎಂದು ತಿಳಿದಿದ್ದರು. ಆದರೆ ವಾಸ್ತವದಲ್ಲಿ ಕೋಳಿ ಅಂಕ ಒಂದು ಮೋಜಿನ ಕ್ರೀಡೆಯಾಗಿದ್ದು, ಗೆಲ್ಲುವ ಕೋಳಿ ಸಾಕಿದವನ ಪ್ರತಿಷ್ಠೆಯ ವಿಚಾರ ಆಗಿತ್ತು. ಯುವಜನರು ಹಣ ಮಾಡುವ ಉದ್ದೇಶದಿಂದ ಕೋಳಿ ಅಂಕಕ್ಕೆ ಬರಲಾರಂಬಿಸಿದ ಮೇಲೆ ಈ ಕ್ರೀಡೆಯ ಮಹತ್ವ ಕೆಟ್ಟಿತು. ಈಗ ಅಂಕ ನಡೆಸದ ಪರಿಸ್ಥಿತಿ ತಲುಪಿದೆ. "ಹಾಗಾಗಿ ಯುವಕರು ಮಟ್ಕಾ ಬಿಡ್ಡಿಂಗ್ ನ ಮೊರೆ ಹೋಗಿ, ವ್ಯಸನಿಗಾಳಾಗಿದ್ದಾರೆ" ಎನ್ನುತ್ತಾರೆ.

ಕೇರಳ ಮೂಲ!

ಕರ್ನಾಟಕದಲ್ಲಿ ಲಾಟರಿ ಟಿಕೆಟ್ ನಿಷೇಧ ಇದ್ದರೂ ಕೇರಳದಲ್ಲಿ ಸರಕಾರ ಪ್ರಾಯೋಜಿತ ಲಾಟರಿ ಇರುವ ಕಾರಣ, ಕೇರಳ ಮೂಲದ ವ್ಯಕ್ತಿಗಳು ಕರಾವಳಿ ಕರ್ನಾಟಕದಲ್ಲಿ ಈ ವಹಿವಾಟು ನಡೆಸುತ್ತಿದ್ದಾರೆ.ಪ್ರತಿಯೊಂದು ಲಾಟರಿ ಡ್ರಾ ಅನುಸರಿಸಿ ಈ ಆಟ ನಡೆಯುತ್ತಿದೆ.

ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ 100ಕ್ಕೂ ಅಧಿಕ ಏಜೆಂಟ್ ಗಳಿದ್ದು, ಮೊಬೈಲ್ ಫೋನ್ ಬಳಸಿಕೊಂಡು, ಆಯ್ದು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಮಂಗಳೂರಿನಲ್ಲಿ ನಂದಿಗುಡ್ಡ, ಮಂಕಿಸ್ಟ್ಯಾಂಡ್,ಕುದ್ರೋಳಿ, ಬಂದರ್, ಮಂಗಳಾದೇವಿ, ಬೈಕಂಪಾಡಿ,ಸುರತ್ಕಲ್ ಗಳಲ್ಲಿ ಪ್ರಮುಖ ಏಜೆಂಟ್ ಗಳಿದ್ದರೆ, ಪುತ್ತೂರು, ಬಂಟ್ವಾಳ, ವಿಟ್ಲ, ತಲಪಾಡಿ ಗಳಲ್ಲಿ ಕೂಡಾ ಅಲ್ಲಲ್ಲಿ ನಂಬರ್ ಗೇಮ್ ನಡೆಸುವವರಿದ್ದಾರೆ. ಇದು ಗಡಿನಾಡು ಕಾಸರಗೋಡು ಮೂಲಕ ಕರ್ನಾಟಕ ಕರಾವಳಿಗೆ ಪ್ರವೇಶ ಪಡೆದ ದಂಧೆಯಾಗಿದ್ದು, ಬಹುತೇಕ ಮಂದಿಗೆ ದಶಕಗಳ ಹಿಂದಿನ 'ಸಿಂಗಲ್ ನಂಬರ್'ಲಾಟರಿ ಯನ್ನು ನೆನಪಿಸುವಂತಾಗಿದೆ. ಸಿಂಗಲ್ ನಂಬರ್ ಲಾಟರಿ ಅರ್ಧ ಗಂಟೆಗೊಂದು ಡ್ರಾ ಆಗುತ್ತಿತ್ತು.ಇದರಲ್ಲಿ ಹೂಡಿಕೆ ಮಾಡಿದ್ದ ಬಹುತೇಕ ಮಂದಿ ಸಾಲಗಾರರಾಗಿ, ಆಸ್ತಿ ಮಾರಿ, ಕುಟುಂಬ ಸಂಸಾರ ಕಳೆದುಕೊಂಡು ಕೊನೆಗೆ ಆತ್ಮಹತ್ಯೆಯ ದಾರಿಹಿಡಿದ ಉದಾಹರಣೆ ಗಳಿವೆ. ಕೊನೆಗೆ ರಾಜ್ಯ ಸರಕಾರ ಒಂದಂಕಿ ಲಾಟರಿ ಯನ್ನು ನಿಷೇಧ ಮಾಡಿತ್ತು.

ಇದೀಗ ಮಟ್ಕಾ ಬಿಡ್ಡಿಂಗ್ ಕೂಡಾ ಅದೇ ರೀತಿ ಜನರನ್ನು ಮೋಸಮಾಡುತ್ತದೆಯೋ ಎಂಬ ಕಾಳಜಿ ಹಲವರದ್ದಾಗಿದೆ.

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಕೆ. ಅರುಣ್, "ಲಾಟರಿ ಆಧಾರದಲ್ಲಿ ಬೆಟ್ -ಬಿಡ್ ನಡೆಯುವುದು ಗಮನಕ್ಕೆ ಬಂದಿದೆ. ಎಲ್ಲಾ ಠಾಣೆಗಳ ಮಟ್ಟದಲ್ಲಿ ಇದರ ಮೇಲೆ ಗಮನಹರಿಸಲು ಸೂಚಿಸಲಾಗಿದೆ. ಸಾರ್ವಜನಿಕರು ನೀಡುವ ದೂರನ್ನು ಕೂಡಾ ಗಮನಿಸಲಾಗುವುದು," ಎಂದು ಹೇಳಿದ್ದಾರೆ.

Read More
Next Story