
ಸಚಿವ ಶರಣಪ್ರಕಾಶ ಪಾಟೀಲ
Medical Seats | ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ಬ್ರೇಕ್; ಅಂದಾಜು 80 ಸಾವಿರ ವಿದ್ಯಾರ್ಥಿಗಳಿಗೆ ನೆಮ್ಮದಿ ತಂದ ಸರ್ಕಾರದ ನಿರ್ಧಾರ
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಿಸುವಂತೆ ಖಾಸಗಿ ಕಾಲೇಜುಗಳು ಮಾಡಿದ್ದ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ. ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಂಡಿದೆ.
ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ವೈದ್ಯಕೀಯ ಕಾಲೇಜುಗಳ ನಿರಂತರ ಒತ್ತಡಕ್ಕೆ ಮಣಿಯದ ರಾಜ್ಯ ಸರ್ಕಾರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಪರಿಷ್ಕರಣೆ ಪ್ರಸ್ತಾಪವನ್ನು ಕೈ ಬಿಟ್ಟಿದೆ. ಇದರಿಂದ ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತುಸು ನೆಮ್ಮದಿ ತಂದಿದೆ.
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ(ಎನ್‌ಇಇಟಿ) ಬರೆದಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ. ನೀಟ್ ಪರೀಕ್ಷೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಜೂ.14 ರೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ ತಪ್ಪಲಿದೆ.
2025-26ನೇ ಸಾಲಿನಲ್ಲಿ ರಾಜ್ಯದ ಒಟ್ಟು 381 ಪರೀಕ್ಷಾ ಕೇಂದ್ರಗಳಲ್ಲಿ 1.49 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ನೀಟ್ ಪರೀಕ್ಷೆ ಬರೆದ 1,55,148 ವಿದ್ಯಾರ್ಥಿಗಳ ಪೈಕಿ 88,887 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಖಾಸಗಿ ಕಾಲೇಜುಗಳ ಬೇಡಿಕೆ ತಿರಸ್ಕಾರ
ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಶುಲ್ಕ ಹೆಚ್ಚಳ ಮಾಡದಿರುವ ಮಹತ್ವದ ತೀರ್ಮಾನ ಕೈಗೊಂಡಿದೆ. ಖಾಸಗಿ ಕಾಲೇಜುಗಳು ಶೇ 10ರಿಂದ 15ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಕಳೆದ ವರ್ಷವಷ್ಟೇ ಶೇ 10ರಷ್ಟು ಶುಲ್ಕ ಹೆಚ್ಚಿಸಿದ್ದರಿಂದ ಈ ವರ್ಷ ಯಾವುದೇ ಹೆಚ್ಚಳಕ್ಕೆ ಅವಕಾಶವಿಲ್ಲ. ಈ ಕುರಿತ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಖಾಶಗಿ ಕಾಲೇಜುಗಳಲ್ಲಿ ಶುಲ್ಕ ಎಷ್ಟಿದೆ?
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕ 1,40,621 ರೂ. ಮತ್ತು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾ ಸೀಟಿಗೆ 11,88,167 ರೂ. ಆಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ 50,000 ರೂ. ಆಗಿದೆ.
ಕೋವಿಡ್ ಕಾರಣ 2021-22 ರಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಯಾವುದೇ ಶುಲ್ಕ ಹೆಚ್ಚಿಸಿರಲಿಲ್ಲ. ಆದರೆ, 2018-19ರಲ್ಲಿ ಶುಲ್ಕವನ್ನು ಶೇ 26 ರಷ್ಟು, 2019-20 ಮತ್ತು 2020-21 ರಲ್ಲಿ ಎರಡೂ ವರ್ಷಗಳಿಗೆ ಶೇ 15 ರಷ್ಟು ಹೆಚ್ಚಿಸಲಾಗಿತ್ತು.