ಮಧ್ಯದ ಬೆರಳು ತೋರಿದ ಘಟನೆ | ಮಾಧ್ಯಮಗಳಿಗೆ ಸನ್ನೆ ಮಾಡಿಲ್ಲ: ನಟ ದರ್ಶನ್ ಸಮರ್ಥನೆ
x
ನಟ ದರ್ಶನ್‌

ಮಧ್ಯದ ಬೆರಳು ತೋರಿದ ಘಟನೆ | ಮಾಧ್ಯಮಗಳಿಗೆ ಸನ್ನೆ ಮಾಡಿಲ್ಲ: ನಟ ದರ್ಶನ್ ಸಮರ್ಥನೆ

'ನಾನು ಮಾಧ್ಯಮಗಳಿಗೆ ಬೆರಳು ತೋರಿಸಿಲ್ಲ. ನನ್ನಿಂದ ತಪ್ಪಾಗಿಲ್ಲ. ನಾನು ಮಾಡಿದ್ದು ತಪ್ಪಾಗಿದ್ದರೆ, ಬೇರೆ ಜೈಲಿಗೆ ವರ್ಗಾಯಿಸಿ' ಎಂದು ನಟ ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.


Click the Play button to hear this message in audio format

ಮಾಧ್ಯಮದವರಿಗೆ ಮಧ್ಯದ ಬೆರಳು ತೋರಿಸಿದ್ದಾರೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಬಳ್ಳಾರಿ ಕಾರಾಗೃಹದ ಅಧಿಕಾರಿಗಳು ನಟ ದರ್ಶನನನ್ನು ವಿಚಾರಣೆ ನಡೆಸಿದ್ದು, ಆ ವೇಳೆ ಆತ ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲು ಕೊಠಡಿಯಿಂದ ಹೊರಬರುವಾಗ ಕ್ಯಾಮರಾಗಳಿಗೆ ಮಧ್ಯದ ಬೆರಳನ್ನು ತೋರಿಸಿದ ವಿಡಿಯೋ ವೈರಲ್ ಆಗಿತ್ತು. ಗುರುವಾರ‌ (ಸೆ.12) ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗಿದ್ದ ಕುಟುಂಬವನ್ನು ಭೇಟಿಯಾಗಲು ಸೆಲ್‌ನಿಂದ ಹೊರಗೆ ಕರೆದೊಯ್ದವಾಗ ದರ್ಶನ್‌, ಮಧ್ಯದ ಬೆರಳು ತೋರಿಸಿರುವ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು.

ಇದೀಗ ಇದರ ಬಗ್ಗೆ ಬಳ್ಳಾರಿ ಕಾರಾಗೃಹದ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಿಸಿದ್ದು, 'ನಾನು ಮಾಧ್ಯಮಗಳಿಗೆ ಬೆರಳು ತೋರಿಸಿಲ್ಲ. ನನ್ನಿಂದ ತಪ್ಪಾಗಿಲ್ಲ. ನಾನು ಮಾಡಿದ್ದು ತಪ್ಪಾಗಿದ್ದರೆ, ಬೇರೆ ಜೈಲಿಗೆ ವರ್ಗಾಯಿಸಿ' ಎಂದು ಹೇಳಿದ್ದಾರೆ ಎನ್ನಲಾಗಿದೆ.

ಶುಕ್ರವಾರ ದರ್ಶನ್‌ಗೆ ಟಿವಿ ಕೊಡಬೇಕಿತ್ತು. ಆದರೆ, ಗುರುವಾರದ ಘಟನೆಯಿಂದ ಟಿ.ವಿ ಕೊಡುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 'ಎಲ್ಲರಿಗೂ ಟಿ.ವಿ ಕೊಟ್ಟಿದ್ದೀರಿ. ನನಗೂ ಕೊಡಿ' ಎಂದು ದರ್ಶನ್ ನಿತ್ಯವೂ ಸಿಬ್ಬಂದಿಯನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ. 'ದರ್ಶನ್‌ಗೆ ಟಿ.ವಿ ಕೊಟ್ಟರೂ, ಯಾವುದೇ ಕೇಬಲ್ ಚಾನೆಲ್‌ಗಳು ನೋಡಲು ಸಿಗುವುದಿಲ್ಲ. ಜೈಲು ನಿಯಮಗಳ ಪ್ರಕಾರ ದೂರದರ್ಶನ (ಡಿಡಿ) ವಾಹಿನಿಗಳು ಮಾತ್ರವೇ ಲಭ್ಯವಾಗಲಿವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story