ಕೇಂದ್ರದಿಂದ ನಯಾಪೈಸೆ ಬಂದಿಲ್ಲ, ಬಿಜೆಪಿ ಸಂಸದರದ್ದು ಸ್ವಂತ ಮಾತಿಲ್ಲ, ಅವರದ್ದು ಆರ್​ಎಸ್​ಎಸ್​​ ಪಾಠ: ಸಿಎಂ
x

ಕೇಂದ್ರದಿಂದ ನಯಾಪೈಸೆ ಬಂದಿಲ್ಲ, ಬಿಜೆಪಿ ಸಂಸದರದ್ದು ಸ್ವಂತ ಮಾತಿಲ್ಲ, ಅವರದ್ದು ಆರ್​ಎಸ್​ಎಸ್​​ ಪಾಠ: ಸಿಎಂ

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ಆಧುನೀಕರಣ ಮತ್ತು ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.


Click the Play button to hear this message in audio format

ಬೆಂಗಳೂರಿನ ಅಭಿವೃದ್ಧಿಗೆ 1.20 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ನಾವು ರೂಪಿಸಿದ್ದೇವೆ, ಆದರೆ ಕೇಂದ್ರ ಸರ್ಕಾರದಿಂದ ನಯಾಪೈಸೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ಆಧುನೀಕರಣ ಮತ್ತು ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದರು.

ಜಿಎಸ್‌ಟಿ 'ದೀಪಾವಳಿ ಗಿಫ್ಟ್' ಅಲ್ಲ, ಜನರ ಸುಲಿಗೆ

ಜಿಎಸ್‌ಟಿ ದರ ಕಡಿತವನ್ನು 'ದೀಪಾವಳಿ ಗಿಫ್ಟ್' ಎಂದು ಪ್ರಚಾರ ಮಾಡುತ್ತಿರುವ ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ ಸಿಎಂ, "8 ವರ್ಷಗಳ ಕಾಲ ಜಿಎಸ್‌ಟಿ ಜಾರಿ ಮಾಡಿ ಜನರ ಹಣವನ್ನು ಸುಲಿಗೆ ಮಾಡಿದ್ದೇ ಇದೇ ಕೇಂದ್ರ ಸರ್ಕಾರ. ಈಗ ನಾಚಿಕೆ ಇಲ್ಲದೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಈ ಜಿಎಸ್‌ಟಿ ಬದಲಾವಣೆಯಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ," ಎಂದು ಲೆಕ್ಕ ನೀಡಿದರು.

ಮೆಟ್ರೋಗೆ ನಮ್ಮದೇ 87% ಹಣ

"ಬೆಂಗಳೂರು ಮೆಟ್ರೋಗೆ ಶೇ. 87ರಷ್ಟು ಹಣವನ್ನು ರಾಜ್ಯ ಸರ್ಕಾರವೇ ನೀಡುತ್ತಿದೆ. ಆದರೆ ಬಿಜೆಪಿಯವರು ಇದು ಕೇಂದ್ರದ ಯೋಜನೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ," ಎಂದು ಸಿಎಂ ಆರೋಪಿಸಿದರು.

ಬಿಜೆಪಿಯವರದ್ದು ಸ್ವಂತ ಮಾತಿಲ್ಲ, ಎಲ್ಲವೂ ಆರ್​ಎಸ್​ಎಸ್​​ ಪಾಠ

ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಅವರಿಗೆ ಸ್ವಂತಿಕೆಯಿಲ್ಲ, ಅವರು ಕೇವಲ ಆರ್‌ಎಸ್‌ಎಸ್ ಬರೆದುಕೊಟ್ಟಿದ್ದನ್ನು ಓದುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. "ಒಮ್ಮೆ ವಿಧಾನಸಭೆಯಲ್ಲಿ ಆರ್. ಅಶೋಕ್ ಅವರನ್ನೇ ಕೇಳಿದ್ದೆ, ಆಗ ಅವರು 'ಏನ್ಮಾಡೋದು ಸರ್, ಆರ್‌ಎಸ್‌ಎಸ್‌ನವರು ಬಂದು ಕೂತಿರುತ್ತಾರೆ, ಅವರು ಹೇಳಿದ್ದನ್ನೇ ಹೇಳಬೇಕು, ಇಲ್ಲದಿದ್ದರೆ ನಮ್ಮನ್ನು ಬಿಡುವುದಿಲ್ಲ' ಎಂದು ಅಸಹಾಯಕತೆ ತೋಡಿಕೊಂಡಿದ್ದರು," ಎಂದು ಸಿಎಂ ಹಳೆಯ ಘಟನೆಯನ್ನು ಮೆಲುಕು ಹಾಕಿದರು.

ಅಮಾವಾಸ್ಯೆ ಸೂರ್ಯ ಬಾಯಿ ಬಿಟ್ಟಿದ್ದಾರಾ?

ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, "ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ನಿಮ್ಮ ಪರವಾಗಿ ಸಂಸತ್ತಿನಲ್ಲಿ ಎಂದಾದರೂ ಮಾತನಾಡಿದ್ದಾರಾ? ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ನಾನು ಅವರನ್ನು 'ಅಮಾವಾಸ್ಯೆ ಸೂರ್ಯ' ಅಂತ ಕರೆಯುತ್ತೇನೆ, ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರಾ?" ಎಂದು ಪ್ರಶ್ನಿಸಿದರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರೂ ರಾಜ್ಯದ ಪರವಾಗಿ ಧ್ವನಿ ಎತ್ತಿಲ್ಲ ಎಂದು ದೂರಿದರು.

ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ

ಈ ವೇಳೆ, ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಿಎಂ, "ದಿನೇಶ್ ಗುಂಡೂರಾವ್ ಅವರು ಕೇವಲ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶ್ರಮಿಸುವ ಜನಮುಖಿ ನಾಯಕ. ರಸ್ತೆ ಅಗಲೀಕರಣದಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ಅದನ್ನು ನಿರಾಕರಿಸಿ, ಚಿಕ್ಕಪೇಟೆಯ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು," ಎಂದು ಕರೆ ನೀಡಿದರು. ವೇದಿಕೆಯಲ್ಲೇ ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ ಸಿಎಂ, "ಒಂದು ವಾರದೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿ, ಒಂದು ಲೇಯರ್ ಟಾರ್ ಹಾಕಬೇಕು" ಎಂದು ತಾಕೀತು ಮಾಡಿದರು.

Read More
Next Story