ಬೆಂಗಳೂರು ರಸ್ತೆಗಳಲ್ಲಿ ಕಸದ ರಾಶಿ; ಗೊಂದಲಕ್ಕೆ ಇನ್ನೂ ಇತ್ಯರ್ಥವಿಲ್ಲ
x

ಬೆಂಗಳೂರು ರಸ್ತೆಗಳಲ್ಲಿ ಕಸದ ರಾಶಿ; ಗೊಂದಲಕ್ಕೆ ಇನ್ನೂ ಇತ್ಯರ್ಥವಿಲ್ಲ

ಯಾವುದೇ ಕಾರಣಕ್ಕೂ ಬೆಂಗಳೂರಿನ ಕಸ ವಿಲೇವಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಣ್ಣೂರು ಗ್ರಾಮದ ಜನ ಪಟ್ಟು ಹಿಡಿದು ಕುಳಿತಿರುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ರಸ್ತೆಗಳಲ್ಲೇ ಕಸ ತುಂಬಿರುವ ವಾಹನಗಳು ನಿಂತಿಕೊಂಡಿವೆ.


ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಸಾಧ್ಯತೆಗಳಿಲ್ಲ. ಹೀಗಾಗಿ ರಸ್ತೆಗಳಲ್ಲೇ ಕಸ ತುಂಬಿರುವ ವಾಹನಗಳು ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಯಾವುದೇ ಕಾರಣಕ್ಕೂ ಬೆಂಗಳೂರಿನ ಕಸ ವಿಲೇವಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಣ್ಣೂರು ಗ್ರಾಮದ ಜನ ಪಟ್ಟು ಹಿಡಿದು ಕುಳಿತಿರುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಕಣ್ಣೂರು ಜನರೊಂದಿಗೆ ಸಭೆ ನಡೆಸುವಂತೆ ಡಿಸಿಎಂ ಡಿ.ಕೆ.ಶಿಮಕುಮಾರ್‌ ಅವರು ಜಿಲ್ಲಾ ಪಂಚಾಯತ್‌ ಸಿಇಒಗೆ ಸೂಚನೆ ನೀಡಿರುವುದರಿಂದ ಮಾ.19 ರಂದು ಸಿಇಒ ಅಲ್ಲಿನ ಜನರ ಮನವೊಲಿಸುವ ಕಾರ್ಯ ಮಾಡಲಿದ್ದಾರೆ.

ಅಲ್ಲಿಯವರೆಗೆ ಕಣ್ಣೂರು ಕಸ ವಿಲೇವಾರಿ ಘಟಕದ ಬಳಿ ಸಾಲುಗಟ್ಟಿ ನಿಂತಿರುವ ಕಸದ ಲಾರಿಗಳಲ್ಲಿರುವ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ.

ಗ್ರಾಮಸ್ಥರಿಂದ ತಡೆ

ಕ್ವಾರಿ ಸಮೀಪವಿದ್ದ ಕೆಲವೇ ಕೆಲವು ಲಾರಿಗಳ ಕಸವನ್ನು ಮಾತ್ರ ವಿಲೇವಾರಿ ಮಾಡಲು ಅವಕಾಶ ನೀಡಿರುವ ಗ್ರಾಮಸ್ಥರು ಉಳಿದ ಲಾರಿಗಳ ಕಸ ವಿಲೇವಾರಿ ಮಾಡದಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಮಾ.19 ರಂದು ನಡೆಯಲಿರುವ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಂದು ವೇಳೆ ಕಣ್ಣೂರು ಗ್ರಾಮಸ್ಥರು ಸರ್ಕಾರದ ಮನವಿಗೆ ಸ್ಪಂಧಿಸಿ ಮಾ.19 ರ ನಂತರ ಕಸ ವಿಲೇವಾರಿಗೆ ಅವಕಾಶ ನೀಡಿದರೂ ಅಲ್ಲಿನ ಕ್ವಾರಿಯಲ್ಲಿ ಇನ್ನು ಒಂದು ತಿಂಗಳು ಮಾತ್ರ ಕಸ ಹಾಕಬಹುದು ನಂತರ ಮತ್ತೆ ಕಸ ವಿಲೇವಾರಿ ಸಮಸ್ಯೆ ಎದುರಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಣ್ಣೂರು ಜನರ ಪಟ್ಟು ಯಾಕೆ?

ಕಳೆದ 9 ವರ್ಷಗಳಿಂದ ಬೆಂಗಳೂರಿನ ಪೂರ್ವ ತಾಲೂಕಿನ ವ್ಯಾಪ್ತಿಗೆ ಬರುವ ಕಣ್ಣೂರು ಮತ್ತು ಮಿಟ್ಟಗಾನಹಳ್ಳಿಯ ಸರ್ಕಾರಿ ಗೋಮಾಳದ ಜಾಗದಲ್ಲಿ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಕಸವನ್ನು ಸುರಿಯಲಾಗುತ್ತಿದೆ. ವೈಜ್ಞಾನಿಕವಾಗಿ ಕಸ ಸುರಿಯಬೇಕೆಂಬ ನಿಯಮವಿದ್ದರೂ ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ.

ತ್ಯಾಜ್ಯದೊಂದಿಗೆ ಪ್ರಾಣಿತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಹಾಗೂ ಕಾರ್ಖಾನೆಗಳ ವಿಷಪೂರಿತವನ್ನು ಒಟ್ಟಿಗೆ ಅವೈಜ್ಞಾನಿಕವಾಗಿ ಸುರಿಯಲಾಗುತ್ತಿದೆ. ತ್ಯಾಜ್ಯದೊಂದಿಗೆ ಶವ ಸಹ ಪತ್ತೆಯಾಗಿದೆ.ಇತ್ತೀಚಿನ ದಿನಗಳ ಲಿಚಿಟ್‌ ಉತ್ಪಾದನೆ ಹೆಚ್ಚಾಗಿ, ಸುತ್ತಮುತ್ತಲಿನ ಕೆರೆ, ಬಾವಿ, ಕಾಲುವೆ ಹಾಗೂ ಕೊಳವೆ ಬಾವಿ ಸೇರುತ್ತಿದೆ. ಇದರಿಂದ ಅಂತರ್ಜಲ ಸಹ ಕಲುಷಿತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಸುತ್ತಮುತ್ತಲಿನ ಕೆರೆಗಳಲ್ಲಿರುವ ಮೀನುಗಳು ಸಾವನ್ನಪ್ಪಿವೆ. ಕೆಟ್ಟ ಗಾಳಿ ಬೀಸುತ್ತಿದೆ. ವೃದ್ಧರು ಮತ್ತು ಮಕ್ಕಳು ಚರ್ಮ ಹಾಗೂ ಉಸಿರಾಟದ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಸಂಘ ಸಂಸ್ಥೆಗಳು, ಜನಸಾಮಾನ್ಯರು ಕಣ್ಣೂರು ಗ್ರಾಮ ಪಂಚಾಯಿತಿಗೆ ದೂರು ನೀಡುತ್ತಿದ್ದಾರೆ.ಈ ಬಗ್ಗೆ ಬಿಎಸ್‌‍ಡಬ್ಲ್ಯೂಎಂಎಲ್‌ ಮುಖ್ಯ ಎಂಜಿನಿಯರ್‌ ಹಾಗೂ ಮುಖ್ಯ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ದೂರು ನೀಡಿದರೂ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಣ್ಣೂರು ಕ್ವಾರಿ ತುಂಬಿದ ಮೇಲೆ ನಗರದ ಕಸ ಸಾಗಿಸುವುದಾದರೂ ಎಲ್ಲಿಗೆ ಎಂಬ ಆತಂಕದಲ್ಲಿರುವ ಬಿಬಿಎಂಪಿ ಅಧಿಕಾರಿಗಳು ಹೊಸ ಘಟಕಕ್ಕಾಗಿ ಶೋಧ ಮುಂದುವರೆಸಿದ್ದಾರೆ. ಮಹದೇವಪುರ ಸಮೀಪ ಹೊಸ ಕಸ ವಿಲೇವಾರಿ ಘಟಕ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಒಂದು ವೇಳೆ ಅಲ್ಲೂ ಸಮಸ್ಯೆ ಎದುರಾದರೆ ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

Read More
Next Story