ಬೆಂಗಳೂರು ಮಟನ್ ಸಂಘರ್ಷ | ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟನೆ
ಬೆಂಗಳೂರಿನ ಕುರಿ ಮಾಂಸದ ಬೇಡಿಕೆಯನ್ನು ಪೂರೈಸಲು ವಿಶೇಷವಾಗಿ ರಾಜಸ್ಥಾನದಿಂದ ಮಾಂಸವನ್ನು ಆಮದು ಮಾಡಿಕೊಳ್ಳಲಾಗಿದೆ.
ಬೆಂಗಳೂರಿಗೆ ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಸರಬರಾಜಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಶಂಕಿತ ಮಾಂಸದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ವರದಿ ಬಂದಿದ್ದು, ಈ ಮಾಂಸದ ಮಾದರಿಗಳು ಮೇಕೆ ಮಾಂಸವಾಗಿದ್ದು, ಯಾವುದೇ ನಾಯಿ ಮಾಂಸವನ್ನು ಬೆರೆಸಲಾಗಿಲ್ಲ ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಕುರಿ ಮಾಂಸದ ಬೇಡಿಕೆಯನ್ನು ಪೂರೈಸಲು ವಿಶೇಷವಾಗಿ ರಾಜಸ್ಥಾನದಿಂದ ಮಾಂಸವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿನ ಸಿರೋಹಿ ಎಂಬ ಮೇಕೆ ತಳಿಯ ದೇಹರಚನೆ ಮೇಲ್ನೋಟಕ್ಕೆ ನಾಯಿ ದೇಹರಚನೆಗೆ ಹೋಲಿಕೆಯಾಗುತ್ತದೆ. ಹಾಗಾಗಿ ಮೇಲ್ನೋಟಕ್ಕೆ ಚರ್ಮರಹಿತ ದೇಹ ನಾಯಿಯ ದೇಹದಂತೆ ಕಂಡಿರಬಹುದು ಎಂಬ ವಾದಕ್ಕೆ ಇದೀಗ ಪುಷ್ಟಿ ಸಿಕ್ಕಿದೆ.
“ನಾವು ನಡೆಸಿದ ಪ್ರಯೋಗಾಲಯ ಪರೀಕ್ಷೆಗಳ ಪ್ರಕಾರ ಇದು ನಾಯಿ ಮಾಂಸವಲ್ಲ. ಇದು ಸಿರೋಹಿ ಎಂಬ ಮೇಕೆಯ ವಿಶೇಷ ತಳಿಯಾಗಿದ್ದು, ಇದು ರಾಜಸ್ಥಾನ ಮತ್ತು ಗುಜರಾತಿನ ಕಚ್-ಭುಜ್ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಈ ಮೇಕೆಗಳ ದೇಹದ ಮೇಲೆ ಮಚ್ಚೆಗಳಿದ್ದು ಬಾಲ ಸ್ವಲ್ಪ ಉದ್ದವಾಗಿರುವುದರಿಂದ ನಾಯಿಯಂತೆ ಕಾಣುತ್ತದೆ. ಬೆಂಗಳೂರಿನ ಕೆಲವು ವ್ಯಾಪಾರಿಗಳು ಕೆಲ ಸಮಯದಿಂದ ರಾಜಸ್ಥಾನದಿಂದ ಮೇಕೆ ಮಾಂಸವನ್ನು ತರಿಸಿಕೊಳ್ಳುತ್ತಿದ್ದಾರೆ" ಎಂದು ಆಹಾರ ಸುರಕ್ಷತೆ ಆಯುಕ್ತ ಕೆ ಶ್ರೀನಿವಾಸ್ ಹೇಳಿದ್ದಾರೆ.
ಜು. 26ರಂದು ರಾಜಸ್ಥಾನದಿಂದ ಬೆಂಗಳೂರಿನ ಮಾಂಸದ ವ್ಯಾಪಾರಿ ರಜಾಕ್ ಎಂಬುವರು ರೈಲಿನ ಮೂಲಕ ತಂದ ಮಾಂಸದ ಬ್ಯಾಗಿನಲ್ಲಿ ನಾಯಿ ಮಾಂಸ ಕಲಬೆರಕೆ ಆಗಿದೆ ಎಂದು ಹಿಂದೂ ಸಂಘಟನೆಯ ಪುನೀತ್ ಕೆರೆಹಹಳ್ಳಿ ಆರೋಪಿಸಿ, ರೈಲು ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಕೆರೆಹಳ್ಳಿ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಮಾಂಸದ ಮಾದರಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪಡೆದಿದ್ದರು.
ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರು. ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ವರದಿ ಬಂದಿದ್ದಿ, ಈ ಮಾಂಸಗಳು ನಾಯಿ ಮಾಂಸ ಅಲ್ಲ ಎಂದು ಸಾಬೀತಾಗಿದೆ.