ಸಿಎಂ ಬದಲಾವಣೆ ಚರ್ಚೆ ನಮ್ಮ ಮುಂದಿಲ್ಲ, ಸಿದ್ದರಾಮಯ್ಯ ಮುಂದುವರಿಕೆ : ಸಚಿವ ಕೆ.ಎಚ್. ಮುನಿಯಪ್ಪ
x

ಸಿಎಂ ಬದಲಾವಣೆ ಚರ್ಚೆ ನಮ್ಮ ಮುಂದಿಲ್ಲ, ಸಿದ್ದರಾಮಯ್ಯ ಮುಂದುವರಿಕೆ : ಸಚಿವ ಕೆ.ಎಚ್. ಮುನಿಯಪ್ಪ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಬೇಕಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 17 ಲಕ್ಷ ಕಾರ್ಡ್‌ದಾರರಿಗೆ ಆಹಾರ ಧಾನ್ಯ ನೀಡುತ್ತಿದೆ ಎಂದು ಮುನಿಯಪ್ಪ ಹೇಳಿದರು.


ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಯಾವುದೇ ಚರ್ಚೆ ಸದ್ಯ ನಮ್ಮ ಮುಂದೆ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಅವರು ಮತ್ತು ಉಪಮುಖ್ಯಮಂತ್ರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯ, ಆಹಾರ ಇಲಾಖೆಯ ಯೋಜನೆಗಳು ಹಾಗೂ ಒಳ ಮೀಸಲಾತಿ ವಿಚಾರವಾಗಿ ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು.

ಬಿಪಿಎಲ್ ಕಾರ್ಡ್ ಪರಿಷ್ಕರಣೆ, ಬೇಳೆ-ಎಣ್ಣೆ ನೀಡಲು ಚಿಂತನೆ

ಆಹಾರ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, "ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಬೇಕಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 17 ಲಕ್ಷ ಕಾರ್ಡ್‌ದಾರರಿಗೆ ಆಹಾರ ಧಾನ್ಯ ನೀಡುತ್ತಿದೆ. ಈ ಮಿತಿಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ," ಎಂದರು.

"ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ಬೇಳೆ ಮತ್ತು ಎಣ್ಣೆ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ," ಎಂದು ಸಚಿವರು ತಿಳಿಸಿದರು. ಜೋಳ ಖರೀದಿಸಿದ ತಕ್ಷಣವೇ ವಿತರಿಸಲು ಸೂಚನೆ ನೀಡಿರುವುದಾಗಿಯೂ ಅವರು ಹೇಳಿದರು.

ಒಳ ಮೀಸಲಾತಿ: ಬಿಜೆಪಿ ಹೋರಾಟ ಅನಗತ್ಯ

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, "ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲಿಲ್ಲ. ಈಗ ನಾವು ಆ ಕೆಲಸ ಮಾಡುತ್ತಿದ್ದೇವೆ. ನ್ಯಾಯಮೂರ್ತಿ ನಾಗಮೋಹನದಾಸ ವರದಿ ಬಂದ ತಕ್ಷಣವೇ ಅದನ್ನು ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯುತ್ತೇವೆ. ಹೀಗಿರುವಾಗ ಬಿಜೆಪಿಯವರ ಹೋರಾಟ ಅನಗತ್ಯ, ಅದರಿಂದ ಅವರಿಗೆ ಯಾವುದೇ ಲಾಭವಾಗದು," ಎಂದು ತಿರುಗೇಟು ನೀಡಿದರು.

ನಾಯಕತ್ವದ ಬಗ್ಗೆ ಊಹಾಪೋಹ ಬೇಡ

ರಾಜ್ಯ ನಾಯಕತ್ವದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ರಾಜ್ಯದಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ, ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ. ಎಐಸಿಸಿ ಉಸ್ತುವಾರಿ ಸುರ್ಜೇವಾಲ ಅವರು ನಮ್ಮ ಕಾರ್ಯದಕ್ಷತೆ (ಪರ್ಫಾರ್ಮನ್ಸ್) ಬಗ್ಗೆ ಕೇಳುತ್ತಿದ್ದಾರೆಯೇ ಹೊರತು, ಅವರು ಅಧಿಕಾರಿಗಳ ಸಭೆ ಕರೆದಿಲ್ಲ. ಅಂತಿಮವಾಗಿ ಶಾಸಕರು ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ," ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.

ರಸಗೊಬ್ಬರ ಕೊರತೆ ವಿಚಾರವಾಗಿ ಮುಖ್ಯಮಂತ್ರಿಗಳು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

Read More
Next Story