Mysore MUDA Scam| ಮುಡಾ ಪ್ರಕರಣಕ್ಕೂ ಹರ್ಯಾಣ ಸೋಲಿಗೂ ಸಂಬಂಧವಿಲ್ಲ: ಡಿ.ಕೆ. ಸುರೇಶ್
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೂ ಕರ್ನಾಟಕದ ಮುಡಾ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಹರ್ಯಾಣ ಚುನಾವಣಾ ಸೋಲಿಗೆ ಮುಡಾ ಪ್ರಕರಣ ಕಾರಣ ಎನ್ನುವ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, “ಕೋಳಿವಾಡ ಅವರ ಹೇಳಿಕೆಗೂ ಹರ್ಯಾಯಣ ಸೋಲಿಗೂ ಸಂಬಂಧವಿಲ್ಲ," ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣವು ಹರ್ಯಾಣದಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಂಗಳವಾರ ಆರೋಪಿಸಿದ್ದರು. ಹರ್ಯಾಣ ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣವು ಕಾಂಗ್ರೆಸ್ ಮೇಲೆ ದುಷ್ಪಪರಿಣಾಮ ಬೀರಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು, ಪದೇ ಪದೇ ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದು ಪಕ್ಷಕ್ಕೆ ತೀವ್ರ ಹಿನ್ನಡೆಗೆ ಕಾರಣವಾಗಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.
ಈ ಕುರಿತಂತೆ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಡಿ.ಕೆ. ಸುರೇಶ್, ಕೋಳಿವಾಡ ಹೇಳಿಕೆಯನ್ನು ನಿರಾಕರಿಸಿದರು. ಆದರೆ ಹರ್ಯಾಣ ವಿಧಾನಸಭಾ ಚುನಾವಣೆ ಸೋಲಿಗೆ ಅತಿಯಾದ ಆತ್ಮವಿಶ್ವಾಸ ಕಾರಣ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಹಾಗೂ ಉತ್ತಮ ನಿದರ್ಶನ," ಎಂದರು.
ಕೆಲಸವಿಲ್ಲದ ಕುಮಾರಸ್ವಾಮಿ
ಮುಡಾ ಪ್ರಕರಣ ಮುಚ್ಚಿ ಹಾಕಲು ಜಾತಿಗಣತಿ ವಿಷಯ ಮುನ್ನಲೆಗೆ ತಂದಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬೆಳಿಗ್ಗೆ ಒಂದು, ಸಂಜೆಯೊಂದು ಮಾತನಾಡುವವರಿಗೆ ನಾವು ಉತ್ತರ ನೀಡುವುದಿಲ್ಲ. ಮಾಧ್ಯಮದವರಿಗೆ ಅವರು ಗಂಭೀರ ವ್ಯಕ್ತಿ ಎನಿಸಬಹುದು, ಆದರೆ ನಮಗಲ್ಲ. ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ. ಅವರಿಗೆ ಕೆಲಸವಿಲ್ಲ, ಅದಕ್ಕೆ ಮಾತನಾಡುತ್ತಾರೆ. ಅವರಿಗೆ ಮೋದಿ ಅವರು ಒಳ್ಳೆ ಕೆಲಸ ಕೊಟ್ಟಿದ್ದಾರೆ, ಅದನ್ನು ಬಿಟ್ಟು ಕರ್ನಾಟಕದ ವಿಚಾರದಲ್ಲಿ ಮಾತನಾಡುತ್ತಿದ್ದಾರೆ."
ಸಿದ್ದರಾಮಯ್ಯ ಬೆನ್ನಿಗೆ ಇದ್ದೇವೆ
ಮಹದೇವಪ್ಪ, ಸತೀಶ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಕೇಳಿದಾಗ, “ಮಹದೇವಪ್ಪ ಹಿರಿಯ ಸಚಿವರು. ಪರಮೇಶ್ವರ್ ಅವರು ಪ್ರಮುಖ ಖಾತೆ ಹೊಂದಿರುವವರು, ಇವರುಗಳು ರಾಜಕೀಯ ಹೊರತಾಗಿ ಸೇರಿದ್ದಾರೆ. ಈಗಾಗಲೇ ಸರ್ಕಾರದ 136 ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ಇದ್ದಾರೆ ಎನ್ನುವ ಸಂದೇಶವನ್ನು ನಾವು ಕೊಟ್ಟಿದ್ದೇವೆ” ಎಂದರು.