ಸೋನು ನಿಗಮ್ ವಿರುದ್ಧ ನ್ಯಾಯಾಲಯದ ಅನುಮತಿ ಇಲ್ಲದೆ ಚಾರ್ಜ್‌ಶೀಟ್ ಸಲ್ಲಿಸಬೇಡಿ: ಹೈಕೋರ್ಟ್
x

ಸೋನು ನಿಗಮ್ ವಿರುದ್ಧ ನ್ಯಾಯಾಲಯದ ಅನುಮತಿ ಇಲ್ಲದೆ ಚಾರ್ಜ್‌ಶೀಟ್ ಸಲ್ಲಿಸಬೇಡಿ: ಹೈಕೋರ್ಟ್

ವಿಚಾರಣೆ ವೇಳೆ ಸೋನು ನಿಗಮ್ ಪರ ವಕೀಲರು, 'ಸೋನು ನಿಗಮ್ ಖ್ಯಾತ ಗಾಯಕರಿದ್ದು, ಪೊಲೀಸರ ಮುಂದೆ ತನಿಖೆಗೆ ಖುದ್ದು ಹಾಜರಾದರೆ ಸಮಸ್ಯೆ ಆಗಬಹುದು, ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಹೈಕೋರ್ಟ್​ಗೆ ಮನವಿ ಮಾಡಿದರು.


ಗಾಯಕ ಸೋನು ನಿಗಮ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ನ್ಯಾಯಾಲಯದ ಅನುಮತಿ ಇಲ್ಲದೆ ಚಾರ್ಜ್‌ಶೀಟ್ ಸಲ್ಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಬೆಂಗಳೂರು ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.

ತಮ್ಮ ವಿರುದ್ಧ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಮುಂಬೈನ ಸೋನು ನಿಗಮ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸೋನು ನಿಗಮ್ ಪರ ವಕೀಲರು, "ಸೋನು ನಿಗಮ್ ಅವರು ಖ್ಯಾತ ಗಾಯಕರಾಗಿದ್ದು, ಪೊಲೀಸರ ಮುಂದೆ ತನಿಖೆಗೆ ಖುದ್ದಾಗಿ ಹಾಜರಾದರೆ ಸಮಸ್ಯೆ ಆಗಬಹುದು. ಹಾಗಾಗಿ, ವಿಚಾರಣೆಗೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು" ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರು, ಸೋನು ನಿಗಮ್ ಅವರು ಇರುವ ಸ್ಥಳದಲ್ಲಿಯೇ ವಿಚಾರಣೆ ನಡೆಸುವಂತೆ ಅಥವಾ ವಿಡಿಯೊ ಕಾಲ್ ಮೂಲಕ ವಿಚಾರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, "ಅರ್ಜಿದಾರರ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ. ಅವರನ್ನು ಖುದ್ದಾಗಿ ವಿಚಾರಣೆಗೆ ಒಳಪಡಿಸಿದಾಗ ಮಾತ್ರವೇ, ಅವರು ಯಾವ ಉದ್ದೇಶದಿಂದ ಆಕ್ಷೇಪಾರ್ಹ ಹೇಳಿಕೆ ನೀಡಿದರು ಎಂಬುದನ್ನು ತಿಳಿಯಲು ಸಾಧ್ಯ. ತನಿಖಾಧಿಕಾರಿಗಳು ಮಹಜರು ಪ್ರಕ್ರಿಯೆ ನಡೆಸಬೇಕಿದೆ. ಸೋನು ನಿಗಮ್ ವಿಚಾರಣೆಗೆ ಹಾಜರಾದರೆ ಭದ್ರತೆ ಕಲ್ಪಿಸುವುದು ಪೊಲೀಸರ ಕರ್ತವ್ಯ. ಹಾಗಾಗಿ, ಅವರು ಖುದ್ದಾಗಿ ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಬಾರದು" ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ವಿಡಿಯೊ ಕಾನ್ಫರೆನ್ಸ್ ಮೂಲಕ ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಲು ಏನು ಸಮಸ್ಯೆ?" ಎಂದು ಪ್ರಾಸಿಕ್ಯೂಷನ್ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, "ತನಿಖಾಧಿಕಾರಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋನು ನಿಗಮ್ ಅವರ ಹೇಳಿಕೆ ದಾಖಲಿಸಿಕೊಳ್ಳಬೇಕು. ಇಲ್ಲವಾದರೆ ತನಿಖಾಧಿಕಾರಿಗಳೇ ಸೋನು ನಿಗಮ್ ಇರುವ ಸ್ಥಳಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳಬೇಕು. ಇದಕ್ಕೆ ತಗಲುವ ಖರ್ಚನ್ನು ಸೋನು ನಿಗಮ್ ಅವರೇ ಭರಿಸಬೇಕು" ಎಂದು ಆದೇಶಿಸಿತು.

ಪ್ರಕರಣದ ಹಿನ್ನೆಲೆ

ಏಪ್ರಿಲ್ 25 ರಂದು ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಕೆಲವು ವಿದ್ಯಾರ್ಥಿಗಳು ಕನ್ನಡದಲ್ಲಿ ಹಾಡನ್ನು ಹಾಡಲು ಪದೇ ಪದೇ ಕೇಳುತ್ತಿದ್ದರು. ಆಗ ಗಾಯಕ ಸೋನು ನಿಗಮ್ ಅವರು "ಕನ್ನಡ, ಕನ್ನಡ, ಕನ್ನಡ. ಇದೇ ಕಾರಣಕ್ಕೆ ಪಹಲ್ಗಮ್ ಘಟನೆ ಸಂಭವಿಸಿದೆ" ಎಂದು ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಧರ್ಮ ರಾಜ್ ಅನಂತಯ್ಯ ಎಂಬುವವರು ಬೆಂಗಳೂರು ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ 3 ರಂದು ಗಾಯಕನ ವಿರುದ್ಧ ಬಿಎನ್ಎಸ್ ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), 352(1) (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 353 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

Read More
Next Story