HDK Land Encroachment | ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಇಲ್ಲ: ಹೈಕೋರ್ಟ್ ಆದೇಶ
x

ಹೆಚ್‌ ಡಿ ಕುಮಾರಸ್ವಾಮಿ 

HDK Land Encroachment | ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಇಲ್ಲ: ಹೈಕೋರ್ಟ್ ಆದೇಶ

ತಹಶೀಲ್ದಾರ್ ನೀಡಿದ್ದ ತೆರವು ನೋಟಿಸ್‌ಗೆ ತಡೆ ನೀಡಿದ್ದು, ಮಾರ್ಚ್ 27ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದ್ದಾರೆ.


ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಿಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಗೋಮಾಳ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವಿದ್ದು, ಈ ವಿವಾದಕ್ಕೆ ಸಂಬಂಧಿಸಿದಂತೆ ಮಾರ್ಚ್ 27, 2025ರವರೆಗೆ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ (ಮಾರ್ಚ್ 24) ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಕೇತಗಾನಹಳ್ಳಿಯಲ್ಲಿರುವ ಸರ್ವೇ ಸಂಖ್ಯೆ 7, 8 ಮತ್ತು 9 ರಲ್ಲಿನ ಭೂಮಿಯ ಮರು ಸರ್ವೆಯನ್ನು ನಡೆಸಲು ತಹಶೀಲ್ದಾರ್ ಮಾ.11ರಂದು ಕುಮಾರಸ್ವಾಮಿಗೆ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ, ತಹಶೀಲ್ದಾರ್ ನೀಡಿದ್ದ ತೆರವು ನೋಟಿಸ್‌ಗೆ ತಡೆ ನೀಡಿದ್ದು, ಮಾ.27ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದ್ದಾರೆ.

ಕುಮಾರಸ್ವಾಮಿಯ ವಾದ ಏನು?

ಕುಮಾರಸ್ವಾಮಿ ಈ ಭೂಮಿಯನ್ನು ಹಲವು ಮಾರಾಟ ಪತ್ರಗಳ ಮೂಲಕ ಖರೀದಿಸಿದ್ದು, 1985ರ ಅಕ್ಟೋಬರ್ 25ರಿಂದ ಈ ಭೂಮಿಯ ಸಂಪೂರ್ಣ ಮಾಲೀಕರಾಗಿದ್ದಾರೆ. ಕೆಲವು ಭೂಮಿಗಳನ್ನು ತಮ್ಮ ಅತ್ತೆ ಸಾವಿತ್ರಮ್ಮ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರು ಈ ಹಿಂದೆ ಜಮೀನುಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೈಗೊಂಡ ಕ್ರಮಗಳನ್ನು ಅಗತ್ಯ ದಾಖಲೆಗಳನ್ನು ನೀಡಿದ ನಂತರ ಕೈಬಿಟ್ಟಿತ್ತು ಎಂದು ಕುಮಾರ ಸ್ವಾಮಿ ಪರ ವಕೀಲ ವಾದಿಸಿದ್ದಾರೆ. ಈ ಬಾರಿ ನೀಡಲಾದ ನೋಟಿಸ್ ಕೂಡ ನ್ಯಾಯಬಾಹಿರವಾಗಿದ್ದು, ಕಾನೂನುಬದ್ಧ ಸಾಮರ್ಥ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸರ್ವೆ ಮತ್ತು ಸುಪ್ರೀಂಕೋರ್ಟ್ ಅರ್ಜಿ

ಮಾ.15ರಂದು ಅಧಿಕಾರಿಗಳು ಸರ್ವೆಯನ್ನು ನಡೆಸಿದ್ದು, ಹೈಕೋರ್ಟ್‌ನ ವಿಭಾಗೀಯ ಪೀಠದ ನಿರ್ದೇಶನದಂತೆ ಅಧಿಕಾರಿಗಳು ಕಾರ್ಯಾಚರಿಸಿದ್ದಾರೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿ ಮಾ.22ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್‌ನ ಮಾ.18ರ ಆದೇಶವನ್ನು ಪ್ರಶ್ನಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಾ.27ರವರೆಗೆ ಕುಮಾರಸ್ವಾಮಿ ವಿರುದ್ಧ ಯಾವುದೇ ತೆರವು ಅಥವಾ ಬಲವಂತದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ಮಾಡಿದೆ. ‌

ಪ್ರಕರಣದ ಹಿನ್ನೆಲೆ ಏನು?

1979 ರಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರು ಬಿಡದಿಯ ಕೇತಗಾನಹಳ್ಳಿ ಸಮೀಪದ ಸುಮಾರು 40ಎಕರೆ ಜಮೀನು ಖರೀದಿಸಿದ್ದರು. ಆ ಜಮೀನಿನಲ್ಲಿ ತೋಟದ ಮನೆ ನಿರ್ಮಿಸಿದ್ದು, ಅಡಿಕೆ, ತೆಂಗು ಇತರ ಬೆಳೆಗಳನ್ನು ಬೆಳೆಯಲಾಗಿದೆ.

ಕೆಲವರು ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡಿದ್ದು, ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಖರೀದಿಸಿದ್ದಾರೆ. ಗೋಮಾಳ ಭೂಮಿಯನ್ನು ತೆರವು ಮಾಡಬೇಕು ಎಂದು 2012-13 ರಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಒತ್ತುವರಿ ಭೂಮಿಯು ಪ್ರಸ್ತುತ ಎಕರೆಗೆ 75 ಲಕ್ಷದಿಂದ 1 ಕೋಟಿ ರೂ. ಮೌಲ್ಯ ಹೊಂದಿದೆ. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಎಕರೆಗೆ ಕೇವಲ 5,000 ರೂ. ನೀಡಿ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು.

ತೆರವಿಗೆ ಆದೇಶಿಸಿದ ಲೋಕಾಯಕ್ತ, ಹೈಕೋರ್ಟ್

2014 ಆಗಸ್ಟ್ 5 ರಂದು ಲೋಕಾಯುಕ್ತರು ಕೇತಗಾನಹಳ್ಳಿ ವ್ಯಾಪ್ತಿಯ ಸರ್ವೇ ನಂ. 7, 8, 9, 10, 16, 17 ಮತ್ತು 79 ರಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತೆರವು ಮಾಡುವಂತೆ ಆದೇಶಿಸಿದ್ದರು. ಆದರೆ, ಆದೇಶ ಜಾರಿಗೆ ರಾಜ್ಯ ಸರ್ಕಾರ ವಿಳಂಬ ಮಾಡಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ 2020 ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ವಿಶೇಷ ತನಿಖಾ ತಂಡ ರಚನೆ

2025 ಜನವರಿ 29 ರಂದು ಕೇತಗಾನಹಳ್ಳಿ ಗ್ರಾಮದ ಸರ್ಕಾರಿ ಭೂಮಿ ಒತ್ತುವರಿ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಐವರು ಸದಸ್ಯರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿತ್ತು. ಆದರೆ, ಅದೇ ದಿನ ಹೈಕೋರ್ಟ್ ವಿಭಾಗೀಯ ಪೀಠವು, ಕೇತಗಾನಹಳ್ಳಿ ಗ್ರಾಮದ ಗೋಮಾಳವನ್ನು ಕೊನೆಯದಾಗಿ ಮಾರಾಟ ಮಾಡಿದವರು ಹಾಗೂ ಈಗ ಸ್ವಾಧೀನದಲ್ಲಿರುವವರಿಗೆ ಯಾವ ರೂಪದಲ್ಲಿ ಲಭ್ಯವಾಯಿತು ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿತ್ತು.

ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಬೇಕು. ಅತಿಕ್ರಮಣದಾರರು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಾಲ್ಕು ತಿಂಗಳೊಳಗೆ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠ ಜ.29 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಭೂ ಒತ್ತುವರಿ ಕುರಿತು ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂಬ ಪ್ರತಿಕ್ರಿಯೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಎಸ್‌ಐಟಿ ರಚಿಸುವಂತೆ ನಿಮಗೆ ಹೇಳಿದವರು ಯಾರು, ಸರ್ಕಾರ ಸಂವಿಧಾನಕ್ಕಿಂತಲೂ ದೊಡ್ಡದಾ ಎಂದು ಪ್ರಶ್ನಿಸಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ನಿಮ್ಮಿಂದ ಆದರೆ ತೆರವು ಮಾಡಿ, ಇಲ್ಲವೇ ಬಿಟ್ಟುಬಿಡಿ ಎಂದು ಕಟುವಾದ ಶಬ್ದಗಳಲ್ಲಿ ಹೇಳಿತ್ತು.

Read More
Next Story