
ಬತ್ತಿ ಹೋದ ಜ್ಞಾನಗಂಗೆ: ಬಿಡುಗಡೆಯಾಗಿಲ್ಲ ಹಣ; ಮೂರು ವರ್ಷದಿಂದ ಗ್ರಂಥಾಲಯಗಳಿಗೆ ʼಪುಸ್ತಕ ಬರʼ
ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಗ್ರಂಥಾಲಯಗಳಿಗೆ ಒಂದೇ ಒಂದು ಹೊಸ ಪುಸ್ತಕವನ್ನು ಖರೀದಿಸಿಲ್ಲ. ಇದು ಸಾಹಿತ್ಯ ವಲಯ ಹಾಗೂ ಓದುಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ "ಜ್ಞಾನ ಸಮಾಜ" ನಿರ್ಮಾಣದ ಮಾತನಾಡುತ್ತಿರುವ ಸರ್ಕಾರದ ಆಡಳಿತದಲ್ಲೇ ಜ್ಞಾನ ದೇಗುಲಗಳು ಕಳೆಗುಂದುತ್ತಿವೆ. ಕಳೆದ ಮೂರು ವರ್ಷಗಳಿಂದ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಗ್ರಂಥಾಲಯಗಳಿಗೆ ಒಂದೇ ಒಂದು ಹೊಸ ಪುಸ್ತಕವನ್ನು ಖರೀದಿಸಿಲ್ಲ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಇದು ಸಾಹಿತ್ಯ ವಲಯ ಹಾಗೂ ಓದುಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಪುಸ್ತಕ ಖರೀದಿ ಪ್ರಕ್ರಿಯೆಯು, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಪುನರಾರಂಭಗೊಂಡಿಲ್ಲ. ಪರಿಣಾಮವಾಗಿ, ರಾಜ್ಯದ ಸಾವಿರಾರು ಗ್ರಂಥಾಲಯಗಳಲ್ಲಿ ಹಳೆಯ ಪುಸ್ತಕಗಳೇ ರಾರಾಜಿಸುತ್ತಿದ್ದು, ಹೊಸ ಜ್ಞಾನದ ಹರಿವು ನಿಂತುಹೋಗಿದೆ.
15 ಸಾವಿರ ಪುಸ್ತಕಗಳ ಆಯ್ಕೆ; ಆದೇಶ ಮಾತ್ರ ಶೂನ್ಯ!
ಪುಸ್ತಕ ಪ್ರಾಧಿಕಾರ ಹಾಗೂ ಪುಸ್ತಕ ಆಯ್ಕೆ ಸಮಿತಿಯು ಕಥೆ, ಕಾದಂಬರಿ, ವಿಜ್ಞಾನ, ಕಲೆ, ಇತಿಹಾಸ ಸೇರಿದಂತೆ ಸುಮಾರು 15 ಸಾವಿರ ಶೀರ್ಷಿಕೆಯ ಪುಸ್ತಕಗಳನ್ನು ಅಂತಿಮಗೊಳಿಸಿ ಪಟ್ಟಿ ಸಿದ್ಧಪಡಿಸಿದೆ. ಆದರೆ, ಆಯ್ಕೆ ಪ್ರಕ್ರಿಯೆ ಮುಗಿದು ವರ್ಷಗಳೇ ಉರುಳಿದರೂ ಸರ್ಕಾರದಿಂದ ಖರೀದಿ ಆದೇಶ ಮಾತ್ರ ಹೊರಬಿದ್ದಿಲ್ಲ. ಖರೀದಿ ಆದೇಶ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಬಜೆಟ್‌ನಲ್ಲಿ ಪುಸ್ತಕ ಖರೀದಿಗೆ ಅಗತ್ಯ ಅನುದಾನವನ್ನೇ ಮೀಸಲಿಟ್ಟಿಲ್ಲ ಎಂಬುದು ಪ್ರಕಾಶಕರ ಗಂಭೀರ ಆರೋಪವಾಗಿದೆ.
ಆಯ್ಕೆ ಪಟ್ಟಿ ಸಿದ್ಧವಿದ್ದರೂ, ಅದಕ್ಕೆ ಆರ್ಥಿಕ ಅನುಮೋದನೆ ನೀಡದಿರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಮೂಲಗಳ ಪ್ರಕಾರ, ಪುಸ್ತಕ ಖರೀದಿಗಾಗಿ ಬಜೆಟ್‌ನಲ್ಲಿ ಸೂಕ್ತ ಅನುದಾನವನ್ನೇ ಮೀಸಲಿಟ್ಟಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗ್ರಂಥಾಲಯ ಸೆಸ್ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದ್ದರೂ, ಆ ಹಣ ಪುಸ್ತಕ ಖರೀದಿಗೆ ಬಳಕೆಯಾಗುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಸರ್ಕಾರದ ಈ ನಿರ್ಲಕ್ಷ್ಯ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಕೆಎಎಸ್, ಐಎಎಸ್, ಎಫ್‌ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಲಕ್ಷಾಂತರ ವಿದ್ಯಾರ್ಥಿಗಳು ಗ್ರಂಥಾಲಯವನ್ನೇ ಅವಲಂಬಿಸಿದ್ದಾರೆ. ಪರೀಕ್ಷೆಗಳಿಗೆ ಅಗತ್ಯವಾದ ಪ್ರಚಲಿತ ವಿದ್ಯಮಾನಗಳ ಹೊಸ ಪುಸ್ತಕಗಳು ಲಭ್ಯವಿಲ್ಲದೆ, ಹಳೆಯ ಆವೃತ್ತಿಗಳನ್ನೇ ಓದುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಮತ್ತೊಂದೆಡೆ, ಸರ್ಕಾರದ ಸಗಟು ಖರೀದಿಯನ್ನೇ ನಂಬಿಕೊಂಡಿದ್ದ ಲೇಖಕರು ಮತ್ತು ಪ್ರಕಾಶಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋದಾಮುಗಳಲ್ಲಿ ಪುಸ್ತಕಗಳು ಕೊಳೆಯುವಂತಾಗಿದೆ. "ಅನ್ನಭಾಗ್ಯದಷ್ಟೇ ಮುಖ್ಯವಾದ 'ಅಕ್ಷರ ದಾಸೋಹ'ಕ್ಕೆ ಸರ್ಕಾರ ಹಣ ನೀಡದಿರುವುದು ದುರಂತ ಎಂದು ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡದಿದ್ದರೆ ರಾಜ್ಯದ ಬೌದ್ಧಿಕ ಬೆಳವಣಿಗೆಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಪ್ರಕಾಶಕರು ಮತ್ತು ಲೇಖಕರ ಸಂಕಷ್ಟ
ಕನ್ನಡ ಪುಸ್ತಕ ಪ್ರಕಾಶನ ವಲಯವು ಸರ್ಕಾರದ ಸಗಟು ಖರೀದಿಯನ್ನೇ ಹೆಚ್ಚಾಗಿ ಅವಲಂಬಿಸಿದೆ. ರಾಜಾ ರಾಮಮೋಹನ್ ರಾಯ್ ಪ್ರತಿಷ್ಠಾನ ಮತ್ತು ರಾಜ್ಯ ಸರ್ಕಾರದ ಸಗಟು ಖರೀದಿ ಯೋಜನೆಗಳು ಕನ್ನಡ ಪುಸ್ತಕ ಪ್ರಕಾಶನಕ್ಕೆ ಆರ್ಥಿಕ ಬೆನ್ನೆಲುಬು. ಆದರೆ, ಕಳೆದ ಮೂರು ವರ್ಷಗಳಿಂದ ಖರೀದಿ ಸ್ಥಗಿತಗೊಂಡಿರುವುದರಿಂದ ಪ್ರಕಾಶಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. "ನಾವು ಸಾಲ ಮಾಡಿ ಪುಸ್ತಕಗಳನ್ನು ಮುದ್ರಿಸಿದ್ದೇವೆ. ಸರ್ಕಾರ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ ಎಂದು ನಂಬಿ ದಾಸ್ತಾನು ಇಟ್ಟುಕೊಂಡಿದ್ದೇವೆ. ಈಗ ಖರೀದಿ ಆದೇಶ ಬಾರದೆ ಗೋದಾಮುಗಳಲ್ಲಿ ಪುಸ್ತಕಗಳು ಗೆದ್ದಲು ಹಿಡಿಯುತ್ತಿವೆ. ಹೊಸ ಲೇಖಕರನ್ನು ಪ್ರೋತ್ಸಾಹಿಸಲು ನಮಗೆ ಸಾಧ್ಯವಾಗುತ್ತಿಲ್ಲ," ಎಂದು ಬೆಂಗಳೂರಿನ ಹಿರಿಯ ಪ್ರಕಾಶಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಪುಸ್ತಕಗಳು ಸಮಾಜದ ಕನ್ನಡಿ ಎನ್ನುತ್ತಾರೆ. ಆದರೆ, ಕರ್ನಾಟಕದಲ್ಲಿ ಆ ಕನ್ನಡಿಗೇ ಈಗ ಧೂಳು ಹಿಡಿದಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿಗೆ ಅನುದಾನ ಬಿಡುಗಡೆ ಮಾಡದಿರುವುದರಿಂದ, ಇದನ್ನು ನಂಬಿಕೊಂಡಿದ್ದ ನೂರಾರು ಪ್ರಕಾಶನ ಸಂಸ್ಥೆಗಳು ಮತ್ತು ಸಾವಿರಾರು ಲೇಖಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಕನ್ನಡದ ಶೇ. 80ಕ್ಕೂ ಹೆಚ್ಚು ಪ್ರಕಾಶಕರು ಸರ್ಕಾರದ ಸಗಟು ಖರೀದಿ ಯೋಜನೆಯನ್ನೇ ಅವಲಂಬಿಸಿದ್ದಾರೆ. ಸರ್ಕಾರವು 15 ಸಾವಿರ ಪುಸ್ತಕಗಳನ್ನು ಆಯ್ಕೆ ಪಟ್ಟಿಗೆ ಸೇರಿಸಿದಾಗ, ಪ್ರಕಾಶಕರು ತಮಗೆ ಆರ್ಡರ್ ಸಿಗುತ್ತದೆ ಎಂಬ ಭರವಸೆಯಲ್ಲಿ ಸಾಲ ಮಾಡಿ, ಬಡ್ಡಿ ತಂದು ಸಾವಿರಾರು ಪ್ರತಿಗಳನ್ನು ಮುದ್ರಿಸಿದ್ದರು. ಕಾಗದದ ಬೆಲೆ, ಶಾಯಿ ಮತ್ತು ಮುದ್ರಣ ವೆಚ್ಚ ಗಗನಕ್ಕೇರಿರುವ ಈ ಸಮಯದಲ್ಲಿ, ಬಂಡವಾಳ ಹೂಡಿದ ಪ್ರಕಾಶಕರು ಈಗ ದಿಕ್ಕೆಟ್ಟು ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಸೃಷ್ಠಿ ಪ್ರಕಾಶನದ ಮಾಲೀಕ ಸೃಷ್ಠಿ ನಾಗೇಶ್, ಗ್ರಂಥಾಲಯಗಳಿಗೆ ರಾಜ್ಯ ಸರ್ಕಾರವು ಪುಸ್ತಕ ಖರೀದಿ ಮಾಡದ ಕಾರಣ ಪ್ರಕಾಶಕರು ಕಷ್ಟದಲ್ಲಿದ್ದಾರೆ. ನಾವೇನು ಸರ್ಕಾರದ ಹಣದಲ್ಲಿ ಖರೀದಿ ಮಾಡುವಂತೆ ಕೇಳುತ್ತಿಲ್ಲ. ಗ್ರಂಥಾಲಯ ಸೆಸ್ ಎಂದು ಸಂಗ್ರಹಿಸಲಾಗುತ್ತದೆ. ಅದರ ಹಣದಲ್ಲಿಯೇ ಖರೀದಿ ಮಾಡಬಹುದು. ಬೆಂಗಳೂರು ಒಂದರಲ್ಲಿಯೇ 734 ಕೋಟಿ ರೂ. ಬಾಕಿ ಇದೆ. ಅದನ್ನು ಬಳಸಿಕೊಳ್ಳುತ್ತಿಲ್ಲ. ಆಡಳಿತದಲ್ಲಿನ ಕೊರತೆಯಿಂದ ಮತ್ತು ಭ್ರಷ್ಟಾಚಾರ ಹೆಚ್ಚಳದಿಂದ ಪುಸ್ತಕ ಖರೀದಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಮೂರು ವರ್ಷವಾದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಈ ಮೊದಲು ಗ್ರಂಥಾಲಯ ಇಲಾಖೆಯ ನಿರ್ದೇಶನಾಲಯ ಮೂಲಕ ಪುಸ್ತಕಗಳನ್ನು ಖರೀದಿಸಲಾಗುತ್ತಿತ್ತು. ಈಗ ಅದನ್ನು ಆಯುಕ್ತಾಲಯ ಮಾಡಲಾಗಿದೆ. ನಿರ್ದೇಶಕರು ಪ್ರಕಾಶಕರ ಕೈಗೆ ಸುಲಭವಾಗಿ ಲಭ್ಯವಾಗುತ್ತಿದ್ದರು. ಆಯುಕ್ತಾಲಯ ಆದ ಬಳಿಕ ಆಯುಕ್ತರು ಸಿಗುವುದಿಲ್ಲ. ಸಮಸ್ಯೆಗಳತ್ತ ಹೆಚ್ಚಿನ ಗಮನಹರಿಸುವುದಿಲ್ಲ. ಅಲ್ಲದೇ, ಪುಸ್ತಕಗಳಿಗೆ ಜಿಎಸ್‌ಟಿ ಶೇ.೧೨ರಿಂದ ಶೇ.೧೮ಕ್ಕೆ ಹೆಚ್ಚಳ ಮಾಡಲಾಗಿದೆ. ಇದು ಸಹ ಪ್ರಕಾಶಕರಿಗೆ ಹೊಡೆತ ಬಿದ್ದಿದ್ದೆ. ಹಲವು ಬಾರಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.
ಆಕೃತಿ ಪ್ರಕಾಶನ ಸಂಸ್ಥಾಪಕಿ ಶಾಲಿನಿ ಹೂಲಿ ಪ್ರದೀಪ್. ಮುದ್ರಿಸಿದ ಪುಸ್ತಕಗಳು ಮಾರಾಟವಾಗದೆ ಗೋದಾಮುಗಳಲ್ಲಿ ಕೊಳೆಯುತ್ತಿವೆ. ಇವುಗಳನ್ನು ಕಾಯ್ದಿಟ್ಟುಕೊಳ್ಳಲು ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಕಟ್ಟುವ ಸ್ಥಿತಿ ಪ್ರಕಾಶಕರದ್ದು. ಗೆದ್ದಲುಗಳಿಗೆ ತಿನ್ನಿಸಲು ನಾವು ಪುಸ್ತಕ ಮುದ್ರಿಸಿದಂತಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಹಲವು ಸಣ್ಣ ಮತ್ತು ಮಧ್ಯಮ ಗಾತ್ರದ ಪ್ರಕಾಶನ ಸಂಸ್ಥೆಗಳು ಈಗಾಗಲೇ ಬಾಗಿಲು ಮುಚ್ಚಿವೆ. ಇನ್ನೂ ಕೆಲವು ಸಂಸ್ಥೆಗಳು ಸಿಬ್ಬಂದಿಗೆ ಸಂಬಳ ನೀಡಲಾಗದೆ ಸಂಕಷ್ಟದಲ್ಲಿವೆ ಎಂದು ತಿಳಿಸಿದರು.
ಸರ್ಕಾರಕ್ಕೆ ವರದಿ ನೀಡಲಾಗಿದೆ
ಸಾಹಿತಿ ಮತ್ತು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಕರೀಗೌಡ ಬೀಚನಹಳ್ಳಿ, ಸರ್ಕಾರಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. 2021ರವರೆಗೆ ಎಲ್ಲಾ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದದ್ದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಸರ್ಕಾರವು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ದ ಫೆಡರಲ್ ಕರ್ನಾಟಕಕ್ಕೆ ಹೇಳಿದರು.
ರಾಜಕೀಯ ಇಚ್ಛಾಶಕ್ತಿಯ ಕೊರತೆ
ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡದಿರುವ ಸಮಸ್ಯೆಗೆ ರಾಜಕೀಯ ಪಕ್ಷಗಳೇ ನೇರ ಹೊಣೆ. ಬಿಜೆಪಿ ಸರ್ಕಾರದ ಆಡಳಿತವಧಿಯಲ್ಲಿ ಆರಂಭವಾದ ಈ ವಿಳಂಬ ನೀತಿ, ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ. "ಅನ್ನಭಾಗ್ಯ, ಗೃಹಲಕ್ಷ್ಮಿಯಂತಹ ಯೋಜನೆಗಳಿಗೆ ಸಾವಿರಾರು ಕೋಟಿ ಮೀಸಲಿಡುವ ಸರ್ಕಾರಕ್ಕೆ, ಜ್ಞಾನ ದಾಸೋಹಕ್ಕೆ ಕೆಲವೇ ಕೋಟಿಗಳನ್ನು ನೀಡಲು ಸಾಧ್ಯವಿಲ್ಲವೇ?" ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸರ್ಕಾರಗಳು ಬದಲಾದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಡತ ವಿಲೇವಾರಿಯಲ್ಲಿನ ವಿಳಂಬ ನೀತಿ ಬದಲಾಗಿಲ್ಲ. ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಒಂದು ಕಡೆ ಸರ್ಕಾರ ಡಿಜಿಟಲ್ ಗ್ರಂಥಾಲಯಗಳ ಬಗ್ಗೆ ಮಾತನಾಡುತ್ತದೆ. ಆದರೆ, ಗ್ರಾಮೀಣ ಕರ್ನಾಟಕದಲ್ಲಿ ಇಂದಿಗೂ ಭೌತಿಕ ಪುಸ್ತಕಗಳೇ ಜ್ಞಾನದ ಮೂಲ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಗಳಲ್ಲಿ ಪುಸ್ತಕಗಳೇ ಪ್ರಪಂಚವನ್ನು ತೋರಿಸುವ ಕಿಟಕಿಗಳು. ಡಿಜಿಟಲೀಕರಣದ ಹೆಸರಿನಲ್ಲಿ ಮುದ್ರಿತ ಪುಸ್ತಕಗಳ ಖರೀದಿಯನ್ನು ನಿಲ್ಲಿಸಿರುವುದು ಎಷ್ಟರಮಟ್ಟಿಗೆ ಸರಿ? ಎಂಬ ಚರ್ಚೆ ಶುರುವಾಗಿದೆ.
ಬಾಕಿ ಇರುವ 15 ಸಾವಿರ ಆಯ್ಕೆ ಪುಸ್ತಕಗಳ ಖರೀದಿಗೆ ತಕ್ಷಣವೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಪ್ರತಿ ವರ್ಷ ನಿರ್ದಿಷ್ಟ ತಿಂಗಳಲ್ಲಿ ಪುಸ್ತಕ ಖರೀದಿ ಪ್ರಕ್ರಿಯೆ ನಡೆಯುವಂತೆ ಕಾಯ್ದೆ ರೂಪಿಸಬೇಕು. ಸಂಗ್ರಹವಾಗುವ ಗ್ರಂಥಾಲಯ ಕರವನ್ನು ಕಟ್ಟುನಿಟ್ಟಾಗಿ ಗ್ರಂಥಾಲಯಗಳ ಅಭಿವೃದ್ಧಿಗೆ ಮತ್ತು ಪುಸ್ತಕ ಖರೀದಿಗೆ ಬಳಸಬೇಕು ಎಂಬ ಒತ್ತಾಯಗಳು ಸಾಹಿತ್ಯ ವಲಯದಲ್ಲಿ ಕೇಳಿಬಂದಿವೆ.
ಸರ್ಕಾರವು ಅನ್ನಭಾಗ್ಯ, ಗೃಹಲಕ್ಷ್ಮಿಯಂತಹ ಯೋಜನೆಗಳಿಗೆ ನೀಡುವ ಆಧ್ಯತೆಯನ್ನು 'ಅಕ್ಷರ ಜ್ಞಾನ'ಕ್ಕೂ ನೀಡಬೇಕಿದೆ. ತಕ್ಷಣವೇ ಆಯ್ಕೆ ಪಟ್ಟಿಗೆ ಆರ್ಥಿಕ ಅನುಮೋದನೆ ನೀಡಿ, ಪುಸ್ತಕಗಳನ್ನು ಖರೀದಿಸುವ ಮೂಲಕ ಸಾಯುತ್ತಿರುವ ಪುಸ್ತಕ ಉದ್ಯಮಕ್ಕೆ ಆಮ್ಲಜನಕ ನೀಡಬೇಕಿದೆ. ಇಲ್ಲದಿದ್ದರೆ, ಕನ್ನಡದ ಪ್ರಕಾಶನ ಲೋಕ ಚೇತರಿಸಿಕೊಳ್ಳಲಾಗದಷ್ಟು ಕುಸಿದುಹೋಗುವ ಅಪಾಯವಿದೆ.

