ಚಿನ್ನ ಕಳ್ಳಸಾಗಣೆ ಪ್ರಕರಣ; ನಟಿ ರನ್ಯಾಗೆ ಜಾಮೀನು ನಿರಾಕರಣೆ, ಗಂಭೀರ ಪ್ರಕರಣ ಎಂದ ಕೋರ್ಟ್​
x
ರನ್ಯಾರಾವ್​ ಹಾಗೂ ವಶಪಡಿಸಿಕೊಂಡಿರುವ ಬಂಗಾರದ ಬಿಸ್ಕತ್​ಗಳು.

ಚಿನ್ನ ಕಳ್ಳಸಾಗಣೆ ಪ್ರಕರಣ; ನಟಿ ರನ್ಯಾಗೆ ಜಾಮೀನು ನಿರಾಕರಣೆ, ಗಂಭೀರ ಪ್ರಕರಣ ಎಂದ ಕೋರ್ಟ್​

ಜಾಮೀನು ಅರ್ಜಿ ನಿರಾಕರಿಸಿದ ನಂತರ, ರನ್ಯಾ ರಾವ್‌ ಅವರ ಕಾನೂನು ತಂಡವು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದೆ. ಅಲ್ಲಿ ತೀರ್ಪು ಬರುವ ತನಕ ಅವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.


ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪ್ರಕರಣದ ಆರೋಪಗಳು ಗಂಭೀರವಾಗಿವೆ ಎಂದು ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್​ ಅಭಿಪ್ರಾಯಪಟ್ಟಿದ್ದಾರೆ.

ರನ್ಯಾ ರಾವ್‌ ಬೃಹತ್ ಪ್ರಮಾಣದ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅವರ ಅರ್ಜಿ ತಿರಸ್ಕೃತಗೊಂಡ ನಂತರ ಅವರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅಲ್ಲಿಯೂ ಹಿನ್ನಡೆಯಾಗಿದೆ.

ಜಾಮೀನು ಅರ್ಜಿ ನಿರಾಕರಿಸಿದ ನಂತರ, ರನ್ಯಾ ರಾವ್‌ ಅವರ ಕಾನೂನು ತಂಡವು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದೆ. ಅಲ್ಲಿ ತೀರ್ಪು ಬರುವ ತನಕ ಅವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

ರನ್ಯಾ ರಾವ್‌ ಮಾರ್ಚ್​ 4ರಂದು ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅವರು ಭಾರತಕ್ಕೆ 12 ಕೋಟಿ ರೂಪಾಯಿ ಮೌಲ್ಯದ 14.8 ಕಿಲೋಗ್ರಾಂ ಚಿನ್ನ ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಕನ್ನಡದ ನಟಿ ದುಬೈಯಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿನ್ನ ಸಾಗಿಸಿದ್ದರು.

ವಿಶೇಷವಾಗಿ ವಿನ್ಯಾಸಗೊಳಿಸಿದ ವೇಸ್ಟ್ ಬೆಲ್ಟ್‌ನ ಒಳಗೆ ರನ್ಯಾ ರಾವ್​ ಅಡಗಿಸಿಟ್ಟಿದ್ದ ಚಿನ್ನ ಬಿಸ್ಕೆಟ್​ಗಳನ್ನು ಇಂಟೆಲಿಜೆನ್ಸ್ ಡೈರೆಕ್ಟೊರೇಟ್ (ಡಿಆರ್​ಐ) ಅಧಿಕಾರಿಗಳು ಪತ್ತೆಹಚ್ಚಿದ್ದರು. ನಟಿಯ ಬೆಂಗಳೂರು ನಿವಾಸದಲ್ಲಿ ಶೋಧನೆ ನಡೆಸಿದಾಗ, 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಮತ್ತು 2.67 ಕೋಟಿ ರೂಪಾಯಿ ನಗದು ದೊರಕಿತ್ತು. ಇದರೊಂದಿಗೆ, ಒಟ್ಟು 17.29 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.

ರನ್ಯಾ ರಾವ್‌ ಅವರು ಒಂದು ವರ್ಷದಲ್ಲಿ ಸುಮಾರು 30 ಬಾರಿ ದುಬೈಗೆ ಪ್ರಯಾಣಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಪ್ರತಿ ಬಾರಿಯೂ ಗಮನಾರ್ಹ ಪ್ರಮಾಣದ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಿದ ಆರೋಪವಿದೆ. ಪ್ರತಿ ಕಿಲೋಗ್ರಾಂ ಚಿನ್ನಕ್ಕೆ 1 ಲಕ್ಷ ರೂಪಾಯಿ ಗಳಿಸಿದ್ದಾರೆ. ಪ್ರತಿ ಪ್ರಯಾಣಕ್ಕೆ 12-13 ಲಕ್ಷ ರೂಪಾಯಿ ಗಳಿಸಿದ್ದಾರೆ ಎಂದು ತನಿಖೆಗಳು ತಿಳಿಸಿವೆ.

ಚಿನ್ನವನ್ನು ಕಳ್ಳಸಾಗಣೆ ಮಾಡುವ ವಿಧಾನವನ್ನು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಕಲಿತಿದ್ದಾರೆ ಎಂದು ಅವರು ಹೇಳಿದ್ದಾರೆ.

ತಪಾಸಣೆಯಿಂದ ಅಕ್ರಮ ಮುಕ್ತಿ

ರನ್ಯಾ ರಾವ್‌ ಅವರ ಮಲತಂದೆ ಮತ್ತು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ) ಕೆ. ರಾಮಚಂದ್ರ ರಾವ್‌ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರಿಗೆ ಪ್ರೊಟೊಕಾಲ್ ಸಹಾಯ ನೀಡಲು ಒಬ್ಬ ಕಾನ್ಸ್ಟೆಬಲ್‌ಗೆ ಸೂಚನೆ ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕರ್ನಾಟಕದಲ್ಲಿ ದಾಳಿ ಆರಂಭಿಸಿದೆ. ಅಲ್ಲದೆ, ಅಂತರರಾಷ್ಟ್ರೀಯ ಚಿನ್ನದ ಕಳ್ಳಸಾಗಾಣಿಕೆ ಜಾಲದ ನಂಟು ಇದೆ ಎಂದೂ ಹೇಳಲಾಗಿದೆ.

Read More
Next Story