ಹಲವು ಕೇಸುಗಳಿರುವ ವಿಚಾರಣಾಧೀನ ಕೈದಿಗೆ ಜಾಮೀನು ಇಲ್ಲ: ಹೈಕೋರ್ಟ್ ತೀರ್ಪು
ವಿಚಾರಣಾಧೀನ ಕೈದಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಚಾರಣಾಧೀನ ಕೈದಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನಕಲಿ ದಾಖಲೆ ಸೃಷ್ಟಿಸಿ ಠೇವಣಿದಾರರಿಗೆ 1,522 ಕೋಟಿ ರೂ. ಹಣ ವಂಚಿಸಿದ ಪ್ರಕರಣದಲ್ಲಿ 31 ತಿಂಗಳಿಂದ ಜೈಲಿನಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಶ್ರೀಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಕೆ.ರಾಮಕೃಷ್ಣ (73) ಅವರು ಬಿಎನ್‌ಎಸ್‌ಎಸ್ ಸೆಕ್ಷನ್ 479 ಅನ್ನು ಆಧರಿಸಿ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ, ಬಿಎನ್‌ಎಸ್‌ಎಸ್ ಸೆಕ್ಷನ್ 479 (2) ಪ್ರಕಾರ ವ್ಯಕ್ತಿಯೋರ್ವನ ವಿರುದ್ಧ ಹಲವು ಪ್ರಕರಣ ದಾಖಲಾಗಿ, ಅದರಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತನಿಖೆ, ವಿಚಾರಣೆ ಅಥವಾ ಕೋರ್ಟ್ ವಿಚಾರಣೆ ಬಾಕಿಯಿದ್ದರೆ, ಆಗ ಆತನನ್ನು ನ್ಯಾಯಾಲಯ ಜಾಮೀನು ಮೇಲೆ ಬಿಡುಗಡೆ ಮಾಡಬಾರದು ಎಂದು ಹೇಳುತ್ತದೆ. ಇನ್ನು ವಿಧಿಸಬಹುದಾದ ಗರಿಷ್ಠ ಜೈಲು ಶಿಕ್ಷೆ ಅವಧಿಯ ಅರ್ಧಕ್ಕಿಂತ ಹೆಚ್ಚು ಅವಧಿಯವರೆಗೆ ಒಬ್ಬ ವ್ಯಕ್ತಿಯನ್ನು ಬಂಧನದಲ್ಲಿ ಮುಂದುವರಿಸಿ ಆದೇಶಿಸಲು ಬಿಎನ್‌ಎಸ್‌ಎಸ್ ಸೆಕ್ಷನ್ 479(1) ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ. ಹಾಗಾಗಿ, ಜಾಮೀನು ನೀಡಬೇಕಾದ ಸಂದರ್ಭದಲ್ಲಿ ಸೆಕ್ಷನ್ 479, 479(1) ಮತ್ತು 479(2) ಅನ್ನು ಜೊತೆಗೂಡಿ ಓದಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ವಿಚಾರಣಾಧೀನ ಕೈದಿಯ ವಿರುದ್ಧದ ಅಪರಾಧ ಪ್ರಕರಣಕ್ಕೆ ನಿಗದಿಯಾಗಿರುವ ಒಟ್ಟು ಶಿಕ್ಷೆ ಪ್ರಮಾಣದಲ್ಲಿ ಮೂರನೇ ಒಂದು ಭಾಗದ ದಿನಗಳನ್ನು ಕೈದಿಯು ಜೈಲಿನಲ್ಲಿ ಕಳೆದರೆ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ ಎಂದು ಪ್ರತಿಪಾದಿಸುವ ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 479, ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿ ಕೆ.ರಾಮಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ಈ ಆದೇಶ ಮಾಡಿದೆ.