ದೇವಾಲಯ ಸಮಿತಿಯಲ್ಲಿ ಕುಷ್ಠರೋಗಿ, ವಿಕಲಚೇತನರಿಗೆ  ಕಾನೂನಿನಲ್ಲೇ ಅವಕಾಶವಿಲ್ಲ!
x

ದೇವಾಲಯ ಸಮಿತಿಯಲ್ಲಿ ಕುಷ್ಠರೋಗಿ, ವಿಕಲಚೇತನರಿಗೆ ಕಾನೂನಿನಲ್ಲೇ ಅವಕಾಶವಿಲ್ಲ!

'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಕಾಯಿದೆ'ಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯತೆಗೆ ಕುಷ್ಠರೋಗಿಗಳು, ವಿಕಲಚೇತನರಿಗೆ ಅವಕಾಶವಿಲ್ಲ! ಅದನ್ನು ಬದಲಾಯಿಸಲು ಈಗ ಸರ್ಕಾರ ಮುಂದಾಗಿದೆ.


Click the Play button to hear this message in audio format

"ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು" ಎಂಬುದು ಎಲ್ಲಾ ಧರ್ಮಗಳ ಮೂಲ ತತ್ವ. ಆದರೆ ವಿಪರ್ಯಾಸವೆಂದರೆ, ದೇವರ ಹೆಸರಿನಲ್ಲಿ ದೇವಾಲಯಗಳ ಆಡಳಿತದಲ್ಲಿ ತಾರತಮ್ಯಗಳು ಸಾಕಾಷ್ಟು ನಡೆಯುತ್ತವೆ. ವಿಕಲಚೇತನರು ಮತ್ತು ಕುಷ್ಠರೋಗ ಕಾಯಿಲೆ ಇರುವವರನ್ನು 'ಅನರ್ಹರು' ಎಂದು ಪರಿಗಣಿಸಲಾಗಿತ್ತು.

ಈ ತಾರತಮ್ಯದ ಮತ್ತು ಅಮಾನವೀಯ ಪದ್ಧತಿಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 1997ರ 'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯಿದೆ'ಗೆ ತಿದ್ದುಪಡಿ ತರಲು ಮುಂದಾಗುವ ಮೂಲಕ , ಕುಷ್ಠರೋಗಿಗಳು ಮತ್ತು ವಿಕಲಚೇತನರು (ಕಿವುಡರು ಮತ್ತು ಮೂಗರು) ಇನ್ಮುಂದೆ ದೇವಾಲಯದ ವ್ಯವಸ್ಥಾಪನಾ ಸಮಿತಿಗಳಲ್ಲಿ ಸದಸ್ಯರಾಗಲು ಅರ್ಹರು ಎಂದು ಅಧಿಕೃತವಾಗಿ ಘೋಷಿಸಲು ಮುಂದಾಗಿದೆ. ಇದು ಕೇವಲ ಒಂದು ಕಾನೂನಿನ ತಿದ್ದುಪಡಿಯಲ್ಲ, ಬದಲಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತದಲ್ಲಿ ಪಾಲು ನೀಡುವ ಸಾಮಾಜಿಕ ನ್ಯಾಯದ ಕ್ರಾಂತಿಕಾರಿ ನಡೆಯಾಗಿದೆ.

1997ರಲ್ಲಿ ಜಾರಿಗೆ ಬಂದಿದ್ದ 'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯಿದೆ'ಯ ಸೆಕ್ಷನ್ 25ರಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಲು ಇರುವ ಅನರ್ಹತೆಗಳ ಪಟ್ಟಿಯನ್ನು ನೀಡಲಾಗಿತ್ತು. ಅದರಲ್ಲಿ ಕುಷ್ಠರೋಗ ಪೀಡಿತರು, ವಿಕಲಚೇತನರು (ಕಿವುಡರು ಮತ್ತು ಮೂಗರು) ಸೇರಿದ್ದರು. ಈ ಎರಡು ವರ್ಗದ ಜನರನ್ನು ಆಡಳಿತ ಮಂಡಳಿಯಿಂದ ಹೊರಗಿಡಲಾಗಿತ್ತು. ಅಂದರೆ, ಒಬ್ಬ ವ್ಯಕ್ತಿ ಎಷ್ಟೇ ಬುದ್ಧಿವಂತನಾಗಿದ್ದರೂ, ದೈವಭಕ್ತನಾಗಿದ್ದರೂ ಅಥವಾ ಸಮಾಜ ಸೇವಕನಾಗಿದ್ದರೂ, ಆತನಿಗೆ ಕುಷ್ಠರೋಗವಿದ್ದರೆ ಅಥವಾ ವಿಕಲಚೇತನನಾಗಿದ್ದರೆ ಆತನನ್ನು ಸಮಿತಿಗೆ ಸೇರಿಸಿಕೊಳ್ಳುವಂತಿರಲಿಲ್ಲ. ಇದು ಬ್ರಿಟಿಷ್ ಕಾಲದ ಮನಸ್ಥಿತಿಯನ್ನು ಅಥವಾ ರೋಗಗಳ ಬಗೆಗಿನ ಮೌಢ್ಯವನ್ನು ಪ್ರತಿಬಿಂಬಿಸುವ ಕಾನೂನಾಗಿತ್ತು. ಇದನ್ನು ತೆಗೆದುಹಾಕಿ ವಿಧೇಯಕಕ್ಕೆ ತಿದ್ದುಪಡಿ ತರಲು ಮುಂದಾಗಿದ್ದು, ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಸರ್ಕಾರ ವಿಧೇಯಕ ಮಂಡಿಸುವ ಸಾಧ್ಯತೆ ಇದೆ.

ತಿದ್ದುಪಡಿಯ ಅಗತ್ಯ ಮತ್ತು ಸಂವಿಧಾನದ ಆಶಯ

ಭಾರತದ ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುತ್ತದೆ. 21ನೇ ವಿಧಿಯು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಆದರೆ, 1997ರ ಕಾಯ್ದೆಯು ಈ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವಂತಿತ್ತು. ಕುಷ್ಠರೋಗ ಎಂಬುದು ಗುಣಪಡಿಸಬಹುದಾದ ಕಾಯಿಲೆ. ವೈದ್ಯಕೀಯ ವಿಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ, ಕುಷ್ಠರೋಗಿಗಳನ್ನು ಅಸ್ಪೃಶ್ಯರಂತೆ ಕಾಣುವುದು ಅಥವಾ ಅವರನ್ನು ಸಾರ್ವಜನಿಕ ಹುದ್ದೆಗಳಿಂದ ಅನರ್ಹಗೊಳಿಸುವುದು ಕಾನೂನುಬಾಹಿರ. ಮತ್ತು ಅನೈತಿಕ. ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ಕುಷ್ಠರೋಗಿಗಳನ್ನು ತಾರತಮ್ಯದಿಂದ ಕಾಣಬಾರದು ಎಂದು ಎಚ್ಚರಿಸಿದೆ. ಅದೇ ರೀತಿ, ವಿಕಲಚೇತನರ ಹಕ್ಕುಗಳ ಕಾಯಿದೆ 2016ರ ಪ್ರಕಾರ, ವಿಕಲಚೇತನರಿಗೆ ಸಮಾನ ಅವಕಾಶ ನೀಡಬೇಕು. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಳೆಯ ಕಾಯ್ದೆಯಲ್ಲಿದ್ದ ಪದಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ಸಾಮಾಜಿಕ ಪರಿಣಾಮಗಳು ಕಳಂಕ ನಿವಾರಣೆ

ಭಾರತೀಯ ಸಮಾಜದಲ್ಲಿ ಕುಷ್ಠರೋಗದ ಬಗ್ಗೆ ಇಂದಿಗೂ ತಪ್ಪು ಕಲ್ಪನೆಗಳಿವೆ. ಅದನ್ನು ಪಾಪದ ಫಲ ಎಂದೋ, ಸಾಂಕ್ರಾಮಿಕ ಎಂದೋ ಭಯಪಡುವವರಿದ್ದಾರೆ. ಸರ್ಕಾರ ಅವರನ್ನು ದೇವಾಲಯದ ಸಮಿತಿಗಳಲ್ಲಿ ಕೂರಿಸುವ ಮೂಲಕ, ಇದು ಕೇವಲ ಒಂದು ರೋಗ, ಪಾಪವಲ್ಲ ಮತ್ತು ಇವರು ನಮ್ಮಂತೆಯೇ ಮನುಷ್ಯರು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತಿದೆ. ಇದು ರೋಗದ ಬಗೆಗಿನ ಸಾಮಾಜಿಕ ಕಳಂಕವನ್ನು ಅಳಿಸಿಹಾಕಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.

ಅನುಕಂಪದಿಂದ ಅಧಿಕಾರದ ಕಡೆಗೆ

ಸಾಮಾನ್ಯವಾಗಿ ದೇವಾಲಯಗಳಿಗೆ ಬರುವ ಕುಷ್ಠರೋಗಿಗಳು ಅಥವಾ ತೀ ವ್ರ ವಿಕಲಚೇತನರನ್ನು ಭಕ್ತರು ಅನುಕಂಪದಿಂದ ನೋಡುತ್ತಾರೆ, ಅವರಿಗೆ ದಾನ ನೀಡುತ್ತಾರೆ. ಅವರು ಸದಾ 'ಫಲಾನುಭವಿ'ಗಳಾಗಿಯೇ ಉಳಿದಿರುತ್ತಾರೆ. ಆದರೆ, ಈ ತಿದ್ದುಪಡಿಯಿಂದ ಅವರು 'ನಿರ್ಧಾರ ತೆಗೆದುಕೊಳ್ಳುವವರ' ಸ್ಥಾನಕ್ಕೆ ಏರುತ್ತಾರೆ. ದೇವಾಲಯದ ಉತ್ಸವ ಹೇಗಿರಬೇಕು? ಹಣಕಾಸು ನಿರ್ವಹಣೆ ಹೇಗಿರಬೇಕು? ಎಂಬ ನಿರ್ಧಾರಗಳನ್ನು ಅವರು ಕೈಗೊಳ್ಳಲಿದ್ದಾರೆ. ಇದು ಅವರಲ್ಲಿ ಅದಮ್ಯವಾದ ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ತುಂಬುತ್ತದೆ.

ಸರ್ಕಾರದ ನಡೆಯುವ ದೈಹಿಕ ನ್ಯೂನತೆ ಎಂದರೆ ಬೌದ್ಧಿಕ ಅಸಾಮರ್ಥ್ಯವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಒಬ್ಬ ವ್ಯಕ್ತಿ ಮಾತು ಬಾರದವನಾಗಿರಬಹುದು. ಆದರೆ ಆತನ ಆಲೋಚನಾ ಶಕ್ತಿ ಮತ್ತು ಆಡಳಿತಾತ್ಮಕ ಕೌಶಲ ಅದ್ಭುತವಾಗಿರಬಹುದು. ದೇವಾಲಯದ ಆಡಳಿತಕ್ಕೆ ಬೇಕಿರುವುದು ಪ್ರಾಮಾಣಿಕತೆ ಮತ್ತು ಭಕ್ತಿಯೇ ಹೊರತು ದೈಹಿಕ ಪರಿಪೂರ್ಣತೆಯಲ್ಲ. ಇತಿಹಾಸದಲ್ಲಿ ಮಹಾನ್ ಜ್ಞಾನಿಗಳು ದೈಹಿಕ ನ್ಯೂನತೆ ಮೀರಿ ಬೆಳೆದಿದ್ದಾರೆ. ಸರ್ಕಾರದ ಈ ನಿರ್ಧಾರ ಅಂತಹ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ವಿಕಲಚೇತನರು ಸಮಿತಿಯ ಭಾಗವಾದಾಗ, ದೇವಾಲಯದ ಮೂಲಸೌಲಭ್ಯಗಳ ಬಗ್ಗೆಯೂ ಗಮನ ಹರಿಸಲು ಸಾಧ್ಯವಾಗುತ್ತದೆ. ಗಾಲಿಕುರ್ಚಿ ಹೋಗಲು ರ್ಯಾಂಪ್ ವ್ಯವಸ್ಥೆ, ಅಂಧರಿಗೆ ಬ್ರೈಲ್ ಲಿಪಿ ಫಲಕಗಳು ಮುಂತಾದವುಗಳ ಅಗತ್ಯವನ್ನು ಒಬ್ಬ ವಿಕಲಚೇತನ ಸದಸ್ಯ ಸಮಿತಿಯ ಗಮನಕ್ಕೆ ತರಲು ಹೆಚ್ಚು ಸಮರ್ಥನಾಗಿರುತ್ತಾನೆ. ಇದರಿಂದ ದೇವಾಲಯಗಳು ಎಲ್ಲರಿಗೂ ಸ್ನೇಹಮಯವಾಗಿ ಬದಲಾಗಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಸರ್ಕಾರ ಕಾನೂನು ತಿದ್ದುಪಡಿ ಮಾಡಿರುವುದು ಸ್ವಾಗತಾರ್ಹವಾದರೂ, ಇದರ ಅನುಷ್ಠಾನದಲ್ಲಿ ಕೆಲವು ಸವಾಲುಗಳಿವೆ. ಕಾನೂನು ಬದಲಾದರೂ ಜನರ ಮನಸ್ಥಿತಿ ಬದಲಾಗಲು ಸಮಯ ಬೇಕು. ಸಮಿತಿಯ ಇತರೆ ಸದಸ್ಯರು ಕುಷ್ಠರೋಗಿ ಅಥವಾ ವಿಕಲಚೇತನ ಸದಸ್ಯರನ್ನು ಸಮಾನವಾಗಿ ಕಾಣುತ್ತಾರೆಯೇ? ಎಂಬುದು ಮುಖ್ಯ. ಕೇವಲ ಸಾಂಕೇತಿಕವಾಗಿ ಆಡಳಿತ ಮಂಡಳಿಯಲ್ಲಿ ಇವರನ್ನು ನೇಮಿಸದೆ, ನಿಜವಾಗಿಯೂ ಅರ್ಹತೆ ಮತ್ತು ಆಸಕ್ತಿ ಇರುವವರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ

ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸಲು ಇದ್ದ ಹಳೆಯ ಕಾಲದ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ ಮಾನವೀಯ ಮೌಲ್ಯ ಎತ್ತಿಹಿಡಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಕುಷ್ಠರೋಗಿಗಳು ಹಾಗೂ ವಿಕಲಚೇತನರಿಗೆ ದೇಗುಲ ವ್ಯವಸ್ಥಾಪನಾ ಸಮಿತಿಗಳಲ್ಲಿ ಸದಸ್ಯತ್ವ ನೀಡಲು ಅಡ್ಡಿಯಾಗಿದ್ದ ನಿಯಮಗಳಿಗೆ ತಿದ್ದುಪಡಿ ತರಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2025’ರಲ್ಲಿ ಈ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 25(4)(i) ಮತ್ತು (ii)ರಲ್ಲಿ, ಕುಷ್ಟರೋಗದಿಂದ ಬಳಲುತ್ತಿರುವವರು ಅಥವಾ ವಿಕಲಚೇತನರು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾಗಲು ಅನರ್ಹರು ಎಂಬ ನಿಯಮವಿತ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ತಾರತಮ್ಯ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಕಾಯ್ದೆಯಲ್ಲಿರುವ "ಕಿವುಡ ಅಥವಾ ಮೂಕನಾಗಿದ್ದರೆ" ಮತ್ತು "ಅಥವಾ ಕುಷ್ಠ" ಎಂಬ ಪದಗಳನ್ನು ಕೈಬಿಡಲು ನಿರ್ಧರಿಸಿದೆ. ಇದರಿಂದ ದೈಹಿಕ ನ್ಯೂನತೆಗಳಿದ್ದರೂ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಳ್ಳಲು ಸಮಾನ ಅವಕಾಶ ಸಿಗಲಿದೆ. ಈ ಸಂಬಂಧ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ.

ರಾಜ್ಯ ಸರ್ಕಾರದ ಈ ನಿರ್ಧಾರವು ಪ್ರಗತಿಪರ ಸಮಾಜದ ಸಂಕೇತವಾಗಿದೆ. ಬಸವಣ್ಣನವರ ನಾಡಿನಲ್ಲಿ "ಕಾಯವೇ ಕೈಲಾಸ" ಎಂಬ ತತ್ವವಿದೆ. ದೇಹದಲ್ಲಿ ಎಷ್ಟೇ ನ್ಯೂನತೆಗಳಿದ್ದರೂ, ಆತ್ಮಶುದ್ಧಿ ಮತ್ತು ಕಾಯಕ ನಿಷ್ಠೆ ಮುಖ್ಯ ಎಂಬುದನ್ನು ಈ ತಿದ್ದುಪಡಿ ಎತ್ತಿ ಹಿಡಿದಿದೆ. ಕುಷ್ಠರೋಗಿಗಳು ಮತ್ತು ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇದೊಂದು ದಿಟ್ಟ ಹೆಜ್ಜೆ. ದೇವಸ್ಥಾನದ ಗರ್ಭಗುಡಿಯ ದೀಪದ ಬೆಳಕು ಎಲ್ಲರಿಗೂ ಒಂದೇ ರೀತಿ ಕಾಣುವಂತೆ, ದೇವಾಲಯದ ಆಡಳಿತದಲ್ಲಿಯೂ ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಲಿ. ದೈಹಿಕ ಮಿತಿಗಳನ್ನು ಮೀರಿ, ಮಾನಸಿಕ ಮತ್ತು ಸಾಮಾಜಿಕವಾಗಿ ಅವರನ್ನು ಸಶಕ್ತರನ್ನಾಗಿಸುವ ಈ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹವಾಗಿದೆ.

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಕ್ರಮಕ್ಕೆ ಮುಂದಾದ ಸರ್ಕಾರ

ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ' ಎಂಬ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿತ್ತು. ಕುಷ್ಠರೋಗಿಗಳನ್ನು ಸಾರ್ವಜನಿಕ ಹುದ್ದೆಗಳಿಂದ ಮತ್ತು ಸಮಿತಿಗಳಿಂದ ಅನರ್ಹಗೊಳಿಸುವ ದೇಶದ ವಿವಿಧ ಕಾನೂನುಗಳು ಸಂವಿಧಾನಬಾಹಿರ ಮತ್ತು ತಾರತಮ್ಯದಿಂದ ಕೂಡಿವೆ ಎಂದು ದೂರು ನೀಡಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂತಹ ಕಾನೂನುಗಳನ್ನು ರದ್ದುಪಡಿಸುವಂತೆ ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಕುಷ್ಠರೋಗ ನಿರ್ಮೂಲನೆಯ ಭಾಗವಾಗಿ, ಇಂತಹ ಹಳೆಯ ಮತ್ತು ತಾರತಮ್ಯದ ಕಾನೂನುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು. ಈ ಆದೇಶದ ನಂತರವೇ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ತಮ್ಮ ಹಳೆಯ ಕಾಯ್ದೆಗಳಿಗೆ ತಿದ್ದುಪಡಿ ತರಲು ಆರಂಭಿಸಿದವು. ಕರ್ನಾಟಕ ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರವು ಇದೇ ಆದೇಶದ ಪಾಲನೆಯ ಭಾಗವಾಗಿದೆ.

Read More
Next Story