Artificial Intelligence | ಅಂಕೋಲ ಘಟನೆ ತಪ್ಪಿಸಬಹುದಿತ್ತೇ? ಎನ್‌ಐಟಿಕೆ ಸಂಶೋಧಿಸಿದೆ ಲ್ಯೂಸ್‌
x
ಚಿತ್ರ: SIMULATOR- ಲ್ಯೂಸ್‌(LEWSನ ಮಾದರಿ)

Artificial Intelligence | ಅಂಕೋಲ ಘಟನೆ ತಪ್ಪಿಸಬಹುದಿತ್ತೇ? ಎನ್‌ಐಟಿಕೆ ಸಂಶೋಧಿಸಿದೆ ಲ್ಯೂಸ್‌

ಲ್ಯಾಂಡ್‌ಸ್ಲೈಡ್‌ ಅರ್ಲಿ ವಾರ್ನಿಂಗ್‌ ಸಿಸ್ಟಂ(LEWS) ಭೂಕುಸಿತದಿಂದಾಗುವ ಸಾವು ನೋವುಗಳನ್ನು ತಡೆಯಲು ಮುನ್ನೆಚ್ಚರಿಕೆ ನೀಡುವ ಸಾಧನ. ಎಂಜಿನಿಯರಿಂಗ್‌ ಪಠ್ಯದೊಳಗೇ ಉಳಿದಿದ್ದ ತಂತ್ರಜ್ಞಾನವೊಂದನ್ನು ಪ್ರಯೋಗಕ್ಕೆ ತರಲಾಗಿದೆ. ಪ್ರಯೋಗಾಲಯದಲ್ಲಿ ಯಶಸ್ವಿಯಾಗಿರುವ ಈ ಸಾಧನ ಮುಂದೆ ವಾಸ್ತವ ಪ್ರದೇಶಗಳಿಗೆ ತೆರೆದುಕೊಳ್ಳುವುದು ಬಾಕಿ ಇದೆ.


ಭೂಕುಸಿತ ಮೊದಲೇ ತಿಳಿಯುವಂತಾದರೆ ಹೇಗೆ? ಅದೆಷ್ಟೋ ಸಾವು- ನೋವುಗಳನ್ನು ತಪ್ಪಿಸಬಹುದಿತ್ತಲ್ಲಾ. ಒಂದು ವೇಳೆ ಅಂಕೋಲ ಶಿರೂರಿನಲ್ಲಿ ಗುಡ್ಡ ಕುಸಿತ ಆಗುವುದು ಗೊತ್ತಿದ್ದರೆ ಆ ಎಂಟೂ ಮಂದಿಯ ಅಮೂಲ್ಯ ಪ್ರಾಣ ಉಳಿಸಬಹುದಿತ್ತಲ್ಲಾ!

ಹೌದು ಇಂಥದ್ದೊಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಮಂಗಳೂರು ಸುರತ್ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕರ್ನಾಟಕ (NITK). ಈ ಹೊಸ ಸಾಧನದ ಹೆಸರು ಲ್ಯೂಸ್‌.

ಏನಿದು ಲ್ಯೂಸ್‌ (LEWS)?

ಲ್ಯಾಂಡ್‌ಸ್ಲೈಡ್‌ ಅರ್ಲಿ ವಾರ್ನಿಂಗ್‌ ಸಿಸ್ಟಂನ ಹೃಸ್ವರೂಪವೇ LEWS. ಭೂಕುಸಿತದಿಂದಾಗುವ ಸಾವು ನೋವುಗಳನ್ನು ತಡೆಯಲು ಮುನ್ನೆಚ್ಚರಿಕೆ ನೀಡುವ ಸಾಧನ. ಅಂದರೆ ಇದು ಒಂದೇ ಸಾಧನವನ್ನು ಅವಲಂಬಿಸುವ ಬದಲು ಸಮಗ್ರ ವಿಧಾನವನ್ನು ಒಳಗೊಂಡಿರುತ್ತದೆ. ಈಗಾಗಲೇ ಎಂಜಿನಿಯರಿಂಗ್‌ ಪಠ್ಯದೊಳಗೇ ಉಳಿದಿದ್ದ ತಂತ್ರಜ್ಞಾನವೊಂದನ್ನು ಪ್ರಯೋಗಕ್ಕೆ ತರಲಾಗಿದೆ. ಪ್ರಯೋಗಾಲಯದಲ್ಲಿ ಯಶಸ್ವಿಯಾಗಿರುವ ಈ ಸಾಧನ ಮುಂದೆ ವಾಸ್ತವ ಪ್ರದೇಶಗಳಿಗೆ ತೆರೆದುಕೊಳ್ಳುವುದು ಬಾಕಿ ಇದೆ.

ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀವಲಸ ಕೊಳತಾಯರ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿ ವರುಣ್‌ ಮೆನನ್‌ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಬಹು ಹಂತದ ಭೂ ಕುಸಿತದ ಸಾಧ್ಯತೆಗಳ ಬಗ್ಗೆ ಈ ಸಾಧನ ಎಚ್ಚರಿಕೆ ನೀಡುತ್ತದೆ.

ಭೂಕುಸಿತ ಸಾಧ್ಯತೆ- ಪರಿಗಣಿಸುವ ಅಂಶಗಳು

ಭೂಮಿಯ ಸಂರಚನೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತುಂಬಾ ಭಿನ್ನವಾಗಿರುತ್ತದೆ. ಅದರ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಅಲ್ಲಿ ಈ ಹಿಂದೆ ಭೂಕುಸಿತ ಆಗಿದ್ದಲ್ಲಿ ಅಥವಾ ಭೂಮಿಯ ಸಂರಚನೆಯಲ್ಲಿ ವ್ಯತ್ಯಾಸಗಳೇನಾದರೂ ಇದ್ದಲ್ಲಿ ಆ ಇತಿಹಾಸದ ದತ್ತಾಂಶಗಳನ್ನು ದಾಖಲಿಸಲಾಗುತ್ತದೆ. ಮಳೆ ಪ್ರಮಾಣ, ಗಾಳಿ, ಭೂಮಿಯ ಮೃದುತ್ವ ಇತ್ಯಾದಿಯನ್ನು ಗಮನಿಸುತ್ತಲೇ ಇರುವ ಈ ಸಾಧನವು ಭೂಕುಸಿತದ ಸಾಧ್ಯತೆ ಇದ್ದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ರವಾನಿಸುತ್ತದೆ (ವಾಟ್ಸ್‌ಆಪ್‌, ಇಮೇಲ್‌, ಎಸ್‌ಎಂಎಸ್‌ ಇತ್ಯಾದಿ)̤. ಸಾಧನದ ಮೇಲ್ಭಾಗ ಅಳವಡಿಸಿರುವ ಕ್ಯಾಮೆರಾ ಭೂ ಪ್ರದೇಶದ ಘಟನಾವಳಿಗಳನ್ನು ದಾಖಲಿಸುತ್ತದೆ. ಸ್ಥಳೀಯ ಆಡಳಿತ ಅಥವಾ ರಕ್ಷಣಾ ವ್ಯವಸ್ಥೆ ಆಯಾ ಪ್ರದೇಶದ ಜನರನ್ನು ತೆರವುಗೊಳಿಸಲು ಧಾವಿಸಬಹುದು. ಕೃತಕಬುದ್ಧಿಮತ್ತೆಯೂ ಈ ಕೆಲಸಕ್ಕೆ ನೆರವಾಗುತ್ತದೆ.


LEWS ಭೂಕುಸಿತ ಸಾಧ್ಯತೆಯನ್ನು ಊಹಿಸುವುದು ಹೇಗೆ?

ಈಗಾಗಲೇ ಸಂಶೋಧಕರು ಗುರುತಿಸಿರುವ ಅಂಶಗಳನ್ನು ಈ ತಂತ್ರಜ್ಞಾನವು ಪರಿಗಣಿಸುತ್ತದೆ. ನಿರ್ದಿಷ್ಟ ಭೂ ಪ್ರದೇಶದ ಕಂಪನಗಳು, ಬಿರುಕು ಉಂಟು ಮಾಡುವ ಚಟುವಟಿಕೆಗಳು (ಗಣಿಗಾರಿಕೆ, ಸ್ಫೋಟ ಇತ್ಯಾದಿ), ಮಳೆ ಬೀಳುವ ಪ್ರಮಾಣ, ಮಾನವ ಚಟುವಟಿಕೆಗಳು (ಅವೈಜ್ಞಾನಿಕ ಕಾಮಗಾರಿ, ಬೇಕಾಬಿಟ್ಟಿ ಮಣ್ಣು ಅಗೆಯುವುದು ಇತ್ಯಾದಿ.) ಈ ಯಾವುದೇ ಒಂದು ಅಂಶವಾದರೂ ಸರಿ ಅದು ಭೂಕುಸಿತಕ್ಕೆ ಕಾರಣವಾಗಬಹುದು.

ಸದ್ಯದ ಅಧ್ಯಯನ ದಕ್ಷಿಣ ಕನ್ನಡದ ಮಣ್ಣಿನ ಮಾದರಿಯ ಮೇಲೆ ನಡೆದಿದೆ. ಗುಡ್ಡಗಾಡು ಮಾದರಿಯ ಪ್ರತಿರಚನೆ (ಸಿಮ್ಯುಲೇಟರ್‌) ರೂಪಿಸಿ. ಮಳೆ ನೀರು ಬಿದ್ದು ಮಣ್ಣು ಸಡಿಲವಾಗುವ ಪ್ರಕ್ರಿಯೆಯನ್ನು ನಡೆಸಿ ಇದೇ ವೇಳೆಗೆ ಎಚ್ಚರಿಕೆ ಸಂದೇಶ ಕೊಡುವ ವ್ಯವಸ್ಥೆ ಕೆಲಸ ಮಾಡುವ ಬಗೆಯನ್ನು ರೂಪಿಸಲಾಗಿದೆ. ಕೊಡಗು, ಮಂಗಳೂರು ಭಾಗಗಳಲ್ಲಾದ ದೊಡ್ಡ ಪ್ರಮಾಣದ ಭೂ ಕುಸಿತ ಘಟನೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಎಚ್ಚರಿಸುವ ಹಂತಗಳು

1. ಭೂಮಿಯ ತಾಂತ್ರಿಕ ವಿಶ್ಲೇಷಣೆ: ಭೂ ಪ್ರದೇಶದ ಮಣ್ಣು ಮತ್ತು ಕಲ್ಲಿನ ಗುಣಲಕ್ಷಣಗಳ ಸಂಪೂರ್ಣ ಪರೀಕ್ಷೆ.

2. ನಿಗಾ ವ್ಯವಸ್ಥೆ: ಭೂಕುಸಿತದ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಲು ಸಂವೇದಕಗಳು ಮತ್ತು ತಂತ್ರಜ್ಞಾನದ ಅಳವಡಿಕೆ

3. ಹವಾಮಾನ ಮುನ್ಸೂಚನೆ: ಭೂ-ಕುಸಿತಕ್ಕೆ ಕಾರಣವಾಗಬಹುದಾದ ಪರಿಸ್ಥಿತಿಗಳನ್ನು ನಿರೀಕ್ಷಿಸಲು ಹವಾಮಾನ ದತ್ತಾಂಶವನ್ನು ಸಂಯೋಜಿಸುವುದು

4. ಸಮುದಾಯ ಜಾಗೃತಿ: ಭೂಕುಸಿತದ ಅಪಾಯಗಳು ಮತ್ತು ಪ್ರತಿಕ್ರಿಯೆಯ ಬಗ್ಗೆ ಸ್ಥಳೀಯ ಜನರಿಗೆ ಅರಿವು ಮೂಡಿಸುವುದು

5. ಆಡಳಿತಾತ್ಮಕ ಸಿದ್ಧತೆ: ಸ್ಥಳೀಯ ಅಧಿಕಾರಿಗಳು ಸಜ್ಜಾಗಿರುವಂತೆ ಮಾಡಿರುವುದು. ಅವರಿಗೆ ವೃತ್ತಿಪರ ತರಬೇತಿ ನೀಡುವುದು.

ಭೂ ಕುಸಿತದ ಸಾಧ್ಯತೆ ಇರುವ ಪ್ರದೇಶಗಳನ್ನು ಸಮಗ್ರವಾಗಿ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಅಲ್ಲಿ ಸಂಭವಿಸುವ ಅಸ್ಥಿರತೆಗಳು, ಇಳಿಜಾರಿನ ಪ್ರಮಾಣ, ಬಂಡೆಗಳು, ಆ ಪ್ರದೇಶದ ಹವಾಮಾನ ಮತ್ತು ಬದಲಾಗುವ ಹವಾಮಾನ ಪರಿಸ್ಥಿತಿಗಳು ಇತ್ಯಾದಿ. ಹೀಗೆ ಆಗಾಗ ವ್ಯತ್ಯಾಸಕ್ಕೆ ಒಳಗಾಗುವ ದತ್ತಾಂಶಗಳನ್ನು ಸಮಗ್ರವಾಗಿ ದಾಖಲಿಸಿಕೊಂಡೇ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ವಿಪತ್ತು ಸಂಭವಿಸುವ ಸುಮಾರು 30ರಿಂದ 60 ನಿಮಿಷಗಳ ಒಳಗೆ ಎಚ್ಚರಿಕೆ ರವಾನೆಯಾಗುತ್ತದೆ.

ಪ್ರಕೃತಿಯೂ- ಮಾನವ ಕೃತ್ಯವೂ

ಈಗ ನಿರಂತರವಾಗಿ ಸಂಭವಿಸುತ್ತಿರುವ ಭೂಕುಸಿತ ಪ್ರಕರಣಗಳಲ್ಲಿ ಬಹುತೇಕವು ಪ್ರಾಕೃತಿಕ ಕಾರಣಗಳಿಂದಾಗಿ ಸಂಭವಿಸಿವೆ. ಹಿಮಾಲಯ ಪರ್ವತ ಪ್ರದೇಶ ವ್ಯಾಪ್ತಿಯಲ್ಲೂ ಈ ರೀತಿಯ ಭೂ ಕುಸಿತ ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ, ಪಶ್ಚಿಮಘಟ್ಟ ವ್ಯಾಪ್ತಿಯ ಈ ಪ್ರದೇಶದಲ್ಲಿ ಮೂರು ತಿಂಗಳ ಮಳೆ ಒಂದೇ ಬಾರಿಗೆ ಸುರಿಯುವುದು ನಡೆದಾಗ ಮಣ್ಣು ಸಡಿಲವಾಗಿ ಕುಸಿಯುವುದು ನಡೆದಿದೆ. ಹೆದ್ದಾರಿ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಅಗೆದದ್ದೂ ಇಂಥ ದುರಂತಗಳಿಗೆ ಕಾರಣವಾಗುತ್ತಿವೆ ಎನ್ನುತ್ತಾರೆ ಡಾ.ಶ್ರೀವಲಸ ಕೊಳತಾಯರ್‌.

ಇಳಿಜಾರು ಸಂರಕ್ಷಣಾ ವಿನ್ಯಾಸ

ಎನ್‌ಐಟಿಕೆ ಪ್ರತಿಪಾದಿಸಿದ ಇಳಿಜಾರು ಸಂರಕ್ಷಣಾ ವಿನ್ಯಾಸವನ್ನು ಹಲವಾರು ಕಂಪನಿಗಳಿಗೆ ನೀಡಲಾಗಿದೆ. ಈ ಪೈಕಿ ಎರಡು ನಿರ್ಮಾಣ ಕ್ಷೇತ್ರದ ಕಂಪನಿಗಳು ಈ ವಿನ್ಯಾಸ ಪಾಲಿಸಿವೆ. ರಸ್ತೆ ಕಾಮಗಾರಿ ಹಾಗೂ ಗುಡ್ಡ ಅಗೆಯುವ ಸಂದರ್ಭದಲ್ಲಿ ಮಣ್ಣು ತೆಗೆಯುವ ವಿಧಾನವೂ ಮುಖ್ಯ. ನೇರವಾಗಿ ಬುಡಕ್ಕೆ ಜೆಸಿಬಿ ಯಂತ್ರ ಹಾಕುವ ಬದಲು ಇಳಿಜಾರಿನ ಕ್ರಮದಲ್ಲಿ ಹಂತ ಹಂತವಾಗಿ ಅಗೆಯಬೇಕು. ಅಗೆದ ಪ್ರದೇಶವು ಕುಸಿಯದಂತೆ ತಡೆಗೋಡೆ ಅಥವಾ ಹುಲ್ಲು ಬೆಳೆಸುವಂಥ ಕ್ರಮ ಇತ್ಯಾದಿ ಮಾಡಿದಲ್ಲಿ ಏಕಾಏಕಿ ಮಣ್ಣು ಕುಸಿಯುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಅವರು.

Read More
Next Story