ಧರ್ಮಸ್ಥಳದ ಪರ ನಿಂತ ನಿತ್ಯಾನಂದ: ಕೈಲಾಸದಿಂದಲೇ ವೀರೇಂದ್ರ ಹೆಗ್ಗಡೆಗೆ ಬೆಂಬಲ
x

ನಿತ್ಯಾನಂದ ಸ್ವಾಮೀಜಿ

ಧರ್ಮಸ್ಥಳದ ಪರ ನಿಂತ ನಿತ್ಯಾನಂದ: 'ಕೈಲಾಸ'ದಿಂದಲೇ ವೀರೇಂದ್ರ ಹೆಗ್ಗಡೆಗೆ ಬೆಂಬಲ

ನಾವು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಪರಸ್ಪರ ಗೌರವಿಸುತ್ತಿದ್ದು, ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ನಿತ್ಯಾನಂದ ತಿಳಿಸಿದ್ದಾರೆ.


ಸ್ವಯಂ ಘೋಷಿತ ದೇವಮಾನವ ಮತ್ತು 'ಕೈಲಾಸ' ಎಂಬ ಕಾಲ್ಪನಿಕ ರಾಷ್ಟ್ರದ ಅಧಿಪತಿ ನಿತ್ಯಾನಂದ, ತಾನು ಮತ್ತು ತನ್ನ 'ರಾಷ್ಟ್ರ' ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪರವಾಗಿ ದೃಢವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.

ದೇಶ-ವಿದೇಶಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದ ಮೇಲಿನ ಆರೋಪಗಳ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ, ನಿತ್ಯಾನಂದ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಾವು ನೆಲೆಸಿರುವ 'ಕೈಲಾಸ'ದಿಂದಲೇ ಈ ಕುರಿತು ಅಧಿಕೃತ ಘೋಷಣೆ ಹೊರಡಿಸಿರುವ ಅವರು, ಧರ್ಮಸ್ಥಳಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಗೌರವದ ಸಂಕೇತವಾಗಿ, "ಪವಿತ್ರ ಕೈಲಾಸ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ" (The Sacred Kailasa Nation and the United States of Kailasa) ಎಂಬ ಪುಸ್ತಕವನ್ನು ಧರ್ಮಸ್ಥಳಕ್ಕೆ ಅರ್ಪಿಸಿರುವುದಾಗಿಯೂ ನಿತ್ಯಾನಂದ ಹೇಳಿಕೊಂಡಿದ್ದಾರೆ. "ನಾವು ಹಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳ ಪರವಾಗಿ ನಿಂತಿದ್ದೇವೆ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ನಮಗೆ ಅಪಾರ ಗೌರವವಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಬೆಂಬಲ ಸದಾ ಅವರಿಗಿದೆ" ಎಂದು ನಿತ್ಯಾನಂದರ 'ಕೈಲಾಸ'ದಿಂದ ಹೊರಬಿದ್ದಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಧರ್ಮಸ್ಥಳದ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳಿಂದ ಕ್ಷೇತ್ರವು ಶೀಘ್ರದಲ್ಲೇ ಮುಕ್ತಿ ಹೊಂದಲಿ ಮತ್ತು ಈ ಹೋರಾಟಗಳಿಗೆ ಸೂಕ್ತ ನ್ಯಾಯ ಸಿಗಲಿ ಎಂದು ನಾವು ಆಶಿಸುತ್ತೇವೆ" ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಭಾರತದಿಂದ ಪಲಾಯನಗೈದು, ಆಸ್ಟ್ರೇಲಿಯಾ ಸಮೀಪ 'ಯುಎಸ್‌ಕೆ' ಎಂಬ ಸ್ವಯಂ ಘೋಷಿತ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ನಿತ್ಯಾನಂದ, ಅಲ್ಲಿ 'ಕೈಲಾಸ' ಎಂಬ ಕಾಲ್ಪನಿಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ತಮ್ಮದೇ ಆದ ಧ್ವಜ, ಪಾಸ್‌ಪೋರ್ಟ್ ಮತ್ತು ಕರೆನ್ಸಿ ಇರುವುದಾಗಿಯೂ ಅವರು ಹೇಳಿದ್ದಾರೆ.

Read More
Next Story