ʼಸೈನಿಕʼನ ವಿರುದ್ಧ ತಿರುಗಿಬಿದ್ದ ಮಗಳು ನಿಶಾ: ಕಾರಣವೇನು?
ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಮೊದಲ ಪತ್ನಿಯ ಮಗಳು ನಿಶಾ ಯೋಗೇಶ್ವರ್ ತಮ್ಮ ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದು, "ಮೊದಲ ಪತ್ನಿ ಮಗಳಾಗಿರುವುದರಿಂದ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ, ಮನೆಗೆ ಹೋದರೆ ಹೊಡೆಯುತ್ತಾರೆ" ಎಂದು ಹೇಳಿದ್ದಾರೆ.
ಸಿನಿಮಾ ರಂಗದಲ್ಲೂ ಪ್ರಯತ್ನ ನಡೆಸಿದ್ದ ನಿಶಾ ತೆಲುಗಿನ ಪ್ರಭಾತ್ ವರ್ಮ ನಿರ್ಮಾಣದ ಶ್ರೀರಾಮರಕ್ಷಾ ಎಂಬ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಅಭಿನಯಸಿದ್ದರು. ಟಾಲಿವುಡ್ ಮತ್ತು ಬಾಲಿವುಡ್ ಕನಸು ಕಂಡಿದ್ದ ನಿಶಾ ಅವರು ನಟ ದರ್ಶನ್ ಜತೆ ಸಿನಿಮಾಗೆ ಪ್ರಯತ್ನಿಸಿ ವಿಫಲರಾಗಿದ್ದರು.
"ಇನ್ನು ತೊಂದರೆ ಕೊಡುವುದು ಮುಂದುವರಿಸಿದರೆ ನಾನು ಸುಮ್ಮನಿರುವುದಿಲ್ಲ, ಎಲ್ಲಿಗೆ ಬೇಕೋ ಅಲ್ಲಿ ವಿಷಯವನ್ನೆಲ್ಲಾ ತಲುಪಿಸುತ್ತೇನೆ. ನೀವು ತಲೆ ಎತ್ತಿ ನಡೆಯುವುದು ಕಷ್ಟವಾಗಬಹುದು" ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅಪ್ಪನ ಪರ ಹಿಂದಿನ ವಿಧಾನಸಭೆ ಚುನಾವನೆಯಲ್ಲಿ ಪ್ರಚಾರಕಾರ್ಯದಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದ ನಿಶಾ, ಈಗ ಅಪ್ಪನ ʼಅನ್ಯಾಯʼದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಯ ವಿಡಿಯೋವನ್ನು ಹಾಕಿದ್ದಾರೆ.
ಯೋಗೇಶ್ವರ್ ಅವರ ಮೊದಲ ಪತ್ನಿ ಮಂಜುಳಾ ಯೋಗೇಶ್ವರ್ ಪುತ್ರಿ ನಿಶಾ ಮತ್ತು ಪುತ್ರ ಶ್ರವಣ್. ಮೊದಲ ಪತ್ನಿಯಿಂದ ದೂರವಾದ ಬಳಿಕ ಎರಡನೇ ಪತ್ನಿ ಶೀಲಾ ಯೋಗೇಶ್ವರ್ ಗೆ ಧ್ಯಾನ್ ಯೋಗೇಶ್ವರ್ ಎಂಬ ಪುತ್ರನಿದ್ದಾನೆ. "ಚಿಕ್ಕಮ್ಮ (ಯೋಗೇಶ್ವರ್ ಎರಡನೇ ಪತ್ನಿ)ಯ ಮಗ ತನ್ನ ತಮ್ಮ (ಶ್ರವಣ್)ಗೆ ಹಲ್ಲೆ ಮಾಡುತ್ತಾನೆ. ಅಪ್ಪನೂ ಹೊಡೆಯುತ್ತಾರೆ. ಅಪ್ಪ ದಶರಥನೂ ಅಲ್ಲ, ಚಿಕ್ಕಮ್ಮ ಕೈಕೇಯಿಯೂ ಅಲ್ಲ, ಸೋದರ ಭರತನೂ ಅಲ್ಲ" ಎಂದು ನೇರವಾಗಿ ಆರೋಪ ಮಾಡಿದ್ದಾರೆ ನಿಶಾ ಯೋಗೇಶ್ವರ್.
ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೋದರ ಡಿ.ಕೆ. ಸುರೇಶ್ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಪರವಾಗಿ ಯೋಗೇಶ್ವರ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾಗ ಅವರ ಪುತ್ರಿ ನಿಶಾ ಯೋಗೇಶ್ವರ್ ಅಚ್ಚರಿ ನಡೆ ಪ್ರದರ್ಶಿಸಿದ್ದರು. ನೇರವಾಗಿ ಡಿ.ಕೆ. ಶಿವಕುಮಾರ್ ಕಚೇರಿಗೆ ಬಂದು ತಾನು ಕಾಂಗ್ರೆಸ್ ಸೇರಲು ಬಯಸುವುದಾಗಿ ಹೇಳಿದ್ದರು. ಜತೆಗೆ ಕಣ್ಣೀರನ್ನೂ ಹಾಕಿದ್ದರು.
ಆದರೆ, ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟ ನಿರ್ಧಾರ ಹೇಳದೆ ಕಣ್ಣೀರು ಹಾಕಿದ ನಿಶಾಗೆ ಸಮಾಧಾನ ಮಾಡಿ “ತಲೆಯಲ್ಲಿ ಏನೋ ಇದೆ, ಮಾಡ್ತೇನೆ ಹೋಗಮ್ಮ’’ ಎಂದು ಹೇಳಿ ಕಳಿಸಿದ್ದರು. ಆದರೆ ಅಪ್ಪ ಬಿಜೆಪಿಯಲ್ಲಿದ್ದಾಗ ಮಗಳು ಯಾಕೆ ಕಾಂಗ್ರೆಸ್ ಸೇರಬಯುಸುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವರು.
ಆ ಪ್ರಶ್ನೆಗಳಿಗೆ ಉತ್ತರವಾಗಿ ಈಗ ನಿಶಾ ಯೋಗೇಶ್ವರ್ ತನ್ನ ಅಪ್ಪ ತನಗೆ ಮಾಡುತ್ತಿರುವ ಅನ್ಯಾಯಗಳ ಸರಮಾಲೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಹೇಳಿದ್ದಾರೆ. "ಮೊದಲ ಹೆಂಡತಿಯ ಮಗಳಾಗಿರುವ ಕಾರಣ ಯೋಗೇಶ್ವರ್ ಮನೆಯಲ್ಲಿ ನನಗೆ ಸ್ಥಾನವಿಲ್ಲ, ಹೋದರೆ ಅಪ್ಪ ಹೊಡೆಯುತ್ತಾರೆ!," ಎಂದು ತನಗಾಗುತ್ತಿರುವ ಅನ್ಯಾಯದ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
"ತನ್ನ ಚಿಕ್ಕಮ್ಮ ಅಮ್ಮನಾಗಲಿಲ್ಲ. ನನಗಷ್ಟೇ ಮಾದರಿಯಾಗಿರಲು ಅಪ್ಪ ಹೇಳುತ್ತಿದ್ದರು. ಆದರೆ ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ. ರಾಮಾಯಣದ ಸೀತೆ 14 ವರ್ಷಗಳ ಕಾಲ ವನವಾಸ ಅನುಭವಿಸಿದರೆ ತಾನು 24 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದೇನೆ. ನಾನು ಹತ್ತು ವರ್ಷಗಳ ಬಾಲಕಿಯಾಗಿದ್ದಾಗ ಮನೆಯಿಂದ ಹೊರಗೆ ಹಾಕಿದ್ದಾರೆ," ಎಂದು ಕಣ್ಣೀರು ಗರೆದಿದ್ದಾರೆ.
"ಜನರ ಒತ್ತಾಯಕ್ಕೆ ಮಣಿದು ತಾನು ಅಪ್ಪನೊಂದಿಗೆ ರಾಜಿ ಮಾಡಿಕೊಡು ಮನೆಗೆ ಹೋದರೆ, ರಪರಪಾಂತ ಹೊಡೆಯುತ್ತಾರೆ, ಆಚೆ ಹೋಗಿ ಭಿಕ್ಷೆಯಾದರರೂ ಬೇಡಿ ಬದುಕಿಕೋ ಮನೆಗೆ ಮಾತ್ರ ಬರಬೇಡ ಅನ್ನುತ್ತಾರೆ" ಎಂದು ನಿಶಾ ಹೇಳಿದ್ದಾರೆ. ಆದರೆ "ಹಿಂದಿನ ಚುನಾವಣೆ ವೇಳೆ ತನ್ನನ್ನು ಚುನಾವಣಾ ಪ್ರಚಾರಕ್ಕೆ ಕರೆಯುತ್ತಿದ್ದರು. ಈಗ ಬೇಡವಷ್ಟೇ.." ಎಂದೂ ಆರೋಪ ಮಾಡಿದ್ದಾರೆ.
ಇಬ್ಬರೂ ಪತ್ನಿಯರಿಂದ ಪ್ರಚಾರ
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಚನ್ನಪಟ್ಟಣದಿಂದ ಜೆಡಿಎಸ್‌ನ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆದರೆ ಜಿದ್ದಾಜಿದ್ದಿನ ಆ ಚುನಾವಣೆಯಲ್ಲಿ ಯೋಗೇಶ್ವರ್ ಪರವಾಗಿ ಅವರ ಇಬ್ಬರು ಮಡದಿಯರೂ ಮಕ್ಳಳೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಮಂಜುಳಾ ಮತ್ತು ಶೀಲಾ ತಮ್ಮ ಮಕ್ಕಳೊಂದಿಗೆ ಯೋಗೇಶ್ವರ್ ಪರವಾಗಿ ಮತ ಯಾಚಿಸಿದ್ದು, ಮತದಾರರರ ಗಮನ ಸೆಳೆದಿದ್ದರು. ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ತಮ್ಮ ಪತಿ ಪರ ಪ್ರಚಾರ ಮಾಡುತ್ತಿದ್ದರೆ, ಅವರಿಗೆ ಯೋಗೇಶ್ವರ್ ಮಡದಿಯರು ಸ್ಪರ್ಧೆಯೊಡ್ಡಿದ್ದರು. ಆಗ ನಿಶಾ ಯೋಗೇಶ್ವರ್ ತಮ್ಮ ಚುನಾವಣಾ ಭಾಷಣಗಳಿಂದ ಜನರ ಗಮನಸೆಳೆದಿದ್ದರು.