
ನಿಫಾ ವೈರಸ್|ಕರ್ನಾಟಕದ ಈ ಗಡಿ ಜಿಲ್ಲೆಗಳಲ್ಲಿ ಮುನ್ನಚ್ಚರಿಕೆ
ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತದೆ. ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಸೇರಿದಂತೆ ಗಡಿಜಿಲ್ಲೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುತ್ತದೆ
ಪಶ್ಚಿಮ ಬಂಗಾಳದಲ್ಲಿ ನಿಫಾ ಎಂಬ ಮಾರಕ ವೈರಸ್ ಹಬ್ಬಿ ಜನತೆಯಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಭಯದ ವಾತಾವರಣ ಮೂಡಿದೆ. ರಾಜ್ಯದಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲವಾದರೂ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಂಡು ಬರುತ್ತದೆ. ಪ್ರಸ್ತುತ ಯಾವುದೇ ಪ್ರಕರಣಗಳು ವರದಿಯಾಗದಿರುವ ಹಿನ್ನೆಲೆಯಲ್ಲಿ ರಾಜ್ಯವು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಹಣ್ಣು ತಿನ್ನುವ ಬಾವಲಿಗಳು ಈ ವೈರಸ್‌ನ ನೈಸರ್ಗಿಕ ವಾಹಕಗಳಾಗಿವೆ. 1998ರಲ್ಲಿ ಮಲೇಷ್ಯಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ವೈರಸ್, ಇಂದು ಭಾರತದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕಕ್ಕೆ ಈ ಸೋಂಕು ಬರುವುದಾದರೆ ಕೇರಳ ಮೂಲಕವೇ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಈ ವೈರಸ್ ಕೇರಳದಲ್ಲಿ ಅತಿಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಕೇರಳ ರಾಜ್ಯದಲ್ಲಿ ಸೋಂಕು ಕಂಡುಬಂದರೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಬೇಕಾಗಿದೆ. ಕೇರಳದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ವಿಶೇಷವಾಗಿ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸದ್ಯಕ್ಕೆ ವೈರಸ್ ಇಲ್ಲ
ಕರ್ನಾಟಕದ ಯಾವುದೇ ಭಾಗದಲ್ಲಿ ಮನುಷ್ಯರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ನೆರೆಯ ರಾಜ್ಯವಾದ ಕೇರಳದ ಮಲಪ್ಪುರಂ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಆಗಾಗ್ಗೆ ನಿಫಾ ವೈರಸ್ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಕೇರಳದಲ್ಲಿ ಈ ಸೋಂಕು ಇರುವ ಬಗ್ಗೆ ಅಥವಾ ಅದರ ಸುಳಿವು ಲಭ್ಯವಾದರೆ ಕೇರಳ ಮತ್ತು ಕರ್ನಾಟಕದ ನಡುವೆ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ 'ಹೈ-ಅಲರ್ಟ್' ಘೋಷಿಸಲಾಗುತ್ತದೆ. ದಕ್ಷಿಣ ಕನ್ನಡ , ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ಅರೋಗ್ಯ ಇಲಾಖೆ ಅಧಿಕಾರಿ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳು
ಆರೋಗ್ಯ ಇಲಾಖೆಯ ಪ್ರಕಾರ, ಅನಾರೋಗ್ಯ ಪೀಡಿತ ರೋಗಿಯ ಸಂಪರ್ಕಕ್ಕೆ ಬಂದ ನಂತರ ಸರಿಯಾಗಿ ಸೋಪ್, ನೀರಿನಿಂದ ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಶಂಕಿತ ಅಥವಾ ದೃಢಪಡಿಸಿದ ನಿಫಾ ಪ್ರಕರಣಗಳನ್ನು ನಿರ್ವಹಿಸುವಾಗ, ಪ್ರಮಾಣಿತ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಶಂಕಿತ ನಿಫಾ ಪ್ರಕರಣಗಳನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗಳಲ್ಲಿ ಸೌಲಭ್ಯಗಳನ್ನು ದಾಖಲಿಸಬೇಕಾಗುತ್ತದೆ. ನಿಫಾ ಸೋಂಕು ತಗುಲಿರುವ ಶಂಕಿತ ಪ್ರಕರಣ ಪತ್ತೆಯಾದ ತಕ್ಷಣ ಅವರನ್ನು ಕ್ವಾರಂಟೈನ್ ಮಾಡಿ ನಿಗಾವಹಿಸಬೇಕು. ರಾಜ್ಯದಲ್ಲಿ ಪ್ರಸ್ತುತ ನಿಫಾ ವೈರಸ್ ಇಲ್ಲದಿರುವುದು ಸಮಾಧಾನಕರ ವಿಷಯ. ಆದರೆ, ಎಚ್ಚರಿಕೆಯೇ ಬದುಕಿನ ದಾರಿ ಎಂಬಂತೆ ಗಡಿ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿರುವ ಕಟ್ಟೆಚ್ಚರ ಮುಂದುವರಿಯಬೇಕು. ಸರ್ಕಾರದ ಶಿಸ್ತುಬದ್ಧ ಕ್ರಮಗಳು ಮತ್ತು ಸಾರ್ವಜನಿಕರ ಜಾಗರೂಕತೆ ಒಂದಾದಾಗ ಮಾತ್ರ ನಿಫಾದಂತಹ ಮಾರಕ ವೈರಸ್‌ಗಳನ್ನು ರಾಜ್ಯದ ಗಡಿಯಿಂದ ಹೊರಗಿಡಲು ಸಾಧ್ಯ. ನಿಫಾ ವೈರಸ್ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಅಥವಾ ತುರ್ತು ಪರಿಸ್ಥಿತಿ ಉಂಟಾದಲ್ಲಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಕ್ಕೆ ಕರೆ ಮಾಡಬಹುದು.
ಏನದು ನಿಫಾ?
ನಿಫಾ ಎಂಬುದು ಬಾವಲಿಗಳು, ಹಂದಿಗಳು, ನಾಯಿಗಳು ಮತ್ತು ಕುದುರೆಗಳಂತಹ ಪ್ರಾಣಿಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ವೈರಸ್ ಆಗಿದೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಕೆಲವೊಮ್ಮೆ ಮಾನವರಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಫಾ ವೈರಸ್ ಸೋಂಕಿತ ಇತರ ಜನರು, ಸೋಂಕಿತ ಬಾವಲಿಗಳು ಅಥವಾ ಸೋಂಕಿತ ಹಂದಿಗಳೊಂದಿಗೆ ನೇರ ಸಂಪರ್ಕದ ಮೂಲಕ ಮನುಷ್ಯರಿಗೆ ಹರಡಬಹುದು. ಹಣ್ಣಿನ ಮರಗಳನ್ನು ಹತ್ತುವಾಗ, ಕಲುಷಿತವಾದ ಬಿದ್ದ ಹಣ್ಣುಗಳನ್ನು ಸೇವಿಸಿದರೆ, ಸ್ಪರ್ಷಿಸಿದರೆ ಅಥವಾ ಹಸಿ ತಾಳೆ ರಸ ಅಥವಾ ಸೇಂದಿ ಕುಡಿಯುವಾಗ ಬಾವಲಿಗಳ ಸಂಪರ್ಕಕ್ಕೆ ಬರುವ ಜನರು ಸೋಂಕಿಗೆ ಒಳಗಾಗಬಹುದು ಎಂದು ಹೇಳಲಾಗಿದೆ.
ಮನೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದರೆ ನಿಫಾ ವೈರಸ್ ಹರಡಬಹುದು. ನಿಫಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆಯು ಹೇಳಿದೆ. ಭಾವನಾತ್ಮಕವಾಗಿ ಕಷ್ಟಕರವಾದ ಈ ಸಮಯದಲ್ಲಿ ಕುಟುಂಬ ಸದಸ್ಯರು ಈ ರೋಗದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಹಿಸಬೇಕಾಗುತ್ತದೆ.
ಬಾವಲಿಗಳು ವಾಸಿಸುವ ಪ್ರದೇಶಗಳು ಮತ್ತು ಅವುಗಳ ಸ್ರವಿಸುವಿಕೆಯಿಂದ ಕಲುಷಿತಗೊಂಡ ವಸ್ತುಗಳಿಂದ ಸೋಂಕು ಹರಡುತ್ತದೆ. ಬಳಕೆಯಾಗದ ಬಾವಿಗಳು, ಗುಹೆಗಳು ಮತ್ತು ಹಣ್ಣಿನ ತೋಟಗಳು, ಸಂಪರ್ಕಕ್ಕೆ ಬರುವ ಜನರು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಅನಾರೋಗ್ಯ ಪೀಡಿತ ಹಂದಿಗಳು ಅಥವಾ ಅವುಗಳ ಕಲುಷಿತ ಅಂಗಾಂಶಗಳೊಂದಿಗೆ ನೇರ ಸಂಪರ್ಕಕ್ಕೆ ಬರುವವರು, ಅಂತ್ಯಕ್ರಿಯೆ ಸಮಯದಲ್ಲಿ ನಿಫಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬರುವವರು ಮತ್ತು ಪ್ರಮಾಣಿತ ಮುನ್ನೆಚ್ಚರಿಕೆ ಕ್ರಮಗಳನ್ನು ಬಳಸದೆ ನೇರ ಸಂಪರ್ಕಕ್ಕೆ ಬರುವವರಿಗೆ ಈ ಸೋಂಕು ಹರಡಲಿದೆ ಎಂದು ಹೇಳಲಾಗಿದೆ.

