Karnataka By-Election | ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ: ನಿಖಿಲ್ ಕುಮಾರಸ್ವಾಮಿ
ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ನಾನು ಮೂರು ಬಾರಿ ಸೋಲು ಅನುಭವಿಸಿದ್ದೇನೆ. ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಆದರೆ ನಾನು ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ. ಪ್ರಚಾರದ ಸಮಯದಲ್ಲಿ ನಾನು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ.
ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಜಯ ಕಂಡಿದೆ. ಈ ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಗೆಲುವಿನ ಭರವಸೆಯಲ್ಲಿದ್ದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯ ಸೋಲ ಕಂಡಿದ್ದಾರೆ.
ಉಪ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ತಮಗೆ ಬೆಂಬಲ ನೀಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಾನು ಜನರ ತೀರ್ಪಿಗೆ ತಲೆಬಾಗುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಏನಾಗಬೇಕು ಎಂಬುವುದನ್ನು ಮತದಾರರೇ ತೀರ್ಮಾನ ಮಾಡುತ್ತಾರೆ. ಈ ಚುನಾವಣೆ ನನಗೆ ಬಯಸದೆ ಬಂದಿರುವುದು. ಕೊನೆಯ ಹಂತದಲ್ಲಿ ಹಿರಿಯರು ನಿರ್ಧರಿಸಿದ ಕಾರಣಕ್ಕೆ ಚುನಾವಣೆ ಎದುರಿಸಿದ್ದೇನೆ. ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ನಾನು ಮೂರು ಬಾರಿ ಸೋಲು ಅನುಭವಿಸಿದ್ದೇನೆ. ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಆದರೆ ನಾನು ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ. ಪ್ರಚಾರದ ಸಮಯದಲ್ಲಿ ನಾನು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ನಮ್ಮ ತಾತ ಹೆಚ್‌ಡಿ ದೇವೇಗೌಡ, ತಂದೆ ಹೆಚ್‌ಡಿ ಕುಮಾರಸ್ವಾಮಿ ರಾಜಕಾರಣದಲ್ಲಿದ್ದಾರೆ, ನಾನೂ ರಾಜಕಾರಣ ಮಾಡಬೇಕು ಅಂತ ಇಲ್ಲಿಗೆ ಬಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬ ಗುರಿ ನನಗೆ ಇದೆ ಎಂದು ಅವರು ತಿಳಿಸಿದರು.