
ಮಳೆ ಹಾನಿ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ: ರೈತರ ಸಾಲ ಮನ್ನಾಗೆ ಜೆಡಿಎಸ್ ಆಗ್ರಹ
ನಿಖಿಲ್ ಅವರು ಮೊದಲಿಗೆ ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿ, ನಂತರ ಸೋಮನಾಥಹಳ್ಳಿ, ಕಟ್ಟಿಸಂಗವಿ, ಜೇವರ್ಗಿ ನಗರ, ಅವರಾದ ಮತ್ತು ಗಂವ್ಹಾರ ಗ್ರಾಮಗಳ ಮಳೆ ಹಾನಿ ಪ್ರದೇಶಗಳಿಗೆ ತೆರಳಲಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಮತ್ತು ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ನಾಳೆಯಿಂದ (ಸೆ. 15) ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ತಕ್ಷಣವೇ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರವಾಸದ ಮೊದಲ ಹಂತವಾಗಿ, ನಿಖಿಲ್ ಕುಮಾರಸ್ವಾಮಿ ಅವರು ನಾಳೆ ಕಲಬುರಗಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿ, ನಂತರ ಸೋಮನಾಥಹಳ್ಳಿ, ಕಟ್ಟಿಸಂಗವಿ, ಜೇವರ್ಗಿ ನಗರ, ಅವರಾದ ಮತ್ತು ಗಂವ್ಹಾರ ಗ್ರಾಮಗಳ ಮಳೆ ಹಾನಿ ಪ್ರದೇಶಗಳಿಗೆ ತೆರಳಿ, ಅಲ್ಲಿನ ರೈತರು ಮತ್ತು ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಸಂಜೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಸೆಪ್ಟೆಂಬರ್ 16ರಂದು, ಅವರು ಬೀದರ್ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮರಕಲ, ಅಲಿಯಂಬರ್, ಇಸ್ಲಾಂಪುರ, ಜಾಂಪಾಡ್, ಕಾಶಂಪೂರ್, ಬುಧೇರಾ ಮತ್ತು ಕಮಠಾಣ ಗ್ರಾಮಗಳಿಗೆ ತೆರಳಿ, ಅಲ್ಲಿನ ಜನರ ಸಂಕಷ್ಟಗಳನ್ನು ಅರಿಯಲಿದ್ದಾರೆ. ನಂತರ ಬೀದರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಮಳೆ ಹಾನಿಯ ಸಂಪೂರ್ಣ ಚಿತ್ರಣವನ್ನು ಮಾಧ್ಯಮಗಳ ಮುಂದೆ ಇಡಲಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ, ಸಾಲ ಮನ್ನಾಗೆ ಒತ್ತಾಯ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಷ್ಟದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಉಸ್ತುವಾರಿ ಸಚಿವರು ಸೇರಿದಂತೆ ಇಡೀ ಸರ್ಕಾರವೇ ಕಾಣೆಯಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. "ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನ ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಕೂಡಲೇ ನೆರವಿಗೆ ಧಾವಿಸಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
"ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಮತ್ತು ವಸ್ತುಸ್ಥಿತಿ ಅರಿಯಲು, ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ಈ ರಾಜ್ಯ ಪ್ರವಾಸವನ್ನು ಕೈಗೊಳ್ಳಲಾಗಿದೆ. ಪ್ರವಾಸದ ನಂತರ, ಬೆಳೆ ಹಾನಿ ಮತ್ತು ಮನೆ ಕುಸಿತದ ಬಗ್ಗೆ ಸಮಗ್ರ ವರದಿಯನ್ನು ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು" ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.