
ತಾಕತ್ತಿದ್ದರೆ ಪ್ರಾದೇಶಿಕ ಪಕ್ಷ ಕಟ್ಟಿ; ಸಿಎಂಗೆ ನಿಖಿಲ್ ಕುಮಾರಸ್ವಾಮಿ ಟಾಂಗ್
ಡಿ.ಕೆ ಶಿವಕುಮಾರ್ ಅವರಿಗೆ ಗಾಳಿಯಲ್ಲಿ ಗುಂಡು ಹೊಡೆಯುವುದೇ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು, ಸುಳ್ಳೇ ಅವರ ಮನೆ ದೇವರು. ನಾವೇನಾದರೂ ಜಮೀನು ಪರಿಹಾರ ಅರ್ಜಿ ಬರೆದಿದ್ದರೆ ಆ ಜಮೀನನ್ನು ರೈತರಿಗೆ ದಾನ ಮಾಡುತ್ತೇವೆ ಎಂದು ನಿಖಿಲ್ ಹೇಳಿದರು.
ಜೆಡಿಎಸ್ ಎರಡು ಸ್ಥಾನಕ್ಕಿಂತ ಹೆಚ್ಚು ಗೆಲ್ಲುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಿಮಗೆ ತಾಕತ್ತು, ಧಮ್ಮು ಇದ್ದರೆ ಪ್ರಾದೇಶಿಕ ಪಕ್ಷ ಕಟ್ಟಿ ನೋಡಿ. ಬಳಿಕ ಕನಿಷ್ಠ ಎರಡಲ್ಲ, ಒಂದು ಸ್ಥಾನ ತೆಗೆದುಕೊಳ್ಳಿ ನೋಡೋಣ ಎಂದು ಸವಾಲಾಕಿದರು.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ʼಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನʼ ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಶಕ್ತಿ ಏನೆಂಬುದು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ. ದಯವಿಟ್ಟು ಸ್ವಲ್ಪ ಸಹನೆ ಇರಲಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಡಿ.ಕೆ ಶಿವಕುಮಾರ್ ಅವರಿಗೆ ಗಾಳಿಯಲ್ಲಿ ಗುಂಡು ಹೊಡೆಯುವುದೇ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು, ಸುಳ್ಳೇ ಅವರ ಮನೆ ದೇವರು. ನಾವೇನಾದರೂ ಜಮೀನು ಪರಿಹಾರ ಅರ್ಜಿ ಬರೆದಿದ್ದರೆ ಆ ಜಮೀನನ್ನು ರೈತರಿಗೆ ದಾನ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೋಗಿ ರೈತರ ಮುಂದೆ ಅಪಪ್ರಚಾರ ಮಾಡಿದರೆ ನಾವು ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳಲ್ಲ.ಅನಿತಾ ಕುಮಾರಸ್ವಾಮಿ ಅವರು ಜಮೀನು ಪರಿಹಾರ ಕೇಳಿ ಅರ್ಜಿ ಹಾಕಿದ್ದರೆ ತೋರಿಸಿ, ಆ ಜಮೀನು ಬಡವರಿಗೆ ದಾನ ಮಾಡುತ್ತೇವೆ. ವಿಷಯ ತಿಳಿದುಕೊಳ್ಳದೇ ಸುಳ್ಳು ಹೇಳಿಕೊಂಡು ತಿರುಗುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಕಂಡ ಕಂಡವರ ಜಮೀನಿಗೆ ಹೋಗಿಲ್ಲ
ಡಿ.ಕೆ ಶಿವಕುಮಾರ್ ಅವರೇ ನಾವು ಎಲ್ಲಿಯೂ, ಯಾವುದೇ ಶಿಕ್ಷಣ ಸಂಸ್ಥೆ, ದೊಡ್ಡ ದೊಡ್ಡ ಮಾಲ್‌ಗಳನ್ನು ಕಟ್ಟಿಕೊಂಡಿಲ್ಲ. ಕಂಡ ಕಂಡವರ ಜಮೀನಿಗೆ ಹೋಗಿಲ್ಲ. ಇನ್ನು ಬಹಳ ವಿಷಯವಿದೆ, ರಾಮನಗರದಲ್ಲಿ ಬಂದು ಉತ್ತರ ಕೊಡುತ್ತೇನೆ ಎಂದು ಗುಡುಗಿದರು.
ರಾಮನಗರ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಬಿಡದಿ ಟೌನ್ ಶಿಪ್ ವಿಚಾರವಾಗಿ ಎಷ್ಟು ಜನ ಹೋಗಿ ರೈತರ ಕಷ್ಟ ಕೇಳಿದ್ದಾರೆ, ರೈತರ ಮನೆಗೆ ಯಾರಾದರೂ ಹೋಗಿದ್ದರೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
ಬನ್ನಿಗಿರಿ ಮತ್ತು ಹೊಸೂರು, ಬಿಡದಿಯಲ್ಲಿ ಜಮೀನು ಖರೀದಿಸಿ 20 ವರ್ಷದ ಮೇಲೆ ಆಗಿದೆ. ಇದರಲ್ಲಿ ಮುಚ್ಚು ಮರೆ ಏನು ಇಲ್ಲ, ಇದು ಕೃಷಿ ಜಮೀನು. ದೇವೇಗೌಡರು, ಕುಮಾರಣ್ಣ ಮೂಲತಃ ಕೃಷಿಕರು. ಕೇತಗನಹಳ್ಳಿ ಜಮೀನಿನ ಮೇಲೆ ಎಸ್‌ಐಟಿ ರಚನೆ ಮಾಡಿದಿರಿ, ಕೊನೆಗೆ ಸುಪ್ರೀಂ ಕೋರ್ಟ್ ನಲ್ಲಿ ಏನಾಯ್ತು ಎಂದು ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ರಿಯಲ್ ಎಸ್ಟೇಟ್ ದಂಧೆಗೆ ಪಂಚ ಪಾಲಿಕೆ
ರಿಯಲ್ ಎಸ್ಟೇಟ್ ದಂಧೆ ಮಾಡಲು ಬಿಬಿಎಂಪಿ ಪಂಚ ಪಾಲಿಕೆ ಮಾಡಿದ್ದಾರೆ. ಸಿಲಿಕಾನ್ ಸಿಟಿಯನ್ನು ಡಿಕೆಶಿ ಅವರು ಗಾರ್ಬೇಜ್ ಸಿಟಿ ಮಾಡಿದ್ದಾರೆ. ಪಂಚ ಪಾಲಿಕೆಗಳಿಗೆ ಕಚೇರಿ ಮಾಡೋ ಮೊದಲು ನಗರದಲ್ಲಿ ಕಸ ಎತ್ತಿ. ಜಿಬಿಎ ಮಾಡಿದರೆ ಬೆಂಗಳೂರು ಅಭಿವೃದ್ಧಿ ಆಗುತ್ತಾ? ಎಂದು ಕಿಡಿಕಾರಿದರು.
ನಮ್ಮ ಮಿತ್ರಪಕ್ಷ ಬಿಜೆಪಿ ಜತೆ ನಮಗೆ ಆರೋಗ್ಯಕರ ಮಿತೃತ್ವ ಇದೆ. ನಾವು ಎರಡೂ ಪಕ್ಷಗಳು ಜತೆಗೂಡಿ ಕೆಲಸ ಮಾಡುತ್ತಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಮುತ್ಸದ್ಧಿಗಳು. ಅವರು ಇತ್ತೀಚೆಗೆ ಅಭಿಮಾನದಿಂದ ಬಿಜೆಪಿ ಅಭ್ಯರ್ಥಿ ಘೋಷಿಸಿದರು. ಇದರಿಂದ ಜೆಡಿಎಸ್ ಕಾರ್ಯಕರ್ತರು ಗೊಂದಲವಾಗಬಾರದು. ಬಿಜೆಪಿ ರಾಜ್ಯಾಧ್ಯಕ್ಷ ಅವರೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಕುರಿತು ವಿವರಣೆ ನೀಡಿದರು.
ಕಮಿಷನ್‌ಗಾಗಿ ಟನಲ್ ರಸ್ತೆ
ಕಮಿಷನ್ ಗಾಗಿ ಡಿಕೆಶಿ ಟನೆಲ್ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಟೋಲ್ ಜಾಸ್ತಿ ಇರೋ ರಸ್ತೆಯಲ್ಲಿ ಶ್ರೀಮಂತರಷ್ಟೇ ಓಡಾಡಬೇಕು. ಈ ಸುರಂಗ ಮಾರ್ಗ ಯಾರಿಗೋಸ್ಕರ ಮಾಡ್ತಿದ್ದೀರಿ?, ಟನೆಲ್ ರೋಡ್ ನಲ್ಲಿ ಎಷ್ಟು ಕಮಿಷನ್ ತೆಗೆದುಕೊಳ್ತಿದ್ದೀರಿ, ಯಾರಿಗೆ ಟೆಂಡರ್ ಕೊಡ್ತಿದ್ದೀರಿ, ಎಲ್ಲವನ್ನೂ ಜನರ ಮುಂದೆ ಹೇಳಿ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
ಅನಾದಿ ಕಾಲಕ್ಕೆ ಹೋದ ಕಾಂಗ್ರೆಸ್: ನಿಖಿಲ್ ಕಿಡಿ
ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಲೆಟ್ ಪೇಪರ್ ತರಲು ಹೊರಟಿದೆ. ಕಾಂಗ್ರೆಸ್ ಪಕ್ಷ ಅನಾದಿ ಕಾಲಕ್ಕೆ ಹೋಗುತ್ತಿದೆ. ಎರಡು ಸಲ ಕಾಂಗ್ರೆಸ್ ಗೆದ್ದಿದ್ದು ಇವಿಎಂ ಮೂಲಕವೇ ನಿಮಗೆ ಇವಿಎಂ ಬೇಡ ಅಂದ್ರೆ ರಾಜೀನಾಮೆ ಕೊಡಿ, ಬ್ಯಾಲೆಟ್ ಪೇಪರ್ ತರುವ ಯೋಜನೆ ಕಾಂಗ್ರೆಸ್ ನಾಯಕರ ಉದ್ಧಟತನದ ರಾಜಕಾರಣ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದರು.