
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ
ನಮ್ಮ ಕಾರ್ಯಕರ್ತರನ್ನು ಕರೆಯುವ ಬದಲು ಗುಂಡಿ ಮುಚ್ಚಿ: ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು
ರಾಜ್ಯದ ಜನರ ತೆರಿಗೆ ಹಣದಲ್ಲಿ 'ಗೌರವ' ಧನ ಪಡೆದು ಕೆಲಸ ಮಾಡುತ್ತಿರುವ ಗಂಜಿ ಗಿರಾಕಿ ಕಾಂಗ್ರೆಸ್ ಕಾರ್ಯಕರ್ತರ ರೀತಿಯಲ್ಲ ನಮ್ಮ ನಿಷ್ಠಾವಂತ ಕಾರ್ಯಕರ್ತರು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ತಿರುಗೇಟು ನೀಡಿದ್ದಾರೆ. "ನಿಮ್ಮ ಗಂಜಿ ಗಿರಾಕಿ ಕಾರ್ಯಕರ್ತರಂತೆ ನಮ್ಮವರಲ್ಲ" ಎಂದು ಖಾರವಾಗಿ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್ನಲ್ಲಿ' ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಿಖಿಲ್ ಕುಮಾರಸ್ವಾಮಿ, "ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ನಿಮ್ಮ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಅಂಥವರು ನಮ್ಮ ಕಾರ್ಯಕರ್ತರನ್ನು ಕರೆಯುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಕಟ್ಟುವುದು ಎಂದರೆ, ಯಾರೋ ಗೆದ್ದ ಕಪ್ ಹಿಡಿದು ಮುತ್ತಿಟ್ಟು ರೀಲ್ಸ್ ಮಾಡುವಷ್ಟು ಸುಲಭವಲ್ಲ," ಎಂದು ವ್ಯಂಗ್ಯವಾಡಿದ್ದಾರೆ. "ಗ್ಯಾರಂಟಿ ಸಮಿತಿಗಳ ಹೆಸರಲ್ಲಿ ಜನರ ತೆರಿಗೆ ಹಣದಲ್ಲಿ 'ಗೌರವಧನ' ಪಡೆಯುವ ನಿಮ್ಮ 'ಗಂಜಿ ಗಿರಾಕಿ' ಕಾರ್ಯಕರ್ತರಂತೆ ನಮ್ಮ ನಿಷ್ಠಾವಂತ ಕಾರ್ಯಕರ್ತರಲ್ಲ," ಎಂದು ಅವರು ಹೇಳಿದ್ದಾರೆ.
"ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವರ್ಚಸ್ಸಿನ ಮುಂದೆ ನಿಮ್ಮ ಮಾತುಗಳಿಗೆ ನಮ್ಮ ಕಾರ್ಯಕರ್ತರು ಕವಡೆಕಾಸಿನ ಕಿಮ್ಮತ್ತು ಕೊಡುವುದಿಲ್ಲ. ಜೆಡಿಎಸ್ ಕಾರ್ಯಕರ್ತರನ್ನು ಕರೆಯುವ ಉತ್ಸಾಹವನ್ನು ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ತೋರಿದ್ದರೆ, ಸರ್ಕಾರದ ಮರ್ಯಾದೆಯಾದರೂ ಉಳಿಯುತ್ತಿತ್ತು. ಉಡಾಫೆ ಹೇಳಿಕೆಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿ," ಎಂದು ನಿಖಿಲ್ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ಗೆ ಸಲಹೆ ನೀಡಿದ್ದಾರೆ.