
ʼನಿಖಿಲ್ ಬಚ್ಚಾʼ ಹೇಳಿಕೆಗೆ ಪ್ರತಿಕ್ರಿಯೆ: "ಯೋಗೇಶ್ವರ್ ಒಬ್ಬ ರಾಜಕೀಯ ವ್ಯಾಪಾರಿʼ ಎಂದು ಟೀಕಿಸಿದ ನಿಖಿಲ್
ಸಿ.ಪಿ. ಯೋಗೇಶ್ವರ್ ಅವರ ದರ್ಪ ಹಾಗೂ ಅಹಂಕಾರವು ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸೋಲು-ಗೆಲುವಿನ ವಿಶ್ಲೇಷಣೆ ನಡೆಯುತ್ತಿದೆ. ಸೋತವರ ಪ್ರಾಯಶ್ಚಿತದ ನುಡಿಗಳು, ಗೆದ್ದವರ ಹುಮ್ಮಸ್ಸಿನ ಮಾತುಗಳು ಈಗ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.
ಪಕ್ಷದ ನನಗೆ ಟಾಸ್ಕ್ ನೀಡಿದರೆ 15 ದಿನದಲ್ಲೇ ಜೆಡಿಎಸ್ ಖಾಲಿ ಮಾಡಿಸುತ್ತೇನೆ ಎಂಬ ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಎನ್‌ಡಿಎ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಯೋಗೀಶ್ವರ್ ದರ್ಪ ಹಾಗೂ ಅಹಂಕಾರವು ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ ಎಂದು ಕಾರ್ಯಕರ್ತರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ಹರಿಹಾಯ್ದಿದ್ದಾರೆ.
'ನಿಖಿಲ್ ಬಚ್ಚಾ.. ಪಾಪ ನಿಖಿಲ್..' ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನು ನಾನಲ್ಲ. ಕೇವಲ ಸ್ವಾರ್ಥ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಅಂದ ಮಾತ್ರಕ್ಕೆ ಸೋಲಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ. ಇಂಥ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜನರ ನಿರ್ಣಯವನ್ನು ಶಿರಬಾಗಿ ಸ್ವೀಕರಿಸಿದ್ದೇನೆ
ಕಳೆದ ಎರಡು ಸೋಲುಗಳು ನನಗೆ ಅಸಹಾಯಕತೆ, ಅಪಮಾನ ಧಿಕ್ಕರಿಸಿ ಸೆಣಸುವ ಆತ್ಮಬಲ ತಂದು ಕೊಟ್ಟಿವೆ. ಚನ್ನಪಟ್ಟಣದ ವಿಷಯದಲ್ಲೂ ಆದೇ ಛಲ, ಆತ್ಮಬಲದಿಂದ ದಿಟ್ಟ ಹೋರಾಟ ನಡೆಸಿದ್ದೇನೆ. ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರುಳು ದುಡಿದರು. ಆದರೂ ಸೋಲಾಗಿದೆ. ಅದು ಜನತಾ ಜನಾರ್ದನನ ನಿರ್ಣಯ. ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ. ವಿಪರ್ಯಾಸ ಎಂದರೆ ಗೆದ್ದವರಿಗೆ ನೆಮ್ಮದಿ ಸಿಗುತ್ತಿಲ್ಲ. ಕನಿಷ್ಠ ಗೆಲುವನ್ನಾದರೂ ಅರಗಿಸಿಕೊಳ್ಳುವ ಮನಃಸ್ಥಿತಿ ಇಲ್ಲ. ಆ ಮುಖಗಳಲ್ಲಿ ನಗುವೇ ಇಲ್ಲ. ಅವರ ಸಂಭ್ರಮ, ವಿಜೃಂಭಣೆಯಲ್ಲಿ ಪ್ರಾಮಾಣಿಕತೆ ಇಲ್ಲ. ಸೋತ ಅಭ್ಯರ್ಥಿಯನ್ನು ಹೀಗಳೆಯುವ, ಎದುರಾಳಿ ಪಕ್ಷ ಮತ್ತು ಅದರ ನಾಯಕರನ್ನು ನಿಂದಿಸುವುದರಲ್ಲಿ ಮಗ್ನರಾಗಿದ್ದಾರೆ. ಇದರಿಂದ ಅವರದ್ದು ಸತ್ಯದ ಜಯವಲ್ಲ ಎಂಬುದು ಮನದಟ್ಟಾಗುತ್ತದೆ ಎಂದು ಕುಟುಕಿದ್ದಾರೆ.
ಸತ್ಯಮೇವ ಜಯತೆ ಜಾಹೀರಾತಿನ ಸ್ಲೋಗನ್ ಅಲ್ಲ
ನಾವು ಸತ್ಯದ ಪರವಾಗಿದ್ದೇವೆ. ಸತ್ಯಮೇವ ಜಯತೆ ಎನ್ನುವುದು ನಮ್ಮ ಪಾಲಿಗೆ ಬರೀ ಜಾಹೀರಾತಿನ ಸ್ಲೋಗನ್ ಅಲ್ಲ, ರಾಷ್ಟ್ರಪಿತ ಬಾಪೂಜಿ ಹೇಳಿದ ಸತ್ಯ ಮಾರ್ಗದಲ್ಲಿಯೇ ನಡೆಯೋಣ. ಆ ಮರ್ಯಾದಾ ಪುರುಷೋತ್ತಮ ರಾಮನ ದಾರಿ ನಮ್ಮ ಆದರ್ಶ. ಶ್ರೀಕೃಷ್ಣ ಪರಮಾತ್ಮನ ಸತ್ಯನೀತಿ ನಮ್ಮ ಮುಂಬೆಳಕು. ನಾವು ಯಾರೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ನಾನಿದ್ದೇನೆ. ಇಡೀ ಪಕ್ಷವೇ ಇದೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
ಯೋಗೇಶ್ವರ್ ಹೇಳಿದ್ದೇನು?
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪ್ರತಿಷ್ಠೆಗೆ ನಿಖಿಲ್ ಬಲಿಯಾಗಿದ್ದಾರೆ. ಕುಮಾರಸ್ವಾಮಿ ಮನಸು ಮಾಡಿದ್ದರೆ ಮಗನನ್ನು ಮಂಡ್ಯ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಸ್ಪರ್ಧಿಸಿ, ಗೆದ್ದರು. ಮಗನನ್ನು ಬಲಿಕೊಟ್ಟರು ಎಂದು ಸಿ.ಪಿ. ಯೋಗೇಶ್ವರ್ ಟೀಕಿಸಿದ್ದರು.
ದೇವೇಗೌಡರು ದೈತ್ಯ ಶಕ್ತಿ ಎಂಬುದನ್ನು ಹಿಂದಿನಿಂದಲೂ ಹೇಳುತ್ತಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ಈಗ ವಯಸ್ಸಾಗಿದೆ. ಹಾಗಾಗಿ ಜನ ಅವರನ್ನು ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಅವರು ವಿಶ್ರಾಂತ ಜೀವನ ನಡೆಸಲು ಇದು ಸೂಕ್ತ ಕಾಲ. ಈ ಚುನಾವಣೆ ಫಲಿತಾಂಶ ಜೆಡಿಎಸ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂಬುದರ ಸಂಕೇತ ಎಂದು ಟೀಕಿಸಿದ್ದರು. ಅಲ್ಲದೇ ಕಾಂಗ್ರೆಸ್ ವರಿಷ್ಠಡಿ ಟಾಸ್ಕ್ ನೀಡಿದರೆ 15 ದಿನಗಳಲ್ಲೇ ಜೆಡಿಎಸ್ ಪಕ್ಷದಿಂದ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದು ಹೇಳಿದ್ದರು.
ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಜೆಡಿಎಸ್ ಖಾಲಿ ಮಾಡಿಸುತ್ತೇನೆ ಎಂಬ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರೆ ಕಾಂಗ್ರೆಸ್ ನಾಯಕರು ಅದು ಅವರ ವೈಯಕ್ತಿಕ ಹೇಳಿಕೆ. ನಮಗೆ ೧೩೮ ಶಾಸಕರ ಬಲವಿದೆ. ಜೆಡಿಎಸ್ ಶಾಸಕರ ಅಗತ್ಯವಿಲ್ಲ. ಬಿಜೆಪಿಯಂತಹ ಆಪರೇಷನ್‌ಗೆ ಇಳಿಯುವುದೂ ಇಲ್ಲ ಎಂದು ಹೇಳಿದ್ದರು. ಇನ್ನು ಸಿಎಂ ಹಾಗೂ ಗೃಹ ಸಚಿವ ಡಾ. ಪರಮೇಶ್ವರ್ ಕೂಡ ಇದೇ ದಾಟಿಯಲ್ಲಿ ಜೆಡಿಎಸ್ ಶಾಸಕರ ಅವಶ್ಯಕತೆ ನಮಗೆ ಬೇಕಿಲ್ಲ ಎಂದು ಹೇಳಿಕೆ ನೀಡಿದ್ದರು.