Loksabha Election 2024 | ಮಂಡ್ಯದಿಂದ ನಿಖಿಲ್‌ ಮತ್ತೆ ಅದೃಷ್ಟ ಪರೀಕ್ಷೆ? ಎಚ್‌ ಡಿಕೆ ಲೆಕ್ಕಾಚಾರಗಳೇನು?
x

Loksabha Election 2024 | ಮಂಡ್ಯದಿಂದ ನಿಖಿಲ್‌ ಮತ್ತೆ ಅದೃಷ್ಟ ಪರೀಕ್ಷೆ? ಎಚ್‌ ಡಿಕೆ ಲೆಕ್ಕಾಚಾರಗಳೇನು?

ಮಂಡ್ಯದಲ್ಲಿ ಜೆಡಿಎಸ್ ಪ್ರಭಾವಶಾಲಿಯಾಗಿದ್ದರೂ 2019ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪಕ್ಷದ ಮುಖಂಡರ ಸಭೆಯಲ್ಲಿ ಸ್ವತಃ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರೇ ಸುಳಿವು ಬಿಟ್ಟು ಕೊಟ್ಟಿದ್ದು, ಮಂಡ್ಯದಿಂದ ಸ್ಪರ್ಧಿಸುವಂತೆ ನಿಖಿಲ್ ಕುಮಾಸ್ವಾಮಿ ಅವರನ್ನು ಒಪ್ಪಿಸುವುದಾಗಿ ಹೇಳಿದ್ದಾರೆ.

ಐದು ವರ್ಷ ಚುನಾವಣೆ ಸ್ಪರ್ಧಿಸಲ್ಲ ಎಂದಿದ್ದ ನಿಖಿಲ್

2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಹಾಗೂ 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು ಇನ್ನು ಮುಂದೆ ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದರು. ಸಿನೆಮಾ ನಟರೂ ಆಗಿರುವ ನಿಖಿಲ್ ರಾಜಕಾರಣಕ್ಕೆ ಬ್ರೇಕ್ ನೀಡಿ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ ಎಂದೂ ಹೇಳಲಾಗಿತ್ತು.

ಇದನ್ನೂ ಓದಿ | ಮಂಡ್ಯದಲ್ಲಿ ಸ್ಪರ್ಧಿಸಲು ನಿಖಿಲ್‌ ಒಪ್ಪಿಸುತ್ತೇನೆ: ಹೆಚ್‌ ಡಿ ಕುಮಾರಸ್ವಾಮಿ

ಆದರೆ, ಇದೀಗ ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಪಟ್ಟು ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ನಿಖಿಲ್ ಸ್ಪರ್ಧೆಗೆ ಮನಸು ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿವೆ.

ಹೆಚ್ ಡಿಕೆ ಕುಟುಂಬಕ್ಕೆ ಪ್ರತಿಷ್ಠೆಯ ಕಣ

ಹಳೆ ಮೈಸೂರು ಭಾಗದಲ್ಲಿ; ಅದರಲ್ಲೂ ಮಂಡ್ಯದಲ್ಲಿ ಜೆಡಿಎಸ್ ಪ್ರಭಾವಶಾಲಿಯಾಗಿದ್ದರೂ 2019 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಸುಮಲತಾ ಅವರಿಗೆ ಬಿಜೆಪಿ ಬಹಿರಂಗ ಬೆಂಬಲ, ಕಾಂಗ್ರೆಸ್ ಹಿಂಬಾಗಿಲ ಮೂಲಕ ಬೆಂಬಲಿಸಿದ್ದರಿಂದ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದರು.

ರಾಜ್ಯದಲ್ಲಿ ಆ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಕಾಂಗ್ರೆಸ್ ಜೆಡಿಎಸ್ ಗೆ ಬೆನ್ನಿಗೆ ಚೂರಿ ಹಾಕಿದೆ ಎಂಬ ಅಸಮಾಧಾನ ಜೆಡಿಎಸ್ ಕಾರ್ಯಕರ್ತರಲ್ಲಿದೆ.

ಅಲ್ಲದೆ, ಮಂಡ್ಯದಂತಹ ಕ್ಷೇತ್ರದಲ್ಲಿ ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಕುಮಾರಸ್ವಾಮಿ ಅವರೂ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರೂ ಚುನಾವಣಾ ಫಲಿತಾಂಶದಿಂದ ಅವಮಾನಿತರಾಗಿದ್ದರು. ಹಾಗಾಗಿ, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಅನ್ನು ಮತ್ತೆ ಕಟ್ಟಲು ಜೆಡಿಎಸ್‌ ಶತಾಯಗತಾಯ ಪ್ರಯತ್ನಿಸುತ್ತಿದೆ.

ಸುಮಲತಾರೊಂದಿಗಿನ ಸಂಘರ್ಷ

ಸುಮಲತಾ ಅವರು ಮಂಡ್ಯ ಸಂಸದೆಯಾದ ಬಳಿಕ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ವೈಮನಸ್ಯ ವಿಪರೀತಕ್ಕೆ ಹೋಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದಲೇ ಇಬ್ಬರೂ ಸುದ್ದಿಯಲ್ಲಿದ್ದರು.

ಅಂಬರೀಶ್ ಬದುಕಿದ್ದಾಗ ಅವರನ್ನು ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದೂ ಸುಮಲತಾ ವಿರುದ್ಧ ಆರೋಪಿಸಿದ್ದ ಹೆಚ್‌ ಡಿಕೆ, ಸುಮಲತಾ ಅವರ ವಿರುದ್ಧ ಮಂಡ್ಯದಿಂದಲೇ ರಾಜಕಾರಣ ಶುರು ಮಾಡುವುದಾಗಿ ಶಪಥ ಮಾಡಿಕೊಂಡಿದ್ದರು. ಅಕ್ರಮ ಕಲ್ಲು ಗಣಿಗಾರಿಕೆ, ಮೈಶುಗರ್ ಫ್ಯಾಕ್ಟರಿಗಳ ಕುರಿತಂತೆ ಸುಮಲತಾ ವರ್ಸಸ್ ಹೆಚ್ಡಿಕೆ ಜಗಳಗಳು ತಾರಕಕ್ಕೇರಿದ್ದವು. ಇತ್ತೀಚಿನವರೆಗೂ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಇಬ್ಬರು ವೈಯಕ್ತಿಕ ವಿಚಾರಗಳನ್ನೂ ಎಳೆದು ತಂದಿದ್ದರು.

ಬಿಜೆಪಿಯೊಂದಿಗೆ ಮೈತ್ರಿ; ಮಂಡ್ಯಕ್ಕಾಗಿ ಕಸರತ್ತು

2023 ರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜೆಡಿಎಸ್. ನಂತರ ತನ್ನ ಅಸ್ತಿತ್ವಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್‌ಡಿಎ ಜೊತೆ ಸೇರಿಕೊಂಡಿತ್ತು. ಜೆಡಿಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡುತ್ತಿರುವ ಸುಳಿವು ಸಿಕ್ಕ ಸುಮಲತಾ ಅವರೂ ಮಂಡ್ಯ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಸೇರಿಕೊಂಡು, ನರೇಂದ್ರ ಮೋದಿ ಅವರನ್ನು ವಿಪರೀತ ಹೊಗಳಲು ಶುರು ಮಾಡಿದ್ದರು.

ಆದರೆ, ಮಂಡ್ಯ ಕ್ಷೇತ್ರದ ಮೇಲೆ ಜಿದ್ದಿಗೆ ಬಿದ್ದಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ಸೀಟು ಹಂಚಿಕೆ ಸೂತ್ರದಡಿಯಲ್ಲಿ ಮಂಡ್ಯ ಜೆಡಿಎಸ್ಗೆ ಬಿಟ್ಟು ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಸುಮಲತಾ ಅವರು ಬಿಜೆಪಿಯ ಕೇಂದ್ರ ವರಿಷ್ಠರನ್ನು ಭೇಟಿಯಾಗಿ ಮಂಡ್ಯದಿಂದ ಬಿಜೆಪಿ ಟಿಕೆಟ್ ಲಭಿಸಲು ಕಸರತ್ತು ಮಾಡಿದ್ದರಾದರೂ ಹೆಚ್‌ ಡಿಕೆ ಹಠಕ್ಕೆ ಬಿಜೆಪಿ ಹೈಕಮಾಂಡ್‌ ಮಣಿದಿತ್ತು. ಅದರಂತೆ, ಹಾಸನ, ಮಂಡ್ಯ, ಕೋಲಾರ ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ಮಂಡ್ಯಕ್ಕೆ ನಿಖಿಲ್: ಎಚ್ ಡಿಕೆ ಯೋಜನೆ ಏನು?

2023 ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಜೆಡಿಎಸ್ ನೆಲೆ ಕಳೆದುಕೊಂಡಿತ್ತು. ಕೇವಲ 19 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದ್ದ ಎಚ್‌ ಡಿಕೆ ನೇತೃತ್ವದ ಪಕ್ಷವು ಹಿಂದಿನ ಚುನಾವಣೆಗೆ ಹೋಲಿಸಿದರೆ ಅರ್ಧದಷ್ಟು ಶಾಸಕರನ್ನು ಕಳೆದುಕೊಂಡಿತ್ತು.

2019 ರ ಲೋಕಸಭಾ ಚುನಾವಣಾ ಫಲಿತಾಂಶದಿಂದ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಭಾವ ಕಳೆದುಕೊಂಡಿರುವುದರಿಂದ ಮಂಡ್ಯದಿಂದಲೇ ಮತ್ತೆ ಎದ್ದು ನಿಲ್ಲುವ ಯೋಜನೆಯನ್ನು ಹೆಚ್ಡಿಕೆ ಹಾಕಿಕೊಂಡಿದ್ದಾರೆ. ಸುಮಲತಾ ವಿರುದ್ಧದ ವಾಕ್ಸಮರದ ವೇಳೆಯೂ ಮಂಡ್ಯದಿಂದ ರಾಜಕಾರಣವನ್ನು ಶುರು ಮಾಡುವುದಾಗಿ ಘೋಷಿಸಿಕೊಂಡಿದ್ದರು. ಹೀಗಾಗಿ, ಜೆಡಿಎಸ್-ಬಿಜೆಪಿ ಮೈತ್ರಿ ಸಂದರ್ಭದಲ್ಲಿ ಎಚ್‌ ಡಿಕೆ ಮಂಡ್ಯದ ಮೂಲಕ ಸ್ಪರ್ಧಿಸಿ ಕೇಂದ್ರ ರಾಜಕಾರಣಕ್ಕೆ ಇಳಿಯಲಿದ್ದಾರೆ ಎನ್ನುವ ಚರ್ಚೆಗಳು ನಡೆದಿದ್ದವು.

ಈಗಾಗಲೇ ಎರಡು ಬಾರಿ ಸ್ಪರ್ಧಿಸಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಜೀವನಕ್ಕೆ ಭದ್ರ ಅಡಿಪಾಯ ಹಾಕಲು ಈ ಬಾರಿ ಮಂಡ್ಯ ಕ್ಷೇತ್ರ ಸೂಕ್ತವಾಗಿದೆ ಎಂಬುದು ಹೆಚ್ಡಿಕೆ ಲೆಕ್ಕಾಚಾರ. ಹಾಗಾಗಿ, ನಿಖಿಲ್ ರನ್ನು ಮಂಡ್ಯದಿಂದ ನಿಲ್ಲಿಸಿ ಗೆಲ್ಲಿಸಲು ಹೆಚ್ಡಿಕೆ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ನಿಖಿಲ್ ಗೆ ಲಾಭ ತಂದುಕೊಡಲಿರುವ ಅಂಶಗಳು

ಪ್ರಧಾನಿ ಮೊಮ್ಮಗ, ಸಿಎಂ ಪುತ್ರನಾಗಿದ್ದರೂ ರಾಜಕೀಯವಾಗಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗದ ನಿಖಿಲ್ ಮೇಲೆ ಹಾಗೂ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಜೆಡಿಎಸ್ ಮೇಲೆ ಹಳೆ ಮೈಸೂರು ಭಾಗದ ಜನರಲ್ಲಿ ಅನುಕಂಪದ ಅಲೆ ಇದೆ ಎಂದು ನಿಖಿಲ್ ಆಪ್ತರೊಬ್ಬರು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಸುಮಲತಾ ಅಂಬರೀಶ್ ಮೇಲಿನ ಮಂಡ್ಯ ಜನತೆಯ ಅಸಮಾಧಾನವೂ ನಿಖಿಲ್ ಮೇಲಿನ ಸಹಾನುಭೂತಿಗೆ ಕಾರಣವಾಗಿದೆ. ಅಲ್ಲದೆ, ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದು ಕೂಡಾ ನಿಖಿಲ್ ಗೆಲುವಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ಅಂಶಗಳ ಮೇಲೆಯೇ ನಿಖಿಲ್‌ ರನ್ನು ಮಂಡ್ಯದಿಂದ ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಒತ್ತಾಯಪಡಿಸುತ್ತಿದ್ದಾರೆ. ಈ ಬಾರಿ ನಿಖಿಲ್ ಮಂಡ್ಯದಿಂದ ಸ್ಪರ್ಧಿಸಿದರೆ ಗೆಲುವು ಖಚಿತ, ಹಾಸನದಲ್ಲೂ ನಾವೇ ಗೆಲ್ಲುತ್ತೇವೆ. ಅನುಮಾನ ಇರುವುದು ಕೋಲಾರದ ಮೇಲೆ ಮಾತ್ರ ಎಂದು ಅವರು ತಿಳಿಸಿದ್ದಾರೆ.

Read More
Next Story