
NHM Employees | ಎರಡು ದಿನದಲ್ಲಿ ಎನ್‌ಎಚ್‌ಎಂ ಸಿಬ್ಬಂದಿಗೆ ವೇತನ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ
ವೇತನ ಹೆಚ್ಚಳಕ್ಕೆ ಕಳೆದ ಎಂಟು ತಿಂಗಳಿಂದ ಮನವಿ ಮಾಡಿದರೂ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈಗ ಅನುಮತಿ ನೀಡಲಾಗಿದೆ. ಅದರಂತೆ ತಜ್ಞ ವೈದ್ಯರು, ಎಂಬಿಬಿಎಸ್ ಹಾಗೂ ಸ್ಟಾಫ್ ನರ್ಸ್‌ಗಳ ವೇತನ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಮಿಷನ್(ಎನ್‌ಎಚ್‌ಎಂ) ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಎರಡು ದಿನದಲ್ಲಿ ವೇತನ ಪಾವತಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಎನ್‌ಎಚ್‌ಎಂ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ನೀಡಲಾಗಿಲ್ಲ. ವೇತನ ಬಿಡುಗಡೆ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಎರಡು ದಿನದಲ್ಲಿ ವೇತನ ಪಾವತಿಸಲಾಗುವುದು ಎಂದು ಹೇಳಿದ್ದಾರೆ.
ವೇತನ ಹೆಚ್ಚಳಕ್ಕೆ ಮನವಿ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 1398 ಎಂಬಿಬಿಎಸ್, 899 ತಜ್ಞರು ಸೇರಿ ಒಟ್ಟು 9041 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 936 ಸ್ಟಾಪ್ ನರ್ಸ್, 579 ಎಂಬಿಬಿಎಸ್ ಹಾಗೂ 305 ತಜ್ಞ ವೈದ್ಯರ ಸ್ಥಾನ ಖಾಲಿ ಇದೆ. ಎನ್‌ಎಚ್‌ಎಂ ಯೋಜನೆಯಡಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಕಳೆದ ಎಂಟು ತಿಂಗಳಿಂದ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈಗ ಅನುಮತಿ ನೀಡಲಾಗಿದೆ. ಅದರಂತೆ ತಜ್ಞ ವೈದ್ಯರು, ಎಂಬಿಬಿಎಸ್ ಹಾಗೂ ಸ್ಟಾಫ್ ನರ್ಸ್‌ಗಳ ವೇತನ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪ್ರಸ್ತುತ, ಎಂಬಿಬಿಎಸ್ ವೈದ್ಯರಿಗೆ 46,895 ರಿಂದ 50,000 ರೂ. ವೇತನ ನೀಡಲಾಗುತ್ತಿದೆ. ಈಗ ಅದನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ತಜ್ಞ ವೈದ್ಯರಿಗೆ ಪ್ರಸ್ತುತ 1.10 ಲಕ್ಷ ರೂ.ಗಳಿಂದ 1.30 ಲಕ್ಷ ರೂ. ಇತ್ತು. ಅದನ್ನು 1.40 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಸ್ಟಾಪ್ ನರ್ಸ್‌ಗಳಿಗೆ 14,186 ರೂ.ಗಳಿಂದ 18,774 ವೇತನ ಇತ್ತು. ಅದನ್ನು 22 ಸಾವಿರಕ್ಕೆ ಏರಿಕೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಹೊಸದಾಗಿ ನೇಮಕವಾಗುವ ವೈದ್ಯರಿಗೆ ವೇತನ ಹೆಚ್ಚಳ ಮಾಡಲಾಗುವುದು. ಹಳೆಯ ಸಿಬ್ಬಂದಿಗೆ ಈಗ ಇರುವ ವೇತನವೇ ಮುಂದುವರೆಯಲಿದೆ. ಒಂದು ವೇಳೆ ಪರಿಷ್ಕೃತ ವೇತನ ಬೇಕಾದಲ್ಲಿ ಹಳೆಯ ಸಿಬ್ಬಂದಿ ರಾಜೀನಾಮೆ ನೀಡಿ ಹೊಸದಾಗಿ ಕೆಲಸಕ್ಕೆ ಅರ್ಜಿ ಹಾಕಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡದ ಕಾರಣ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದರು. ರಾಜ್ಯದಲ್ಲಿ ಒಟ್ಟು 28,526 ನೌಕರರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶುಶ್ರೂಷಕಿ ಸೇರಿದಂತೆ ವೈದ್ಯರವರೆಗೆ 186 ವಿಭಾಗದಲ್ಲಿ ದುಡಿಯುತ್ತಿದ್ದಾರೆ. ಆದರೆ, ಕಳೆದ ಮೂರು ತಿಂಗಳಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ 40 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 60 ರಷ್ಟು ಅನುಪಾತದಲ್ಲಿ ವೇತನ ನೀಡಲಿವೆ.
ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಶ್ವಥ್ ಮಾತನಾಡಿ, ವೇತನ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಆದರೆ, ಮೂರು ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿದೆ. ವೇತನ ಪಾವತಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನೌಕರರ ಕಾಯಂಗೊಳಿಸುವ ಬಗ್ಗೆ ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದಿದೆ. ಆದರೆ ಸೇವೆ ಕಾಯಂ ಮಾಡುತ್ತಿಲ್ಲ. ಇದೇ ರೀತಿ ಮಾಡಿದರೆ ಮುಂದಿನ ನಿಲುವಿನ ಬಗ್ಗೆ ಸಭೆ ಸೇರಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಿಬ್ಬಂದಿಗಳ ಅಳಲು
ಮೂರು ತಿಂಗಳಿಂದ ವೇತನ ಸಿಗದೆ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ನಮ್ಮಕಷ್ಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಎನ್‌ಎಚ್‌ಎಂ ಸಿಬ್ಬಂದಿ ವೇದ ಅವರು ದ ಫೆಡರಲ್ ಕರ್ನಾಟಕದ ಬಳಿ ಅಳಲು ತೋಡಿಕೊಂಡಿದ್ದಾರೆ.
ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಅತ್ಯಂತ ಕಡಿಮೆ ವೇತನ ಇದ್ದು, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ವೇತನ ಪಾವತಿಸದ ಕಾರಣ ಸಿಬ್ಬಂದಿಯ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಕಂತು ಪಾವತಿಯೂ ಅಸಾಧ್ಯವಾಗಿದೆ. ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸದ ಕಾರಣ ಮಾಲೀಕರು ಮನೆ ಖಾಲಿ ಮಾಡಿಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ ಹೇಳಿದ್ದಾರೆ.
ಸಿಬ್ಬಂದಿಗೆ ಸರ್ಕಾರಿ ವಸತಿ ಗೃಹಗಳನ್ನು ನೀಡಬೇಕು. ಸಕಾಲದಲ್ಲಿ ವೇತನ ಪಾವತಿ ಆಗುವಂತೆ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಬಾಕಿ ಇರುವ ಬೇಡಿಕೆಗಳಾದ ಶೇ15 ರಷ್ಟು ವೇತನ ಹೆಚ್ಚಳ ಮಾಡಬೇಕು. ಅಂತರ್ ಜಿಲ್ಲಾ ವರ್ಗಾವಣೆ ಹಾಗೂ ಆರೋಗ್ಯ ವಿಮೆಯ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.