ಮಂಡ್ಯ ಸಾಹಿತ್ಯ ಸಮ್ಮೇಳನ | ಬಳ್ಳಾರಿಯಲ್ಲಿ ಮುಂದಿನ ಸಮ್ಮೇಳನ: ತ್ರಿಭಾಷಾ ಸೂತ್ರಕ್ಕೆ ಸಮ್ಮೇಳನಾಧ್ಯಕ್ಷರ ವಿರೋಧ
x

ಮಂಡ್ಯ ಸಾಹಿತ್ಯ ಸಮ್ಮೇಳನ | ಬಳ್ಳಾರಿಯಲ್ಲಿ ಮುಂದಿನ ಸಮ್ಮೇಳನ: ತ್ರಿಭಾಷಾ ಸೂತ್ರಕ್ಕೆ ಸಮ್ಮೇಳನಾಧ್ಯಕ್ಷರ ವಿರೋಧ

66 ವರ್ಷಗಳ ಬಳಿಕ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿತೇರು ಎಳೆಯುವ ಅವಕಾಶ ಬಳ್ಳಾರಿಗೆ ದೊರೆತಿದೆ. ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ಆಯೋಜಿಸುವ ಕುರಿತು ಚರ್ಚೆ ನಡೆಯಿತು. ಆದರೆ, ಅಂತಿಮವಾಗಿ ಬಳ್ಳಾರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಆಯೋಜಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ಪರಿಷತ್‌ ತಿಳಿಸಿದೆ.


ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ವರ್ಷ 88 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್‌ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ಎಲ್ಲ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ಸಮಾಲೋಚಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಆ ಮೂಲಕ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿತೇರು ಎಳೆಯುವ ಅವಕಾಶ ಬಳ್ಳಾರಿಗೆ ದೊರೆತಿದೆ. 66 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂಬುದು ವಿಶೇಷ.

ಹಾವೇರಿಯಲ್ಲಿ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಬಳ್ಳಾರಿ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್‌ ಅಂತಿಮವಾಗಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿತ್ತು.

ಇನ್ನು ಸಭೆಯಲ್ಲಿ ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ಆಯೋಜಿಸುವ ಕುರಿತು ಚರ್ಚೆ ನಡೆಯಿತು. ಆದರೆ, ಅಂತಿಮವಾಗಿ ಬಳ್ಳಾರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಆಯೋಜಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್‌ ತಿಳಿಸಿದೆ. ಬಳ್ಳಾರಿಯಲ್ಲಿ 1926 ,1938 ಹಾಗೂ 1958 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.

ತ್ರಿಭಾಷಾ ಸೂತ್ರ ಬೇಡ; ಗೊ.ರು.ಚನ್ನಬಸಪ್ಪ ಅಭಿಮತ

ಭಾರತದಲ್ಲಿ ಪ್ರತಿಯೊಂದು ಜನಾಂಗಕ್ಕೂ ಅವರದ್ದೇ ಭಾಷೆಯಿದೆ. ಆ ಭಾಷೆಗೆ ಸೊಗಸು, ಸೊಗಡು, ಸತ್ವವೂ ಇದೆ. ಬಹು ಭಾಷೆ ಹಾಗೂ ಬಹು ಸಂಸ್ಕ್ರತಿ ದೇಶದಲ್ಲಿ ಬಹುತ್ವ ಸಂಸ್ಕೃತಿಯನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು ಎಂದು ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಸಲಹೆ ನೀಡಿದರು.

ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸಿಗಲಿದೆ ಎಂಬ ಭ್ರಮೆ ಪೋಷಕರಲ್ಲಿದೆ. ನಮಗೆ ದ್ವಿಭಾಷಾ ಸೂತ್ರವೇ ಕ್ಷೇಮ. ತ್ರಿಭಾಷಾ ಸೂತ್ರ ಹೇರುವ ಅಗತ್ಯವಿಲ್ಲ. ಈ ಕುರಿತು ಸರ್ಕಾರಗಳು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಬೇರೆ ಜಿಲ್ಲೆಗಳಲ್ಲಿ ನಿರ್ದೇಶನಾಲಯ ಕಚೇರಿಗಳು. ಅಕಾಡೆಮಿ, ಪ್ರಾಧಿಕಾರಗಳು ಇದ್ದರೆ ಭಾವನಾತ್ಮಕ ಸಂಬಂಧ ಬೆಳೆಯಲಿದೆ. ಹಾಗಾಗಿ ಆಡಳಿತ ಕಚೇರಿಗಳ ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕು. 12ನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯವು ಅಂದಿನ ವ್ಯವಸ್ಥೆ ವಿರುದ್ಧ ಪ್ರತಿಭಟನೆಗೆ ಕಾರಣವಾಯಿತು. ಅಂದಿನ ಪ್ರತಿಭಟನಾ ಸಾಹಿತ್ಯ ಹಾಗೂ ವಚನ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು ಪ್ರಧಾನ ಅಧ್ಯಯನ ವಿಷಯವಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಮಕಾಲೀನ ಸಮಸ್ಯೆಗೆ ಉತ್ತರ

ವಚನ ಸಾಹಿತ್ಯವು 20-30 ಅಂತಾರಾಷ್ಟ್ರೀಯ ಭಾಷೆಗಳಿಗೆ ಅನುವಾದವಾಗಿದೆ. ವಚನ ಸಾಹಿತ್ಯದ ಪ್ರಸಾರ ವ್ಯಾಪಕವಾಗಬೇಕು. ಸಮಕಾಲೀನ ಸಮಸ್ಯೆಗಳಿಗೆ ವಚನಗಳಲ್ಲಿ ಉತ್ತರವಿದೆ ಎಂದು ಗೊ.ರು. ಚನ್ನಬಸಪ್ಪ ಹೇಳಿದರು

ಜನಪದ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕು. ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಜನಪದ ಕಲೆಗಳಿಗೆ ಮನ್ನಣೆ ಸಿಗಬೇಕು. ಹಾವೇರಿಯ ಜಾನಪದ ವಿಶ್ವ ವಿದ್ಯಾಲಯ ಜಗತ್ತಿನ ಏಕಮಾತ್ರ ಜಾನಪದ ವಿಶ್ವವಿದ್ಯಾಲಯ. ಇದು ಪ್ರತಿಷ್ಠೆಯ ಸಂಸ್ಥೆ ಆಗಬೇಕು ಎಂದು ಹೇಳಿದರು.

Read More
Next Story