ಡ್ರಗ್ಸ್ ಬೇಟೆ ಮುಂಬೈ-ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ: ಬಿಜೆಪಿ ಆರೋಪಕ್ಕೆ ತಿರುಗೇಟು
x

ಡ್ರಗ್ಸ್ ಬೇಟೆ ಮುಂಬೈ-ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ: ಬಿಜೆಪಿ ಆರೋಪಕ್ಕೆ ತಿರುಗೇಟು

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ. ಒಟ್ಟು 20 ಸಾವಿರ ಪೊಲೀಸರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವ ಪರಮೇಶ್ವರ್‌ ಹೇಳಿದ್ದಾರೆ.


Click the Play button to hear this message in audio format

ಮುಂಬೈನಲ್ಲಿ ಸಿಕ್ಕಿದ್ದ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರ ಪೊಲೀಸ್, ಮುಂಬೈ ಪೊಲೀಸ್, ಎನ್‌ಸಿಬಿ ಮತ್ತು ಸೋಕೋ ತಂಡದವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಹೊಸ ವರ್ಷದ ಭದ್ರತಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬೇರೆ ರಾಜ್ಯದ ಪೊಲೀಸರು ಬಂದು ಡ್ರಗ್ಸ್ ದಂಧೆಕೋರರನ್ನು ಹಿಡಿಯುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದರು. ಮುಂಬೈ ಪೊಲೀಸರು ನೀಡಿದ ಮಾಹಿತಿಯ ಮೇರೆಗೆ ಡಿಸಿಪಿ ತಂಡವೂ ಅವರ ಜೊತೆಗಿತ್ತು. 58 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂಬುದು ತಪ್ಪು ಮಾಹಿತಿ. ಪತ್ತೆಯಾಗಿರುವ ಮೆಫೆಡ್ರಿನ್ ಕೆಮಿಕಲ್ ಮೌಲ್ಯ ಒಂದು ಕೆಜಿಗೆ 30 ಲಕ್ಷ ರೂ.ನಂತೆ 4 ಕೆಜಿಗೆ ಸುಮಾರು 1.20 ಕೋಟಿ ರೂ. ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಪೊಲೀಸರು ಬೇರೆ ರಾಜ್ಯಗಳಿಗೆ ಹೋಗಿ ಆರೋಪಿಗಳನ್ನು ಹಿಡಿದಾಗ ಅಲ್ಲಿನ ಪೊಲೀಸರು ವಿಫಲರಾದರು ಎಂದು ಯಾರೂ ಹೇಳುವುದಿಲ್ಲ. ಇದು ರಾಷ್ಟ್ರಮಟ್ಟದ ಸಂಘಟಿತ ಹೋರಾಟ. ಆದರೂ, ಸ್ಥಳೀಯ ಮಟ್ಟದಲ್ಲಿ ದಂಧೆ ನಡೆಯುತ್ತಿದ್ದರೆ ಡಿಸಿಪಿ, ಎಸಿಪಿ ಸೇರಿದಂತೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಹೊಸ ವರ್ಷಕ್ಕೆ 20 ಸಾವಿರ ಪೊಲೀಸರ ಸರ್ಪಗಾವಲು

ನಗರದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಬಂದೋಬಸ್ತ್ ಮಾಡಲಾಗಿದೆ. ಒಟ್ಟು 20 ಸಾವಿರ ಪೊಲೀಸರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ 14 ಸಾವಿರ ಕಾನೂನು ಸುವ್ಯವಸ್ಥೆ ಪೊಲೀಸರು ಮತ್ತು 2,500 ಸಂಚಾರ ಪೊಲೀಸರು ಇರಲಿದ್ದಾರೆ. 88 ಕೆಎಸ್ಆರ್‌ಪಿ ಪ್ಲಟೂನ್ಸ್, 266 ಹೊಯ್ಸಳ ಮತ್ತು 250 ಕೋಬ್ರ ವಾಹನಗಳು ನಗರದಾದ್ಯಂತ ಗಸ್ತು ತಿರುಗಲಿವೆ. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ನಗರದ ವಿವಿಧೆಡೆ ನಡೆಯುವ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮೊದಲ ಬಾರಿಗೆ 'ಹೀಟ್ ಮ್ಯಾಪ್' ಮತ್ತು 'ಎಐ' ತಂತ್ರಜ್ಞಾನ

ಈ ವರ್ಷದ ಭದ್ರತೆಯಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಮಾಂಡ್ ಸೆಂಟರ್ ಮೂಲಕ ಜನರ ದಟ್ಟಣೆಯನ್ನು ಗುರುತಿಸಲು ಹೀಟ್ ಮ್ಯಾಪ್ ಬಳಸಲಾಗುತ್ತಿದೆ. ಅತೀ ಹೆಚ್ಚು ಜನರಿರುವ ಕಡೆ 'ಕೆಂಪು', ಸಾಧಾರಣ ಜನರಿರುವ ಕಡೆ 'ಹಳದಿ' ಮತ್ತು ಕಡಿಮೆ ಜನರಿರುವ ಕಡೆ 'ಹಸಿರು' ಬಣ್ಣದಿಂದ ಗುರುತಿಸಲಾಗುತ್ತದೆ. ಇದನ್ನು ಆಧರಿಸಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ. ಅಪರಾಧ ಹಿನ್ನೆಲೆಯುಳ್ಳವರನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ ಆಧಾರಿತ ಮುಖಚರ್ಯೆ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಳೆಯ ಅಪರಾಧಿಗಳು ಗುಂಪಿನಲ್ಲಿ ಕಂಡ ಕೂಡಲೇ ಪೊಲೀಸರಿಗೆ ಅಲರ್ಟ್ ಸಿಗಲಿದೆ. ಅಲ್ಲದೇ, ತುರ್ತು ಮಾಹಿತಿಗಾಗಿ ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ. 180 ಕಡೆ ಫೋಕಸ್ ಲೈಟ್‌ಗಳು ಮತ್ತು ಜನದಟ್ಟಣೆ ಮೇಲೆ ಕಣ್ಣಿಡಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಹಿಳಾ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆ

ಮಹಿಳೆಯರ ಸುರಕ್ಷತೆಗಾಗಿ ವಿಶೇಷ 'ಸೇಫ್ಟಿ ಶೆಲ್ಟರ್'ಗಳನ್ನು ನಿರ್ಮಿಸಲಾಗಿದೆ. ಸಂಭ್ರಮಾಚರಣೆಯ ನಂತರ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಟ್ಯಾಕ್ಸಿಗಳ ಕೊರತೆಯಾಗದಂತೆ 8 ಪ್ರಮುಖ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬಾರ್, ರೆಸ್ಟೋರೆಂಟ್ ಮತ್ತು ಮಾಲ್‌ಗಳಿಗೆ ಈಗಾಗಲೇ 15 ಅಂಶಗಳ ಮಾರ್ಗಸೂಚಿ ನೀಡಲಾಗಿದೆ.

ಇನ್ನು, ಕಳೆದ ಐದು ದಿನಗಳಿಂದ ನಗರದಲ್ಲಿ ತಪಾಸಣೆ ನಡೆಸಲಾಗಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ 2,854 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವಕರು ಜವಾಬ್ದಾರಿಯಿಂದ ಸಂಭ್ರಮಿಸಬೇಕು. ಪೋಷಕರು ತಮ್ಮ ಮಕ್ಕಳು ಮನೆಗೆ ಬರುವವರೆಗೂ ನಿಗಾವಹಿಸಬೇಕು. ಭಯೋತ್ಪಾದನಾ ಚಟುವಟಿಕೆಗಳ ದೃಷ್ಟಿಯಿಂದಲೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Read More
Next Story