ಹೊಸ ವರ್ಷ| ಮೆಟ್ರೋ, ಬಿಎಂಟಿಸಿಯಿಂದ ಹೆಚ್ಚುವರಿ ಸೇವೆ; ಒಂದೇ ದಿನ ದಾಖಲೆಯ ಆದಾಯ ಗಳಿಕೆ
x

ಹೊಸ ವರ್ಷ| ಮೆಟ್ರೋ, ಬಿಎಂಟಿಸಿಯಿಂದ ಹೆಚ್ಚುವರಿ ಸೇವೆ; ಒಂದೇ ದಿನ ದಾಖಲೆಯ ಆದಾಯ ಗಳಿಕೆ

ಸಾಮಾನ್ಯ ದಿನಗಳಲ್ಲಿ ʼನಮ್ಮ ಮೆಟ್ರೋʼಗೆ ಸುಮಾರು 2.7 ಕೋಟಿ ರೂ. ಆದಾಯ ಬರುತ್ತಿತ್ತು. ಡಿ.31ರಂದು ಸುಮಾರು 3.8 ಕೋಟಿ ರೂ. ಆದಾಯ ಬಂದಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.


ಹೊಸ ವರ್ಷಾಚರಣೆ ಸಲುವಾಗಿ ಡಿ.31ರಂದು ಮಧ್ಯರಾತ್ರಿ ಮೂರು ಗಂಟೆಯವರೆಗೆ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳು ಸೇವೆ ಒದಗಿಸಿದ ಪರಿಣಾಮ ಉತ್ತಮ ಲಾಭ ಗಳಿಸಿವೆ. ಅಲ್ಲದೇ ದಾಖಲೆ ಮಟ್ಟದ ಪ್ರಯಾಣಿಕರು ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ.

“ಡಿಸೆಂಬರ್ 31ರಂದು ನಮ್ಮ ಮೆಟ್ರೋದಲ್ಲಿ ಬೆಳಿಗ್ಗೆಯಿಂದ ರಾತ್ರಿ 3ಗಂಟೆಯವರೆಗೆ ಒಟ್ಟು 8 ಲಕ್ಷದ 93 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ಅದರಲ್ಲೂ ರಾತ್ರಿ 11 ಗಂಟೆಯ ನಂತರವೇ ಒಟ್ಟು 40,774 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ” ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.

ಕ್ರಿಸ್‌ಮಸ್‌ ರಜೆಯ ಬಳಿಕ ದಿನನಿತ್ಯದ ಮೆಟ್ರೋ ಪ್ರಯಾಣಿಕರ ಸಂಖ್ಯೆ 7 ಲಕ್ಷದಿಂದ 6 ಲಕ್ಷಕ್ಕೆ ಇಳಿಕೆಯಾಗಿತ್ತು. ಆದರೆ, ಹೊಸ ವರ್ಷದ ಹಿನ್ನೆಲೆಯಲ್ಲಿ ಡಿ.31ರಂದು ಪ್ರಯಾಣಿಕರ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ ʼನಮ್ಮ ಮೆಟ್ರೋʼಗೆ ಸುಮಾರು 2.7 ಕೋಟಿ ರೂ. ಆದಾಯ ಬರುತ್ತಿತ್ತು. ಡಿ.31ರಂದು ಸುಮಾರು 3.8 ಕೋಟಿ ರೂ. ಆದಾಯ ಬಂದಿದೆ. ಈ ಅವಧಿಯಲ್ಲಿ ಮೆಟ್ರೋ ಸೇವೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಂಟಿಸಿಯಿಂದಲೂ ಹೆಚ್ಚುವರಿ ಸೇವೆ

ಹೊಸ ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಬಿಎಂಟಿಸಿ ಕೂಡ ಹೆಚ್ಚುವರಿ ಬಸ್‌ಗಳನ್ನು ಓಡಿಸಿತ್ತು. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 3 ಗಂಟೆವರೆಗೆ ಸಂಚರಿಸಿದ ಬಸ್‌ಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟು 200 ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಲಾಗಿತ್ತು. ಒಂದೇ ದಿನ ಸುಮಾರು 4,400 ಕಿ.ಮೀ. ಬಸ್ ಸಂಚಾರ ನಡೆಸಿದ್ದು, ಪ್ರಯಾಣಿಕರ ಸಂಖ್ಯೆ ಲಕ್ಷ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಡಿ.31ರಂದು ಬಿಎಂಟಿಸಿಗೆ ಒಟ್ಟು 7.25 ಕೋಟಿ ರೂ. ಆದಾಯ ಹರಿದು ಬಂದಿದೆ. ಹೊಸ ವರ್ಷದ ವಿಶೇಷ ಸೇವೆಯಿಂದ ಮಾತ್ರವೇ ಸುಮಾರು 10 ಲಕ್ಷ ರೂ. ಹೆಚ್ಚುವರಿ ಆದಾಯ ಸಿಕ್ಕಿದೆ. ಕೋರಮಂಗಲ, ಇಂದಿರಾನಗರ, ಎಂ.ಜಿ. ರಸ್ತೆ, ಮಾಲ್ ಆಫ್ ಏಷಿಯಾ ಸೇರಿ ನಗರದಲ್ಲಿನ ಪ್ರಮುಖ ಮಾಲ್‌ಗಳಿಗೂ ಬಸ್ ಸೇವೆ ವಿಸ್ತರಿಸಲಾಗಿತ್ತು.

ಐಟಿ ಉದ್ಯೋಗಿಗಳಿಗೆ ರಜೆ ಇದ್ದ ಕಾರಣ ಡಿ. 24ರಿಂದ ಬಸ್ ಪ್ರಯಾಣಿಕರ ಸಂಖ್ಯೆ ಕೊಂಚ ಇಳಿಕೆಯಾಗಿತ್ತು. ಡಿ. 25, 27 ಮತ್ತು 28ರಂದು ಪ್ರಯಾಣಿಕರ ಓಡಾಟ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ಸುಮಾರು 60 ಲಕ್ಷ ರೂ. ಆದಾಯ ನಷ್ಟವಾಗಿದೆ. ಡಿ.20ರಂದು ಬಿಎಂಟಿಸಿ ಸಂಸ್ಥೆಗೆ 6.75 ಕೋಟಿ ರೂ. ಆದಾಯ ಬಂದಿದೆ. ಡಿ.31ರಂದು ಒಂದೇ ದಿನ ಸುಮಾರು 1 ಲಕ್ಷ ಪ್ರಯಾಣಿಕರು ಹೆಚ್ಚುವರಿಯಾಗಿ ಸಾರ್ವಜನಿಕ ಸಾರಿಗೆ ಬಳಸಿದ್ದಾರೆ ಎಂದು ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

4,648 ಪ್ರಕರಣ ದಾಖಲು

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಡಿ. 22ರಿಂದ 31ರವರೆಗೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 3,30,106 ವಾಹನಗಳನ್ನು ತಪಾಸಣೆ ಮಾಡಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 4,648 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read More
Next Story