Raitha Santhe model market for selling weavers products: Minister Shivanand Patil
x

ಕೈಮಗ್ಗ (ಸಾಂದರ್ಭಿಕ ಚಿತ್ರ)

ನೇಕಾರರ ಉತ್ಪನ್ನಗಳ ಮಾರಾಟಕ್ಕೆ 'ರೈತ ಸಂತೆ' ಮಾರುಕಟ್ಟೆ: ಸಚಿವ ಶಿವಾನಂದ ಪಾಟೀಲ

ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಸ್ಥಾಪನೆ ಮಾದರಿಯಲ್ಲಿ ಜವಳಿ ಇಲಾಖೆಯಿಂದಲೂ ಆವರ್ತ ನಿಧಿ ಸ್ಥಾಪನೆ ಮಾಡಬೇಕು ಎಂಬ ಸಲಹೆ ಸೂಕ್ತವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್‌ ತಿಳಿಸಿದರು.


Click the Play button to hear this message in audio format

2020-30ರ ಅವಧಿಯ ನೂತನ ಜವಳಿ ನೀತಿ ರಚನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೈಮಗ್ಗ ನೇಕಾರಿಕೆ ಉತ್ತೇಜನಕ್ಕೂ ವಿಶೇಷ ಆದ್ಯತೆ ನೀಡಲಾಗುವುದು. ರೈತ ಸಂತೆ ಮಾದರಿಯಲ್ಲಿ ಕೈಮಗ್ಗ ಉತ್ಪನ್ನಗಳ ಮಾರಾಟ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಹೊಸ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಸೋಮವಾರ(ಜ.19) ವಿಧಾನಸೌಧದಲ್ಲಿ ಕೈಮಗ್ಗ ಉತ್ತೇಜನಕ್ಕೆ ಜವಳಿ ನೀತಿಯ ಸಭೆಯಲ್ಲಿ ಮಾತನಾಡಿದ ಅವರು, ನೇಕಾರಿಕೆಯಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಯನ್ನು ಮತ್ತೆ ಆಕರ್ಷಿಸಲು ಸ್ಟೈಫಂಡ್‌ ಸೌಲಭ್ಯ ಸೇರಿದಂತೆ ಹಲವು ಉಪಯುಕ್ತ ಸಲಹೆಗಳು ಬಂದಿವೆ. ಸೂಕ್ತವಾದ ಸಲಹೆಗಳನ್ನು ಹೊಸ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು.

ಕೈಮಗ್ಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದೇ ಉದ್ದಿಮೆ ಅವನತಿಗೆ ಪ್ರಮುಖ ಕಾರಣವಾಗಿದ್ದು, ಇಳಕಲ್‌, ರಬಕವಿ-ಬನಹಟ್ಟಿ, ದೊಡ್ಡಬಳ್ಳಾಪುರ ಸೇರಿದಂತೆ ಅತಿ ಹೆಚ್ಚು ಕೈಮಗ್ಗ ಉತ್ಪನ್ನಗಳ ತಯಾರಿಕೆ ಪ್ರದೇಶಗಳಲ್ಲಿ ನೇಕಾರರೇ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತ ಸಂತೆ ಮಾದರಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಆವರ್ತ ನಿಧಿ ಸ್ಥಾಪನೆಗೆ ಒಲವು

ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಸ್ಥಾಪನೆ ಮಾದರಿಯಲ್ಲಿ ಜವಳಿ ಇಲಾಖೆಯಿಂದಲೂ ಆವರ್ತ ನಿಧಿ ಸ್ಥಾಪನೆ ಮಾಡಬೇಕು ಎಂಬ ಸಲಹೆ ಸೂಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ರಾಜ್ಯದಲ್ಲಿ ಉತ್ಪಾದನೆಯಾಗುವ ರೇಷ್ಮೆ ಸೀರೆಗಳನ್ನು ಹೊರ ರಾಜ್ಯದವರು ಕಡಿಮೆ ಬೆಲೆಗೆ ಖರೀದಿಸಿ ಅವರದ್ದೇ ಬ್ರಾಂಡ್‌ ಸೃಷ್ಟಿ ಮಾಡಿ ಮತ್ತೆ ನಮ್ಮ ರಾಜ್ಯದಲ್ಲೇ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಮಧ್ಯವರ್ತಿಗಳ ವ್ಯವಸ್ಥೆ ತಪ್ಪಿಸಿ ನಮ್ಮ ನೇಕಾರರೇ ಬ್ರಾಂಡ್‌ ಸೃಷ್ಟಿಸುವ ವ್ಯವಸ್ಥೆಯಾಗಬೇಕಿದ್ದು, ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.

ದೊಡ್ಡಬಳ್ಳಾಪುರದಿಂದ ಆಗಮಿಸಿದ್ದ ನೇಕಾರರ ಸಂಘಟನೆಯ ಮುಖಂಡರು. ಸೂರತ್‌ ಸೀರೆಗಳ ಪ್ರಭಾವದಿಂದ ಕೈಮಗ್ಗ ನೇಕಾರರು ಸಂಕಷ್ಟಕ್ಕೀಡಾಗಿದ್ದು, ಪವರ್‌ಲೂಮ್‌ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು.

ಭೂಮಿ ಕೊರತೆಯಿಂದ ಯೋಜನೆ ವಿಳಂಬ

ಕಲಬುರಗಿಯಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಟೆಕ್ಸ್‌ಟೈಲ್‌ ಪಾರ್ಕ್‌ ಅಭಿವೃದ್ಧಿಗೆ ಮಾಸ್ಟರ್‌ ಡೆವಲಪರ್‌ಗೆ ಜಾಗತಿಕ ಟೆಂಡರ್‌ ಕರೆಯಲಾಗುತ್ತಿದೆ, ದೇಶದಲ್ಲಿ ಒಟ್ಟು ಏಳು ರಾಜ್ಯಗಳಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮೂಲಸೌಕರ್ಯ ಇರುವ ಸೂಕ್ತ ಭೂಮಿ ಲಭ್ಯವಾಗದಿರುವುದು ರಾಜ್ಯದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣ ವಿಳಂಬವಾಗಿದೆ ಎಂದು ಹೇಳಿದರು.

ಮೂಲ ಸೌಕರ್ಯಕ್ಕೆ 390 ಕೋಟಿ ರೂ. ಮಂಜೂರು

ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮೂಲಸೌಕರ್ಯವುಳ್ಳ ಭೂಮಿ ಲಭ್ಯವಾಗಿದ್ದರಿಂದ ಅಲ್ಲಿ ಯೋಜನೆಗೆ ವೇಗ ಸಿಕ್ಕಿದೆ. ಕಲಬುರಗಿಯಲ್ಲಿ ಇಂಧನ ಇಲಾಖೆಯ ಒಂದು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಮೂಲಸೌಕರ್ಯಕ್ಕೆ 390 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 150 ಕೋಟಿ ರೂ. ನೀಡಲಾಗಿದೆ. ರಸ್ತೆ ನಿರ್ಮಾಣ, ನೀರು ಪೂರೈಕೆಗೆ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಎರಡು ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

Read More
Next Story