
ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ವೀಕ್ಷಿಸಿದರು.
ಹೆಬ್ಬಾಳ ನೂತನ ಮೇಲ್ಸೇತುವೆ ಆಗಸ್ಟ್ 15ರ ನಂತರ ಸಂಚಾರಕ್ಕೆ ಮುಕ್ತ ; ಡಿಕೆಶಿ
ಬಿಡಿಎ ವತಿಯಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವದ ಮಾಹಿತಿ ನೀಡಿದರು. ಸ್ಕೂಟರ್ ಚಲಾಯಿಸಿಕೊಂಡು ಹೋಗಿ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದರು.
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಬಹುನಿರೀಕ್ಷಿತ ಹೆಬ್ಬಾಳ ಮೇಲ್ಸೇತುವೆ ವಿಸ್ತರಣಾ ಕಾಮಗಾರಿ ಪೂರ್ಣಗೊಂಡಿದ್ದು, ಆಗಸ್ಟ್ 15ರ ನಂತರ ನೂತನ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.
ಇಂದು (ಮಂಗಳವಾರ) ಬಿಡಿಎ ವತಿಯಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಅವರು, ಈ ಮಹತ್ವದ ಮಾಹಿತಿ ನೀಡಿದರು. ಅವರು ಸ್ಕೂಟರ್ ಚಲಾಯಿಸಿಕೊಂಡು ಹೋಗಿ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್ ಹಾಗೂ ಹಿರಿಯ ಅಧಿಕಾರಿಗಳು ಜತೆಗಿದ್ದರು. ಸವಾರಿಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು ಸಂಚಾರ ಆರಂಭಗೊಳ್ಳುವ ದಿನವನ್ನು ಪ್ರಕಟಿಸಿದರು.
"ಹಠ ಬಿಡಿ, ಸಹಕರಿಸಿ": ಸಾರಿಗೆ ನೌಕರರಿಗೆ ಮನವಿ
ಇದೇ ಸಂದರ್ಭದಲ್ಲಿ, ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನೌಕರರು ತಮ್ಮ ಹಠವನ್ನು ಕೈಬಿಟ್ಟು, ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಮರಳಬೇಕೆಂದು ಮನವಿ ಮಾಡಿದರು.
"ನಿಮ್ಮ ಬೇಡಿಕೆಗಳನ್ನು ನಾನು ತಪ್ಪು ಎನ್ನುವುದಿಲ್ಲ, ಆದರೆ, ಸರ್ಕಾರದ ಆರ್ಥಿಕ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು. ಅನುಷ್ಠಾನ ಮಾಡಲು ಸಾಧ್ಯವಾಗದ ಬೇಡಿಕೆಗಳನ್ನು ಇಟ್ಟು ಹಠ ಹಿಡಿಯುವುದು ಸರಿಯಲ್ಲ. ದಯಮಾಡಿ ಕಾನೂನಿಗೆ ಗೌರವ ಕೊಟ್ಟು ಸಹಕರಿಸಿ," ಎಂದು ಅವರು ಮನವಿ ಮಾಡಿಕೊಂಡರು.
ಕರ್ತವ್ಯಕ್ಕೆ ಹಾಜರಾದ ಕೆಲವು ಚಾಲಕರು ಮತ್ತು ನಿರ್ವಾಹಕರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಪ್ರಧಾನಿ
ಬೆಂಗಳೂರಿನ ನಮ್ಮ ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗವನ್ನು (ಯಲ್ಲೋ ಲೈನ್) ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
"ಪ್ರಧಾನಿಯವರು ತಮ್ಮ ರೈಲ್ವೆ ಇಲಾಖೆಯ ಕಾರ್ಯಕ್ರಮದ ಜೊತೆಗೆ ಮೆಟ್ರೋ ಉದ್ಘಾಟನೆಯನ್ನೂ ನೆರವೇರಿಸುವುದಾಗಿ ತಿಳಿಸಿದ್ದಾರೆ. ಆದರೆ, ಅವರ ಭೇಟಿಯ ಕುರಿತು ನಿಖರವಾದ ಸಮಯ ಮತ್ತು ಕಾರ್ಯಕ್ರಮಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು.