New GST reform | New vitality for Channapatna Gombe, Lidkar industry
x

ಚನ್ನಪಟ್ಟಣ ಗೊಂಬೆಗಳು ಹಾಗೂ ಲಿಡ್ಕರ್‌ ಸಂಸ್ಥೆಯ ಚರ್ಮದ ಉತ್ಪನ್ನಗಳು

ಜಿಎಸ್‌ಟಿ ಸುಧಾರಣೆ| ಚನ್ನಪಟ್ಟಣ ಗೊಂಬೆ ಅಗ್ಗ, ಲಿಡ್ಕರ್‌ ಉದ್ಯಮಕ್ಕೆ ಹೊಸ ಚೈತನ್ಯ

ಚನ್ನಪಟ್ಟಣದ ಬೊಂಬೆ ತಯಾರಿಕೆಗೆ ಬೇಕಾದ ಮರ ಮತ್ತು ವಿಶೇಷ ಅರಗಿನ ಮೇಲೆ ಹೆಚ್ಚಿನ ತೆರಿಗೆ ಪಾವತಿಸಬೇಕಿತ್ತು. ಅದೇ ರೀತಿ, ಬಿದರಿ ಕಲೆಗೆ ಬಳಸುವ ಸತು ಮತ್ತು ತಾಮ್ರದ ಮಿಶ್ರಲೋಹ ಹಾಗೂ ಕೊಲ್ಹಾಪುರಿ ಚಪ್ಪಲಿಗಳಿಗೆ ಬೇಕಾದ ಸಂಸ್ಕರಿಸಿದ ಚರ್ಮದ ಮೇಲೂ ಅಧಿಕ ತೆರಿಗೆ ಇತ್ತು.


Click the Play button to hear this message in audio format

ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು, ಕೇವಲ ದೊಡ್ಡ ಉದ್ಯಮಗಳಿಗೆ ಮಾತ್ರವಲ್ಲದೆ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಗುಡಿ ಕೈಗಾರಿಕೆಗಳಿಗೂ ಹೊಸ ಚೈತನ್ಯವನ್ನು ತುಂಬಲಿದೆ ಈ ಹಿಂದೆ ಸಂಕೀರ್ಣ ತೆರಿಗೆ ವ್ಯವಸ್ಥೆ ಮತ್ತು ತೆರಿಗೆಯ ವಿಲೋಮ ರಚನೆಯಂತಹ (Inverted Duty Structure) ಸಮಸ್ಯೆಗಳಿಂದ ನಲುಗುತ್ತಿದ್ದ ಚನ್ನಪಟ್ಟಣದ ಬೊಂಬೆ, ಕೊಲ್ಹಾಪುರಿ ಚಪ್ಪಲಿ, ಬಿದರಿ ಕಲೆ ಹಾಗೂ ಲಿಡ್ಕರ್‌ನಂತಹ ಚರ್ಮೋದ್ಯಮಗಳಿಗೆ ಈ ಸುಧಾರಣೆಗಳು ದೊಡ್ಡ ವರದಾನವಾಗಿವೆ. ಅದರಲ್ಲೂ ವಿಶ್ವ ವಿಖ್ಯಾತಿಯ ಚನ್ನಪಟ್ಟಣ ಗೊಂಬೆಗಳ ಉದ್ಯಮ ಇನ್ನಷ್ಟು ಬೆಳೆಯಲಿದ್ದು, ಕಡಿಮೆ ಬೆಲೆಗೂ ದೊರೆಯಲಿದೆ.

ಹಿಂದಿನ ತೆರಿಗೆ ವ್ಯವಸ್ಥೆಯ ಸವಾಲುಗಳು

ಹಿಂದಿನ ಜಿಎಸ್‌ಟಿ ವ್ಯವಸ್ಥೆಯಲ್ಲಿ, ಗುಡಿ ಕೈಗಾರಿಕೆಗಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದವು. ಪ್ರಮುಖವಾಗಿ, ಕರಕುಶಲ ವಸ್ತುಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲೆ ಶೇ. 12 ರಿಂದ 18ರಷ್ಟು ಅಧಿಕ ಜಿಎಸ್‌ಟಿ ಇತ್ತು, ಆದರೆ ಸಿದ್ಧಗೊಂಡ ಉತ್ಪನ್ನಗಳ ಮೇಲೆ ಕೇವಲ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಉದಾಹರಣೆಗೆ, ಚನ್ನಪಟ್ಟಣದ ಬೊಂಬೆ ತಯಾರಿಕೆಗೆ ಬೇಕಾದ ಮರ ಮತ್ತು ವಿಶೇಷ ಅರಗಿನ ಮೇಲೆ ಹೆಚ್ಚಿನ ತೆರಿಗೆ ಪಾವತಿಸಬೇಕಿತ್ತು. ಅದೇ ರೀತಿ, ಬಿದರಿ ಕಲೆಗೆ ಬಳಸುವ ಸತು ಮತ್ತು ತಾಮ್ರದ ಮಿಶ್ರಲೋಹ ಹಾಗೂ ಕೊಲ್ಹಾಪುರಿ ಚಪ್ಪಲಿಗಳಿಗೆ ಬೇಕಾದ ಸಂಸ್ಕರಿಸಿದ ಚರ್ಮದ ಮೇಲೂ ಅಧಿಕ ತೆರಿಗೆ ಇತ್ತು.

ಈ "ತೆರಿಗೆಯ ವಿಲೋಮ ರಚನೆ"ಯಿಂದಾಗಿ, ಕರಕುಶಲಕರ್ಮಿಗಳು ಮತ್ತು ಸಣ್ಣ ಉದ್ದಿಮೆದಾರರು ಕಚ್ಚಾ ವಸ್ತುಗಳ ಮೇಲೆ ಪಾವತಿಸಿದ ಹೆಚ್ಚುವರಿ ತೆರಿಗೆಯನ್ನು ಮರುಪಾವತಿ (Input Tax Credit - ITC) ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಇದು ಅವರ ದುಡಿಯುವ ಬಂಡವಾಳವನ್ನು ಹಿಡಿದಿಟ್ಟುಕೊಳ್ಳುತ್ತಿತ್ತು, ಇದರಿಂದಾಗಿ ಉತ್ಪಾದನಾ ಸಾಮರ್ಥ್ಯ ಕುಂಠಿತವಾಗಿ, ಲಾಭಾಂಶವು ಕಡಿಮೆಯಾಗುತ್ತಿತ್ತು. ಜೊತೆಗೆ, ಸಂಕೀರ್ಣವಾದ ತೆರಿಗೆ ನಿಯಮಗಳು ಮತ್ತು ಅನುಸರಣೆಯ ಹೊರೆ ಈ ಉದ್ಯಮಗಳ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿತ್ತು.

ಚರ್ಮೋದ್ಯಮದ ಬೆಳವಣಿಗೆಗೆ ದೊಡ್ಡ ಉತ್ತೇಜನ

ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ಅಧ್ಯಕ್ಷ ಮುಂಡರಗಿ ನಾಗರಾಜು ʼದ ಫೆಡರಲ್​ ಕರ್ನಾಟಕʼ ಜತೆ ಮಾತನಾಡಿ, "ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣೆಗಳು ಚರ್ಮೋದ್ಯಮದ ಮೇಲೆ ಅತ್ಯಂತ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಇದು ಉದ್ಯಮಕ್ಕೆ ದೊಡ್ಡ ಅನುಕೂಲವನ್ನು ತಂದುಕೊಡಲಿದೆ. ಈ ಹಿಂದೆ, ಉತ್ತಮ ಗುಣಮಟ್ಟದ ಚರ್ಮದ ಉತ್ಪನ್ನಗಳ ಬೆಲೆ ಹೆಚ್ಚಿದ್ದ ಕಾರಣ, ಗ್ರಾಹಕರು ಕಡಿಮೆ ದರದಲ್ಲಿ ಸಿಗುವ ಕೃತಕ ಚರ್ಮದ (ಸಿಂಥೆಟಿಕ್) ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದರು. ಆದರೆ, ಕೃತಕ ಚರ್ಮದ ಬಳಕೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿತ್ತು" ಎಂದು ವಿವರಿಸಿದರು.

"ಇದೀಗ ಸರ್ಕಾರವು ಜಿಎಸ್‌ಟಿ ದರವನ್ನು ಕಡಿಮೆ ಮಾಡಿರುವುದರಿಂದ, ಅಪ್ಪಟ ಚರ್ಮದ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಇದರಿಂದ ಗ್ರಾಹಕರು ನೈಸರ್ಗಿಕ ಚರ್ಮದ ಉತ್ಪನ್ನಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಲಿದ್ದಾರೆ. ಇದು ಚರ್ಮೋದ್ಯಮದ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಲಿದೆ. ನಾವು ಸರ್ಕಾರದ ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ಇಳಿಕೆಯಿಂದ ತಯಾರಿಕರಿಗೆ ಲಾಭ

"ಕೇಂದ್ರ ಸರ್ಕಾರ ಗುಡಿ ಕೈಗಾರಿಕೆಗಳ ಮೇಲಿನ ಜಿಎಸ್‌ಟಿಯನ್ನು ಶೇ.12 ರಿಂದ ಶೇ. 5ಕ್ಕೆ ಇಳಿಸಿರುವುದರಿಂದ ಗೊಂಬೆಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳಾದ ವಿಷಕಾರಿಯಲ್ಲದ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಳ್ಳಲು ಸಹಕಾರಿಯಾಗಿದೆ. ಈ ಮೊದಲು ಮಧ್ಯಪ್ರದೇಶದಿಂದ ಕಚ್ಚಾವಸ್ತುಗಳನ್ನು ಕೊಂಡು ತರಲಾಗುತ್ತಿತ್ತು. ಆದರೆ ಶೇ.12 ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದರಿಂದ ತಯಾರಿಕರಿಗೆ ದುಬಾರಿ ಹೊರೆಯಾಗುತ್ತಿತ್ತು. ಆದರೆ ಇದೀಗ ಜಿಎಸ್‌ಟಿಯನ್ನು ಶೇ.5 ಕ್ಕೆ ಇಳಿಸಿರುವುದರಿಂದ ತಯಾರಿಕರಿಗೆ ಬಹಳ ಅನುಕೂಲವಾಗಲಿದ್ದು, ಉದ್ಯಮವೂ ಲಾಭದ ಹಳಿಗೆ ಮರಳಲಿದೆ ಎಂದು ಚನ್ನಪಟ್ಟಣದ ಗೊಂಬೆ ತಯಾರಕರಾದ ಈಶ್ವರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಹೊಸ ಜಿಎಸ್‌ಟಿ ಸುಧಾರಣೆಯ ಲಾಭಗಳು

ತೆರಿಗೆ ಸ್ಲ್ಯಾಬ್‌ಗಳನ್ನು ಪ್ರಮುಖವಾಗಿ ಶೇ.5 ಮತ್ತು ಶೇ.18 ಕ್ಕೆ ಸೀಮಿತಗೊಳಿಸಿರುವುದರಿಂದ, ಹೆಚ್ಚಿನ ಕರಕುಶಲ ವಸ್ತುಗಳು ಮತ್ತು ಅವುಗಳ ಕಚ್ಚಾ ವಸ್ತುಗಳು ಒಂದೇ ತೆರಿಗೆ ದರದ ಅಡಿಯಲ್ಲಿ ಬರುವ ಸಾಧ್ಯತೆಯಿದೆ. ಉದಾಹರಣೆಗೆ, ಪಾದರಕ್ಷೆಗಳು ಮತ್ತು ಚರ್ಮದ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.೫ ಕ್ಕೆ ಇಳಿಸಿರುವುದು ಲಿಡ್ಕರ್ ಮತ್ತು ಕೊಲ್ಹಾಪುರಿ ಚಪ್ಪಲಿ ತಯಾರಕರಿಗೆ ನೇರ ಲಾಭ ತಂದುಕೊಡಲಿದೆ. ಇದು ಕಚ್ಚಾ ವಸ್ತು ಮತ್ತು ಸಿದ್ಧ ವಸ್ತುವಿನ ನಡುವಿನ ತೆರಿಗೆ ವ್ಯತ್ಯಾಸವನ್ನು ಹೋಗಲಾಡಿಸಲಿದೆ.

ತೆರಿಗೆ ದರಗಳು ಕಡಿಮೆಯಾಗುವುದರಿಂದ, ಚನ್ನಪಟ್ಟಣದ ಬೊಂಬೆಗಳು, ಬಿದರಿ ಕಲೆಯ ಅಲಂಕಾರಿಕ ವಸ್ತುಗಳು ಮತ್ತು ಕೊಲ್ಹಾಪುರಿ ಚಪ್ಪಲಿಗಳ ಅಂತಿಮ ಬೆಲೆ ಕಡಿಮೆಯಾಗಲಿದೆ. ಇದು ಚೀನಾದ ಆಟಿಕೆಗಳು ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುವ ಪಾದರಕ್ಷೆಗಳೊಂದಿಗೆ ಸ್ಪರ್ಧಿಸಲು ಈ ದೇಶೀಯ ಉತ್ಪನ್ನಗಳಿಗೆ ಸಹಾಯ ಮಾಡುತ್ತದೆ.

ಲಾಭಾಂಶ ಹೆಚ್ಚುವುದರಿಂದ ಮತ್ತು ವಹಿವಾಟು ಸುಲಭವಾಗುವುದರಿಂದ, ಕುಶಲಕರ್ಮಿಗಳ ಆದಾಯವು ಹೆಚ್ಚಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಕರಕುಶಲ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಪ್ರೋತ್ಸಾಹ ನೀಡುತ್ತದೆ. ಸರ್ಕಾರಿ ಸ್ವಾಮ್ಯದ ಲಿಡ್ಕರ್‌ನಂತಹ ಸಂಸ್ಥೆಗಳು ಕೂಡ ಇದರಿಂದ ಪುನಶ್ಚೇತನಗೊಂಡು, ಚರ್ಮ ಕುಶಲಕರ್ಮಿಗಳ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಲಿವೆ.

Read More
Next Story