
BJP Infighting | ಬಿಜೆಪಿಯಲ್ಲಿ ಇನ್ನೂ ಬಗೆಹರಿದಿಲ್ಲ ಜಿಲ್ಲಾಧ್ಯಕ್ಷರ ಆಯ್ಕೆ ಕಗ್ಗಂಟು !
ರಾಜ್ಯದ 8 ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಆದರೆ, ಇನ್ನೂ ಒಂಬತ್ತು ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿದೆ,
ರಾಜ್ಯದ ಎಂಟು ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದರೂ ಹಲವು ಜಿಲ್ಲೆಗಳಲ್ಲಿ ಇನ್ನೂ ಬಿಕ್ಕಟ್ಟು ಮುಂದುವರಿದಿರುವುದು ವರಿಷ್ಠರಿಗೆ ತಲೆನೋವಾಗಿದೆ.
ಹಾಸನ, ಮೈಸೂರು ಗ್ರಾಮಾಂತರ ಜಿಲ್ಲೆ, ಉಡುಪಿ, ಕೊಡಗು, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಹಾವೇರಿ ಜಿಲ್ಲೆಗಳಲ್ಲೂ ಬಿಜೆಪಿ ಮುಖಂಡರ ಒಳಜಗಳದಿಂದ ಅಧ್ಯಕ್ಷರ ನೇಮಕ ಪ್ರಕ್ರಿಯೆ ವಿಳಂಬವಾಗಿದೆ. ಬಣ ಬಡಿದಾಟದಿಂದ ಈ ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಕೇಂದ್ರದ ನಾಯಕರ ನಡೆ ಕುತೂಹಲ ಕೆರಳಿಸಿದೆ.
ಪ್ರಸ್ತುತ, 31 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ್ದು, ಉಳಿದ 9 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕಾತಿ ಬಾಕಿ ಉಳಿದಿದೆ. ಕೇಂದ್ರದ ಹಿರಿಯ ನಾಯಕರು ಬಂದು ಸಭೆ ನಡೆಸಿದ ಬಳಿಕ ಈ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
23 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ್ದ ವೇಳೆ ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಅಧ್ಯಕ್ಷರ ನೇಮಕಕ್ಕೆ ಸ್ಥಳೀಯ ಮುಖಂಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸಂಸದ ಡಾ.ಕೆ.ಸುಧಾಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅಧ್ಯಕ್ಷರ ಏಕಪಕ್ಷಿಯ ತೀರ್ಮಾನದ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದರು. ಆದಾಗ್ಯೂ ಕೇಂದ್ರದ ವರಿಷ್ಠರು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯನ್ನು ಅಮಾನತಿನಲ್ಲಿಟ್ಟಿದ್ದರು.
ಎಂಟು ಜಿಲ್ಲೆಗಳಿಗೆ ನೂತನ ಅಧ್ಯಕ್ಷರು
ಮಂಡ್ಯ ಜಿಲ್ಲೆಗೆ ಇಂದ್ರೇಶ್, ಗದಗ ಜಿಲ್ಲೆಗೆ ರಾಜು ಕುರಡಗಿ, ಬಾಗಲಕೋಟೆಗೆ ಎಸ್.ಟಿ ಪಾಟೀಲ್, ವಿಜಯಪುರಕ್ಕೆ ಗುರುಲಿಂಗಪ್ಪ ಅಂಗಡಿ ( ಅಧ್ಯಕ್ಷರ ಬದಲಾವಣೆ), ರಾಯಚೂರಿಗೆ ವೀರನಗೌಡ ಲೆಕ್ಕಿಹಾಳ, ಮಧುಗಿರಿಗೆ ಪರಿಷತ್ ಸದಸ್ಯರಾದ ಚಿದಾನಂದ ಗೌಡ (ಬದಲಾವಣೆ), ರಾಮನಗರಕ್ಕೆ ಆನಂದ್ ಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರಾಮಕೃಷ್ಣಪ್ಪ (ಬದಲಾವಣೆ) ಅವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.
ವಿಜಯೇಂದ್ರಗೆ ಸವಾಲೆಸೆದಿದ್ದ ಸುಧಾಕರ್
ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಅಭಿಪ್ರಾಯ ಆಲಿಸದೇ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕೆಲಸ ಮಾಡಿದವರನ್ನು ಜಿಲ್ಲಾ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಸಂಸದ ಡಾ.ಕೆ. ಸುಧಾಕರ್ ಆರೋಪಿಸಿದ್ದರು.
ಅಲ್ಲದೇ ವಿಜಯೇಂದ್ರ ಅವರ ಏಕಪಕ್ಷೀಯ ವರ್ತನೆ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದರು. ವಿಜಯೇಂದ್ರ ವಿರುದ್ಧ ಡಾ.ಕೆ.ಸುಧಾಕರ್ ಅವರು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಪಕ್ಷದ ನಾಯಕರ ಆಂತರಿಕ ಕಚ್ಚಾಟ ಬಹಿರಂಗವಾಗಿತ್ತು.
ಡಾ.ಕೆ. ಸುಧಾಕರ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಜಿಲ್ಲಾಧ್ಯಕ್ಷರ ನೇಮಕ ವಿಷಯದಲ್ಲಿ ನನ್ನ ಪಾತ್ರವಿಲ್ಲ. ಸುಧಾಕರ್ ಅವರು ನನ್ನ ಬಗ್ಗೆ ತಪ್ಪು ತಿಳಿಯಬಾರದು. ನನ್ನ ವಿರುದ್ಧ ಹಗುರವಾಗಿ ಮಾತನಾಡಬಾರದು ಎಂದು ಮನವಿ ಮಾಡಿದ್ದರು.
ವಿಜಯೇಂದ್ರ ನೇಮಕಕ್ಕೆ ಹೈಕಮಾಂಡ್ ತಡೆ
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂದೀಪ್ ರೆಡ್ಡಿ ನೇಮಕಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಅವರು ತಡೆ ನೀಡಿದ್ದರು. ಇದರಿಂದ ಸುಧಾಕರ್ ಮೇಲುಗೈ ಸಾಧಿಸಿದ್ದರು ಎಂದೇ ವಿಶ್ಲೇಷಿಸಲಾಗಿತ್ತು.